ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ `ಪ್ರೆಸ್ಕ್ಲಬ್ ಡೇ’ಯನ್ನು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ವೇಗದ ಜೀವನಕ್ಕೆ ಹೊಂದಿಕೊಂಡಿರುತ್ತಾರೆ. ಅವುಗಳ ನಡುವೆಯೂ ಸಮಯವನ್ನು ಹೊಂದಿಸಿಕೊಂಡು ವೃತ್ತಿ ಬಾಂಧವರು ಒಟ್ಟಾಗುವುದು ಶ್ಲಾಘನೀಯ ಎಂದರು.
ತನ್ನ ವೃತ್ತಿ ವಿಭಿನ್ನವಾಗಿದ್ದರೂ ಅದನ್ನು ಕುಟುಂಬದವರಿಗೆ ಪರಿಚಯಿಸುವ ಅವಕಾಶವನ್ನು ಇಂತಹ ಕಾರ್ಯಕ್ರಮಗಳು ಒದಗಿಸುತ್ತದೆ. ಸಮಾಜದಲ್ಲಿರುವ ಏರುಪೇರುಗಳನ್ನು ಗುರುತಿಸುವ ಪತ್ರಕರ್ತರ ಕೆಲಸ ಅಭಿನಂದನಾರ್ಹ. ಅದರಲ್ಲಿಯೂ ಮಂಗಳೂರಿನ ಪತ್ರಕರ್ತರ ವೃತ್ತಿಪರತೆಯನ್ನು ಇತ್ತೀಚಿಗೆ ನಗರಕ್ಕೆ ಬಂದಿದ್ದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶ್ಲಾಘಿಸಿದ್ದರು. ಆದ್ದರಿಂದ ಇಲ್ಲಿನವರ ವೃತ್ತಿಪರತೆಗೆ ಅಭಿನಂದನೆ ಸಲ್ಲಿಸಲೇಬೇಕೆಂದರು.
ಉದ್ಘಾಟನೆ ನೆರವೇರಿಸಿದ ಮುಖ್ಯ ಅತಿಥಿ, ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್, ಕಲಾವಿದರು ಮತ್ತು ಪತ್ರಕರ್ತರ ನಡುವೆ ಸಾಮ್ಯತೆ ಇದೆ. ಎರಡೂ ಕ್ಷೇತ್ರದಲ್ಲಿರುವವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಪತ್ರಕರ್ತರೇ ಕಲಾವಿದರನ್ನು ಬೆಳೆಸುವವರು ಕೂಡ ಎಂದರು.
ಸಾಧಕ ಪತ್ರಕರ್ತರನ್ನು ಸನ್ಮಾನಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರಾಜು, ಪತ್ರಕರ್ತರು ಇಂದು ಹತ್ತು ಹಲವು ಸಮಸ್ಯೆಗಳ ನಡುವೆ ಬದುಕುತ್ತಿದ್ದಾರೆ. ಉದ್ಯೋಗದ ಭದ್ರತೆಯೂ ಇಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಪತ್ರಕರ್ತರ ಕುರಿತು ಗಟ್ಟಿ ಧ್ವನಿ ಮೊಳಗಬೇಕು. ಯಾರೇ ಜನಪ್ರತಿನಿಧಿಗಳು ಪತ್ರಕರ್ತರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ವಿಷಾದಿಸಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಶುಭ ಕೋರಿದರು. ಶಾಸಕ ಮೊದಿನ್ ಬಾವ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ, ಮೌನೇಶ್ ವಿಶ್ವಕರ್ಮ, ಆಗ್ನೆಲ್ ರಾಡ್ರಿಗಸ್, ದಯಾನಂದ ಕುಕ್ಕಾಜೆ, ಅಫುಲ್ ಇರಾರವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಶೇ.೯೦ಕ್ಕೂ ಅಧಿಕ ಅಂಕ ಪಡೆದ ಸಿಂಧು ರೈ ಹಾಗೂ ಅಂಕಿತಾ ನಿರ್ಪಾಜೆಯವರನ್ನು ಗೌರವಿಸಲಾಯಿತು. `ಚಾಲಿ ಪೋಲಿಲು’ ತುಳು ಚಿತ್ರವನ್ನು ನಿರ್ದೇಶಿಸಿ ತುಳು ಚಿತ್ರರಂಗದ ಇತಿಹಾಸಲ್ಲಿಯೇ ದಾಖಲೆಗೆ ಕಾರಣರಾದ ನಿರ್ದೇಶಕ ರವೀಂದ್ರ ಶೆಟ್ಟಿ ಕಾವೂರು ಹಾಗೂ ಕಾರ್ಯಕ್ರಮದ ನೇರ ಪ್ರಸಾರ ಮಾಡಿದ `ನಮ್ಮ ಕುಡ್ಲ’ ಚಾನೆಲ್ನ ಹರೀಶ್ ಕರ್ಕೇರಾ, ಲೀಲಾಕ್ಷ ಕರ್ಕೇರಾರನ್ನು ಗೌರವಿಸಲಾಯಿತು. ಪತ್ರಕರ್ತರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಮಾಜಿ ಅಧ್ಯಕ್ಷ ಪಿ. ಬಿ. ಹರೀಶ್ ರೈ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ದಯಾನಂದ ಕುಕ್ಕಾಜೆ ಕ್ರೀಡಾಕೂಟದ ವಿಜೇತರ ಪಟ್ಟಿ ವಾಚಿಸಿದರು. ಪ್ರೆಸ್ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ವಂದಿಸಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಹಾಗೂ ಮೈಮ್ ರಾಮದಾಸ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮಗಳು ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.