ಧಾರವಾಡ : ನಮ್ಮ ಬದುಕೊಂದು ಗಾಳಿಪಟ..! ಆದರೆ, ಈಗ ಹಕ್ಕಿಗಳ ಬದುಕು ಅದರ ಸೂತ್ರ ಅವಲಂಬಿಸಿದೆ!
ಗಾಜು, ಲೋಹದ ತುಣುಕು, ಬಳೆಚೂರುಗಳನ್ನು ನುಣುಪಾಗಿ ಕುಟ್ಟಿ ದಾರಕ್ಕೆ ಲೇಪಿಸಿ ‘ಚೈನಾ ಮಾಂಜಾ’ ಹೆಸರಿನಲ್ಲಿ ತಯಾರಿಸಿದ ಹುರಿಗೊಳಿಸಿ ಹೊಸೆದ ದಾರವನ್ನು ಈಗ ಗಾಳಿಪಟ ಹಾರಿಸಲು ಹೆಚ್ಚೆಚ್ಚು ಬಳಸಲಾಗುತ್ತಿದೆ.
ಇದು ಬಾನಾಡಿಗಳಿಗೆ ಸಂಕಷ್ಟ ತಂದೊಡ್ಡಿದೆ. ಆ ಹಕ್ಕಿಗಳು ಮಾಂಜಾ ದಾರಕ್ಕೆ ಸಿಲುಕಿದಾಗ ಸಕಾಲಿಕ ಚಿಕಿತ್ಸೆ ದೊರಕದೇ ಕೆಲವು ಸಲ ಪ್ರಾಣ ಕಳೆದುಕೊಳ್ಳುವಂತಾದರೆ, ಹಲವು ಸಲ ಮಾರಣಾಂತಿಕವಾದ ಗಾಯಗಳಾಗುತ್ತಿರುವ, ಸಮರ್ಪಕ ಚಿಕಿತ್ಸೆ ದೊರಕಿಯೂ ಬದುಕಿನುದ್ದಕ್ಕೂ ಅಂಗವೈಕಲ್ಯದಿಂದ ಬಳಲಬೇಕಾದ ದೃಷ್ಟಾಂತಗಳು ಧಾರವಾಡದ ಪಕ್ಷಿ ಪ್ರಿಯರ ನಿದ್ದೆಗೆಡಿಸಿವೆ.
ಮನೆಯ ತಾರಸಿ, ರಸ್ತೆ, ಮೈದಾನ, ಕ್ರೀಡಾಂಗಣ ಮತ್ತು ಗುಡ್ಡ, ಬೆಟ್ಟ, ಕೆರೆಯಂಗಳ.. ಹೀಗೆ ಪಟ್ಟಿ ಬೆಳೆಯುತ್ತದೆ. ಮಕರ ಸಂಕ್ರಮಣದ ಹೊತ್ತಿಗೆ ಹಾವಳಿಯಾಗುತ್ತಿದ್ದ ಗಾಳಿಪಟ ಉತ್ಸವಗಳು, ಈ ಬಾರಿ ಈಗ ತಲೆಎತ್ತಿರುವುದು ಹಕ್ಕಿಯ ಮಿತ್ರರಲ್ಲಿ ಕಳವಳ ಮೂಡಿಸಿದೆ.
ಬಣ್ಣ-ಬಣ್ಣದ, ತರಹೇವಾರಿ ಆಕಾರದ, ಚಿತ್ರ-ವಿಚಿತ್ರ ಗಾತ್ರದ ಗಾಳಿಪಟಗಳು, ‘ಪಟು’ಗಳ ಪಟ್ಟು ಪರೀಕ್ಷಿಸುವಂತೆ ಬಾನಂಗಳದಲ್ಲಿ ಸ್ವಚ್ಛಂದವಾಗಿ ಬಾನಾಡಿಗಳಿಗೂ ಸವಾಲೆಸೆದು ಹಾರಾಡಿಸುವ ಪರಿ ಅವರನ್ನೆಲ್ಲ ಸಮ್ಮೋಹನ ಗೊಳಿಸುತ್ತಿದ್ದರೆ, ಪಕ್ಷಿ ಪ್ರೇಮಿಗಳ ಎದೆಯಲ್ಲಿ ಢವಢವ.. ತಾರಕಕ್ಕೇರಿದೆ.
ಕಳೆದ ಒಂದು ವಾರದಲ್ಲಿ ಅನಾಹುತ
ಈ ಬಾರಿ ಪಕ್ಷಿ ವೀಕ್ಷಕರ ಗಮನಕ್ಕೆ ಬಂದ ಲೆಕ್ಕದ ಪ್ರಕಾರ, ಕಳೆದ ಒಂದು ವಾರದಲ್ಲಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣ, ಭೂಸಪ್ಪ ಚೌಕ, ಹೊಸಯಲ್ಲಾಪುರ, ಕೋಳಿಕೆರೆ, ಮಣಿಕಿಲ್ಲಾ, ಪೊಲೀಸ್ ಹೆಡ್ಕ್ವಾರ್ಟ್ರ್ರ್ಸ್, ಸಾಧನಕೇರಿ, ಕೆಲಗೇರಿ ಮುಂತಾದ ಭಾಗಗಳಲ್ಲಿ ಹತ್ತಕ್ಕೂ ಹೆಚ್ಚು ಕಾಡು ಪಾರಿವಾಳ, 5ಕ್ಕೂ ಹೆಚ್ಚು ಮೈನಾ, ಎರಡು ಗೂಬೆ ಮರಿಗಳು, ಒಂದು ಗೀಜಗ ಹಕ್ಕಿ, ಒಂದು ಗುಬ್ಬಿ, ನಾಯಿ ಮೊಗದ ಒಂದು ತೋಳ ಬಾವಲಿಯ ರೆಕ್ಕೆ, ಎದೆ ಮತ್ತು ಹೊಟ್ಟೆಭಾಗ ಹರಿತವಾದ ಚಾಕುವಿನಿಂದ ಸೀಳಿದಂತೆ ಗಾಳಿಪಟದ ಮಾಂಜಾದಾರ ಸೀಳಿಹಾಕಿದೆ. ಒಂದು ಪಾರಿವಾಳವಂತೂ ಮಾಂಜಾದಾರವನ್ನು ಕತ್ತಿಗೆ ಉರುಳಿನಂತೆ ಸಿಕ್ಕಿಸಿಕೊಂಡು ಒದ್ದಾಡಿ, ಪ್ರಾಣಬಿಟ್ಟು ಗಿಡವೊಂದರ ಟೊಂಗೆಗೆ ನೇತಾಡುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು ಎನ್ನುತ್ತಾರೆ ಮಂಗಳವಾರ ಪೇಟೆಯ ಗೃಹಿಣಿ ಲತಾ ಸೋಮೇಶ ಪಟ್ಟಣಕೋಡಿ.
ಪಟ ಹಾರಿಸುವಾಗ ತುಂಡರಿಸಿದ ದಾರ ಗಿಡ-ಗಂಟಿಗಳಿಗೆ, ವಿದ್ಯುತ್ ಕಂಬಗಳಿಗೆ, ಕರೆಂಟಿನ ಲೈವ್ ಲೈನ್ಗಳಿಗೆ ಸಿಕ್ಕು ವಾರ-ತಿಂಗಳುಗಳಗಟ್ಟಲೇ ಹಾರಾಡುತ್ತ ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಕತ್ತಲು ಕವಿದು ಹೆಚ್ಚಿನ ಅನಾಹುತ ಸಂಭವಿಸಬಹುದು. ಮನೆಗಳಲ್ಲಿನ ಮೌಲ್ಯಯುತ ವಿದ್ಯುತ್ ಉಪಕರಣಗಳು ಅಧಿಕ ವಿದ್ಯುತ್ ಪ್ರವಹನದಿಂದ ಸುಟ್ಟು ಕರಲಕಲಾಗಬಹುದು. ಗಾಳಿಪಟ ಹಾರಿಸುತ್ತಿರುವ ಮಗುವಿಗೂ ವಿದ್ಯುತ್ ತಗುಲಿ ಸಾವನ್ನಪ್ಪಬಹುದು.
ಹಾನಿ ನಮಗೇ ಎಂದು ಅರಿತಾದರೂ..
೨೦೧೪ರ ಡಿಸೆಂಬರ್ ೭ ರಂದು ಜೈಪುರದಲ್ಲಿ ಎರಡೂವರೆ ವರ್ಷದ ಬಾಲಕನೋರ್ವ ಪಟ ಹಾರಿಸುವಾಗ ಕೈ, ಮುಖ ಹಾಗೂ ಕುತ್ತಿಗೆಗೆ ಹತ್ತಾರು ಹೊಲಿಗೆಗಳನ್ನು ಹಾಕುವಷ್ಟು ಗಂಭೀರವಾಗಿ ಗಾಯಮಾಡಿಕೊಂಡ. ಕಳೆದ ವರ್ಷ ಜನವರಿ ೧೫ ರಂದು ಜೈಪುರದಲ್ಲಿ ಐದೂವರೆ ವರ್ಷದ ಬಾಲಕಿಯೋರ್ವಳು ಗಾಜು ಲೇಪಿತ ಮಾಂಜಾದಾರ ಕುಣಿಕೆಯಾಗಿ ಮಾರ್ಪಟ್ಟು ಕತ್ತು ಕುಯ್ದ ಪರಿಣಾಮ, ಚಿಕಿತ್ಸೆ ಫಲಿಸದೇ ಮೃತಪಟ್ಟಳು. ಹಾಗಾಗಿ, ಜಗತ್ತಿನ ಗಮನ ಸೆಳೆದ ೨೦೧೪ರ ಜನವರಿ ಗಾಳಿಪಟ ಉತ್ಸವ ಆಯೋಜಿಸಿದಾಗ ಜೈಪುರ ಪೊಲೀಸರು ಹರಿತವಾದ ಮಾಂಜಾದಾರ, ಚೈನಾ ಮಾಂಜಾದಾರಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು. ವಡೋದರಾದಲ್ಲಿ ತಂದೆಯ ಜೊತೆ ಸ್ಕೂಟರ್ ಮೇಲೆ ಶಾಲೆಗೆ ಹೊರಟಿದ್ದ ಬಾಲಕನ ಕತ್ತನ್ನು ಹರಿತವಾದ ಚೈನಾ ಮಾಂಜಾ ಕುಯ್ದು, ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿತ್ತು.
ಧಾರವಾಡ ಜಿಲ್ಲೆಯ ಗೌರವ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ ಅವರ ಪ್ರಕಾರ, ಇಲ್ಲಿ ತಿಳಿವಳಿಕೆಯ ಕೊರತೆ ಇದೆ. ಹರಿತ ಮಾಂಜಾ ಅಥವಾ ಟೈನ್ ದಾರ ಪಕ್ಷಿಗಳಿಗೆ ಮಾತ್ರವಲ್ಲ ಮನುಷ್ಯರಿಗೂ ಗಂಭೀರ ಗಾಯ ಅಥವಾ ಮಾರಣಾಂತಿಕವಾಗಬಲ್ಲುದು ಎಂಬ ಅರಿವು ಮೂಡಿಸಬೇಕಿದೆ. ಸುರಕ್ಷೆಗಾಗಿ, ಹರಿತವಾದ ಮಾಂಜಾ ಬದಲು ಸಾದಾ ಹತ್ತಿಯ ಬಿಳಿ ದಾರಗಳನ್ನೇ ಬಳಸುವಂತೆ ಶಾಲಾ-ಕಾಲೇಜುಗಳಲ್ಲಿ ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾ ದಳಗಳ ಕೆಡೆಟ್ಸ್ಗಳಿಂದ ಜಾಗೃತಿ ಜಾಥಾ ನಡೆಯಲಿ.
ಪ್ರತಿ ವರ್ಷ ಮಕರ ಸಂಕ್ರಮಣದ ಹೊಸ್ತಿಲಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸಂದರ್ಭದಲ್ಲಿ, ಅಹಮದಾಬಾದ್ ಒಂದರಲ್ಲೇ 2 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಹರಿತವಾದ ಮಾಂಜಾದಾರಕ್ಕೆ ಮಾರಣಾಂತಿಕವಾಗಿ ಗಾಯಗೊಳ್ಳುತ್ತವೆ. ಕನಿಷ್ಟ ಐದು ನೂರು ಪಕ್ಷಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪುತ್ತವೆ ಎಂದು ವರದಿ ದಾಖಲಿಸಿದೆ ನೇಚರ್ ವಾಚ್.
ಧಾರವಾಡದ ಪಕ್ಷಿ ವೀಕ್ಷಕರು ನೇಚರ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ದೊರಕಿಸಲು, ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ಮಾಹಿತಿ ನೀಡಲು ಸಂಪರ್ಕ: ಧಾರವಾಡದಲ್ಲಿ ಹರ್ಷವರ್ಧನ ಶೀಲವಂತ -98865 21664, ಆರ್.ಜಿ. ತಿಮ್ಮಾಪೂರ 9448907803, ಹಳ್ಳಿಗೇರಿ ಪ್ರಕಾಶ ಗೌಡರ 9480366520, ನವನಗರ ಡಾ. ಧೀರಜ್ ವೀರನಗೌಡರ 9986052748, ಹುಬ್ಬಳ್ಳಿ ಪವನ್ ಮಿಸ್ಕಿನ್ -9980281277.
‘ಗಾಳಿಪಟ-ದಾರ’ ನಮ್ಮ ನಗರದಲ್ಲಿ ಕಿರುಕುಳ ವೆಬ್ಬಿಸಿದೆ. ಅಲು ಇಷ್ಟೇ, ಗಾಜು ಅಥವಾ ಲೋದ ಜೊತೆಗೆ ಬಣ್ಣವನ್ನು ಮಿಶ್ರಣ ಮಾಡಿ ಹೊಸೆದ ಹರಿತ ಮಾಂಜಾ ಟೈನ್ ದಾರಗಳ ಬದಲು ಹತ್ತಿಯ ದಾರಗಳನ್ನೇ ಬಳಸಿ ಪಟ ಹಾರಿಸಲು ಪಟುಗಳು ಮುಂದಾಗಲಿ. ಪರಿಸರ ಸ್ನೇಹಿಯಾಗಿ ಗಾಳಿಪಟ ಉತ್ಸವ ಪಲ್ಲವಿಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.