ಧಾರವಾಡ : ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಹಿಂಸಾಚಾರ ಸಹಿಸಲ್ಲ. ಆರ್ ಎಸ್ ಎಸ್ ಮತ್ತು ಹಿಂದೂ ಸಂಘಟನೆಗಳು ಎಂದಿಗೂ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುತ್ತಾರೆ. ಆದರೆ ರಾಜ್ಯ, ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನ ದುರ್ಬಳಕೆ ನಡೆದಿದೆ. ಇದು ದುರಂತವೇ ಸರಿ. ಸಂಶೋಧಕ ಡಾ. ಎಂ. ಎಂ. ಕಲ್ಬುರ್ಗಿ ಹತ್ಯೆಯಾಗಿ 2 ವರ್ಷವಾದರೂ ಹಂತಕರ ಪತ್ತೆಯಾಗಿಲ್ಲ. ಸರ್ಕಾರದ ಕೈಯಲ್ಲೇ ಅಧಿಕಾರ, ತನಿಖಾ ಸಂಸ್ಥೆಗಳಿದ್ದರೂ ಹಂತಕರನ್ನು ಬಂಧಿಸುವುದು ಸಾಧ್ಯವಾಗಿಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಹಿಂದೆ ಹಿಂದುತ್ವವಾದಿಗಳ ಕೈವಾಡವಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಆರೋಪ ಮಾಡುವ ಬದಲು ಶೀಘ್ರದಲ್ಲಿ ಹಂತಕರ ಪತ್ತೆ ಹಚ್ಚುವ ಕಾರ್ಯ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಸಂಘವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಏಕೆಂದರೆ ಭಯಕ್ಕೆ ಭಯಪಡದ ಸಂಘಟನೆ ಇದು. ಮೃತ್ಯುಂಜಯಿ ಸಮಾಜ ನಮ್ಮದು. ಸಾವಿಗೂ ಅಂಜದ ಸಮಾಜ ನಮ್ಮದು ಎಂದು ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶಂಕರಾನಂದ ಅವರು ಹೇಳಿದರು.
ಸೆಪ್ಟೆಂಬರ್ 24 ರಂದು ಧಾರವಾಡದಲ್ಲಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಮ್ಮಿಕೊಂಡ ಕಾರ್ಯಕರ್ತರ ಪಥ ಸಂಚಲನದ ನಂತರ ನಗರದ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಆವರಣದ ವೇದಿಕೆಯಲ್ಲಿ ಅವರು ಮಾತನಾಡಿದರು.
ಕೆಲ ಪ್ರಮುಖ ಹತ್ಯೆಗಳಿಗೆ ಸಂಬಂಧಿಸಿದಂತೆ ಸರಿಯಾದ ತನಿಖೆ ಮಾಡದೆ ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಆರೋಪ ಮಾಡುವ ಮೂಲಕ ಸಂಘದ ಮೇಲೆ ಮಿಥ್ಯಾರೋಪ ಮಾಡಲಾಗುತ್ತಿದೆ. ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರೇ ಬೇಜವಾಬ್ದಾರಿ ಹೇಳಿಕೆ ನೀಡಿ ಸಂಘದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ ಈ ಷಡ್ಯಂತ್ರ ಅವರಿಗೇ ತಿರುಗುಬಾಣವಾಗಲಿದೆ. ಹಿಂದೂ ಸಮಾಜ ಒಗ್ಗಟ್ಟಿನಲ್ಲಿದ್ದು ನಮ್ಮನ್ನು ಒಡೆದು ಆಳುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ದೇಶ ಕಟ್ಟುವ ಕೆಲಸ ಕೇವಲ ಸರ್ಕಾರದ್ದಲ್ಲ, ಸಾರ್ವಜನಿಕರದ್ದೂ ಹೌದು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನೂ ಮುನ್ನ ಆಕರ್ಷಕ ಪಥಸಂಚಲನ ಧಾರವಾಡದ ಆರ್ಎಲ್ಎಸ್ ಮೈದಾನದಿಂದ ಪ್ರಾರಂಭವಾಗಿ ಹುರಕಡ್ಡಿ ಅಜ್ಜ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ಸ್ವಯಂಸೇವಕರು ಸಾಗಿದ ದಾರಿಯುದ್ದಕ್ಕೂ ಮಾತೆಯರು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಘೋಷ್, ಶಾರೀರಿಕ, ದಂಡ ಪ್ರದರ್ಶನ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.