ಆಕರ್ಷಕ ಪಥಸಂಚಲನಕ್ಕೆ ಮಳೆಯ ಸಿಂಚನ
ಬಾಗಲಕೋಟೆ : ವಿಜಯದಶಮಿ ಉತ್ಸವ ಅಂಗವಾಗಿ ನಗರದ ವಿದ್ಯಾಗಿರಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲಕರ ಆಕರ್ಷಕ ಪಥ ಸಂಚಲನಕ್ಕೆ ಐದು ನಿಮಿಷಗಳ ಕಾಲ ಮಳೆಯ ಸಿಂಚನವಾಯಿತು.
ವಿದ್ಯಾಗಿರಿಯಲ್ಲಿ ಭಾನುವಾರ ಸಂಜೆ 4 ಕ್ಕೆ ಅಥಣಿ ಕಲ್ಯಾಣ ಮಂಟಪದಿಂದ ಗಣವೇಷಧಾರಿ ಬಾಲಕರ ಆಕರ್ಷಕ ಪಥಸಂಚಲನ ವಿದ್ಯಾಗಿರಿಯ ಪ್ರಮುಖ ರಸ್ತೆಗಳಲ್ಲಿ ಮೂಲಕ ಕೆಂಚಮ್ಮನ ದೇವಸ್ಥಾನ ರಸ್ತೆಗೆ ಬರುತ್ತಲೇ ಮಳೆ ಆರಂಭಗೊಂಡಿತು. ಐದು ನಿಮಿಷಗಳ ಕಾಲ ಸುರಿದ ಮಳೆಯಲ್ಲೆ ಪಥಸಂಚಲನ ಮುಂದೆ ಸಾಗಿ ವಿದ್ಯಾಗಿರಿಯ 22 ಕ್ರಾಸ್ನಲ್ಲಿ ಹಾಯ್ದು ಎಂಜಿನಿಯರಿಂಗ್ ಕಾಲೇಜ್ನ ವೃತ್ತ ತಲುಪಿತು. ಅಲ್ಲಿಂದ ಗೌರಿಶಂಕರ ಕಲ್ಯಾಣಮಂಟಪಕ್ಕೆ ಹೋಗಿ ಸಂಪನ್ನಗೊಂಡಿತು.
ಪಥ ಸಂಚಲನ ವೀಕ್ಷಣೆಗಾಗಿ ಸಾಗರೋಪಾದಿಯ ಜನಸ್ತೋಮ ಹರಿದು ಬಂದಿತ್ತು. ವಿದ್ಯಾಗಿರಿಯಲ್ಲಿ ಎಲ್ಲಿ ನೋಡಿದಲ್ಲಿ ಜನಸಾಗರ ಕಂಡು ಬಂದಿತು. ಪಥಸಂಚಲನ ಸ್ವಾಗತಕ್ಕಾಗಿ ಇಡೀ ವಿದ್ಯಾಗಿರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪಥ ಸಂಚಲನದ ಮಾರ್ಗದುದ್ದಕ್ಕೂ ಚಿತ್ತಚಿತ್ತಾರದ ಬೃಹದಾಕಾರದ ರಂಗೋಲಿ ಇಡಲಾಗಿತ್ತು. ಮಾರ್ಗದಲ್ಲಿ ಅಲ್ಲಲ್ಲಿ ಮಕ್ಕಳು ಭಾರತ ಮಾತೆ, ಭಗತ್ಸಿಂಗ್, ಸ್ವಾಮಿವಿವೇಕಾನಂದ ಮೊದಲಾದ ದೇಶಭಕ್ತರ ವೇಷಗಳಲ್ಲಿ ನಿಂತುಕೊಂಡು ಪಥ ಸಂಚಲಕ್ಕೆ ಸ್ವಾಗತ ಕೋರಿದರು.
ಪಥಸಂಚಲನ ಆರಂಭಕ್ಕೂ ಮುನ್ನ ಯುವಪಡೆ ಬೈಕ್ ರ್ಯಾಲಿ ನಡೆಸುವ ಅಭಿಮಾನ ಮೆರೆದರು. ಪಥಸಂಚಲನ ಮಾರ್ಗದ ಉದ್ದಕ್ಕೂ ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ಜನಸ್ತೋಮ ಜೈ ಘೋಷಣೆಗಳೊಂದಿಗೆ ಗಣವೇಷಧಾರಿಗಳನ್ನು ಹೂವಿನ ಮಳೆಗರೆದು ವೈಭವದ ಸ್ವಾಗತ ನೀಡಿದರು.
ಬಾಗಲಕೋಟೆಯಲ್ಲಿನ ಆರ್ಎಸ್ಸೆಸ್ ಪಥಸಂಚಲನ ನೋಡುವುದೇ ಒಂದು ಹಬ್ಬ ಎನ್ನುವ ಮಾತು ಜನಜನಿತವಾಗಿರುವಾಗಲೇ ವಿದ್ಯಾಗಿರಿಯಲ್ಲಿ ಭಾನುವಾರ ನಡೆದ ಗಣವೇಷಧಾರಿ ಬಾಲಕರ ಪಥಸಂಚಲನ ಇಡೀ ವಾತಾವರಣವನ್ನು ಕೇಸರಿಮಯವನ್ನಾಗಿಸಿತ್ತು.
ಮಾಜಿ ಶಾಸಕರಾದ ನಾರಾಯಣಸಾ ಭಾಂಡಗೆ, ವೀರಣ್ಣ ಚರಂತಿಮಠ, ಬಸವರಾಜ ಯಂಕಂಚಿ, ಬಸವರಾಜ ಕಟಗೇರಿ, ರಾಜು ನಾಯ್ಕರ, ಸಂಗಪ್ಪ ಕುಪ್ಪಸ್ತ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.