ಪಾತರಗಿತ್ತಿ ಪಕ್ಕ ನೋಡಬೇಕೇನs ಅಕ್ಕ..!
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..
ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ;
ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ !
– ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ’ ಕವನ ಸಂಕಲನ)
ಧಾರವಾಡ : ನಮ್ಮ-ನಿಮ್ಮ ಮನೆ ಅಂಗಳದ ಹೂ ಗಿಡಗಳು ಚಿಟ್ಟೆ ಮತ್ತು ಜೇನು ನೊಣಗಳ ಬದುಕು, ಸಂತಾನಾಭಿವೃದ್ಧಿ ನಿಯಂತ್ರಿಸುತ್ತವೆ – ನಿಸರ್ಗಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆ ಈ ವಿಷಯ ಪ್ರಕಟಿಸಿದೆ ಎಂದು ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಬೆಂಗಳೂರಿನ ಕೆ.ಸಿ. ರಘು ಹೇಳುತ್ತಿದ್ದಂತೆ, ಬೆರಗಾಗುವ ಸರದಿ ಸಭಿಕರದ್ದು.
ಧಾರವಾಡದ ಇನ್ಸಟಿಟ್ಯೂಷನ್ ಆಫ್ ಎಂಜಿನಿಯರ್ಸ್ನ ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನದಲ್ಲಿ ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್, ಸಿಡಿಎಸ್ ಆಯೋಜಿಸಿದ್ದ ‘ಆಹಾರದ ರಾಜಕೀಯ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮನೆ ಅಂಗಳದಲ್ಲಿ ಹೆಚ್ಚು, ಹೆಚ್ಚು ಹೂವಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಕೋರಿದರು.
ಅಮೇಜಾನ್ ಕಾಡುಗಳಲ್ಲಿಯ ಹ್ಯಾರಿಯರ್ ರಿಸೆಸ್ ಮಂಗ, ಮುಂಬರುವ ಬರಗಾಲವನ್ನು ಮೊದಲೇ ಗುರುತಿಸಿಕೊಂಡು, ವಿಶೇಷ ಎಲೆಯೊಂದನ್ನು ಸೇವಿಸಿಬಿಡುತ್ತದೆ. ಆಗ, ತನ್ನ ಸಂತಾನಾಭಿವೃದ್ಧಿಯನ್ನು ಮುಂದೂಡುವ ಶಕ್ತಿ ಅದಕ್ಕೆ ಲಭಿಸುತ್ತದೆ! ವಾತಾವರಣದ ಏರುಪೇರಿನ ಮುನ್ಸೂಚನೆ ಅವುಗಳಿಗೆ ಹೇಗೆ ದಕ್ಕುತ್ತದೆ ಎಂಬ ಬಗ್ಗೆ ಈಗ ಅಧ್ಯಯನ ನಡೆದಿದೆ ಎಂದು ಕೆ.ಸಿ. ರಘು ವಿವರಿಸಿದರು.
ಕಪ್ಪು ಮತ್ತು ಕೆಂಪು ಮೂತಿಯ ಮಂಗಗಳು ನಮ್ಮ ಮನೆಗಳಿಗೆ ಲಗ್ಗೆ ಇಟ್ಟಾಗ, ಮನೆ ಅಂಗಳದ ಉದ್ಯಾನದಲ್ಲಿ ಬೆಳೆಸಿದ ಔಷಧೀಯ ಗುಣಗಳ ಆಗರ ಅಮೃತ ಬಳ್ಳಿ (ಮಂಗ್ಯಾನ ಬಳ್ಳಿ – ಅಡ್ಡ ಹೆಸರು) ಕಿತ್ತು ತಿಂದು, ಆರೋಗ್ಯವನ್ನು ಸುಸ್ಥಿರ ಗೊಳಿಸಿಕೊಳ್ಳುವ ಪರಿ ನಮಗೆ ವಿಚಿತ್ರವೆನಿಸಬಹುದು. ನಿಸರ್ಗ ವೈದ್ಯಕೀಯ ಅವುಗಳಿಗೆ ಸಿದ್ಧಿಸಿದ ಬಗೆ ಅಧ್ಯಯನ ಯೋಗ್ಯ ಎಂದೂ, ಕೆ.ಸಿ. ರಘು ಹೇಳಿದರು.
ಪಾತರಗಿತ್ತಿ, ದುಂಬಿ, ಹ್ಯಾತೆ ಮತ್ತು ರಾಣಿ ಜೇನ್ನೊಣದ ಅಣತಿಯಂತೆ ಮಕರಂದ ಸಂಗ್ರಹಿಸಲು ಬರುವ ಕಾರ್ಮಿಕ ಪಡೆ, ತಮ್ಮ ರಸ ಹೀರುವ ಕೊಳವೆ, ಮುಖ, ಮೈ ಮತ್ತು ಕಾಲಗಳಿಗೆ ಪರಾಗ ರೇಣುಗಳನ್ನು ಮೆತ್ತಿಕೊಳ್ಳುತ್ತವೆ. ಗುಡಿಗೆ ಮರಳಿದಾಗ ಪ್ಯೂಪಾ ಹಂತದಲ್ಲಿರುವ ಲಾರ್ವೆಗಳಿಗೆ ಪರಾಗ ರೇಣುಗಳನ್ನು ಆಹಾರ ರೂಪದಲ್ಲಿ ಒದಗಿಸುತ್ತವೆ. ಪರಾಗ ರೇಣು ಅವುಗಳ ಮುಂದಿನ ಪೀಳಿಗೆ, ಗಂಡು ಮತ್ತು ಹೆಣ್ಣು ಲಿಂಗವನ್ನು ನಿರ್ಧರಿಸುತ್ತವೆ! ಕೇವಲ ಪರಾಗ ಸ್ಪರ್ಷ ಮತ್ತು ಬೀಜ ಪ್ರಸರಣ ಮಾತ್ರವಲ್ಲ ಪಾತರಗಿತ್ತಿ ತನ್ನ ಮುಂದಿನ ಪೀಳಿಗೆಯ ಲಿಂಗವನ್ನೂ ಹೂಗಳಿಂದಲೇ ನಿರ್ಧರಿಸಕೊಳ್ಳುವ ಮಟ್ಟಿಗೆ, ಕೊಡು-ಕೊಳ್ಳುವ ವಿನಿಮಯ ಬಂಧ ಹೊಂದಿದೆ ಎಂದರು.
ಸಂಗ್ರಹಿಸಿಟ್ಟ ಜೇನುತುಪ್ಪವನ್ನು ಸಂಕಷ್ಟ ಸಮಯದಲ್ಲಿ ಕರಗಿಸಿಕೊಳ್ಳಲು, ಇಬ್ಬನಿ ಹನಿ ಆಶ್ರಯಿಸುವ ಇವು, ಕೆರೆ-ತೊರೆ, ಜಲ ಮೂಲಗಳ ಆವಾರದಲ್ಲಿ ‘ಮಡ್ ಪಡ್ಲಿಂಗ್’ ಮೂಲಕ, ಲವಣಾಂಶ ಸೇರಿದಂತೆ ಇತರೆ ಆವಶ್ಯಕ ಖನಿಜಗಳನ್ನು ಗಂಡು ಚಿಟ್ಟೆ, ಜೇನ್ನೊಣಗಳು ಹೆಣ್ಣಿಗೆ ಸಂಯೋಗದ ಸಮಯದಲ್ಲಿ ದಾಟಿಸಿ, ಮುಂದಿನ ಪೀಳಿಗೆ ಸದೃಢವಾಗುವಂತೆ ನೋಡಿಕೊಳ್ಳುತ್ತವೆ ಎನ್ನುತ್ತದೆ ಸಂಶೋಧನೆ.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ, ಪ್ರೊ. ಗಿರೀಶ ಕಾಡದೇವರು ಹೇಳುವಂತೆ -ದುಂಬಿಗಳ ನಯನ ಮನೋಹರ ಹಾರಾಟ ವೀಕ್ಷಿಸಲು ಪ್ರಶಸ್ತವಾದ ಸಮಯ ಬೆಳಗ್ಗೆ 8 ರಿಂದ 11 ಗಂಟೆ; ಸಂಜೆ 4 ರಿಂದ 6 ಗಂಟೆ. ನಮ್ಮ ದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ದುಂಬಿಗಳ ದಿನಾಚರಣೆ ಹಮ್ಮಿಕೊಳ್ಳುವುದು ಸೂಕ್ತ. ಜಾಗತಿಕ ದಿನಾಚರಣೆ ಸಂದರ್ಭದಲ್ಲಿ (ಜೂನ್ ೪) ಮಳೆಗಾಲದ ಹೊಸ್ತಿಲಲ್ಲಿ ನಾವಿರುವುದರಿಂದ ಅವುಗಳ ಚಿನ್ನಾಟ ಗೋಚರಿಸುವುದು ಕಷ್ಟಸಾಧ್ಯ.
ಶೀತ ರಕ್ತ ಕೀಟ ಪ್ರಜಾತಿಗೆ ಸೇರಿದ ದುಂಬಿಗಳು, ಹಗಲಿನಲ್ಲಿ ಮಾತ್ರ ಚಟುವಟಕೆಯಿಂದ ಕೂಡಿದ್ದು ೨೯ ಡಿಗ್ರಿ ತಾಪಮಾನವಿರುವ ಪ್ರದೇಶದಲ್ಲಿ ಮಾತ್ರ ಬದುಕಿ ಬಾಳಬಲ್ಲವು! ಗಂಡು ದುಂಬಿ ತುಂಬ ಆಕರ್ಷಕವಾಗಿದ್ದು, ಸೂರ್ಯನ ಕಿರಣಗಳಿಗೆ ಅವು ತಮ್ಮ ರೆಕ್ಕೆಯನ್ನು ಒಡ್ಡಿದಾಗ ‘ಅಲ್ಟ್ರಾ ವಯೋಲೆಟ್ ಮಾರ್ಕಿಂಗ್’ ಮತ್ತು ‘ಮೈಕ್ರೋ ಸ್ಕೇಲ್ಸ್’ ಹೊಳೆದು ತನ್ನ ಸಂಗಾತಿಯನ್ನು (ಅದೇ ಕುಟುಂಬ, ತನ್ನದೇ ಪ್ರಜಾತಿ ಮತ್ತು ಕುಲಕ್ಕೆ ಸೇರಿದ ಹೆಣ್ಣು!) ಅವು ಆಕರ್ಷಿಸುವಲ್ಲಿ ಯಸ್ವಿಯಾಗುತ್ತಿರುವುದನ್ನು ಸಹ ದಾಖಲಿಸಲಾಗಿದೆ. ವಿಶೇಷವೆಂದರೆ ಹೆಣ್ಣು ದುಂಬಿ ಸಹ ತನ್ನ ‘ಮೇಟಿಂಗ್ ಬಿಹೇವಿಯರ್’ ಗಂಡು ದುಂಬಿಯ ಪುರುಷತ್ವ ಗ್ರಹಿಸಿ, ಒಪ್ಪುತ್ತದೆ! ಕಾರಣ, ತನ್ನ ಮುಂಬರುವ ಪೀಳಿಗೆ ಸದೃಢವಾಗಿರಬೇಕಲ್ಲ!
ವಿಶೇಷವೆಂದರೆ, ಹೆಣ್ಣು ದುಂಬಿಗಳು ಮಕರಂಧ ಹೀರಿ ಉದರಂಭರಣ ಮಾಡಿದರೆ ಗಂಡು ಪಾತರಗಿತ್ತಿಗಳು ‘ಮಡ್ ಪಡ್ಲಿಂಗ್’ ಅಂದರೆ, ತರಿ ಭೂಮಿ, ಜೌಗು ಪ್ರದೇಶದಲ್ಲಿ ನೆಲದ ಮೇಲೆ ಕುಕ್ಕರಿಸಿ ಮಣ್ಣಿನಲ್ಲಿ ಹುದುಗಿದ ಲವಣಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಹೀರಿ, ವೀರ್ಯದೊಂದಿಗೆ ಹೆಣ್ಣು ದುಂಬಿಗೆ ಅವು ಪೂಷಿಸುತ್ತವೆ! ತಮ್ಮ ಮರಿಗಳಿಗೆ ರಕ್ಷಣೆ ಮತ್ತು ಪೋಷಣೆ ಒದಗಿಸಬಲ್ಲ ಗಿಡಗಳನ್ನಷ್ಟೇ ಅತ್ಯಂತ ಜಾಣತನಿಂದ ಹೆಣ್ಣುದುಂಬಿ ಆಯ್ದುಕೊಂಡು ಎಲೆಗಳ ಬುಡಕ್ಕೆ ಕನಿಷ್ಟ 1,000 ಮೊಟ್ಟೆಯೂಡುತ್ತದೆ! ಗರಿಷ್ಟ 2,000 ಮೊಟ್ಟೆಗಳೂ ಇರಬಹುದು. ಬದುಕುಳಿಯುವ ಸಂಖ್ಯೆ ಕೇವಲ ಶೇ.10ರಷ್ಟು. ಈ ಹಂತ ಸುಮಾರು 2ರಿಂದ 4 ವಾರಗಳ ಕಾಲವಿದ್ದು, ಪ್ರೌಢ ಹಂತ ತಲುಪಿದ ದುಂಬಿ 1 ರಿಂದ 2 ತಿಂಗಳುಗಳ ಕಾಲ ಬದುಕುಳಿದ ದಾಖಲೆಗಳಿವೆ. ಕೆಲ ಪ್ರಜಾತಿಯ ದುಂಬಿಗಳು ‘ಮೊನಾರ್ಕ್’ 9 ತಿಂಗಳು ಸಹ ಜೀವಿಸಬಲ್ಲವು ಎಂದು ಅಭಿಪ್ರಾಯಪಡುತ್ತಾರೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ, ಡಾ. ಪುಲಿಕೇಶಿ ಬಿರಾದಾರ.
ಪೋಸ್ಟ್ ಡಾಕ್ಟರಲ್ ಫೆಲೋ ಡಾ. ಧೀರಜ್ ವೀರನಗೌಡರ ಪ್ರಕಾರ, ಈ ದುಂಬಿಗಳಿಗೂ ಶತ್ರುಗಳ ಕಾಟ ಇಲ್ಲದಿಲ್ಲ! ಹಾಗಾಗಿ, ಮೈಬಣ್ಣಕ್ಕೆ ಸರಿ ಹೊಂದುವ ಪರಿಸgದಲ್ಲಿ ‘ಕಾಮೋಫ್ಲೆಜ್’ ಆಗಿ ಬಾಳುವ, ಪಾತರಗಿತ್ತಿ ಪಕ್ಕದ ಮೇಲಿನ ಬಣ್ಣವನ್ನು ತೀಕ್ಷ್ಣವಾಗಿ ಹೊಳೆಸಿ ಹೆದರಿಸುವ ಮೂಲಕ, ನಂಜುಕಾರಕ ದ್ರವ ಹೊರಸೂಸಿ ವಿಷ ಹರಡುವ ಮೂಲಕ, ಬಚಾವಾಗುವ ತಂತ್ರ ಸಿದ್ಧಿಸಿಕೊಂಡಿವೆ.
ದುಂಬಿಗಳನ್ನು ಪರಿಸರ ಆರೋಗ್ಯದ ಸೂಚಕವಾಗಿಯೂ ತಜ್ಞರು ಗುರುತಿಸುತ್ತಾರೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶದಲ್ಲಿ ಈಗಾಗಲೇ ತಜ್ಞರು 334 ಪ್ರಬೇಧಗಳಿಗೆ ಸೇರಿದ ಪಾತರಗಿತ್ತಿಗಳನ್ನು ದಾಖಲಿಸಿದ್ದಾರೆ. ಆ ಪೈಕಿ 37 ಪ್ರಜಾತಿಯ ದುಂಬಿಗಳು ಈಗ ವಿನಾಶದ ಅಂಚಿನಲ್ಲಿವೆ. ಐಯುಸಿಎನ್ ‘ರೆಡ್ ಲಿಸ್ಟ್’ ದಾಖಲೆ ಪ್ರಕಾರ, ಈಗಾಗಲೇ 39 ಪ್ರಜಾತಿಯ ದುಂಬಿಗಳು ಸಸ್ಯ ವೈವಿಧ್ಯ ನಾವು ಕಳೆದುಕೊಂಡ ಹಿನ್ನೆಲೆಯಲ್ಲಿ ವಿಲುಪ್ತಿಯಾಗಿವೆ ಎಂದೂ ಹೇಳಿದೆ.
ನಮ್ಮ ದೇಶದಲ್ಲಿ 1,500 ಪ್ರಜಾತಿಗೆ ಸೇರಿದ ದುಂಬಿಗಳನ್ನು ದಾಖಲಿಸಲಾಗಿದ್ದು, ಜಗತ್ತಿನಾದ್ಯಂತ 18,000 ಪ್ರಬೇಧಗಳ ದುಂಬಿಗಳ ದಾಖಲೆ ಲಭ್ಯವಿದೆ. ಹಿಮಾಲಯದ ತಪ್ಪಲು ಅತ್ಯಂತ ವಿಶೇಷವಾದ ದುಂಬಿಗಳ ಪ್ರಜಾತಿಗೆ ಹೆರಿಗೆ ಮನೆ ಎಂದು ಗುರುತಿಸಲಾಗಿದ್ದು, ಪ್ರವಾಸಿಗರ ದಟ್ಟಣೆಯಿಂದ ಅವುಗಳ ಪಾರಿಸಾರಿಕ ವ್ಯವಸ್ಥೆಗೆ ಧಕ್ಕೆ ಬಂದೊದಗಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ಪರಿಸರ ಸ್ನೇಹಿಯಾಗಿ, ನಾವು ಬದುಕಲು ದುಂಬಿಗಳ ಬದುಕು ಮಾರ್ಗದರ್ಶಿ ಎನ್ನುತ್ತಾರೆ, ನೇಚರ್ ರಿಸರ್ಚ್ ಸೆಂಟರ್ ಅಧ್ಯಕ್ಷ, ಲ್ಯಾಂಡ್ ಸ್ಕೇಪ್ ಇಂಜಿನಿಯರ್ ಪಂಚಯ್ಯ ಹಿರೇಮಠ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.