ಇತ್ತೀಚೆಗೆ ಹುಬ್ಬಳ್ಳಿ ನ್ಯಾಯಾಲಯವು ದಕ್ಷಿಣ ಭಾರತದ ನಾನಾ ಕಡೆ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ ಆರೋಪದಡಿ ಸಿನಿ ಉಗ್ರರೆಂದು ಶಂಕಿಸಿ 2008 ರಲ್ಲಿ ಬಂಧಿತರಾಗಿದ್ದ 17 ಮಂದಿ ಮುಸ್ಲಿಂ ಯುವಕರನ್ನು ದೋಷಮುಕ್ತಿಗೊಳಿಸಿ ಬಿಡುಗಡೆ ಮಾಡಿತ್ತು. ಕೆಲವು ಮುಸ್ಲಿಂ ಒಡೆತನದ ಪತ್ರಿಕೆಗಳು ಅದನ್ನೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿದ್ದವು. ಈ 17 ಮಂದಿ ಅಮಾಯಕ ಮುಸ್ಲಿಂ ಯುವಕರ ಮೇಲೆ ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಷರಾ ಬರೆದಿದ್ದವು. ನಿರಪರಾಧಿಯಾದ ವ್ಯಕ್ತಿಗಳು ಬಿಡುಗಡೆಗೊಂಡಾಗ ಕೆಲ ಮಾಧ್ಯಮಗಳಲ್ಲಿ ಬಂಧಿಸಿದಾಗ ಇದ್ದ ಅಮಿತ ಉತ್ಸಾಹ ಕಂಡುಬರುವುದಿಲ್ಲ ಎಂದೂ ವ್ಯಾಖ್ಯಾನಿಸಿದ್ದವು. ಹುಬ್ಬಳ್ಳಿ ನ್ಯಾಯಾಲಯ ಈ ಆರೋಪಿಗಳನ್ನು ಬಿಡುಗಡೆ ಮಾಡಿದ್ದಿರಬಹುದು. ಅಂದ ಮಾತ್ರಕ್ಕೆ ಅವರೆಲ್ಲ ನಿರಪರಾಧಿಗಳೆಂದು ಹೇಳಲು ಹೇಗೆ ಸಾಧ್ಯ? ಸುಪ್ರೀಂಕೋರ್ಟ್ ಒಂದು ವೇಳೆ ಇವರೆಲ್ಲ ನಿರಪರಾಧಿಗಳೆಂದು ತೀರ್ಪು ನೀಡಿದರೆ ಆಗ ಅದನ್ನು ಇಡೀ ದೇಶ ಮಾನ್ಯ ಮಾಡಬಹುದಷ್ಟೆ.
ಜೀಶನ್ಖಾನ್ ಎಂಬ ಮುಸ್ಲಿಂ ಯುವಕನಿಗೆ ಮುಂಬೈನ ಖಾಸಗಿ ಕಂಪೆನಿಯೊಂದು ಆತ ಮುಸ್ಲಿಂ ಎಂಬ ಕಾರಣಕ್ಕಾಗಿ ಕೆಲಸ ನಿರಾಕರಿಸಿದ ವಿಷಯವೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು. ಟಿವಿ ವಾಹಿನಿಗಳಲ್ಲಿ ಈ ಬಗ್ಗೆ ಚರ್ಚೆಯೂ ನಡೆಯಿತು. ಇಸ್ಕಾನ್ ಏರ್ಪಡಿಸಿದ್ದ ಭಗವದ್ಗೀತೆ ಸ್ಪರ್ಧೆಯಲ್ಲಿ ಮರ್ಯಂ ಎಂಬ ಮುಸ್ಲಿಂ ಯುವತಿ ಪ್ರಥಮ ಸ್ಥಾನ ಗಳಿಸಿದ್ದು ಕೂಡ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು. ರಾಷ್ಟ್ರಪತಿಗಳೊಂದಿಗೆ ಆಕೆ ಹಾಗೂ ಆಕೆಯ ತಂದೆ ಅಸೀಫ್ಸಿದ್ದಿಕಿ ಜೊತೆಯಲ್ಲಿರುವ ಫೋಟೋ ಕೂಡ ಪ್ರಕಟವಾಯಿತು.
ಇಂತಹವನ್ನೆಲ್ಲ ಭಾರೀ ಸುದ್ದಿ ಮಾಡುವ ಮಾಧ್ಯಮಗಳು ಸುದ್ದಿಯಾಗಲೇ ಬೇಕಾದ ಇನ್ನೂ ಕೆಲವು ನೈಜ ಸುದ್ದಿಗಳನ್ನು ಬೇಕೆಂದೇ ಮುಚ್ಚಿಡುವುದೇಕೆ ಎಂಬುದೇ ಅರ್ಥವಾಗುವುದಿಲ್ಲ. ಜೀಶನ್ಖಾನ್ಗೆ ಮುಂಬೈ ಕಂಪೆನಿಯೊಂದು ಕೆಲಸ ನಿರಾಕರಿಸಿರಬಹುದು. ಆದರೆ ಮುಸ್ಲಿಂ ಮತ್ತು ಕ್ರೈಸ್ತರಿಗೆ ಮಾತ್ರ ಉದ್ಯೋಗ ನೀಡುವುದಾಗಿ ಹೇಳುವ ಅದೆಷ್ಟು ಕಂಪೆನಿಗಳು ನಮ್ಮ ದೇಶದಲ್ಲಿಲ್ಲ? ಕೇರಳದಲ್ಲಿ ಅಲ್ಲಿನ ರಾಜ್ಯ ಸರ್ಕಾರವೇ ಮುಸ್ಲಿಮರಿಗೆ ಮಾತ್ರ ಉದ್ಯೋಗ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಆ ಬಗ್ಗೆ ಮಾಧ್ಯಮಗಳೇಕೆ ಮೌನವಾಗಿವೆ? ಅಲಿಘಡ ವಿಶ್ವ ವಿದ್ಯಾಲಯದಲ್ಲಿ ಇದುವರೆಗೆ ಮುಸ್ಲಿಮೇತರರು ಏಕೆ ಉಪಕುಲಪತಿಗಳಾಗಿಲ್ಲವೆಂದು ಯಾರಾದರೂ ಕೇಳಿದರೆ, ಅದು ಹೇಗೆ ಸಾಧ್ಯ? ಅದು ಮುಸ್ಲಿಂ ವಿವಿಯಲ್ಲವೆ? ಎನ್ನುವ ಪ್ರಭೃತಿಗಳೂ ಇದ್ದಾರೆ. ಮುಸ್ಲಿಂ ವಿವಿಗೆ ಮುಸ್ಲಿಮರೇ ಏಕೆ ಉಪಕುಲಪತಿಗಳಾಗಬೇಕು? ಬೆಂಗಳೂರಿನ ಖಾಸಗಿ ಶಾಲೆಯೊಂದು ಮುಸ್ಲಿಂ ಮಹಿಳೆಯರಿಗೆ ಮಾತ್ರ ಆದ್ಯತೆ ಎಂದು ಜಾಹೀರಾತು ನೀಡುತ್ತದೆ. ಸೆಕ್ಯುಲರ್ ದೇಶವೆನಿಸಿಕೊಂಡಿರುವ ಭಾರತದಲ್ಲಿ ಇದು ಎಷ್ಟರ ಮಟ್ಟಿಗೆ ಸಮರ್ಥನೀಯ? ನೋಯ್ಡಾದಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾದ ಅಪಾರ್ಟ್ಮೆಂಟ್ ಇದೆ. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ? ನೋಯ್ಡಾದ ಕಂಪೆನಿಯೊಂದು ಕ್ರೈಸ್ತರಿಗೆ ಮಾತ್ರ ಫ್ಲ್ಯಾಟ್ ಕೊಡಲಾಗುವುದು ಎಂದು ಘೋಷಿಸಿತ್ತು. ಅದನ್ನು ಯಾವ ಪತ್ರಕರ್ತರೂ ಸುದ್ದಿ ಮಾಡಲಿಲ್ಲ. ಡಾಟಾ ಎಂಟ್ರಿ ಕಂಪೆನಿಯೊಂದು ಕ್ರೈಸ್ತರಿಗೆ ಮಾತ್ರ ಉದ್ಯೋಗ ನೀಡುವ ಸುತ್ತೋಲೆ ಹೊರಡಿಸಿತ್ತು. ಅದನ್ನೂ ಕೂಡ ಯಾರೂ ಪ್ರಶ್ನಿಸಲಿಲ್ಲ.
ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ 400 ಕೋಟಿ ಮೊತ್ತದ ಬಡ್ಡಿರಹಿತ ಸಾಲವನ್ನು ಮುಸ್ಲಿಮರಿಗೆ ಮಾತ್ರ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಅದೇ ರಾಜ್ಯದಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಗರಿಷ್ಠ 2,50,000 ರೂ. ಶೈಕ್ಷಣಿಕ ಸಾಲ ಯೋಜನೆ ಜಾರಿಗೆ ತಂದಿತ್ತು. ಆ ಸಾಲಕ್ಕೆ ಕೇವಲ ಶೇ. 3 ರಷ್ಟು ಸರಳ ಬಡ್ಡಿ ವಿಧಿಸಲಾಗಿತ್ತು. ಉತ್ತರಪ್ರದೇಶದ ಅಖಿಲೇಶ್ ಸಿಂಗ್ ಸರ್ಕಾರವಂತೂ 500 ಕೋಟಿ ವೆಚ್ಚದಲ್ಲಿ ಮುಸ್ಲಿಮರಿಗಾಗಿ ಖಬರಸ್ಥಾನ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿತ್ತು. ಇದಕ್ಕಾಗಿ 85773 ಖಬರಸ್ಥಾನಗಳನ್ನು ಗುರುತಿಸಿತ್ತು. ಆದರೆ ಹಿಂದುಗಳ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ರುದ್ರಭೂಮಿ ಅಭಿವೃದ್ಧಿ ಬಗ್ಗೆ ಆ ಮುಖ್ಯಮಂತ್ರಿ ತಲೆಕೆಡಿಸಿಕೊಳ್ಳಲೇ ಇಲ್ಲ. ಅದೇ ಉತ್ತರ ಪ್ರದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ವೇತನವನ್ನು ಘೋಷಿಸಲಾಗಿದೆ. ಪದವೀಧರ, ಸಾತ್ನಕೋತ್ತರ ಹಾಗೂ ವೃತ್ತಿಪರ ಕೋರ್ಸ್ಗಳಲ್ಲಿ ಅಧ್ಯಯನ ಮಾಡುವ ಎಲ್ಲ ಮುಸ್ಲಿಂ ವಿದ್ಯಾರ್ಥಿನಿಯರಿಗೂ ಇದು ಅನ್ವಯ. ಕೇರಳದಲ್ಲಿ ಮುಸ್ಲಿಂ ಯುವಕರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಸರ್ಕಾರದ ವತಿಯಿಂದ 16 ಉಚಿತ ಕೋಚಿಂಗ್ ಸೆಂಟರ್ಗಳನ್ನು ತೆರೆಯಲಾಗಿದೆ. ಕೇರಳ ಮದ್ರಸಾ ಶಾಲೆಯ ಶಿಕ್ಷಕರ ಕಲ್ಯಾಣ ಯೋಜನೆಯ ಸಿಬ್ಬಂದಿಯ ಬಿ.ಟೆಕ್. ಪದವೀಧರ ವಿದ್ಯಾರ್ಥಿಗಳಿಗಾಗಿ 25 ಸಾವಿರ ರೂ. ಮೌಲ್ಯದ ಲ್ಯಾಪ್ಟಾಪ್ಗಳನ್ನು ಉಚಿತವಾಗಿ ಒದಗಿಸುವ ಯೋಜನೆ ಕೂಡ ಅನುಷ್ಠಾನದಲ್ಲಿದೆ. ಅದೇ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಚ್ಛೇದಿತ ಮಹಿಳೆಯರಿಗಾಗಿ ಸರ್ಕಾರದ ಹೊಸದೊಂದು ಯೋಜನೆಯಿದೆ. ಅದೆಂದರೆ ವಿಚ್ಛೇದನದ ಬಳಿಕ 5 ವರ್ಷಗಳವರೆಗೆ ಮರುಮದುವೆಯಾಗದಿದ್ದರೆ ಹಾಗೂ ಅಂಥವರಿಗೆ ವಸತಿ, ದುಡಿಯುವ ಮಕ್ಕಳ ಕೊರತೆ ಇದ್ದರೆ ಅವರಿಗೆ ಮನೆ ಅಥವಾ ಅಪಾರ್ಟ್ಮೆಂಟ್ ನೀಡಿ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮಧ್ಯಪ್ರದೇಶ ಸರ್ಕಾರ 81,075 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಅದನ್ನೀಗ 1,47,908 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ. ಆದರೆ ಇದನ್ನೆಲ್ಲ ಯಾವ ಮಾಧ್ಯಮಗಳೂ ಇದುವರೆಗೆ ಸುದ್ದಿ ಮಾಡಿಲ್ಲ.
ದೇಶಕ್ಕೆ `ವಂದೇ ಮಾತರಂ’ ಹಾಗೂ `ಜನ ಗಣ ಮನ’ ಎಂಬ ಎರಡು ಉಜ್ವಲ ರಾಷ್ಟ್ರಗೀತೆಗಳನ್ನು ನೀಡಿದ ಪಶ್ಚಿಮ ಬಂಗಾಳದಲ್ಲಿ ಹಿಂದುಗಳು ಎದುರಿಸುತ್ತಿರುವ ದಯನೀಯ ಸ್ಥಿತಿಯ ಬಗ್ಗೆ ಮಾಧ್ಯಮಗಳು ಜಾಣಮೌನ ಪ್ರದರ್ಶಿಸಿರುವುದು ಎಂತಹ ವಿಪರ್ಯಾಸ! ಮೊನ್ನೆ ಮೇ 4 ರಂದು ಬುದ್ಧ ಪೂರ್ಣಿಮೆ ಅಂಗವಾಗಿ ಪಶ್ಚಿಮ ಬಂಗಾಳದ ಗಡಿ ಜಿಲ್ಲೆಯಾಗಿರುವ ನಾಡಿಯಾದಲ್ಲಿ ಹಿಂದುಗಳು ಸಂತಸ ಸಂಭ್ರಮಗಳಿಂದ ಮೆರವಣಿಗೆ ನಡೆಸುತ್ತಿದ್ದಾಗ, ಇದ್ದಕ್ಕಿದ್ದಂತೆ ಅದನ್ನು ಸಹಿಸದ ಮುಸ್ಲಿಂ ದುಷ್ಕರ್ಮಿಗಳ ಗುಂಪೊಂದು `ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಅದನ್ನು ತಡೆದು ಅಸ್ತವ್ಯಸ್ತಗೊಳಿಸಿತು. ಈ ಮೆರವಣಿಗೆ ಅಲ್ಲಿನ ಮಸೀದಿಯೊಂದರ ಮುಂದೆ ಬ್ಯಾಂಡ್ ಬಾರಿಸಿಕೊಂಡು ಹೋಗಿತ್ತು ಎನ್ನುವ ನೆಪವೇ ಈ ದಾಳಿಗೆ ಕಾರಣ. ದಾಳಿ ನಡೆಸಿದ ಈ ಗುಂಪಿನಲ್ಲಿದ್ದವರೆಲ್ಲ ಬಾಂಗ್ಲಾದೇಶದ ಅಕ್ರಮ ನುಸುಳುಗಾರರು. ಸಾರಥ್ಯ ವಹಿಸಿದ ಮಹಾಶಯ ಸ್ಥಳೀಯ ತೃಣಮೂಲ ಕಾಂಗ್ರೆಸ್ ಶಾಸಕನಾದ ನಸೀರುದ್ದೀನ್ ಅಹಮದ್! ಮೆರವಣಿಗೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಯಿತು. ಅನಂತರ ಹಿಂದುಗಳ ಮನೆಗೆ ದಾಳಿಯಿಟ್ಟು ಲೂಟಿ ಮಾಡಲಾಯಿತು. ಮಹಿಳೆಯರ ಮಾನಭಂಗದ ಪ್ರಯತ್ನಗಳೂ ನಡೆದವು. ಕೆಲವು ಹಿಂದು ಪ್ರಮುಖರು ಈ ಬಗ್ಗೆ ಅಲ್ಲಿನ ಚೂಟಿಪುರ ಮಸೀದಿಗೆ ತೆರಳಿ ಚರ್ಚಿಸಬೇಕೆಂದಿದ್ದಾಗ ಅವರನ್ನೆಲ್ಲ ಬೆದರಿಸಲಾಯಿತು. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಅನಂತರ ನ್ಯಾಯಾಲಯಕ್ಕೆ ಮೊರೆಹೋಗಿ ಬುದ್ಧಪೂರ್ಣಿಮೆ ಮೆರವಣಿಗೆಗೆ ಅಡ್ಡಿಪಡಿಸಿದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕಾಯಿತು.
ಮಿಡ್ನಾಪುರ ಜಿಲ್ಲೆಯ ಪಿಂಗ್ಲಾ ಹಾಗೂ ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಬಾಂಬ್ ಸ್ಫೋಟ ನಡೆಯಿತು. ಈ ಬಾಂಬ್ ಸ್ಫೋಟಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸಲು ಆದೇಶಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಗೆ ಸಂಬಂಧಿಸಿದ ಗುಪ್ತಚರ ಇಲಾಖೆಯ ಅಧಿಕೃತ ವರದಿ ಪಡೆಯುವ ಮುನ್ನವೇ ಹೇಳಿದ್ದೇನು ಗೊತ್ತೇ: `ಕೃಷ್ಣನಗರದಲ್ಲಿ ಯಾವುದೇ ಬಾಂಬ್ ಕಾರ್ಖಾನೆ ಇರಲಿಲ್ಲ. ಅಲ್ಲಿದ್ದಿದ್ದು ಒಂದು ಪಟಾಕಿ ಕಾರ್ಖಾನೆ.’ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಗೃಹಮಂತ್ರಿ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ಹೀಗಿದ್ದೂ ಅವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆಂದರೆ ಅದು ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿ ಅಲ್ಲದೆ ಮತ್ತೇನು? ನಿಜಕ್ಕೂ ಕೃಷ್ಣನಗರದಲ್ಲಿದ್ದದ್ದು ಮುಸ್ಲಿಂ ಒಡೆತನದ ಬಾಂಬ್ ತಯಾರಿಕಾ ಕಾರ್ಖಾನೆ. ಆ ಕಾರ್ಖಾನೆಗೆ ಅನುಮತಿ ಕೊಟ್ಟಿದ್ದು ಯಾರು? ಎಂಬುದು ರಹಸ್ಯವಲ್ಲ.
ಪಶ್ಚಿಮ ಬಂಗಾಳದಲ್ಲಿ ಕಳೆದ 2012-15 ರ ಅವಧಿಯಲ್ಲಿ ಒಟ್ಟು 19 ಕೋಮುಗಲಭೆಗಳು ನಡೆದಿವೆ. ಈ ಎಲ್ಲಾ ಸಂದರ್ಭಗಳಲ್ಲಿ ದೌರ್ಜನ್ಯಕ್ಕೀಡಾದವರು ಹಿಂದುಗಳೇ. ಕಳೆದ 2014 ರ ಮಾರ್ಚ್ 29 ರಂದು ಸರಾರ್ಹತ್ ಗ್ರಾಮದ ಜನಪ್ರಿಯ ಹಿಂದು ಮುಖಂಡ ಕಾರ್ತಿಕ್ ಮೇತಿಯಾರನ್ನು ಬರ್ಬರವಾಗಿ ಕೊಲ್ಲಲಾಯಿತು. 2014 ರ ಫೆ. 1 ರಂದು ಸರ್ಬೇರಿಯ ಗ್ರಾಮದಲ್ಲಿ ಹಿಂದು ಸಂಹತಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಯಿತು. 2014 ರ ಜ. 1 ರಂದು ಮಹಮ್ಮದ್ ಪೈಗಂಬರ್ ಜಯಂತಿ ಪ್ರಯುಕ್ತ ನಡೆದ ಮುಸ್ಲಿಂ ಮೆರವಣಿಗೆಯನ್ನು ಹಿಂದುಗಳೇ ಬಹುಸಂಖ್ಯಾತರಾಗಿದ್ದ ಗ್ರಾಮಗಳಿಗೆ ನುಗ್ಗಿಸಿ, ಅಲ್ಲಿನ ಹಿಂದು ಮನೆಗಳ ಮೇಲೆ ದಾಳಿ ನಡೆಸಲಾಯಿತು. ನಾಲ್ಕು ದೇಗುಲಗಳು ನೆಲಸಮಗೊಂಡವು. ಹಿಂದು ಮಹಿಳೆಯರ ಮಾನಭಂಗ ಕೃತ್ಯವೂ ನಡೆಯಿತು. ಇಂತಹ ಇನ್ನೂ ಅದೆಷ್ಟೋ ಪ್ರಕರಣಗಳು ನಡೆದಿವೆ. ಹಿಂದುಗಳ ಮೇಲಿನ ಇಂತಹ ದಾಳಿ ಜಿಹಾದ್ನ ಒಂದು ಅಂಗವಾಗಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ಗೋಗ್ನಾ ಹೇಳಿಕೆ ನೀಡಿರುವುದು ಗಮನಾರ್ಹ. ಪಶ್ಚಿಮ ಬಂಗಾಳ ರಾಜ್ಯದಡಿಯಲ್ಲಿ ಜ್ವಾಲಾಮುಖಿ ಕೊತಕೊತನೆ ಕುದಿಯುತ್ತಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಮಾಷೆಯೆಂದರೆ ಮುಸ್ಲಿಮರ ಮೇಲೆ ಆ ರಾಜ್ಯದಲ್ಲಿ ಸಣ್ಣದೊಂದು ಹಲ್ಲೆ ನಡೆದರೂ ಅದು ಭಾರೀ ಸುದ್ದಿಯಾಗುತ್ತದೆ. ಪಾರ್ಲಿಮೆಂಟ್ನಲ್ಲೂ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತದೆ. ಆದರೆ ಹಿಂದುಗಳ ಮನೆ, ದೇಗುಲಗಳಿಗೆ ಬೆಂಕಿ ಹಚ್ಚಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಪ್ರಾಣಹಾನಿ ನಡೆದರೂ ಅದೊಂದು ಸುದ್ದಿಯಾಗುವುದೇ ಇಲ್ಲ. ಅರ್ನಾಬ್ ಗೋಸ್ವಾಮಿ, ರಾಜ್ದೀಪ್ ಸರ್ದೇಸಾಯಿಗಳಿಗೆ ಇದೊಂದು ಬಿಸಿಬಿಸಿ ಚರ್ಚೆಯ ವಿಷಯ ಎನಿಸುವುದೇ ಇಲ್ಲ. ಏಕೆಂದರೆ ದೌರ್ಜನ್ಯಕ್ಕೀಡಾದವರೆಲ್ಲ ನತದೃಷ್ಟ, ನಿರ್ಭಾಗ್ಯವಂತ, ಅನಾಥ ಹಿಂದುಗಳಲ್ಲವೆ?
ಇದು ಈಗಲ್ಲ, 1905 ರಲ್ಲಿ ಬಂಗಾಲ ವಿಭಜನೆಯಾದ ವಿಷ ಗಳಿಗೆಯಿಂದಲೇ ಹಿಂದುಗಳ ಮೇಲೆ ನಿರಂತರ ದಾಳಿ, ದೌರ್ಜನ್ಯ, ಬಲಾತ್ಕಾರ ನಡೆಯುತ್ತಲೇ ಇದೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷ `ಸೆಕ್ಯುಲರ್ ವೋಟ್ ಬ್ಯಾಂಕ್’ ಸೃಷ್ಟಿಸಿತು. ಕಮ್ಯುನಿಸ್ಟ್ ಪಕ್ಷ ಅದನ್ನು ಪೋಷಿಸಿತು. ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷ ಅದನ್ನು ನಗದೀಕರಿಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದೆ. ಜತೆಗೆ ಮುಸ್ಲಿಂ ಮತಾಂಧತೆಗೆ ನೀರೆರೆಯುತ್ತಿದೆ.
ಮಾಧ್ಯಮಗಳ ಕಾಮಾಲೆ ಕಣ್ಣಿಗೆ ಮಾತ್ರ ಇವೆಲ್ಲ ಕಾಣುವುದೇ ಇಲ್ಲ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.