ಧಾರವಾಡ : ಮನೆಗೆ ಹಿರಿಯರು ಮತ್ತು ಬಂಧು-ಮಿತ್ರರು ಬಂದಾಗ ಅವರು ಕೊಟ್ಟ ಹಣ ಮತ್ತು ತಂದೆ-ತಾಯಿ ಕೊಡುತ್ತಿದ್ದ ಹಣವನ್ನು ಸಂಗ್ರಹಿಸಿಟ್ಟಿದ್ದ ಧಾರವಾಡದ ಬಾಲಕನೋರ್ವ ಈ ಹಣವನ್ನು ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳ ಸಹಾಯಕ್ಕಾಗಿ ನೀಡಿ ವಿಭಿನ್ನ ಯೋಚನೆಯೊಂದಿಗೆ ಸಮಾಜ ಸೇವೆಗೆ ನೆರವಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ಧಾರವಾಡದ ವಿದ್ಯಾಗಿರಿಯ ಜೆ.ಎಸ್. ಎಸ್. ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಪ್ರಭಂಜನ್ ಧಾರವಾಡದ ವೀರ ಸಾವರ್ಕರ್ ಗೆಳೆಯರ ಬಳಗದ ಮುಖಾಂತರ ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳಿಗಾಗಿ ’ಭಿಕ್ಷಾಂದೇಹಿ’ಗೆ ತಾನು ಕೂಡಿಟ್ಟ ಸುಮಾರು ರೂ. 5,000 ಗಳನ್ನು ನೀಡಿದ್ದಾನೆ.
‘ನಾನು ಕೂಡಿಟ್ಟ ಹಣವನ್ನು ವೃದ್ಧಾಶ್ರಮ ಅಥವಾ ಅನಾಥಾಶ್ರಮಕ್ಕೆ ನೀಡಬೇಕೆಂದು ಯೋಚಿಸಿದ್ದೆ. ಇತ್ತೀಚೆಗೆ ಧಾರವಾಡದ ವೀರ ಸಾವರ್ಕರ್ ಗೆಳೆಯರ ಬಳಗದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ತಿಳಿದು ನಾನು ಕೂಡಿಟ್ಟ ಹಣವನ್ನು ಆ ವಿದ್ಯಾರ್ಥಿಗಳಿಗೆ ನೀಡಿದರೆ ನನ್ನಿಂದ ಇದೊಂದು ಅತ್ಯಲ್ಪ ಸಹಾಯವಾಗಬಹುದು ಎಂದೆನಿಸಿತು. ಈ ಕುರಿತು ವೀರ ಸಾವರ್ಕರ್ ಗೆಳೆಯರ ಬಳಗದವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಂಡೆ.
ಕೇವಲ ನಾನು ಮಾತ್ರ ಸಂತೋಷದಿಂದ್ದರೆ ಅದು ಸಂತೋಷವಲ್ಲ, ಬೇರೆಯವರನ್ನೂ ಸಂತೋಷದಿಂದ ಇರುವಂತೆ ಮಾಡುವುದರಲ್ಲಿ ನನಗೆ ಸಂತೋಷವಿದೆ. ನಾವು ನಮ್ಮ ತಂದೆ-ತಾಯಿಯೊಂದಿಗೆ ಇರುತ್ತೇವೆ. ಆದರೆ ಅಲ್ಲಿ ಮಕ್ಕಳು ತಮ್ಮ ತಂದೆ-ತಾಯಿ, ಕುಟುಂಬದಿಂದ ದೂರವಿದ್ದು ಕಲಿಯುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮನಿಂದ ದೂರವಿರುವ ದುಃಖವಿರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗಾದ ಅನ್ಯಾಯ ನಿಜಕ್ಕೂ ದುಃಖದಾಯಕ. ಈ ನಿಟ್ಟಿನಲ್ಲಿ ಆ ವಿದ್ಯಾರ್ಥಿಗಳಿಗೆ ನನ್ನಿಂದಾದಷ್ಟು ನೆರವನ್ನು ನೀಡುವ ಮೂಲಕ ಅವರಲ್ಲಿ ಕಿಂಚಿತ್ ಸಂತೋಷವನ್ನು ಕಾಣಲು ಪ್ರಯತ್ನಿಸಿದ್ದೇನೆ.
ಈ ಕಾರ್ಯಕ್ಕೆ ಧಾರವಾಡದ ವೀರ ಸಾವರ್ಕರ್ ಗೆಳೆಯರ ಬಳಗದ ಕಾರ್ಯಕರ್ತರು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಾರೆ. ಈ ಕಾರ್ಯದಿಂದ ನನಗೆ ಮನಸ್ಸಿಗೊಂದು ಸಾರ್ಥಕತೆ ಇದೆ ಎಂದು ಮನಸ್ಸಿನ ಮಾತುಗಳನ್ನು ನ್ಯೂಸ್13 ಜೊತೆಗೆ ಪ್ರಭಂಜನ್ ಹಂಚಿಕೊಂಡನು.
ಈ ರೀತಿ ಸಮಾಜಮುಖಿಯಾದ ಜೀವನವನ್ನು ಪ್ರತಿಯೊಬ್ಬರೂ ಯೋಚಿಸಿದಾಗ ಸಮಾಜದ ಇನ್ನೂ ಅನೇಕರಿಗೆ ಪ್ರೇರಣೆ ಸಿಕ್ಕಂತಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.