ಬಾಗಲಕೋಟೆ: ಶಿಕ್ಷಣದಲ್ಲಿ ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎನ್ನುವ ತಾರತಮ್ಯ ಬದಿಗಿಟ್ಟು ಅರಿವು ಗುರುವಾದಾಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುವುದು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಹೇಳಿದರು.
ನವನಗರದ ಕಲಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಗುರುಚೇತನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸ್ವಾಸ್ಥ್ಯ ಸಮಾಜ ನಿರ್ಮಿಸಿ ಆದರ್ಶ ವ್ಯಕ್ತಿತ್ವ ಹಾಗೂ ಅಭಿವೃದ್ಧಿ ಪಥದತ್ತ ಒಬ್ಬ ವ್ಯಕ್ತಿ ಪರಿಪೂರ್ಣವಾಗಬೇಕಾದಲ್ಲಿ ಮೂರು ಜನರ ಶ್ರಮ ಅಗತ್ಯವಾಗಿದೆ. ಅವರಲ್ಲಿ ರೈತ, ಶಿಕ್ಷಕ ಹಾಗೂ ಸನ್ಯಾಸಿ. ರೈತ ಅನ್ನನೀಡಿ ಬೆಳೆವಣಿಗೆಗೆ ಕಾರಣವಾದರೆ, ಶಿಕ್ಷಕ ಸುಶಿಕ್ಷಿತರನ್ನಾಗಿ ಮಾಡುತ್ತಾನೆ. ಸನ್ಯಾಸಿ ಅಧ್ಯಾತ್ಮಿಕ ಚಿಂತನೆಯಿಂದ ಧೈರ್ಯ ತುಂಬುವ ಕಾರ್ಯ ನೆರವೇರಿಸಿದಾಗ ಒಬ್ಬ ವ್ಯಕ್ತಿ ಪರಿಪೂರ್ಣವಾಗುತ್ತಾನೆ. ಈ ಮೂವರು ರಾಜಕಾರಣ ಮಾಡಬಾರದು ಎಂದು ಹೇಳಿದರು.
ಸಮಾಜ ಸುಧಾರಣೆಗಾಗಿ ಬಸವಾದಿ ಪ್ರಮಥರು, ಬುದ್ದ, ಮಹಾವೀರ ಮುಂತಾದವರು ಸಿರಿತನದಲ್ಲಿದ್ದರೂ ಸಮಾಜ ಸುಧಾರಣೆಗಾಗಿ ಜೀವ ಸವೆಸಿದವರು. 750 ಅಮರಗಣಂಗಳು, 196000 ಅನುಯಾಯಿಗಳು, 330 ವಚನಕಾರರು, 63 ಮಹಿಳೆಯರು 33 ವಚನಗಾರ್ತಿಯರು, ಬಸವಣ್ಣನವರ ಸಾಮಾಜಿಕ ಕಳಕಳಿಗೆ ನೆರವಾದವರು. ಅಂತಹ ಶಿಕ್ಷಣ ಇಂದು ಅವಶ್ಯವಾಗಿದೆ ಎಂದರು.
ಶಿಕ್ಷಣವೆಂದರೆ ಸಾಮಾಜಿಕ ಬದಲಾವಣೆ, ಪ್ರತಿಯೊಬ್ಬನ ಆತ್ಮದ ಬದಲಾವಣೆ. ಮೂಡನಂಬಿಕೆ, ಕಂದಾಚಾರ, ಜಾತಿಬೇದ, ಮೇಲು-ಕೀಲುಗಳನ್ನು ಮರೆಸುವಂತ ಸಮಯ. ಅಂತಹ ಮಕ್ಕಳನ್ನು ನಿರ್ಮಿಸುವ ಬಹುತರ ಜವಾಬ್ದಾರಿ ಶಿಕ್ಷಕ ಮೇಲಿದೆ. ಶಿಕ್ಷಕರಾದವರು ಮಕ್ಕಳಿಗೆ ಮಾನಸಿಕ ಧೈರ್ಯ ತುಂಬುವದರ ಜತೆಗೆ ನೀತಿವಂತರನ್ನಾಗಿ ಮಾಡಿ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು.
ದೇವರು ನಮಗೆ ಸಮಯವನ್ನು ಕೊಟ್ಟಿದ್ದಾನೆ ವಿನಹ ಅಧಿಕಾರ, ಅಹಂಕಾರ, ದವಲತ್ತು ಇವುಗಳನ್ನೆಲ್ಲ ಕೊಟ್ಟಿದ್ದು ಸುಳ್ಳು. ದೇವರು ಕೊಟ್ಟ ಸಮಯವನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಜೀವನದಲ್ಲಿ ತಾಯಿ, ಶಿಕ್ಷಕ ಹಾಗೂ ಆದ್ಯಾತ್ಮದ ಗುರುಗಳನ್ನು ಚೆನ್ನಾಗಿ ನೋಡಿದ್ದೆ ಆದರೆ ಅಂತವರ ಬದುಕು ಸುಂದರವಾಗಿ ಇರಲು ಸಾಧ್ಯ ಎಂದರು.
ತಾಯಿಗಿರುವ ಸ್ಥಾನ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಆದರೆ ನಮ್ಮ ದೇಶದಲ್ಲಿ 18 ಸಾವಿರ ವೃದ್ಧಾಶ್ರಮ ಇರುವುದನ್ನು ಕಂಡರೆ ಇಂದಿನ ಶಿಕ್ಷಣದ ಗುಣಮಟ್ಟ ಅವಿನಾವಭಾವ ಸಂಬಂಧಗಳು ಎಷ್ಟು ದೂರ ಹೋಗಿವೆ ಎಂಬುದು ಪ್ರತಿಯೊಬ್ಬರು ಚಿಂತನೆ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ ಶಿಕ್ಷಕರು ತಮ್ಮ ಜೀವನವನ್ನು ತ್ಯಜಿಸಿ ಮಕ್ಕಳ ಏಳಿಗೆಗೆ ಕಾರಣರಾಗಿದ್ದಾರೆ ಎಂದರು. ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು, ಶಿಕ್ಷಕ, ಬಾಲಕ ಪಾಲಕರ ಈ ಮೂವರು ಸಮೃದ್ಧ ಸಮಾಜ ನಿರ್ಮಿಸಲು ಸಾದ್ಯವಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಚ್. ವೈ. ಮೇಟಿ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಾಜಿ ಕರಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಪ್ರಸಕ್ತ ಸಾಲಿನ ಅತ್ಯುತ್ತಮ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಉದಪುಡಿ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಜಿ.ಪಂ ಸಿಇಓ ವಿಕಾಸ ಸುರಳಕರ, ಎಸ್ಪಿ ಸಿ.ಬಿ. ರಿಷ್ಯಂತ ಸೇರಿದಂತೆ ಇತರರು ಇದ್ದರು. ಇಳಕಲ್ ಡಯಟ್ ಪ್ರಾಚಾರ್ಯ ಎಸ್.ಪಿ.ಬೆಟಗೇರಿ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.