ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ
ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು ರಸ್ತೆ, ಬಡಾವಣೆ, ನಿವೇಶನ, ಮನೆಗಳು, ಗಟಾರು ವಿಭಜಕಗಳು.. ಹೀಗೆ ಅಭಿವೃದ್ಧಿ ಹೆಸರಿನಲ್ಲಿ ನಿತ್ಯ-ನಿರಂತರ ಅತಿಕ್ರಮಿತವಾದರೆ..?
ಅಭಿವೃದ್ಧಿಯ ಹೆದ್ದಾರಿ ಮೇಲೆ ನೀರು ಹರಿಯುವ ಕಾಲು ಹಾದಿಯ ಹೆಜ್ಜೆಗಳ ನಕಾಶೆಗೆ ಕಿಮ್ಮತ್ತೇ ಇಲ್ಲ ಅಂದ ಹಾಗೆ ಆಯಿತು!
ಧಾರವಾಡದ ಕೆಲಗೇರಿ ಕೆರೆ, ಕೋಳಿ ಕೆರೆ, ನವಿಲೂರ ಕೆರೆ, ಉಣಕಲ್ ಕೆರೆ, ತೋಳನ ಕೆರೆ, ಕೆಂಪಗೇರಿ ಕೆರೆ ಹೀಗೆ ಅಳಿದುಳಿದ ಕೆರೆಗಳ ನೀರ ಹರಿವಿನ ನಕಾಶೆ ವಿನ್ಯಾಸ ಅರ್ಥ ಮಾಡಿಕೊಳ್ಳೋದು ಹಿರೀಕರ ಅನುಭವದ ಆಧಾರದ ಮೇಲೆ.
ರಸ್ತೆ ನೀರ ಹಾದಿಯನ್ನೇ ತಡೆದಿದೆ!
ಇಲ್ಲಿದ್ದ ಗುಡ್ಡ ಸವರಲಾಗಿದೆ; ಅಲ್ಲಿದ್ದ ಸೇತುವೆ ಈಗ ಇಲ್ಲ.. ರಸ್ತೆ ನೀರ ಹಾದಿಯನ್ನೇ ತಡೆದಿದೆ.. ಹೀಗೆ, ನೀರ ನೆಮ್ಮದಿ ಕಳೆದುಕೊಂಡ ಕಳವಳ ಮತ್ತು ಸದ್ಯದ ನೀರಿನಾಸರೆಗಳನ್ನು ಉಳಿಸಿಕೊಳ್ಳುವ ತುರ್ತು ಕಾಳಜಿ ಕಾಂಕ್ರೀಟ್ ಅಭಿವೃದ್ಧಿಯ ಚುಕ್ಕಾಣಿ ಹಿಡಿದವರಲ್ಲಿ ಧ್ವನಿಸುತ್ತಿಲ್ಲ. ಇದು ನೂರಾರು ಹಕ್ಕಿಗಳ ಅನ್ನದ ಬಟ್ಟಲು ಎಂಬ ವಿವೇಕವೂ ಅವರಲ್ಲಿಲ್ಲ. ಗಟಾರು ನೀರೇ ಒಳಹರಿವಿನ ಮೂಲ ಇಂದಿನ ಕೆರೆಗಳಿಗೆ ಎಂಬಂತಾಗಿದೆ.. ಯೋಜನೆಗಳ ದೆಸೆಯಿಂದ!
ಕೆಲಗೇರಿ ಕೆರೆಯ ಜಲಾನಯನ ಪ್ರದೇಶ, ಜಿಲ್ಲಾಧಿಕಾರಿಗಳ ಕಚೇರಿ ಇರುವ ಗುಡ್ಡದ ಆವರಣ. ಮಳೆ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಗುಡ್ಡದ ಮೇಲೆ ಸುರಿದರೆ ಕನಿಷ್ಠ ಮೂರು ಕೆರೆಗಳ ಒಡಲು ತುಂಬಿಸುತ್ತಿತ್ತು. ಈ ಗುಡ್ಡವೇ ‘ಜಲ ವಿಭಜಕ ರೇಖೆ’ ಎಂದರೆ ಕೆರೆ ಪ್ರೇಮಿಗಳ ಹುಬ್ಬೇರಬಹುದು.
ಒಂದು ಇಳಕ್ಲಿಗೆ ಜಾರಿದ ನೀರು ಕೆಲಗೇರಿ ಕೆರೆ ಒಡಲು ಸೇರಿದರೆ, ಗುಡ್ಡದ ಮತ್ತೊಂದು ಮೈ ಮೇಲೆ ಉರುಳಿದ ಹನಿಗಳು ಹಾಲಗೇರಿ ಹನುಮಂತದೇವರ ಕೆರೆ ಉದರ ತುಂಬಿಸುತ್ತಿದ್ದವು! ಮಧ್ಯೆ, ಮನೆ ಅಂಗಳದ ಬಾವಿಗಳು, ಕೊಳವೆ ಬಾವಿ, ಮೂರು-ನಾಲ್ಕು ಹಾಗೆಯೇ ಏಳು ಗಡಗಡಿ ಬಾವಿಗಳಲ್ಲಿ ಸಿಹಿ ನೀರಿನ ಸೆಲೆಗಳನ್ನು ಪುನರುಜ್ಜೀವಿತ ಗೊಳಿಸಿ, ಉಕ್ಕೇರಿದ ನೀರು ಕೆರೆಯ ಒಡಲಿಗೆ ಸಾಗುತ್ತಿತ್ತು.. ಆಗ ಪ್ರತಿಯೊಬ್ಬರೂ ‘ನೀರಘಂಟಿ’ ಆದವರು..!
ಧಾರವಾಡದ ಏಕೈಕ ನದಿ ಶಾಲ್ಮಲಾ. ಸೋಮೇಶ್ವರ ಗುಡ್ಡ-ಗೋಮಾಳ (ಈಗ ಆಶ್ರಯ ಮನೆಗಳ ತಾಣ) ಆ ಜಲ ವಿಭಜಕ ರೇಖೆ. ನದಿ ಹರಿಯುವ ಹಾದಿ, ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ವಸತಿ ಗೃಹದ ಹಿಂಭಾಗದ ಕಣಿವೆ ಮತ್ತು ಗುಡ್ಡ ಜಲ ವಿಭಜಕ ರೇಖೆ. ಅರ್ಥಾತ್, ಗುಡ್ಡದ ಒಂದು ಬದಿಗೆ ಬಿದ್ದ ಮಳೆ ನೀರು ಹರಿದು ಹಿಂದೂ ಮಹಾಸಾಗರ ಸೇರಿದರೆ, ಮತ್ತೊಂದು ಮೈಯ ನೀರು ಬಂಗಾಲ ಉಪಸಾಗರ ಸೇರುತ್ತದೆ! ಈ ರೇಖೆ ಅದೃಷ್ಯ-ಅದೃಷ್ಟ ರೇಖೆ!
ಕಳೆದ 4 ದಶಕಗಳಲ್ಲಿ ನಗರದಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳ ಪರಿಣಾಮ, ನೀರು ಹಾದಿ ತಪ್ಪಿತು; ಕಾಂಕ್ರೀಟ್ ಬೆಂಗಾಡು ಜಲ ವಿಭಜಕ ರೇಖೆಗಳ ಮೂಲ ಸ್ವರೂಪವನ್ನೇ ವಿರೂಪಗೊಳಿಸಿತು. ಈ ಮಾತಿಗೆ ಸಾಕ್ಷಿ, ನಮ್ಮ ಮನೆಗಳ ಅಂಗಳದ ಬಾವಿಗಳ ಸೆಲೆಗಳು ಬತ್ತಿದ್ದು. ಇದ್ದಬಿದ್ದ ಅಂತರ್ಜಲ ಆಧಾರಿತ ಸೆಲೆಗಳು ಗಬ್ಬೆದ್ದು ನಾರುವಂತಾಗಿದ್ದು. ಕುಡಿಯುವ ನೀರು-ಬಳಕೆಗೆ ನೀರು ಎರಡಕ್ಕೂ ಮಲಪ್ರಭಾ ಜಲಾಶಯಕ್ಕೆ ತಗಲು ಬೀಳುವಂತಾಯಿತು.
ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ಹೇಳಿದ್ರು.. ಇನ್ನು ಮುಂದ ದುಡ್ಡ ಕೊಡತೇನಿ ಅಂದ್ರೂ ನೀರು ಸಿಗು ಖಾತ್ರಿ ಇಲ್ಲ.. ಆವಾಗೇನೂ? ಬ್ಯಾಂಕ್ನೊಳಗ ಭವಿಷ್ಯಕ್ಕ ಅಂತ ಎಫ್.ಡಿ. ಇಟ್ಟಂಗ, ನಮ್ಮ ನೀರ ನಕಾಶೆ ನಾವ ತಯಾರು ಮಾಡಿಕೊಳ್ಳೋದು.. ನಮ್ಮ ಮುಂದ ಇರೋ ಒಂದ ಹಾದಿ..
‘ನೀರ ನಕಾಶೆ’ ಬರೆಯುವುದು ಒಂದು ಕೌಶಲ್ಯ!
ಪ್ರಯಾಸದಿಂದ ನೀರ ದಾರಿ ಗುರುತಿಸುವುದು ಕಲಿತದ್ದೇ ಆದರೆ, ಯಾವುದೇ ಪ್ರದೇಶ ಅಥವಾ ನಮ್ಮ ಮನೆಯೇ ಇರಲಿ, ಮುಂದಿನ ಬದುಕಿಗೆ ನೀರ ನೆಮ್ಮದಿ! ಕೃಷಿ ಭೂಮಿಗೂ ಈ ಮಾರ್ಗ ಅನುಸರಿಸಬಹುದು. ನಮ್ಮ ಸುತ್ತಲಿನ ಭೌಗೋಳಿಕ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಗುರುತು ಹಾಕಿಕೊಳ್ಳಬೇಕು. ತಗ್ಗು ಮತ್ತು ದಿಣ್ಣೆ ಪ್ರದೇಶ, ನೀರು ಸಾಗುವ ಕಣಿವೆ, ಗುಡ್ಡ, ರಸ್ತೆ ಮತ್ತು ಹೊಂಡ, ನಮ್ಮ ಪ್ರದೇಶದಲ್ಲಿ ನಿಲುಗಡೆ ಸ್ಥಳ, ಓಡುವ ಪ್ರದೇಶ, ಹಿಡಿದು ಇಂಗಿಸಬಹುದಾದ ಜಾಗೆ ಹೀಗೆ.. ಗಿಡಗಳ ಸಹಕಾರ.. ಎಲ್ಲವೂ ಮೂಲೆ ಮೂಲೆ ಓಡಾಡಿ ‘ರಫ್ ಸ್ಕೆಚ್’ ಗುರುತು ಹಾಕಿಕೊಳ್ಳಬೇಕು.
ಒಂದೇ ಬಾರಿ ಎಲ್ಲ ಸಂಗತಿಗಳೂ ಗಮನಕ್ಕೆ ಬರುವುದಿಲ್ಲ! ನಾಲ್ಕಾರು ಬಾರಿ ಅಲ್ಲಿ ಅಡ್ಡಾಡಿದಾಗ ಮಾತ್ರ ಮತ್ತೆ ಹೊಸ ಸಂಗತಿಗಳನ್ನು ಗ್ರಹಿಸಲು ಸಾಧ್ಯ. ‘ಫೂಲ್ ಪ್ರೂಫ್..’ ಜಲದ ಮೂಲ ಎಲ್ಲಿದೆ, ಜಲ ಕಿಂಡಿ ಯಾವ ದಿಕ್ಕಿನಲ್ಲಿದೆ, ಜಲಾಶ್ರಯ ಒದಗಿಸಬಹುದಾದ ತಾಣ, ದಿಕ್ಕು ಬದಲಾಗುವ ಅಥವಾ ನೀರು ಹಾದಿ ತಪ್ಪುವ ಮಾರ್ಗ ಮತ್ತೆ ಮತ್ತೆ ನಿಖರವಾಗಿ ಗುರುತಿಸಿ, ಮಾಹಿತಿ ತಾಳೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ನಂತರ ನಮ್ಮ ಪ್ರದೇಶದ ವಾಡಿಕೆ ಮಳೆ ಮತ್ತು ಬಿದ್ದ ವಾರ್ಷಿಕ ಮಳೆಯ ಲೆಕ್ಕ ಬೇಕು. ಕನಿಷ್ಠ ಹತ್ತು ವರ್ಷಗಳಲ್ಲಿ ಇಲ್ಲಿ ಬಿದ್ದಿರಬಹುದಾದ ಮಳೆಯ ಪ್ರಮಾಣ ಆಧರಿಸಿ, ಗರಿಷ್ಠ ಮತ್ತು ಕನಿಷ್ಠ ಪ್ರಮಾಣ ಲೆಕ್ಕಿಸಬೇಕು. ಒಟ್ಟಾರೆ ನಾವು ನಮ್ಮ ಜಮೀನಿನಲ್ಲಿ ಸಂಗ್ರಹಿಸಬಹುದಾದ ಒಟ್ಟು ಜಲಧಾರೆ ಮೊತ್ತ ಲಭ್ಯವಾಗಬೇಕು. ಮುಂದೆ ಎರಡು ವರ್ಷ ಪ್ರಾಯೋಗಿಕ !
ನೀರು ಎಲ್ಲೆಲ್ಲಿ ನೀರು ಓಡಿ ಹೋಗುತ್ತಿದೆ?
ಎಲ್ಲಿ ತಡೆಗೋಡೆ ನಿರ್ಮಿಸಬಹುದು? ನಮ್ಮ ಹಕ್ಕಿನ ಜಾಗೆಯೊಳಗೆ ಹೊಡೆದೋಡಿಸುತ್ತಿದ್ದ ನೀರನ್ನು ಈಗ ಬಿಟ್ಟುಕೊಳ್ಳುವುದು ಹೇಗೆ? ಎಂಬ ಚಿಂತನೆಗೆ ಸಕಾಲ. ಜೊತೆಗೆ ಗಿಡಮರಗಳ ಗಣತಿ. ಕಾರಣ ನೀರು ಹಿಡಿದಿಟ್ಟು ಇಂಗಿಸುವಲ್ಲಿ ಗಿಡಗಳ ಪಾತ್ರ ಅನನ್ಯ. ಅವು ಉದುರಿಸುವ ಎಲೆಗಳದ್ದೂ ವಿಶೇಷ ಪಾತ್ರ. ಅವುಗಳ ಬೇರಿನ ಸಮೂಹದ ವಿಸ್ತಾರ ಬಹುಮುಖ್ಯ ಸಂಗತಿ. ಸಸ್ಯ ಸಂಕುಲ ದಟ್ಟವಾಗಿದ್ದಷ್ಟು ಜಲ ಸಮೃದ್ಧಿ ಪಡೆಯಬಹುದು!
ಹಿಂದೆಲ್ಲ, ಪ್ರತಿ ಸರ್ವೇ ನಂಬರ್ಗೊಂದರಂತೆ ಇಂತಹ ನೀರ ನಕಾಶೆ ರೂಪಿಸುವ ಪದ್ಧತಿ ಇತ್ತು. ಧಾರವಾಡದ ಪ್ರತಿ ಬಾವಿ, ಕೆರೆ ಆಧರಿಸಿ, ಅವುಗಳ ಜಲಾನಯನ ಪ್ರದೇಶ ಆಧರಿಸಿ ಪ್ರತ್ಯೇಕ ನೀರ ನಕಾಶೆ ರೂಪಿಸಿಕೊಳ್ಳುವ ತುರ್ತು ಅಗತ್ಯವಿದೆ. ಈ ನಕಾಶೆ, ನೀರಿನ ಸಂಗ್ರಹ ಪ್ರಮಾಣದಲ್ಲಿ ತುಸು ವ್ಯತ್ಯಾಸವಾದರೂ ಅದಕ್ಕೆ ಕಾರಣಗಳೇನು? ಎಲ್ಲಿ ಲೋಪವಾಯಿತು? ಎಂದು ತಿಳಿಯಲು ಕೈಗನ್ನಡಿ.
ಒಟ್ಟಾರೆ ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಹಾಕಿಕೊಳ್ಳುವ, ಅದನ್ನು ದಾಖಲಿಸಿಡುವ ಪ್ರಯತ್ನ ಅವಳಿ ನಗರದ ನಮ್ಮೆಲ್ಲರಿಂದ ಆಗಬೇಕಿದೆ. ತಡವೇಕೆ..?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.