“ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭಾ
ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದಾ”
ಎಂದು ಸರ್ವ ಕಾರ್ಯಗಳಲ್ಲಿ ನಿತ್ಯ ಪೂಜೆ, ವಿವಾಹ, ಉಪನಯನ, ನಾಮಕರಣ, ವಿದ್ಯಾರಂಭ, ಗೃಹಪ್ರವೇಶ. ಹೀಗೆ ಎಲ್ಲ ಕಾರ್ಯಗಳಿಗೂ ಮೊದಲು ಅಗ್ರಪೂಜೆ ಸಲ್ಲುವುದು ಗಣಪತಿಗೆ. ದೇವತೆಗಳಲ್ಲಿ ಗಣೇಶನಿಗೆ ಅಗ್ರಪಟ್ಟ. ಗಣಪತಿಯ ಪೂಜೆ ಪುರಾತನವಾದದ್ದು. ಗಣಪತಿ ಗುಡಿಯಿಲ್ಲದ ಊರಿಲ್ಲ. ಕಲ್ಪನೆಗಳಿಗೂ ಎಣೆಯಿಲ್ಲ, ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಸಾಹಿತ್ಯದಲ್ಲಿ, ಜಾನಪದ, ಚಿತ್ರಕಲೆಯಲ್ಲಿ ಅಡಕವಾಗಿದ್ದಾನೆ. ವಿವಿಧ ಆಕಾರದ, ಶೈಲಿಯ, ಮಾದರಿಯ ಗಣಪತಿ ಮೂರ್ತಿಗಳು ಭಾರತದಲ್ಲಷ್ಟೇ ಅಲ್ಲ. ನೇಪಾಳ, ಟಿಬೆಟ್, ಬರ್ಮಾ, ಶ್ರೀಲಂಕಾ ಹೀಗೆ ಹಲವು ರಾಷ್ಟ್ರಗಳಲ್ಲೂ ಕಂಡುಬರುತ್ತದೆ. ಭಾವುಕರ ಭಾವನೆ, ಕಲಾವಿದರ ಕಲ್ಪನೆ ಭಕ್ತರ ಬಯಕೆಯಂತೆ ಈ ದೇವ ವ್ಯಾಪಿಸಿದ್ದಾನೆ.
ಪ್ರಾಣಿಯಾದ ಆನೆಯ ಮೊಗ ಹೊತ್ತು, ಇಲಿಯ ವಾಹನ, ಹೊಟ್ಟೆಗೆ ಸರ್ಪ ಹೀಗೆ ಹಿರಿ ಕಿರಿಯ ಪ್ರಾಣಿಗಳು ಅವನಲ್ಲಿವೆ. ಸಿಹಿಯಾದ ಭಕ್ಷ್ಯವನ್ನು ಕೈಯಲ್ಲಿ ಹಿಡಿದು ಅಭಯ ಹಸ್ತ ನೀಡಿದ್ದಾನೆ. ನಾಲ್ಕು ಕೈಗಳ ಈತ ವಿಘ್ನಗಳನ್ನು ಪರಿಹರಿಸುವನು, ಶೀಘ್ರವಾಗಿ ಪ್ರಸಾದ ನೀಡುವವನು.
ಗಣೇಶನಿಗೆ ಆನೆಯ ಮುಖ ಬರಲು ಅನೇಕ ಕಥೆಗಳಿವೆ. ಗಣೇಶನಿಗೆ ಆಶೀರ್ವದಿಸಲು ದೇವತೆಗಳೆಲ್ಲರೂ ಬಂದಿದ್ದರು. ಶನಿಯೂ ಬಂದಿದ್ದ. ಶನಿ ತನ್ನಿ ಬಲಗಣ್ಣಿನ ತುದಿಯಿಂದ ಗಣೇಶನನ್ನು ನೋಡಿದನಷ್ಟೇ. ಆಗ ಮಗುವಿನ ತಲೆ ಕೆಳಗುರುಳಿತು. ಪಾರ್ವತಿಯು ಮೂರ್ಛೆ ಹೋದಳು. ಶ್ರೀಹರಿ ಗರುಡವನ್ನೇರಿ ಪುಪ್ಪಭದ್ರ ನದಿ ತೀರದಲ್ಲಿ ಉತ್ತರಾಭಿಮುಖವಾಗಿ ಮಲಗಿದ್ದ ಆನೆಯ ಮುಖವನ್ನು ತಂದು ಗಣೇಶನಿಗೆ ಸೇರಿಸಿದ ಅಂದಿನಿಂದ ಗಣೇಶ ಗಜಾನನನಾದ. ತನ್ನ ಶಿಶುವಿಗೆ ಅಂಗಹೀನ ಮಾಡಿದ ಶನಿಯನ್ನು ಅಂಗ ಊನವಾಗುವಂತೆ ಶಪಿಸಿದಳು ಎನ್ನುವ ಕಥೆ ಇದೆ.
ಮತ್ತೊಂದು ಕಥೆಯೆಂದರೆ ಪರಶುರಾಮನು 21 ಸಲ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನು ಸಂಹರಿಸಿ ದಿವ್ಯಾಸ್ತ್ರಗಳನ್ನು ಶಿವನಿಂದ ಪಡೆದ. ಇದಕ್ಕಾಗಿ ಅಭಿನಂದಿಸಲು ಕೈಲಾಸಕ್ಕೆ ಬರುವಾಗ ದ್ವಾರದಲ್ಲಿ ಗಣಪತಿ ನಿಂತಿದ್ದ. ಪರಶುರಾಮನನ್ನು ಒಳ ಬಿಡಲಿಲ್ಲ. ಆಗ ಪರಶುರಾಮನು ಕೊಡಲಿಯನ್ನು ಪ್ರಯೋಗಿಸಿದ. ಬಾಲಕನಾದ ಗಣೇಶ ತನ್ನ ಒಂದು ದಂತವನ್ನು ಚಾಚಿದ. ಅಂದಿನಿಂದ ವಿನಾಯಕ ಏಕದಂತನಾದ. ಈ ವೃತ್ತಾಂತ ಬ್ರಹ್ಮ ವೈವರ್ತ ಪುರಾಣದಲ್ಲಿ ಬರುತ್ತದೆ.
ಸೃಷ್ಟಿಯ ಸಕಲ ವಸ್ತುಗಳು ಪಂಚಭೂತಗಳಿಂದಾಗಿದೆ. ಸೃಷ್ಟಿಯ ಮೂಲ ದ್ರವ್ಯಗಳೇ ಆಕಾಶ, ವಾಯು, ಬೆಂಕಿ, ನೀರು ಮತ್ತು ಮಣ್ಣು, ಪೂರ್ವಿಕರು ಒಂದೊಂದಕ್ಕೂ ಒಬ್ಬೊಬ್ಬ ಮೂರ್ತ ದೇವತೆಗಳೆಂದು ಕರೆದರು. ಜಲಾಧಿಪತಿಯೇ ಗಣಪತಿ. ಗಣೇಶ ಚತುರ್ಥಿಯಂದು ಗಣಪತಿಯನ್ನು ಪೂಜಿಸಿ ಒಂದು ದಿನ, ಮೂರು, ಐದು, ಹತ್ತು, ಹದಿನಾಲ್ಕು ಹೀಗೆ ಮನೆಯಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಪೂಜಿಸಿ ತಮ್ಮ ನಿಯಮದಷ್ಟು ದಿನಗಳು ಪ್ರಾರ್ಥಿಸಿ ಮೂರ್ತಿಗಳನ್ನು ವಿಸರ್ಜಿಸುವದು ಅವನದೇ ದ್ರವ್ಯ ನೀರಿನಲ್ಲಿ.
ಗಣಪತಿಗೆ ಕೆಂಪು ಹೂ ಪ್ರಿಯ. ವಿವಿಧ ಅಲಂಕಾರ, ಸಡಗರ, ಪಟಾಕಿಗಳ ಸದ್ದು ವೈಭವೋಪೇತ. ಪೂಜೆ ನೈವೇದ್ಯಗಳು ಗಣೇಶ ಚತುರ್ಥಿಯನ್ನು ಭಕ್ತಿಯೆಡೆಗೆ ಕರೆದೊಯ್ಯುತ್ತವೆ. ಸಿಹಿಯೂಟದ ಸಾಲುಗಳಿದ್ದರೂ ಪಂಚಕಜ್ಜಾಯ ಪ್ರಧಾನವಾದ ಪಕ್ವ. ಪಕ್ವಕ್ಕೂ ಅವಿನಾಭಾವದ ಸಂಬಂಧವಿದೆ. ಪಂಚಕಜ್ಜಾಯದಲ್ಲಿ ಕಡಲೆ ಗುರುಗ್ರಹವು ಧಾನ್ಯ – ಗುರು ಜ್ಞಾನಕಾರಕ, ತೆಂಗಿನಕಾಯಿಗೆ ರವಿ ಗ್ರಹ – ರವಿ ಆತ್ಮಕಾರಕ, ಎಳ್ಳಿಗೆ ಶನಿಗ್ರಹ – ಶನಿಯು ಆಯುಷ್ಯಕಾರಕ. ಬೆಲ್ಲ ಕುಜ ಗ್ರಹ -ಕುಜನು ಭ್ರಾತೃ ಕಾರಕ. ಏಲಕ್ಕಿ ಶುಕ್ರಗ್ರಹ – ಶುಕ್ರನು ಕಳತ್ರಕಾರಕ. ಈ ಪಂಚ ಪಕ್ವಗಳು, ನಾಲ್ಕು ತತ್ವಗಳನ್ನು ಸಂತುಲನಗೊಳಿಸಿ ಷೌಷ್ಟಿಕವಾಗಿ ಪರಿವರ್ತಿಸುವವನೇ ಗಣಪತಿ.
ವಿಜ್ಞನಿವಾರಕ, ಜ್ಞಾನದೇವತೆ, ಮೊದಲು ಪೂಜನೀಯ ಗಣೇಶ. ಭಾರತೀಯರ ಮನೆಮನೆಗಳಲ್ಲಿ ಸದಾ ನೆಲೆಸಿದ್ದರೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಎಲ್ಲ ಬೀದಿಗಳಲ್ಲಿ ದರ್ಶನಕ್ಕೆ ಇಡುತ್ತಾರೆ. ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಗಣೇಶ ಪೂಜೆಯನ್ನು ಜನಜಾಗೃತಿ ಅಸ್ತ್ರವಾಗಿ ಉಪಯೋಗಿಸಿದವರು. ಪರಂಪರೆಯ ಅರಿವು ಮೂಡಿಸುವುದರೊಂದಿಗೆ ಸ್ವಾತಂತ್ರ್ಯದ ಬೀಜಮಂತ್ರವನ್ನು ತಿಳಿಸಲು ಬಳಸಿದರು. ಸಾರ್ವಜನಿಕ ಮಹತ್ವ ಬಂದು ನಂತರ ಉತ್ಸವವಾಗಿ ಊರೂರಿಗೂ ಹಬ್ಬಿತು.
ಗಣಪತಿಯ ರೂಪ ವೈವಿಧ್ಯ, ಭಂಗಿ ವೈವಿಧ್ಯ – ಇದು ಲೆಕ್ಕಕ್ಕೆ ಸಿಗದಷ್ಟು. ಕಲಾವಿದನ ಕೈಯಲ್ಲಿ ಆಯಾ ವರ್ಷದ ಬೆಳವಣಿಗೆಗೂ ಸ್ಪಂದಿಸುತ್ತಾನೆ ಗಣಪತಿ. ವಿಸರ್ಜನೆಯೂ ವೈಭವದಿಂದ ನಡೆಯುವುದು.
ಗಣೇಶನ ಗಣ್ಯಗುಣ ವಿಶೇಷಣಗಳೇನಿದ್ದರೂ ಅಥರ್ವಶೀರ್ಷ ಮಂತ್ರ ವರ್ಣಿಸಲಾಗಿದೆ. ಅದರಲ್ಲಿ ಹೇಳಿರುವ ಒಂದಲ್ಲ ಒಂದು ವಸ್ತು ವಿಷಯ ಗಣಪತಿಯ ವ್ಯಾಪಕತೆಯನ್ನೊಳಗೊಂಡಿದೆ. ಗಣಪತಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿನಿಂದಲೇ ಸಕಲ ಜೀವಸೃಷ್ಟಿ. ಅನೇಕ ರತ್ನ ಸಂಪತ್ತೇ ಮಣ್ಣಾಗಿರುವುದು. ಒಂದು ಹಿಡಿ ಮಣ್ಣಿನಲ್ಲಿ ಸಕಲ ಕಾರ್ಯತಂತ್ರವನ್ನು ಸಾಧಿಸಬಹುದೆಂಬುದನ್ನು ಅಥರ್ವಣವೇದ ಸಾರುತ್ತದೆ.
ನಾವಿರುವ ಪ್ರಕೃತಿಯ ಪಂಚತತ್ವಗಳನ್ನು ಸಂಘಟಿಸುವವನೇ ಗಣಪತಿ. ವಾಯುಮಂತ್ರದಿಂದ ಗಾಳಿಯನ್ನು, ವರುಣ ಮಂತ್ರದಿಂದ ನೀರನ್ನು, ಅಗ್ನಿ ಮಂತ್ರದಿಂದ ಬೆಂಕಿಯನ್ನು ಉಪಾಸಕ ನಿಯಂತ್ರಿಸಬಲ್ಲ. ಈ ಸಮನ್ವಯ ಸಂಘಟನೆಯ ಸಾಕಾರವಾಗಿ ಗಣಪತಿಯ ಸಾಕ್ಷಾತ್ಕಾರ.
ಮಂಗಳವಾರ ಚತುರ್ಥಿ ಬರಲು ‘ಅಂಗಾರಕ’ ಎನ್ನುತ್ತಾರೆ. ಅಂಗಾರಕನೆಂದರೆ ಮಂಗಳಗ್ರಹ. ಭೂಮಿಯ ಮೇಲೆ ಗಣಪತಿಯ ಆಧಿಪತ್ಯವು ಇರುವಂತೆ ಮಂಗಳನ ಮೇಲೂ ಇದೆ.
ಅಷ್ಟ ಗಣಪತಿಗಳು ಎಲ್ಲರಿಗೂ ಗೊತ್ತಿರುವಂಥದ್ದೇ. ಕರ್ನಾಟಕದಲ್ಲಂತೂ ಪ್ರಖ್ಯಾತ ಗಣೇಶ ದೇಗುಲಗಳಿವೆ. ಬೆಂಗಳೂರಿನ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದ ಸಂಕೀರ್ಣದಲ್ಲಿ ದಶಭುಜ ಶಕ್ತಿ ಸಹಿತ ಶ್ರೀ ಮಹಾಗಣಪತಿಯ ವಿಶಿಷ್ಟವೆನಿಸಿದೆ. ಬಸವನಗುಡಿಯ ದೊಡ್ಡ ಗಣೇಶ, ಹಟ್ಟಿಯಂಗಡಿ ಗಣೇಶ, ಆನೆಗುಡ್ಡ ಗಣಪತಿ, ದ್ವಿತೀಯ ಬಾಹು ಇಡಗುಂಜಿ ಗಣೇಶ, ಗೋಕರ್ಣದ ಗಣೇಶ, ಸಾಸಿವೆಕಾಳು ಗಣಪತಿ, ಬಾದಾಮಿಯಲ್ಲಿ, ಐಹೊಳೆಯಲ್ಲಿ ಶಿಲಾಮೂರ್ತಿಗಳಿಗೆ ಲೆಕ್ಕವೇ ಇಲ್ಲ.
ಯಾವುದೇ ಕಾರ್ಯಗಳು ಪ್ರಾರಂಭವಾಗುವದು ಗಣೇಶ ಸ್ತುತಿ ಹಾಡುಗಳಿಂದ. ಕೇಳಿದೂಡನೆ ಎಲ್ಲರೂ ಮಂತ್ರಮುಗ್ಧರಾಗುವರು. ಆದಿ ಗುರು ಶ್ರೀ ಶಂಕರಾಚಾರ್ಯರು ವಿರಚಿತ ಏಕಶ್ಲೋಕ ಗಣಪತಿ ಸ್ತೋತ್ರ, ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರಗಳು ಮಹತ್ವವಾದವು.
ಸಂಕಷ್ಟಗಳು ನಿವಾರಣೆಯಾಗಲೆಂದು ಸಂಕಷ್ಟಿಯ ದಿನದಂದು ರಾತ್ರಿವರೆಗೂ ಉಪವಾಸವಿದ್ದು ರಾತ್ರಿ ಚಂದ್ರೋದಯದ ನಂತರ ಊಟ ಮಾಡಿ ಆಚರಿಸುತ್ತಾರೆ. ತಿಂಗಳಿಗೊಮ್ಮೆ ಹುಣ್ಣಿಮೆಯ ನಂತರದ ಚೌತಿಯಂದು ಆಚರಿಸುವ ಈ ದಿನ ಗಣಪತಿ ಭಕ್ತಿಯ ದ್ಯೋತಕವಾಗಿದೆ.
– ಮೇಘಾ ಬ. ಗೊರವರ, ನವನಗರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.