ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇದೀಗ ಎಪ್ಪತ್ತು ವರ್ಷಗಳು ತುಂಬಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರತಿಯೊಬ್ಬ ಭಾರತೀಯನ ಮನೆ-ಮನದಲ್ಲೂ ಮನೆಮಾಡಿರುತ್ತದೆ. ಇದನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಬೇರೆ-ಬೇರೆ ಕಂಪನಿಗಳಲ್ಲಿ, ಬಸ್ಸ್ಟ್ಯಾಂಡ್- ಆಟೋ ಸ್ಟ್ಯಾಂಡ್ಗಳಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಷ್ಟ್ರೀಯ ಹಬ್ಬ. ಇದನ್ನು ಜಾತಿ-ಮತ ಅನ್ನೋ ಬೇಧವಿಲ್ಲದೆ ಪ್ರತಿಯೊಬ್ಬರು ಇದು ತನ್ನ ಹಕ್ಕು ಎಂಬಂತೆ ಆಚರಿಸುತ್ತಾರೆ. ಎಲ್ಲೆಡೆ ಆಕಾಶದಲ್ಲಿ ನಕ್ಷತ್ರಗಳು ಹೊಳೆಯುವಂತೆ, ಹಕ್ಕಿಗಳ ಸಾಲು ಹಾರುವಂತೆ ಕಂಡುಬರುವುದು ಭಾರತದ ತ್ರಿವರ್ಣ ಧ್ವಜಗಳು. ಬೇರೆಯವರಿಗೆ ಶಾಂತಿಪಾಠ ಹೇಳಿಕೊಟ್ಟ ರಾಷ್ಟ್ರ ನಮ್ಮದು. ಹಸಿವು ಅಂತಾ ಬಂದವರಿಗೆ ಅನ್ನ ನೀಡಿದ ನಾಡು ನಮ್ಮದು, ವಸತಿಯಿಲ್ಲದ ಅನೇಕ ಅನಿವಾಸಿಗಳಿಗೆ ಜಾಗ ಕೊಟ್ಟು ಜಾತಿ ನೋಡದ ದೇಶ ನಮ್ಮದು. ಅದುವೇ ನಮ್ಮ ಭಾರತ..
ನಮ್ಮ ಈ ಸಂತಸದ ಹಿಂದೆ ಸಾಕಷ್ಟು ಮಹಾತ್ಮರು ಬೆವರಿನ ತರ ರಕ್ತದ ಕೊಡಿಯನ್ನೇ ಹರಿಸಿದ್ದಾರೆ. ಅವರಿಂದ ನಾವು ಇಂದು ಸ್ವತಂತ್ರರಾಗಿದ್ದೇವೆ. ಆದರೆ ಇದು ದೊರೆಯಬೇಕಾದರೆ ನಮ್ಮವರು ಮಾಡಿದ ತ್ಯಾಗ-ಬಲಿದಾನಗಳು ಅಸಂಖ್ಯವಾಗಿವೆ. ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ನಮ್ಮನ್ನಾಳಿದರು. ಅವರ ಆಳ್ವಿಕೆಯ ಮುಷ್ಟಿಯಿಂದ ಹೊರಬರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅವರಿಂದ ಮುಕ್ತಿ ಪಡೆಯಲು ಅಂದಿನ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ಬ್ರಿಟಿಷರಿಗೆ ಸವಾಲೊಡ್ಡಿ ಹೋರಾಟಕ್ಕೆ ನಿಂತಿದ್ದರು. ಭಾರತೀಯರು ಬ್ರಿಟಿಷರ ಸೈನ್ಯದಲ್ಲಿದ್ದರು ಆದರೆ ಇವರನ್ನು ತುಂಬಾ ಕೀಳಾಗಿ ನೋಡುತ್ತಿದ್ದರು. ಭಾರತೀಯರಿಗೆ ಗೋವು ಪವಿತ್ರವಾದ್ದದ್ದು ಅದನ್ನು ಪೂಜನೀಯ ಭಾವನೆಯಿಂದ ನೋಡುತ್ತಿದ್ದರು. ಆದರೆ ಬ್ರಿಟಿಷರು ಸೈನಿಕರು ಬಳಸುತ್ತಿದ್ದ ತೋಟಾಗಳಿಗೆ ದನ ಮತ್ತು ಹಂದಿ ಮಾಂಸವನ್ನು ಹಚ್ಚಿ ಅದನ್ನು ಭಾರತೀಯರು ಬಾಯಿಂದ ಕಚ್ಚಿ ತೆಗೆದು ಬಳಸಬೇಕೆಂದರು. ಇದರಿಂದ ಉದ್ರಿಕ್ತಗೊಂಡ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಮೊದಲಬಾರಿಗೆ 1857 ರಲ್ಲಿ ದಂಗೆ ಎದ್ದರು. ಆದರೆ ಅಪಾರ ಜನಶಕ್ತಿ ಹೊಂದಿದ್ದ ಬ್ರಿಟಿಷರು ಇದನ್ನು ಪತನಗೊಳಿಸಿದರು. ಇದರಲ್ಲಿ ಮಂಗಲ್ ಪಾಂಡೆ ಗುಂಡೇಟಿಗೆ ಬಲಿಯಾಗಿ ಇತಿಹಾಸದ ಪುಟ ಸೇರಿದೆ.
ಹೀಗೆ ಬ್ರಿಟಿಷರ ವಿರುದ್ಧ ಭಾರತೀಯರ ಹೋರಾಟ ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು. ಪ್ರತಿ ಹಳ್ಳಿ, ಗ್ರಾಮ, ಪಟ್ಟಣದ ತುಂಬಾ ಬರೀ ಸ್ವಾತಂತ್ರ್ಯದ ವಿಚಾರಧಾರೆಯೇ ನಡೆಯುತ್ತಿತ್ತು. ಇಲ್ಲಿ ಯಾರು ಜಾತಿ-ಮತ ಅಂತ ನೋಡಲಿಲ್ಲ, ಹಿರಿಯ-ಕಿರಿಯ ಅಂತ ಸುಮ್ಮನೆ ಕೂಡಲಿಲ್ಲ. ಆಗ ಇದ್ದಿದ್ದು ಒಂದೇ ಜಾತಿ ಅದು ಭಾರತೀಯ. ಎಲ್ಲಾ ವಯಸ್ಸಿನವರು ಮಕ್ಕಳು-ಮುದುಕರು ಎನ್ನದೆ ಹೋರಾಟದಲ್ಲಿ ಧುಮುಕಿದರು. ಇದೇ ಸಮಯಕ್ಕೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮಹಾತ್ಮ ಗಾಂಧೀಜಿ ಈ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಹೋರಾಟವನ್ನು ಮುನ್ನಡೆಸಿದರು. ಆಗ ಅನೇಕ ನಾಯಕರು ಹುಟ್ಟಿಕೊಂಡರು. ಅವರವರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದರೂ ಉದ್ದೇಶ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವುದೇ ಆಗಿತ್ತು.
ಗಾಂಧೀಜಿ ಶಾಂತಿಮಾರ್ಗವನ್ನು ನೀಡಿದರೆ ಸುಭಾಶ್ ಚಂದ್ರ ಬೋಸ್ರವರದ್ದು ರಕ್ತದ ನೀತಿಯಾಗಿತ್ತು. ಅವರು ಎಲ್ಲೆಡೆ ಜನರನ್ನು ಸೇರಿಸಿ ಹೀಗೆ ಕಾಯುತ್ತಾ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ,-ನೀವು ನನಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳುತ್ತಿದ್ದರು.
ಬ್ರಿಟಿಷರು ಭಾರತೀಯರು ಒಂದಾಗಬಾರದೆಂದು ಎಲ್ಲಾ ಸಂಪರ್ಕ ಮಾರ್ಗಗಳನ್ನು ನಾಶಮಾಡುತ್ತಾ ಹೊರಟರು ಆದರೆ ಇದಕ್ಕೆ ಬಗ್ಗದ ಭಾರತೀಯರು ಸಾರ್ವಜನಿಕ ಹಬ್ಬಗಳಾದ ಗಣೇಶ ಚತುರ್ಥಿ, ಶಿವಾಜಿ ಜಯಂತಿ ಮತ್ತಿತ್ತರ ಮೆರವಣಿಗೆಗಳನ್ನು ನೆಪಮಾಡಿಕೊಂಡು ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲೆಡೆ ಸಾರಿದರು ಇದರ ಜೊತೆಗೆ ಕರಪತ್ರಗಳನ್ನು ಹಂಚುತ್ತಿದ್ದರು. ಹೀಗೆ ಸ್ವಾತಂತ್ರ್ಯದ ಹೊಗೆ ಎಲ್ಲಾ ಕಡೆ ಪಸರಿಸಿತ್ತು. ಹೋರಾಟ ನಾನಾ ಮಾರ್ಗಗಳಲ್ಲಿ ಮುನ್ನುಗುತ್ತಲೇ ಇತ್ತು.
ಶಾಂತಿ ಮಾರ್ಗದ ಮೂಲಕ ಉಪವಾಸ, ಸತ್ಯಾಗ್ರಹ, ಬಹಿಷ್ಕಾರದಂತಹ ಆಚರಣೆಯಲ್ಲಿ ಗಾಂಧೀಜಿ ಮುನ್ನಡೆಯುತ್ತಿದ್ದರೆ, ಸೈನ್ಯವನ್ನು ಬಲಗೊಳಿಸಲು ಸುಭಾಶ್ ಚಂದ್ರರು ವಿದೇಶಗಳಿಗೆ ತೆರಳಿ ಸೈನ್ಯದ ಸಹಾಯ ಯಾಚಿಸುತ್ತಿದ್ದರು. ಉಗ್ರಗಾಮಿಗಳು, ತೀವ್ರಗಾಮಿಗಳು, ಮಂದಗಾಮಿಗಳು ಹೀಗೆ ವಿಭಿನ್ನ ಆಲೋಚನೆ ಹೊಂದಿದ್ದವರು ತಮ್ಮದೇ ಆದ ರೀತಿಯಲ್ಲಿ ಹೋರಾಟಕ್ಕಿಳಿದಿದ್ದರು. ಯಾರೊಬ್ಬರೂ ಸುಮ್ಮನಿರಲಿಲ್ಲ. ಸ್ವಾತಂತ್ರ್ಯದ ಹಸಿವು ಪ್ರತಿಯೊಬ್ಬ ಭಾರತೀಯನ ನಿದ್ದೆಗೆಡಿಸಿತ್ತು.
ಗಾಂಧೀಜಿ ತಮ್ಮ ಮಾರ್ಗ ಬದಲಾಯಿಸಲು 1922 ರಲ್ಲಿ ನಡೆದ ಚೌರಿ-ಚೌರಾ ಘಟನೆ ಪ್ರಮುಖ ಕಾರಣವಾಯಿತು. ಈ ಘಟನೆಯಲ್ಲಿ 22 ಪೊಲೀಸರು ಸಜೀವ ದಹನವಾದರು. ಇದಕ್ಕೂ ಮುನ್ನ 1919 ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ 379 ಮಂದಿ ಅಸುನೀಗಿದರು. ಇಲ್ಲಿಂದ ಹೋರಾಟ ಮತ್ತಷ್ಟು ತೀವ್ರವಾಯಿತು. 1920-22 ರಲ್ಲಿ ನಡೆದ ಅಸಹಕಾರ ಚಳವಳಿಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯಿತು. ಗಾಂಧೀಜಿಯವರ ಆದೇಶದಂತೆ ಬ್ರಿಟಿಷರ ವಸ್ತುಗಳನ್ನು ತಿರಸ್ಕರಿದರು, ವಿದ್ಯಾರ್ಥಿಗಳು, ವಕೀಲರು ಬ್ರಿಟಿಷರ ಸಂಸ್ಥೆಗಳಿಂದ ಹೊರನಡೆದರು. ನಂತರ ನೆಹರುರವರು 1923 ರಲ್ಲಿ ಸ್ವರಾಜ್ಯ ಪಕ್ಷ ಸ್ಥಾಪಿಸಿ ಬ್ರಿಟಿಷರ ಆಡಳಿತಕ್ಕೆ ಅನಾನುಕೂಲತೆಯನ್ನು ಉಂಟುಮಾಡಿದರು. ಇದನ್ನು ತಡೆಯಲು ಸೈಮನ್ ಕಮೀಷನ್ ಜಾರಿ ತಂದರೂ ಉಪಯೋಗವಾಗಲಿಲ್ಲ.
1930 ರಲ್ಲಿ ಬ್ರಿಟಿಷರು ಉಪ್ಪಿನಕರವನ್ನು ಜಾರಿಗೆ ತಂದು ಭಾರತೀಯರ ಮೇಲೆ ಭಾರಿ ಒತ್ತಡವನ್ನುಂಟು ಮಾಡಿದರು. ಇದಕ್ಕೆ ವಿರುದ್ಧವಾಗಿ ಗಾಂಧೀಜಿಯವರು ದಂಡಿ ಉಪ್ಪಿನ ಸತ್ಯಗ್ರಹ ಆರಂಭ ಮಾಡಿ ಬ್ರಿಟಿಷರು ತಮ್ಮ ಕರವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು.
1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿ ಎಲ್ಲಾ ಚಳುವಳಿಗಿಂತ ತುಂಬಾ ವಿಭಿನ್ನವಾದದ್ದು ಇಲ್ಲಿಂದಲೇ ಬಹುಶಃ ಬ್ರಿಟಿಷರಿಗೆ ನಡುಕ ಉಂಟಾಯಿತು. ಇದು ಬ್ರಿಟಿಷರು ಭಾರತೀಯರಿಗೆ ತಲೆಬಾಗುವಂತೆ ಮಾಡಿತು. ಮಾಡು ಇಲ್ಲವೇ ಮಡಿ, ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಗಳು ಬ್ರಿಟಿಷರಿಗೆ ಎಚ್ಚರಿಕೆ ಗಂಟೆ ಭಾರಿಸುತ್ತಿದ್ದವು. ಅಗಸ್ಟ್ 9 ರಂದು ಗಾಂಧೀಜಿ, ಪಟೇಲ್, ನೆಹರು, ನಾಯ್ಡು, ಅಜಾದ್, ಆಚಾರ್ಯ ಕೃಪಲಾನಿ ಮತ್ತು ರಾಜೇಂದ್ರ ಪ್ರಸಾದ್ರನ್ನು ಬಂಧಿಸಲಾಯಿತು. ಚಳವಳಿ ನಿಲ್ಲದೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಲೇ ಇತ್ತು. ಅಂಚೆ ತಂತಿ, ರೈಲ್ವೆ ಹಳಿ ಕೀಳುವುದು, ಅಂಚೆ ಕಛೇರಿಗಳ ಮೇಲೆ ದಾಳಿ, ಖಜಾನೆಗಳ ಲೂಟಿ, ವಿದೇಶಿ ವಸ್ತುಗಳನ್ನು ಸುಡುವುದು, ಹರತಾಳ ಆಚರಿಸುವುದು ಮುಂತಾದವು ನಡೆದವು. ಗೋಲಿಬಾರ್ ನಡೆದು 940 ಜನ ಬಲಿಯಾದರು.
ಇಷ್ಟೆಲ್ಲದರ ಪರಿಣಾಮವಾಗಿ 1945 ರಲ್ಲಿ ತಾತ್ಕಾಲಿಕ ಸರ್ಕಾರ ರಚನೆಗೆ ಬ್ರಿಟಿಷರು ಒಪ್ಪಿಕೊಂಡರು. ಆಗ ಪ್ರಧಾನಿಯಾದ ಕ್ಲೈಮೆಂಟ್ ಆಟ್ಲಿ ಭಾರತೀಯರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರ್ಧರಿಸಿದರು. ಅದರಂತೆ ನೆಹರು ಅವರಿಗೆ ತಾತ್ಕಾಲಿಕ ಸರ್ಕಾರ ರಚಿಸಲು ಅನುಮತಿ ನೀಡಿದರು. ಅದರಂತೆ 1946ರಲ್ಲಿ ತಾತ್ಕಾಲಿಕ ಸರ್ಕಾರ್ ಜಾರಿಗೆ ಬಂದಿತು. ಇನ್ನೇನು ಎಲ್ಲಾ ಸರಿ ಹೋಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು ಅಂತಾ ಖುಷಿಪಡುವಷ್ಟರಲ್ಲಿ ಈ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಮಹಮ್ಮದ್ ಅಲಿ ಜಿನ್ನಾ ಜಾತೀಯತೆಯನ್ನು ಅಡ್ಡ ತಂದು ಮುಸ್ಲಿಂರಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದರು. ಆಗ ಭಾರತಕ್ಕೆ ವೈಸರಾಯ್ ಆಗಿಬಂದಿದ್ದ ಲಾರ್ಡ್ ಮೌಂಟ್ಬ್ಯಾಟನ್ ಪ್ರತ್ಯೇಕತೆಯನ್ನು ಘೋಷಿಸಿ 1947 ಅಗಸ್ಟ್ 14 ರಂದು ಪಾಕಿಸ್ಥಾನಕ್ಕೆ ಸ್ವಾತಂತ್ರ್ಯ ನೀಡಿ, ಮಹಮ್ಮದ್ ಅಲಿ ಜಿನ್ನಾರವರನ್ನು ಅದರ ಪ್ರಥಮ ಪ್ರಧಾನಿಯನ್ನಾಗಿ ಮಾಡಿದರು. ಮತ್ತು 1947 ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದರು ಆದರೆ ಪಟ್ಟು ಹಿಡಿದ ಭಾರತೀಯರು ಅಗಸ್ಟ್ 14 ರ ಮಧ್ಯೆರಾತ್ರಿಯೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ದೆಹಲಿಯ ಕೆಂಪುಕೋಟೆ ಮೇಲೆ ಭಾರತದ ಧ್ವಜವನ್ನು ಸಂತೋಷದಿಂದ ಹಾರಿಸಿದರು. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಸ್ವತಂತ್ರ ಭಾರತದ ಮೊದಲ ಬ್ರಿಟಿಷ್ ಗವರ್ನರ್ ಜನರಲ್ ಆದರು.
ಭಾರತಕ್ಕೆ ಸ್ವಾತಂತ್ರ್ಯಕ್ಕೆ ದೊರೆಕಿದ ಹಿನ್ನೆಲೆಯನ್ನು ಒಮ್ಮೆ ಮೆಲಕು ಹಾಕಿದರೆ ಒಂದು ಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಅದೆಷ್ಟೋ ಮಗ್ಧ ಜೀವಿಗಳು ತನ್ನ ಮುಂದಿನ ತಲೆಮಾರು ಸುಖವಾಗಿರಲೆಂದು ಯೋಚಿಸಿ ಅಂದು ತಮ್ಮ ಜೀವವನ್ನು ತ್ಯಾಗ ಮಾಡಿದರು. ಅನೇಕರ ತ್ಯಾಗ-ಬಲಿದಾನದ ಪ್ರತೀಕ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅಂದು ಹೊರಗಿನವರನ್ನು ಹೊರಹಾಕಲು ಹೋರಾಟ ನಡೆಯಿತು. ಆದರೆ ಬೇಜಾರಾಗುವ ಸಂಗತಿಯೆಂದರೆ ಇಷ್ಟು ಕಷ್ಟಪಟ್ಟು ಬ್ರಿಟಿಷರ ಬಂಧನದಿಂದ ಮುಕ್ತಿ ಪಡೆದ ಭಾರತೀಯರು ಜಾತಿ-ಮತ ಮರೆತು ಭಾರತ ಎಂಬ ಒಂದೇ ಕುಲವನ್ನಿಟ್ಟುಕೊಂಡು ಅಂದು ಹೋರಾಡಿದ್ದರು. ಆದರೆ ನಮ್ಮ ಇಂದಿನ ರಾಜಕೀಯ ಸ್ಥಿತಿಯನ್ನೊಮ್ಮೆ ನೋಡಿದರೆ ಅವರೊಳಗೆ ಸಾಕಷ್ಟು ಕಚ್ಚಾಟಗಳು ನಡೆಯುತ್ತಿವೆ. ದಿನಕ್ಕೊಂದು ಹೊಸ ಧರ್ಮ, ಜಾತಿಯನ್ನು ಹುಟ್ಟುಹಾಕಿ ದೇಶದಲ್ಲಿ ಕೋಮುಗಲಭೆ ಉಂಟಾಗುವಂತೆ ಮಾಡುತ್ತಿದ್ದಾರೆ. ಇತ್ತಿಚಿಗೆ ಬಿಡುಗಡೆಯಾದ ಸ್ಪರ್ಧಾ ಸೂಚ್ಯಂಕ ಪಟ್ಟಿಯಲ್ಲಿ ಭಾರತ 45ನೇ ಸ್ಥಾನದಲ್ಲಿದೆ. ಅದು ಇನ್ನು ಅಭಿವೃದ್ಧಿಯಾಗಬೇಕಿದೆ. ಈ ಕುರಿತು ನಮ್ಮ ರಾಜಕೀಯ ನಾಯಕರು ಹೆಚ್ಚು ಮುತುವರ್ಜಿ ವಹಿಸಿದರೆ ಭಾರತ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುತ್ತದೆ. ಇದಕ್ಕಾಗಿ ನಮ್ಮ ನಾಯಕರು ಮನಸ್ಸು ಮಾಡಬೇಕಾಗಿದೆ, ತಲೆ ಕೆಡಿಸಿಕೊಳ್ಳಬೇಕಾಗಿದೆ.
ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಆಚರಣೆಯಾಗಬಾರದು. ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸೋಣ. ಆ ದಿನ ಸರ್ಕಾರ ರಜೆ ನೀಡುವ ಬದಲು ಭಾರತದ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂರವರು ಹೇಳಿದಂತೆ ದಿನಕ್ಕಿಂತ ಹೆಚ್ಚಿನ ಸಮಯ ಕಾರ್ಯನಿರ್ವಹಿಸೋಣ. ಭಾರತವನ್ನು ಪ್ರಪಂಚದಲ್ಲಿಯೇ ಮೊದಲನೇ ಸ್ಥಾನದಲ್ಲಿ ತರಲು ಪ್ರತಿಜ್ಞೆ ಮಾಡೋಣ.
ಜೈ ಹಿಂದ್ ಜೈ ಭಾರತಮಾತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.