ಧಾರವಾಡ : ಆಚರಣೆಗೊಂದು ಅರ್ಥವಿದ್ದರೆ ಹಬ್ಬಕ್ಕೊಂದು ಸಾರ್ಥಕ್ಯ. ಪರಂಪರೆಯ ಹೆಸರಿನಲ್ಲಿ ನುಡಿ ಪುರಾತನ, ನಡೆ ಕಿರಾತನ ಎಂಬುವಂತಿದ್ದರೆ ದೇವರೂ ಮೆಚ್ಚಲಾರ. ಅರ್ಥ ಬರುವಂತೆ ಆಚರಿಸುವ ವಿವೇಕ ಮತ್ತು ವಿವೇಚನೆ ಗಣಗಳ ಈಶ ಮನುಷ್ಯರಿಗೆ ಈ ಬಾರಿ ನೀಡಲಿ ಎಂದು ಕ್ರಿಯಾಶೀಲ ಗೆಳೆಯರು ಬಳಗದ ಅಧ್ಯಕ್ಷ ಮುಕುಂದ ಮೈಗೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಇಂದು (ಭಾನುವಾರ, ಆ.06) ರಂದು ಆಯೋಜಿತವಾಗಿದ್ದ, ಪರಿಸರ ಸ್ನೇಹಿ ಮಣ್ಣಿನ ಬೀಜ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಹಾಗೂ ಪರಿಸರ ಸ್ನೇಹಿ ಹಬ್ಬದ ಆಚರಣೆ ಪರಿ ಕುರಿತ ಚಿಂತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮೃತ್ತಿಕಾ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಅಣೋರಣೀಯನ.. ಮಹತೋಮಹನೀಯನ, ಅರ್ಥಾತ್ ಅಣುವಿನಲ್ಲಿ ಅಣು, ಮಹತ್ತಿನಲ್ಲಿ ಮಹತ್ತು ಎಂಬಂತೆ ‘ಪಾರ್ಟಿಕಲ್ ಇನ್ ದಿ ಪ್ಯುರೆಸ್ಟ್ ಫಾರ್ಮ್’ ಗಣಗಳ ಪತಿ – ಗಣೇಶ, ಎಂದರು.
ವಾಣಿಜ್ಜಿಕ ಹಿತಾಸಕ್ತಿ ಮೇಲುಗೈ ಪಡೆಯುವಂತೆ, ಆಚರಣೆಯ ಅರ್ಥವನ್ನೇ ಕಳೆದು, ಹಬ್ಬದ ಹೆಸರಿನಲ್ಲಿ ಪರಿಸರ ಅಸ್ನೇಹಿ ವಿಧಾನದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ -ಪಿಓಪಿ ಮತ್ತು ರೆಡ್ ಆಕ್ಸೈಡ್ ಲೇಪಿತ, ಲೆಡ್-ಆರ್ಸೆನಿಕ್ಯುಕ್ತ ಆಯಿಲ್ ಪೇಂಟ್ ಬಳಿದ ಗಣಪತಿ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಿದಲ್ಲಿ ಆಗಬಹುದಾದ ಪಾರಿಸಾರಿಕ ಅನಾಹುತಗಳ ಬಗ್ಗೆ ಪ್ರಜ್ಞಾಪೂರ್ಣ ಹಾಗೂ ವಿವೇಕವಂತರಾಗಿ ಹಬ್ಬದಾಚರಕರು ಯೋಚಿಸಬೇಕು ಎಂದು ಹೇಳಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿನಿಧಿಸಿದ ಅಧಿಕಾರಿ ಶೋಭಾ ಗಜಕೋಶ ಅವರು ಮಾತನಾಡಿ, ಹಬ್ಬಗಳಾಚರಣೆ ಯಾವುದೇ ರೀತಿಯಲ್ಲೂ ಮಾಲಿನ್ಯಕ್ಕೆ ಎಡೆ ಮಾಡಿಕೊಡಬಾರದು. ನಿಯಮ ಮೀರಿ ನಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮಂಡಳಿಗೆ ಮತ್ತು ಜಿಲ್ಲಾಡಳಿತಕ್ಕೆ ಅಧಿಕಾರವಿದೆ. ಭೂಮಿಯ ಮೇಲಿನ ಎಲ್ಲರ ಬದುಕೂ ಸಹ್ಯವಾಗಿರುವಂತೆ, ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಂಡು ಆಚರಿಸುವ ಮನಸ್ಸು ಮಾಡುವಂತೆ ಮನವಿ ಮಾಡಿದರು.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಕ ಕೆಲಗೇರಿಯ ಮಂಜುನಾಥ ಹಿರೇಮಠ ಅವರು ಮಾತನಾಡಿ, ಪರಾಗ ರೇಣು ಮತ್ತು ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರದಲ್ಲಿ ಮಾತ್ರ ಏನೂ ಇಲ್ಲ! ಹಾಗಾಗಿ, ಬೀಜ ಗಣಪತಿ ರೂಪಿಸಿ, ವಿಸರ್ಜನೆಯ ನಂತರ ಮೊಳಕೆಯೊಡೆದ ಸಸಿಗಳನ್ನು ಬಿತ್ತಿ, ಅರಿವು ಬಿತ್ತರಿಸುವ ಆಂದೋಲನ ಆಯೋಜಿಸಲಾಗಿದೆ ಎಂದರು.
ಸ್ವಾಮಿ ವಿವೇಕಾನಂದ ಯುಥ್ ಮೂವ್ಮೆಂಟ್ನ ಜಯಂತ ಕೆ.ಎಸ್., ಎಸ್ಡಿಎಂ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರೊ.ಗೋಪಾಲ ಕಮಲಾಪೂರ, ಬಿ.ವ್ಹಿ.ಭೂಮರೆಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರೊ. ಲಕ್ಷ್ಮಣ ಪೋಳ, ಅಥರ್ವದ ಅರುಣ್ ಬಡಿಗೇರ್, ನೇಚರ್ ರಿಸರ್ಚ್ ಸೆಂಟರ್ ವಿಶ್ವಸ್ಥರಾದ ಹರ್ಷವರ್ಧನ ಶೀಲವಂತ, ಡಾ.ಧೀರಜ್ ವೀರನಗೌಡರ, ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸುಮಾರು 40 ಜಿಲ್ಲೆಗಳ ಮಕ್ಕಳು ಮಣ್ಣಿನ ಗಣಪತಿ ತಯಾರಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡು, ಮೂರ್ತಿ ತಯಾರಿಸಿಕೊಳ್ಳುವ ಹಾಗೂ ತಮ್ಮ ಜಿಲ್ಲೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಆಂದೋಲನ ಕೈಗೊಳ್ಳುವ ಪ್ರತಿಜ್ಞೆಗೈದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.