ಶಿಕ್ಷಣ ಇಲಾಖೆಯ ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಹೋಗುವುದಿಲ್ಲವೆಂಬ ಸಾಮಾನ್ಯವಾದ ಅಪವಾದವಿದೆ. ಇದಕ್ಕೆ ವಿರುದ್ಧವಾಗಿ ಪ್ರತಿದಿನ ಬೆಳೆಗ್ಗೆ 6 ರಿಂದ ಸಂಜೆ 5 ರವೆಗೆ ತನ್ನ ವೃತ್ತಿಯ ಜೊತೆಗೆ ಶಾಲೆಯ ಮತ್ತು ಸಮುದಾಯದ ವಿವಿಧ ಕೆಲಸಗಳನ್ನು ಶೃದ್ಧೆಯಿಂದ ಮಾಡುತ್ತಿರುವ ಶಿಕ್ಷಕನಿರುವುದು ತೀರ ಅಪರೂಪವೆನಿಸುತ್ತದೆ. ಹೌದು ಇದು ಸತ್ಯ ಶಿಕ್ಷಣ ಇಲಾಖೆಯಲ್ಲಿ ಅದ್ಯಾವುದೇ ಗೋಜಿಗೆ ಹೋಗದೇ ಪ್ರಚಾರವೂ ಬಯಸದೇ ತೆರೆಮೆರೆಯಲ್ಲಿ ಮಕ್ಕಳ ಸೇವೆ ಸಲ್ಲಿಸುತ್ತಿರುವ ಅದೆಷ್ಟೊ ಪ್ರಮಾಣಿಕ ಶಿಕ್ಷಕರಿದ್ದಾರೆ ಅಂತಹವರಲ್ಲಿ ಅಪರೂಪದ ಶಿಕ್ಷಕರ ಪರಿಚಯ ನಿಮಗೆ ಮಾಡಿಕೊಡುವೆ.
ಕರ್ನಾಟಕ ರಾಜ್ಯದ ಅತೀ ಹಿಂದುಳಿದ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪೂರ ಗ್ರಾಮದ ಈರಣ್ಣ ಭಜಂತ್ರಿ ಇವರು. ಹಾಡು, ಕಥೆ, ನೃತ್ಯ, ನಾಟಕ, ಸಂಗೀತ, ಕರಕುಶಲ ಕಲೆ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆಯುಳ್ಳ ಸರಳ ಸಜ್ಜನ ವ್ಯಕ್ತಿ. ಶಿಕ್ಷಕ ವೃತ್ತಿಯಲ್ಲಿ ಇವರು ಸಾಧಿಸಿದ ಹಾದಿಯನ್ನು ಅವಲೋಕನ ಮಾಡಿದಾಗ ಅಜ್ಞಾನದ ಬೇರಿಗೆ ಅಕ್ಷರದ ತೈಲವೆರೆಯುತ್ತಿರುವ ಅಪರೂಪದ ಶಿಕ್ಷಕ ಎನಿಸುತ್ತಾರೆ. ತಮ್ಮ ವೃತ್ತಿಯ ಜೊತೆಗೆ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತಾರೆ.
ಅವರು ತಮ್ಮ 18 ವರ್ಷದ ವೃತ್ತಿ ಜೀವನದಲ್ಲಿ ವಯಕ್ತಿಕವಾಗಿ ಯೋಚಿಸಿದ್ದೆ ಕಡಿಮೆ ಯಾವಾಗಲೂ ಶಾಲೆ ಮತ್ತು ಮಕ್ಕಳ ಬಗ್ಗೆಯೇ ಚಿಂತೆಯಲ್ಲಿರುತ್ತಾರೆ. ಹೊಸ ಹೊಸ ವಿಚಾರಗಳನ್ನು ಮಕ್ಕಳಿಗೆ ಕೊಡುವಲ್ಲಿ ನಿರತರಾಗಿರುತ್ತಾರೆ. ವೃತ್ತಿ ಸೇರಿದ ಮೊದಲ ಶಾಲೆಯಲ್ಲಿ ಕುಳಿತುಕೊಳ್ಳಲು ತರಗತಿಗಳಿರಲಿಲ್ಲ, ಒಳ್ಳೆಯ ಗಾಳಿ ಬೆಳಕಿಲ್ಲದ ಸಂದರ್ಭದಲ್ಲಿ ಪ್ರವೇಶ ಪಡೆದ ಇವರು ಸಮುದಾಯದ ಸಹಭಾಗತ್ವ ತೆಗೆದುಕೊಂಡು ಮಾದರಿ ಶಾಲೆಯಾಗಿ ನಿರ್ಮಾಣ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಸುಸಜ್ಜಿತ ಶಾಲಾ ಕಟ್ಟಡ, ಶಾಲೆಯ ನಡುವಿಗೆ ಶಾರಾದಾಂಬೆಯ ಮೂರ್ತಿ, ಶಾಲಾ ಕಂಪೌಂಡ, ವಿಧ್ಯುತ್, ಶುದ್ಧ ನೀರು, ಶಾಲಾ ಕೈತೋಟ, ಎರೆಹುಳುವಿನ ಗೊಬ್ಬರ ತೊಟ್ಟಿ, ಸುಸಜ್ಜಿತ ಗ್ರಂಥಾಲಯ, ಶಾಲೆಯ ಸುಣ್ಣ ಬಣ್ಣ, ಅಂದವಾದ ತರಗತಿಗಳು, ಉತ್ತಮವಾದ ಗೋಡೆಬರಹಗಳು ಅವರು ನಿರ್ಮಿಸಿರುವ ಶಾಲೆಯ ಒಳಗಡೆ ಪ್ರವೇಶ ಪಡೆದರೆ ಹೊರಬರಲು ಸಾಧ್ಯವಾಗುವುದಿಲ್ಲ. ಬಾಳೆಗಿಡ, ತೆಂಗಿನ ಗಿಡ, ತರಕಾರಿ ಶಾಲೆಯಲ್ಲಿಯೇ ಬೆಳೆದ ಶ್ರೇಯಸ್ಸು ಈರಣ್ಣ ಭಜಂತ್ರಿಯವರಿಗೆ ಸಲ್ಲುತ್ತದೆ. ಸಧ್ಯ ಮಾದರಿ ಶಾಲೆಯಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಏದಲಬಾವಿ ಸುರಪೂರ ತಾಲೂಕಿನಲ್ಲಿದೆ. ಈ ಉತ್ತಮ ಶಾಲೆಯ ಶ್ರೇಯಸ್ಸಿನಲ್ಲಿ ಈರಣ್ಣ ಭಜಂತ್ರಿಯವರ ಶ್ರಮವಿದೆ. ಹಗಲು ಇರುಳೆನ್ನದೆ ಶಾಲೆಯ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಏದಲಬಾವಿ ಗ್ರಾಮದ ಜನತೆಯ ಮನಸ್ಸಿನೊಳಗೆ ಈ ಶಿಕ್ಷಕರು ನೆಲೆಸಿದ್ದಾರೆ.
ಇವರು ಕಳೆದ ಮೂರು ವರ್ಷಗಳಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪೂರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ನಲಿ-ಕಲಿ ಶಿಕ್ಷಕರಾಗಿದ್ದು ಇಲ್ಲಿನ ವಾತಾವರಣದ ಜೊತೆಗೆ ಹೊಂದಿಕೊಳ್ಳುತ್ತಾ ಶಾಲೆಯ ಸುಧಾರಣೆಯತ್ತ ಗಮನಕೊಡುತ್ತಿದ್ದಾರೆ. ಸಧ್ಯ ಸಹಶಿಕ್ಷಕರಾಗಿರುವ ಇವರು ಈ ಗ್ರಾಮದಲ್ಲಿ ಮಾಡಿರುವ ಕೆಲಸಗಳು ಹತ್ತಾರು.
ನಲಿ-ಕಲಿ ಶಿಕ್ಷಕರಾಗಿ ಮಾದರಿ ಕೇಂದ್ರ ನಿರ್ಮಾಣ
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಲಿಕೆ ಟಾಟಾ ಟ್ರಸ್ಟ್ನ ಸಹಯೋಗದಲ್ಲಿ 68 ಮಕ್ಕಳಿರುವ ನಲಿಕಲಿ ಕೇಂದ್ರವನ್ನು ಮಾದರಿ ಕೇಂದ್ರವಾಗಿ ನಿರ್ಮಾಣ ಮಾಡಿದ್ದಾರೆ. ತಟ್ಟೆ ಲೋಗೊಗಳ ಪ್ರಕಾರ ನಿರ್ವಹಣೆ ಮಾಡುತ್ತಾರೆ. ನಲಿ-ಕಲಿ ಮಕ್ಕಳಿಗೆ ಹಾಡು, ಕಥೆ, ನೃತ್ಯ, ನಾಟಕ ಇತ್ಯಾದಿಗಳಲ್ಲಿ ನಿಪುಣರಾಗಿ ಮಾಡಿದ್ದಾರೆ. ಈ ಮಕ್ಕಳ ಕಲಿಕೆಯನ್ನು ಗಮನಿಸಿದರೆ ಅಬ್ಬಾ ಎನಿಸುವಷ್ಟು ಕಲಿಕೆಯ ಕನಿಷ್ಠ ಮಟ್ಟ ತಲುಪಿಸಿದ್ದಾರೆ. ಮಕ್ಕಳಲ್ಲಿ ಶಿಸ್ತು ಶಾಂತಿಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಮಕ್ಕಳಿಗಾಗಿಯೇ ತಮ್ಮ ಬದುಕಿನ ಹಲವು ಸುಖಗಳನ್ನು ಮುಡಿಪಾಗಿಸಿದ್ದಾರೆ.
ಈ ಮೊದಲು ನಲಿ-ಕಲಿಗೆ ಬೇಕಾಗಿರುವ ಸಾಮಾಗ್ರಿಗಳಿರಲಿಲ್ಲ ಇದೀಗ ಒಂದು ಸುಸಜ್ಜಿತವಾದ ನಲಿ-ಕಲಿ ಕೇಂದ್ರವಾಗಲು ಕಲಿಕೆ ಟಾಟಾ ಟ್ರಸ್ಟ್ ಸಹಕಾರ ನೀಡಿದೆ. ಬೇಕಾಗುವ ಕಲಿಕಾ ಸಾಮಾಗ್ರಿಗಳು ಮತ್ತು ಸುಸಜ್ಜಿತವಾದ ಭಾಷಾ ತರಬೇತಿ ಮತ್ತು ಕಲಿಕಾ ಸಾಮಾಗ್ರಿಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ತರಬೇತಿ ನೀಡಿದ್ದರಿಂದ ಇವತ್ತು ಉತ್ತಮ ಮಾದರಿ ಕೇಂದ್ರ ಮಾಡುವುದಕ್ಕೆ ಸಾಧ್ಯವಾಗಿದೆ. ಕಲಿಕೆ ಟಾಟಾ ಟ್ರಸ್ಟ್ನ ಸಿಬ್ಬಂದಿಗಳ ನಿರಂತರ ಬೇಟಿಗಳಲ್ಲಿ ಅವರು ನೀಡಿದ ಮಾಹಿತಿ ಮತ್ತು ಸಾಮಾಗ್ರಿಗಳಿಂದ ಮಾದರಿ ಕೇಂದ್ರ ಮಾಡಲು ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈರಣ್ಣ ಶಿಕ್ಷಕರು.
ಈರಣ್ಣ ಅವರು ರಾಗ ತೆಗೆದು ಹಾಡಲು ನಿಂತರೆ ಮಕ್ಕಳಲ್ಲಿ ಸಂತೋಷ ಮನೆ ಮಾಡುತ್ತದೆ. ಹಾವ-ಭಾವದಿಂದ ಕಥೆ ಪ್ರಾರಂಭ ಮಾಡಿದರೆ ಮಕ್ಕಳ ಮನಸ್ಸು ಹೂವಿನಂತೆ ಅರಳುತ್ತದೆ. ಈರಣ್ಣ ಸರ್ ಎಂದರೆ ಮಕ್ಕಳಿಗೆ ಪಂಚಪ್ರಾಣವಾಗಿದ್ದಾರೆ. ಪಾಲಕರ ಬೇಟಿ ಮಾಡಿ ಆಗಾಗ ಪಾಲಕರಿಗೆ ಶಾಲೆ ಮತ್ತು ಶಿಕ್ಷಣ ಮಹತ್ವ ತಿಳಿಸುತ್ತಾರೆ. ನಿಯಮಿತವಾಗಿ ಪಾಲಕರ ಸಭೆಗಳನ್ನು ಮಾಡಿ ಪಾಲಕರಿಗೆ ಮಕ್ಕಳ ಕಲಿಕೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ನಲಿ-ಕಲಿ ತರಗತಿಯಲ್ಲಿ ಸುಸಜ್ಜಿತವಾದ ಕೇಂದ್ರ ತಯಾರಿ ಮಾಡಿದ್ದಾರೆ. ಕಾರ್ಡುಗಳು, ತಟ್ಟೆ, ಲೋಗೋಗಳು, ಯೋಜನೆಗಳು, ಪೊಪೆಟ್ಗಳು, ಆಟಗಳು, ಗಣಿತದ ಲೆಕ್ಕಗಳು, ಪರಿಸರದ ವಿಷಯಗಳು ಮನದಟ್ಟು ಮಾಡಿಸಿದ್ದಾರೆ. ನಲಿ-ಕಲಿಯನ್ನು ದ್ವೇಷಿಸುವ ಶಿಕ್ಷಕರ ಪಾಲಿಗೆ ಇವರು ಮಾದರಿ ಶಿಕ್ಷಕರಾಗಿ ಕಾಣುತ್ತಾರೆ. ನೆವಹೇಳಿಕೊಂಡು ನಲಿ-ಕಲಿ ಪದ್ಧತಿಯ ಪ್ರಕಾರ ಬೋದನೆ ಮಾಡದಿರುವ ಶಿಕ್ಷಕರಿಗೆ ಇವರು ಮಾದರಿಯಾಗಿದ್ದಾರೆ.
ಶಾಲಾ ಕೈತೋಟ ನಿರ್ಮಾಣ
ಕಲಿಕೆ ಟಾಟಾ ಟ್ರಸ್ಟ್ ಮತ್ತು ಶಾಲೆಯ ಸಹಕಾರದಲ್ಲಿ, ಶಾಲೆಯ ಆವರಣದಲ್ಲಿ ಪುಟ್ಟದೊಂದು ಕೈತೋಟ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಹಾಗಲಕಾಯಿ, ಕುಂಬಳಕಾಯಿ, ಸೌತೆಕಾಯಿ, ಮೆಣಸಿನಕಾಯಿ, ಪಾಲಕ ಪಲ್ಯ, ಅವರೆಕಾಯಿ, ಮುಲ್ಲಂಗಿ ಇತ್ಯಾದಿ ತರಕಾರಿಗಳನ್ನು ಬೆಳೆಯುತ್ತಾರೆ. ಮಕ್ಕಳ ಹಾಗೂ ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಕೈತೋಟ ತುಂಬಾ ಆಕರ್ಷಣೀಯವಾಗಿ ಮಾಡಿದ್ದಾರೆ. ಶಾಲಾ ಕೈತೋಟಕ್ಕೆ ಗೊಬ್ಬರ ಹಾಕಿದ್ದಾರೆ. ನಿಯಮಿತವಾಗಿ ನೀರು ಹಾಯಿಸುವ ಕೆಲಸ ಮಾಡಿದ್ದಾರೆ.
ಶಾಲೆಯ ಆವರಣದಲ್ಲಿರುವ ಸ್ವಲ್ಪ ಸ್ಥಳದಲ್ಲಿಯೇ ಕೈತೋಟ ನಿರ್ಮಾಣ ಮಾಡಿರುವ ಇವರು ಶಾಲೆಯ ಬಿಸಿ ಊಟದಲ್ಲಿ ಬಳಕೆ ಮಾಡುವ ಯೋಜನೆ ಹೊಂದಿದ್ದಾರೆ. ಪ್ರತಿದಿನ ನೀರು ಹಾಕುತ್ತಾರೆ ಹತ್ತಾರು ವಿಶೇಷವಾದ ಸಸಿಸಗಳನ್ನು ನಡುತ್ತಾರೆ. ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಸದಾ ಶ್ರಮಿಸುತ್ತಾರೆ. ಶಾಲೆಯ ಮಕ್ಕಳಲ್ಲಿ ಶಾಲಾಕೈತೋಟದ ಮಹತ್ವ ಕುರಿತು ಬೋದನೆ ಮಾಡುತ್ತಾರೆ. ಸ್ವತಃ ಅವರ ಮನೆಯಲ್ಲಿಯೂ ಕೈತೋಟವಿದ್ದರೆ ಆಗುವ ಹತ್ತಾರು ಲಾಭಗಳನ್ನು ತಿಳಿಸಿಕೊಡುತ್ತಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾಗಿ
ಇವರ ಇನ್ನೊಂದು ಮುಖ್ಯವಾದ ಕೆಲಸವೆಂದರೆ ಸ್ಕೌಟ್ಸ್ ಶಿಕ್ಷಕರಾಗಿದ್ದಾರೆ. ಶಾಲೆಯಲ್ಲಿ ಬೆಳೆಗ್ಗೆ 6 ರಿಂದ 9 ರವೆರೆಗೆ 56 ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯನ್ನು ಹೇಳಿಕೊಡುತ್ತಾರೆ. ಅದೇ ಸಂಜೆ 4.30 ರ ಬಳಿಕ ತರಬೇತಿ ಮಾಡುತ್ತಾರೆ. ಈ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವು ಸಾಮಾಜಿಕ ಬದಲಾವಣೆಗಳನ್ನು ತರವುಲ್ಲಿ ಯಶಸ್ವೀಯಾಗಿದ್ದಾರೆ.
ಒಂದು ದಿನ ತಮ್ಮ ಶಾಲೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಗೆ ಹೋಗಬೇಕು ಎಂದಾಗ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಇವರು ಮನೆಗೆ ಬಂದಾಗ ತಮ್ಮ ಮಗಳು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದಿದ್ದರಿಂದ ಪ್ರಭಾವಿತರಾಗಿ ತನ್ನ ಶಾಲೆಯ ಮಕ್ಕಳಿಗೂ ಈ ತರಬೇತಿ ಕೊಡಿಸಬೇಕು ಎಂಬ ಆಸೆ ಹೊಂದುತ್ತಾರೆ ಮುಂದೆ ಅಲ್ಲಿಪೂರ ಶಾಲೆಯಲ್ಲಿ ಪ್ರಾರಂಭ ಮಾಡುತ್ತಾರೆ. ಮೊದಲಿಗೆ 10 ಮಕ್ಕಳಿಂದ ಪ್ರಾರಂಭವಾದ ಸ್ಕೌಟ್ಸ್ ಮತ್ತು ಗೈಡ್ಸ್ ಇದೀಗ ಸಮೃದ್ಧ 56 ಮಕ್ಕಳಿಗೆ ವಿಸ್ತರಿಸಲಾಗಿದೆ. ಮೊದಲಿಗೆ ಪಾಲಕರ ಸಭೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಮೂಲ ಉದ್ದೇಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅದರ ಲಾಭಗಳ ಬಗ್ಗೆ ತಿಳಿಹೇಳಲಾಯಿತು. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಬಟ್ಟೆ ಹಾಕಿಕೊಂಡು ಕವಾಯತ್ತು ಮಾಡುವುದನ್ನು ಗಮನಿಸಿದ ಪಾಲಕರು ಸಂತೋಷ ವ್ಯಕ್ತಪಡಿಸಿದಾಗ ಹೃದಯ ತುಂಬಿ ಬರುತ್ತದೆ ಎನ್ನುತ್ತಾರೆ ಶಿಕ್ಷಕರು.
ಬೆಳೆಗ್ಗೆ ಬೆಡೆನ್ ಪೋವೆಲ್ ಅವರ ಆರು ಸರಳ ವ್ಯಾಯಾಮದೊಂದಿಗೆ ಪ್ರಾರಂಭವಾಗುವ ಅವರ ತರಬೇತಿಯು ಸಮಾಜ ಸೇವೆ, ವೃತ್ತಿ ಮಾರ್ಗದರ್ಶನ, ಶಿಕ್ಷಣದ ಮಹತ್ವ, ಸಮಯದ ಮಹತ್ವ, ಮಾಹಾನ್ ನಾಯಕರ ಪರಿಚಯ, ಹೊಸ ಹೊಸ ಪುಸ್ತಕಗಳ ಪರಿಚಯ, ಸ್ಥಳೀಯ ವಿಷಯಗಳ ಜ್ಞಾನ, ಜೀವನ ಕೌಶಲ್ಯ, ಶಿಸ್ತು, ಬದುಕಿನ ಅಪೂರ್ವ ಬಳಕೆ, ಮೌಲ್ಯ ಶಿಕ್ಷಣ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವರು ಮಕ್ಕಳಿಗೆ ಸಾಮಾಜಿಕವಾಗಿ ಸಮೃದ್ಧ ಬದುಕು ಸಾಗಿಸಲು ಬೇಕಾದ ಎಲ್ಲವನ್ನು ಕಲಿಸುವ ಸತತ ಪ್ರಯತ್ನ ಈ ಶಿಕ್ಷಕರು ಅದ್ಯಾವ ಪ್ರಚಾರದ ಹಂಗಿಗೆ ಒಳಗಾಗದೇ ತಮ್ಮ ವೃತ್ತಿ ಗೌರವ ಮೆರೆಯುತ್ತಿದ್ದಾರೆ.
ಮಕ್ಕಳಲ್ಲಿ ಆದ ಬದಲಾವಣೆಗಳು
ಅಲ್ಲಿಪೂರ ಗ್ರಾಮದ ಮಕ್ಕಳಲ್ಲಿ ಆತ್ಮಬಲ ಹೆಚ್ಚಾಗಿದೆ. ಧರ್ಯ ಹೆಚ್ಚಾಗಿದೆ. ಯಾವುದೇ ವೇದಿಕೆ ಮೇಲೆ ನಿಂತು ಮಾತನಾಡಬಲ್ಲ ಶಕ್ತಿ ಬಂದಿದೆ. ಭಯಮುಕ್ತ ವಾತಾವರಣ ನಿರ್ಮಾಣವಾಗಿದೆ. ದೇಹಲಿವರೆಗೂ ಹೋಗಬಹುದಾದ ಧೈರ್ಯ ಮಕ್ಕಳಿಗೆ ಬಂದಿದೆ. ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಿದೆ. ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಆಸಕ್ತಿ ಹೆಚ್ಚಾಗಿದೆ. ತಮ್ಮ ಮನೆಯಲ್ಲಿ ಸ್ವತ: ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಇತರರಿಗೂ ಹೇಳಿಕೊಡುತ್ತಾರೆ. ಸತತ ಮೂರು ವರ್ಷ ಜಿಲ್ಲಾ ಮಟ್ಟದ ಸ್ವಾತಂತ್ರ ದಿನಾಚಣೆಯ ಕವಾಯತ್ತಿನಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಶಾಲೆಯ ರೇಖಾ ತಂದೆ ನಿಂಗಪ್ಪ ರಾಜ್ಯ ಪುರಸ್ಕಾರ ಪರೀಕ್ಷೆ ಬರೆದಿದ್ದಾರೆ. ಸಮಯ ಪಾಲನೆ, ಪ್ರಮಾಣಿಕತೆ, ಶಿಸ್ತು, ನ್ಯಾಯ, ಉತ್ತಮವಾದ ಮಾತು, ವೃತ್ತಿಪರತೆ, ಕಲಿಯುವ ಮನೋಭಾವ, ಹಾಡು, ಕುಣಿತ, ಆಟ ಇತ್ಯಾದಿ ಚಟುವಟಿಕೆಗಳ ಜೊತೆಗೆ ದಿನನಿತ್ಯದ ಪಾಠವನ್ನು ಸರಿಯಾಗಿ ಕಲಿಯುತ್ತಿದ್ದಾರೆ.
ಶಾಲೆ ಮತ್ತು ಸಮುದಾಯದಲ್ಲಾದ ಬದಲಾವಣೆಗಳು
ಶಾಲೆಯ ಇತರೇ ಶಿಕ್ಷಕರಿಗೆ ಪ್ರೋತ್ಸಾಹವಾಗಿದೆ. ಶಾಲೆಯ ವಾತವರಣ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಶಿಕ್ಷಕರ ಪ್ರೋತ್ಸಾಹ ದೊರೆತಿದೆ. ಸಮಯ ನಿರ್ವಹಣೆ ಉತ್ತಮವಾಗುತ್ತಿದೆ. ಶಾಲಾ ಪರಿಸರ ಸ್ವಚ್ಛವಾಗಿದೆ. ಶಾಲಾ ಕೈತೋಟದಿಂದ ಬಿಸಿ ಊಟಕ್ಕೆ ಸಹಕಾರಿಯಾಗಲಿದೆ. ಸಮುದಾಯದ ಪಾಲಕರಲ್ಲಿ ಶಿಕ್ಷಣದ ಜಾಗೃತಿ ಮೂಡಿದೆ. ಶಿಕ್ಷಕರ ಬಗ್ಗೆ ಗೌರವ ಭಾವನೆ ಹೆಚ್ಚಾಗಿದೆ. ಶಾಲೆಯ ಬಗ್ಗೆ ಧನಾತ್ಮಕ ಮನೋಭಾವ ಮೂಡಿದೆ. ಶಾಲೆಯನ್ನು ಕಾಯುವ ಕಾಪಾಡುವ ಮನೋಭಾವ ಹೆಚ್ಚಾಗಿದೆ. ಶಾಲೆಗೆ ದೇಣಿಗೆ ನೀಡಿ ಅಭಿವೃದ್ಧಿ ಮಾಡುವ ಮನಸ್ಸು ಮೂಡಿದೆ. ಶಾಲೆಯ ಕಾರ್ಯಕ್ರಮಗಳ ನಿರಂತರವಾದ ಮೇಲ್ವೀಚಾರಣೆ ಮತ್ತು ಸಹಕಾರ ಹೆಚ್ಚಾಗಿದೆ. ನಲಿ-ಕಲಿ ತರಗತಿಯ ಮಕ್ಕಳಲ್ಲಿ ಕನಿಷ್ಠ ಕಲಿಕಾಮಟ್ಟ ಮುಟ್ಟಿದೆ. ಮಕ್ಕಳ ಜ್ಞಾನ ಕೌಶಲ್ಯಗಳ ವಲಯದಲ್ಲಿ ಉತ್ತಮವಾದ ಗುಣಾತ್ಮ ಬದಲಾವಣೆಯಾಗಿದೆ.
ಒಬ್ಬ ಶಿಕ್ಷಕ ನಲಿಕಲಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕೈತೋಟ, ಸಾರ್ವಜನಿಕ ಸೇವೆ, ಗ್ರಂಥಾಲಯ ಹೀಗೆ ಹತ್ತು ಹಲವು ಕೆಲಸಗಳನ್ನು ತನ್ನ ದಿನನಿತ್ಯದ ವೃತ್ತಿ ಬದುಕಿನೊಂದಿಗೆ ಶೃದ್ಧೆಯಿಂದ ಮಾಡುತ್ತಿರುವುದು ಪ್ರಶಂಸನೀಯವೆನಿಸುತ್ತದೆ. ಇವರ ಶ್ರಮಕ್ಕೆ ಬೆನ್ನುತಟ್ಟುವ ಗುಣ ನಮ್ಮೆಲ್ಲರದಾಗಲಿ ಇತರೇ ಶಿಕ್ಷಕರಿಗೆ ಅನುಕರಣೆಯಾಗಲಿ ಎಂಬುವುದು ನನ್ನ ಚಿಕ್ಕ ಆಶಯ.
(ಈ ಶಿಕ್ಷಕರನ್ನು ಅಭಿನಂದಿಸಲು ಮರೆಯದಿರಿ ಅವರ ಸಂಪರ್ಕ ಸಂಖ್ಯೆ 9845355101)
ನಾನು ಈರಣ್ಣ ಅವರನ್ನು ತುಂಬಾ ವೃತ್ತಿ ಬದ್ಧತೆಯುಳ್ಳ ವ್ಯಕ್ತಿಯಂದು ಕರೆಯಲು ಇಷ್ಟಪಡುತ್ತೇನೆ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಯೂನಿಟ್ ಪ್ರಾರಂಭ ಮಾಡಿದ್ದಾರೆ. ಅವರ ಸಮಯ ಪಾಲನೆ, ಶಿಸ್ತು, ಪ್ರತಿಯೊಂದು ಕೆಲಸದಲ್ಲಿಯೂ ಅಚ್ಚುಕಟ್ಟುತನ ಕಂಡು ಸಂತೋಷವಿದೆ. ನಮ್ಮ ಸಂಸ್ಥೆಯ ಮೂಲಕ ಹಾಗೂ ಸಮುದಾಯದ ಮೂಲಕ ಸಂಪೂರ್ಣ ಸಹಕಾರ ನೀಡುವ ಇನ್ನು ಪ್ರೋತ್ಸಾಹಿಸಬೇಕಾಗಿದೆ.
-ಶ್ರೀಮತಿ ನಾಗರತ್ನ ಅನಪೂರ – ಜಿಲ್ಲಾ ಕಮಿಷನರ್ ಸ್ಕೌಟ್ಸ್ ಮತ್ತು ಗೈಡ್ಸ್ ಯಾದಗಿರಿ
ಅಲ್ಲಿಪೂರ ಶಾಲೆಯ ಶಿಕ್ಷಕರು ಸಕಲಕಲಾವಲ್ಲಭರೂ ಎಂದರೆ ತಪ್ಪಾಗದು. ನಾನು ಗಮನಿಸಿದಂತೆ ಶಾಲೆಯ ಬಹುತೇಕ ನಲಿಕಲಿ ಮಾದರಿ ಕೇಂದ್ರದ ಜೊತೆಗೆ ಎಲ್ಲಾ ಕೆಲಸಗಳಲ್ಲಿ ಯಾವಾಗಲೂ ಮುಂಚುಣಿಯಲ್ಲಿರುತ್ತಾರೆ. ಕ್ರೀಯಾಶೀಲತೆ ಅವರ ಆತ್ಮದಲ್ಲಿದೆ. ಶಾಲೆಗಾಗಿ, ಮಕ್ಕಳಿಗಾಗಿ ಏನನ್ನಾದರು ಮಾಡಬೇಕೆಂಬ ತುಡಿತವಿದೆ ಅವರ ಹೃದಯ ಮಕ್ಕಳಿಗಾಗಿ ಸಮುದಾಯದ ಶಾಲೆಯ ಅಭಿವೃದ್ಧಿಗಾಗಿ ಮಿಡಿಯುತ್ತದೆ. ಇವರು ಉಳಿದ ಶಿಕ್ಷಕರಿಗೆ ಪ್ರೇರಣೆಯಾಗಲಿ ಎಂಬುವುದು ನಮ್ಮ ಆಶೆಯ
-ಶ್ರೀ ಮಲ್ಲಪ್ಪ ಮ್ಯಾಗೇರಿ ಸಮೂಹ ಸಂಪನ್ಮೂಲ ವ್ಯಕ್ತಿಗಳು ಅಲ್ಲಿಪೂರ
ನಮ್ಮ ಶಾಲೆಯ ಶಿಕ್ಷಕರಲ್ಲಿ ಈರಣ್ಣ ಅವರು ಕ್ರೀಯಾಶೀಲರಾಗಿದ್ದು ನಲಿಕಲಿ, ಸ್ಕೌಟ್ಸ್ ಮತ್ತು ಗೈಡ್ಸ್ ಇತ್ಯಾದಿ ಚಟುಟಿಕೆಗಳನ್ನು ಮಾಡುತ್ತಿದ್ದಾರೆ. ಪಠ್ಯಗಳಾಚೆಗಿನ ವಿಷಯಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ಪ್ರತಿದಿನ ಸಮಯಪಾಲನೆ ಮಾಡುವುದರ ಜೊತೆಗೆ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
-ಶ್ರೀಮತಿ ಬಾಲಮ್ಮ ಮು.ಗು.
ಈರಣ್ಣ ಅವರನ್ನು ಕಳೆದ ನಾಲ್ಕು ವರ್ಷಗಳಿಂದ ನೋಡಿದ್ದೇನೆ. ಪ್ರತಿದಿನ ತಮ್ಮ ಪಾಠದಲ್ಲಿ ಹೊಸತನದ ಜೊತೆಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಶೆಯಗಳನ್ನು ಈಡೇರಿಸುತ್ತಾರೆ. ಮಕ್ಕಳ ಹಕ್ಕುಗಳನ್ನು ಕಾಯುವಲ್ಲಿ ಶ್ರಮಿಸುತ್ತಾರೆ. ತಮ್ಮ ವೃತ್ತಿ ಬದುಕಿನಲ್ಲಿ ಪ್ರಮಾಣಿಕತೆ ತಮ್ಮ ಉಸಿರಾಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನಲಿ-ಕಲಿ, ಶಾಲಾಕೈತೋಟ, ಸ್ಕೌಟ್ಸ್ ಮತ್ತು ಗೈಡ್ಸ್ ಇತ್ಯಾದಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇವರ ಶ್ರಮ ಸಾರ್ಥಕವಾಗಲು ಇನ್ನು ಹೆಚ್ಚಿನ ಪ್ರೋತ್ಸಾಹ ಬೇಕಾಗುತ್ತದೆ.
-ಕೆ.ಎಂ.ವಿಶ್ವನಾಥ ಮರತೂರ, ಶೈಕ್ಷಣಿಕ ಕಾರ್ಯಕರ್ತರು
ಈ ಕೆಲಸಗಳಿಗೆ ಶಾಲೆ, ಸಮುದಾಯದ ಸಹಕಾರ ಮರೆಯಲಾರೆ. ಅಲ್ಲಿಪೂರ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡುವ ಆಸೆಯಿದೆ ಸಮುದಾಯ ಸಹಕಾರ ಬೇಕು, ಶಿಕ್ಷಕರ ಪಾತ್ರದ ಜೊತೆಗೆ ಸಮುದಾಯ ಸಹಕರಿಸಬೇಕು ಕೆಲಸ ಮಾಡುವ ಶಿಕ್ಷಕರಿಗೆ ಬೆನನುತಟ್ಟಬೇಕು. ಪಾಲಕರಲ್ಲಿ ಜವಾಬ್ದಾರಿ ಬರಬೇಕು ದೇವರಿಗಾಗಿ ದೇಣಿಗೆ ಸಂಗ್ರಹಿಸಿದಂತೆ ಶಾಲೆಯ ಅಭಿವೃದ್ಧಿ ಕೆಲಸಕ್ಕೂ ದೇಣಿಗೆ ಸಂಗ್ರಹಿಸಿ ಕೆಲಸ ಮಾಡಬೇಕಾಗಿದೆ ಶಾಲೆಯೂ ದೇವಸ್ಥಾನಕ್ಕೆ ಸಮವೆಂದು ಭಾವಿಸಬೇಕಾಗಿದೆ ಆಗ ಮಾತ್ರ ಶಿಕ್ಷಣ ಮತ್ತು ಶಾಲೆ ಅಭಿವೃದ್ಧಿಯಾಗುತ್ತದೆ.
-ಶ್ರೀ ಈರಣ್ಣ ಭಜಂತ್ರಿ – ಸ.ಶಿ.
ಈರಣ್ಣ ಸರ್ ಅವರು ನಮ್ಮ ಶಾಲೆಗೆ ಬಂದಬಳಿಕ ಹೊಸ ಹೊಸ ವಿಶೇಷ ಕೆಲಸಗಳನ್ನು ಮಾಡಿದ್ದಾರೆ. ರಾಷ್ಟ್ರಗೀತೆ, ನಾಡಗೀತೆ, ಕವಾಯತ್ತು, ಶಿಸ್ತು, ಸಮಯಪಾಲನೆ ಕಲಿಸಿದ್ದಾರೆ. ಆತ್ಯಸ್ಥೈರ್ಯ ತುಂಬುತ್ತಾರೆ. ಪ್ರೀತಿಯಿಂದ ಕಾಣುತ್ತಾರೆ. ಇವರೆಂದರೆ ನಮಗೆ ತುಂಬಾ ಇಷ್ಟವಾಗುತ್ತಾರೆ.
-ಕುಮಾರಿ ಅಂಬಿಕಾ, ವಿದ್ಯಾರ್ಥಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.