ಮೂಡಬಿದಿರೆ: ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ತೆಂಕುತಿಟ್ಟಿನ ಆಯ್ದ 150 ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಗಾರವನ್ನು ಉದ್ಘಾಟಿಸಿ, ನಮ್ಮ ಜೀವನದಲ್ಲಿ ಎದುರಾಗುವ ಪ್ರತಿ ಕ್ಷಣವು ಕಲಿಕೆಗೆ ಅವಕಾಶ ಮಾಡಿಕೊಡುತ್ತದೆ, ಅದರ ಸಂಪೂರ್ಣ ಲಾಭವನ್ನು ಪಡೆದುಕೊಂಡಾಗ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಲ್ಲಾ ಒಳ್ಳೆಯ ವಿಚಾರಗಳೂ ನನ್ನ ಬಳಿಗೆ ಹರಿದು ಬರಲಿ ಎಂಬ ಮುಕ್ತ ಮನಸ್ಸು ನಮ್ಮಲ್ಲಿರಬೇಕು ಎಂದು ತಿಳಿಸಿದರು. ಭಗವಂತನಲ್ಲಿ ಪ್ರತಿ ಕ್ಷಣವೂ ತನ್ನ ಅಂತರಂಗ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ನೀಡು ಎಂದು ಪ್ರಾರ್ಥಿಸಬೇಕು. ಸೌಂದರ್ಯ ಪ್ರಜ್ಞೆ ಇರುವ ವ್ಯಕ್ತಿ ತನ್ನ ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯಲು ಸಾಧ್ಯ ಸಾಂಸ್ಕೃತಿಕವಾದ ಎಲ್ಲಾ ಆಯಾಮಗಳಲ್ಲಿಯೂ ದಾಖಲೀಕರಿಸುವ ಪ್ರವೃತ್ತಿ ಬೆಳೆಯಬೇಕು, ಹೆಚ್ಚು ಹೆಚ್ಚು ಯುವಕರನ್ನು ಈ ನಾಡಿನ ಶಾಸ್ತ್ರೀಯ ಕಲೆಗಳಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಈಗಿನ ಕಾಲಕ್ಕೆ ಹೊಂದುವ ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಇದರ ಪ್ರತಿಫಲವಾಗಿ ವಿಧ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದರು. ಕಲೆಯ ಅಭಿವೃದ್ಧಿಗೋಸ್ಕರ ದತ್ತು ಸ್ವೀಕಾರ, ಉತ್ತಮ ತರಬೇತುದಾರರಿಂದ ವಿದ್ಯಾರ್ಥಿ ಕಲಾವಿದರಿಗೆ ತರಬೇತಿ, ವಿದ್ಯಾರ್ಥಿ ಸಮೂಹದಿಂದ ನಾಡಿನಾದ್ಯಂತ ಕಲೆಯ ಪ್ರಸ್ತುತ ಪಡಿಸುವಿಕೆಯ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ಹರ್ಷ ವ್ಯಕ್ತ ಪಡಿಸಿದರು. ತೆಂಕುತಿಟ್ಟಿನ ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯ ಕನ್ನಡ ಸಾಹಿತ್ಯ ಲೋಕದ ಪರಿಧಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದೆ. ಈ ನಿಟ್ಟಿನಲ್ಲಿ ಮಣಿಕೃಷ್ಣ ಅಕಾಡೆಮಿ ಹೆಚ್ಚಿನ ಚಿಂತನೆ ಹಾಗೂ ಅದ್ಯಯನ ನಡೆಸುತ್ತಾ ಬಂದಿರುವುದು ರಚನಾತ್ಮಕ ಹಿನ್ನಲೆಯಲ್ಲಿ ಕಲೆಯನ್ನು ಕಟ್ಟಲು ಸಾಧ್ಯವಾಗಿದೆ ಎಂದರು.
ಕಿನ್ನಿಗೋಳಿ ಡಿ.ಎಸ್. ಶ್ರೀಧರ್ ರವರ ಮಾರ್ಗದರ್ಶನದಲ್ಲಿ, ಬಲಿಪ ಶಿವಪ್ರಕಾಶ್ ಹಾಗೂ ಪಿ.ನಿತ್ಯಾನಂದ ರಾವ್ ಭಾಗವತರಾಗಿ, ಕಟೀಲು ಮುರುಳೀಧರ್ ಭಟ್ ಮದ್ದಳೆಯಲ್ಲಿ ಸಹಕರಿಸದ್ದಾರೆ. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ದೀವಿತ್ ಶ್ರೀಧರ್ ಕೋಟ್ಯಾನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.