ಮಂಗಳೂರು : ಅಂತಃಕಲಹದ ಗೂಡಾಗಿದ್ದ ಕಾಂಗ್ರೇಸ್ನ ಉಸ್ತುವಾರಿ ದಿಗ್ವಿಜಯ್ ಸಿಂಗ್ರವರ ಉದ್ಧಟತನದ ಪರಿಣಾಮಗಳನ್ನು ನಿಯಂತ್ರಿಸಲು ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತನ್ನು ರೂಪಿಸಲು ರಾಜ್ಯದ ಕಾಂಗ್ರೇಸ್ ಉಸ್ತುವಾರಿಯಾಗಿ ನೇಮಕವಾಗಿರುವ ಮೂಲತಃ ಕಮ್ಯೂನಿಸ್ಟ್ ಸಿದ್ದಾಂತವಾದಿ ಶ್ರೀ ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೇಸ್ ನಾಯಕರುಗಳ ಮೂಲಕ ಶೈಕ್ಷಣಿಕ ಸಂಸ್ಥೆಗಳ ಕುರಿತಾಗಿ ವರದಿ ಸಂಗ್ರಹಿಸುತ್ತಿರುವುದು ಒಂದು ಆಘಾತಕಾರಿ ವಿಚಾರವಾಗಿದೆ.
ರಾಜ್ಯ ಕಾಂಗ್ರೇಸ್ ಉಸ್ತುವಾರಿಯಾಗಿರುವ ಶ್ರೀ ವೇಣುಗೋಪಾಲ್ ಅವರು ರಾಜ್ಯದ ಕಾಂಗ್ರೇಸ್ ಉಸ್ತುವಾರಿ ನಡೆಸುವ ಬದಲಿಗೆ ಅನಗತ್ಯವಾಗಿ ಶೈಕ್ಷಣಿಕ ಸಂಸ್ಥೆಗಳ ಮಾಹಿತಿ ಸಂಗ್ರಹ ಮಾಡುತ್ತಿರುವುದು ಅವರ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ಮೂಲತಃ ಕಮ್ಯೂನಿಸ್ಟ್ ಸಿದ್ಧಾಂತವಾದಿಯಾದ ಶ್ರೀ ವೇಣುಗೋಪಾಲ್ ಅವರು ಕಮ್ಯೂನಿಸ್ಟ್ ಪ್ರೇರಿತ ಒಂದು ಸಣ್ಣ ವರ್ಗದವರು ನಡೆಸುತ್ತಿರುವ ಅರಾಷ್ಟ್ರೀಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಒಂದು ಷಡ್ಯಂತ್ರ ಎಂದು ಶೈಕ್ಷಣಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿರುವುದು ಕಟು ವಾಸ್ತವ.
ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೇಸ್ನ ಉಪಾಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರು ಕಾಲೇಜುಗಳ ಭೇಟಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾಂಗ್ರೇಸ್ಗೆ ಇರಿಸು ಮುರಿಸು ಉಂಟು ಮಾಡಿದ್ದನ್ನು ವೇಣುಗೋಪಾಲ್ ರವರಿಗೆ ನೆನಪಿಸುತ್ತೇನೆ. ರಾಜ್ಯದ ಹಾಗೂ ರಾಷ್ಟ್ರದ ಶೈಕ್ಷಣಿಕ ರಂಗದಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರತಿಬಿಂಬಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯವರರಾದ ಶ್ರೀ ವಿನಯ ಬಿದಿರೆಯವರು ಶ್ರೀ ವೇಣುಗೋಪಾಲ್ ಅವರಿಗೆ ಎಸದಿರುವ ಸವಾಲನ್ನು ಕಾಂಗ್ರೇಸ್ ಉಸ್ತುವಾರಿ ಸ್ವೀಕರಿಸಲಿ.
ಶ್ರೀ ವೇಣುಗೋಪಾಲ್ ಅವರು ಕೇವಲ ರಾಜ್ಯದ ಕಾಂಗ್ರೇಸ್ ಉಸ್ತುವಾರಿ, ಅವರು ಆ ನಿಟ್ಟಿನಲ್ಲಿ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಪ್ರಯತ್ನಿಸಲಿ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅನಗತ್ಯ ಮೂಗು ತೂರಿಸಿ ಗೊಂದಲ ಸೃಷ್ಟಿ ಮಾಡಿದಲ್ಲಿ ಅಥವಾ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳ ಮೇಲೆ ರಾಜಕೀಯ ಪ್ರಚೋದನೆ ಮಾಡುವುದನ್ನು ಹಾಗೂ ರಾಜಕೀಯ ಅಧಿಕಾರದ ಮೂಲಕ ಶಿಕ್ಷಕ ಶಿಕ್ಷಕೇತರರ ಸಿಬ್ಬಂದಿಗಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕಟುವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.