ಬೆಳ್ತಂಗಡಿ : ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡ ವತಿಯಿಂದ ಎಂಡೋ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ದಿನಾಂಕ 27-5-2017 ರಂದು ಕೊಕ್ಕಡ ಅಟೋರಿಕ್ಷಾ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕದ “ಭೋಪಾಲ ದುರಂತ” ಎಂದೇ ಹೇಳಲಾಗುವ ಎಂಡೋ ದುರಂತ ಬಹಳ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು, ಅದರಲ್ಲೂ ಬಹಳ ಮುಖ್ಯವಾಗಿ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕಿನ ಜನರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ. ಎಂಡೋಸಲ್ಫಾನ್ ಎಂಬ ವಿಷದಿಂದ ಆದ ದುಷ್ಪರಿಣಾಮಗಳ ಬಗ್ಗೆ, ಎಂಡೊ ಸಂತ್ರಸ್ತರ ಪುನರ್ವಸತಿ ಬಗ್ಗೆ ಹೋರಾಟ ನಡೆಸುತ್ತಾ ಬಂದಿದ್ದರೂ ಸರಕಾರ ಎಂಡೋ ಸಂತ್ರಸ್ತರ ಕುರಿತಾಗಿ ಕಣ್ಣು, ಕಿವಿ, ಬಾಯಿ ಮುಚ್ಚಿ ತಮಗೂ ಈ ಸರಕಾರ ನಿರ್ಮಿತ ದುರಂತಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನುವ ರೀತಿ ವರ್ತಿಸುತ್ತಿದೆ.
ದುರ್ಬಲರು, ಅಶಕ್ತರು, ಅಸ್ವಸ್ಥರು, ಅಸಂಘಟಿತರೂ ಆಗಿರುವ ಎಂಡೋ ಸಂತ್ರಸ್ತರೇ ತಮ್ಮ ನ್ಯಾಯಕ್ಕಾಗಿ ಹೋರಾಡುತ್ತಿರುವುದು ಸಂತ್ರಸ್ತರ ದೌರ್ಭಾಗ್ಯವಾಗಿದೆ. ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡ ಧರ್ಮಾತೀತ, ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಹೋರಾಟವನ್ನು ನಡೆಸಲು ಮುಂದಾಗಿದೆ. ಪ್ರಜ್ಞಾವಂತ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಬೆಂಬಲಿಸಿ ಎಂಡೋ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಹಾಯ ಮಾಡಬೇಕು ಹಾಗೂ ಎಂಡೋ ಸಂತ್ರಸ್ತರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದೇ ಎಂಡೋ ಹೋರಾಟ ಸಮಿತಿಯ ಮನವಿ.
ಈ ಪ್ರತಿಭಟನಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಅವರು ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡದ ಪದಾಧಿಕಾರಿಗಳು, ಕಾರ್ಯಕರ್ತರು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಕೋಟಾ ಶ್ರೀನಿವಾಸ್ ಪೂಜಾರಿ, ಶರಣ್ ಪಂಪ್ವೆಲ್ ಸೇರಿದಂತೆ ಹಲವಾರು ಗಣ್ಯರು, ಎಂಡೋ ಸಂತ್ರಸ್ತರು ಪಾಲ್ಗೊಂಡಿದ್ದರು. ಪ್ರತಿಭಟನೆಗೆ ಹಲವಾರು ಸಂಘ, ಸಂಸ್ಥೆಗಳು, ಸಂಘಟನೆಗಳು ಬೆಂಬಲ ಸೂಚಿಸಿವೆ.
ಟ್ವಿಟರ್ ಮತ್ತು ಪೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಸರಕಾರದ ಮತ್ತು ಮಾಧ್ಯಮಗಳ ಗಮನಕ್ಕೆ ಎಂಡೋ ಪೀಡಿತರ ನೋವು ತಿಳಿಯಲಿ ಎಂದು #Justice4EndoTragedy ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ಎಂಡೋ ಸಂತ್ರಸ್ತರಿಗೆ ಬೆಂಬಲ ಸೂಚಿಸಲಾಗುತ್ತಿದೆ. ಈ ಮೂಲಕ ಎಂಡೋ ಪೀಡಿತರ ನೋವಿಗೆ ಧ್ವನಿಯಾಗಿ ಅವರ ಕಣ್ಣೀರನ್ನು ಒರೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.