ಮೇ 13-14 (ಶನಿವಾರ-ಭಾನುವಾರ) ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ
ಧಾರವಾಡ : ಚುಮು ಚುಮು ಬೆಳಕು ಹರಿಯುತ್ತಿದ್ದ ಹೊತ್ತು; ಮಂಜು ಮುಸುಕಿದ ವಾತಾವರಣ. ಆದಾಗತಾನೇ ಗೂಡಿನಿಂದ ಎದ್ದು ಬಂದು ಮೈ ಮುರಿಯುತ್ತ.. ಸುಪ್ರಭಾತದ ಶೈಲಿಯಲ್ಲಿ ‘ಎದ್ದೀರಾ..?’ ಎಂದು, ತಮ್ಮವರನ್ನು ಪ್ರಶ್ನಿಸುವಂತೆ ಕಲರವ ಎಬ್ಬಿಸಿದ್ದವು ಪಕ್ಷಿಗಳು!
ಧಾರವಾಡದಿಂದ ಹಳಿಯಾಳ ರಸ್ತೆಯ ಮೇಲೆ ಸುಮಾರು 15 ಕಿ.ಮೀ. ದೂರದ ಹಳ್ಳಿಗೇರಿಯಲ್ಲಿ ಇಂದು, ವಲಸೆ ಹಕ್ಕಿಗಳ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ನಗರದ ನೇಚರ್ ರಿಸರ್ಚ್ ಸೆಂಟರ್, ನೇಚರ್ ಫಸ್ಟ್ ಇಕೋ ವಿಲೇಜ್ನಲ್ಲಿ ಆಯೋಜಿಸಿದ್ದ, `ಒಂದು ಮರ ನೂರು ಸ್ವರ’ ಸ್ಥಳೀಯ ಪಕ್ಷಿಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಕಣ್ಣು ತಿಕ್ಕಿಕೊಳ್ಳುತ್ತ, ಎವೆಇಕ್ಕದೇ ತಲೆ ಎತ್ತಿ ಅವರತ್ತ ನೋಡುತ್ತಿದ್ದ ಮಕ್ಕಳನ್ನು ಅಷ್ಟೇ ಕುತೂಹಲದಿಂದ ರೆಕ್ಕೆಯ ಮಿತ್ರರು ಗಮನಿಸಿದರು. `ಎಲ್ಲಿ.. ನನಗ ಕಾಣಸ್ವಾಲ್ತು..’ ಮಕ್ಕಳು ಅಂದಾಗ, ಫಕ್ಕನೇ ನಕ್ಕಂತೆ, ತಮ್ಮ ಇರುವಿಕೆ ಸಾಬೀತು ಪಡಿಸಲು ರೆಕ್ಕೆ ಬಿಚ್ಚಿ ಹಾರಿದ ವೇಳೆ.. ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ.
ಹಕ್ಕಿಗಳ ಲೋಕದಲಿ ರೆಕ್ಕೆ ಮುಡುವುದೆನಗೆ; ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ ಎಂಬ ಕುವೆಂಪು ಅವರ ಕವಿ ವಾಣಿಯನ್ನು ಅನುಭವಿಸುವಂತೆ ಮಾಡಿತ್ತು.. ಪಕ್ಷಿ ವೀಕ್ಷಣೆಯ ಸಹಲ್.
ಕೆಮ್ಮಂಡೆ ಗಿಳಿ (ಪ್ಲಮ್ ಹೆಡೆಡ್ ಪ್ಯಾರಾಕೀಟ್), ರಾಮ ಗಿಳಿ (ಲಾರ್ಜ್ ಇಂಡಿಯನ್ ಪ್ಯಾರಾಕೀಟ್), ಚಿಟ್ಟು ಗಿಳಿ (ಲಾರಿ ಕೀಟ್), ಚಿಟ್ಟು ಗುಟುರು (ಕಾಪರ್ ಸ್ಮಿತ್), ಚಿಟ್ಟು ಮಡಿವಾಳ (ಇಂಡಿಯನ್ ರಾಬಿನ್), ಮಡಿವಾಳ (ಮ್ಯಾಗ್ ಪೈ ರಾಬಿನ್), ಕೆಮ್ಮಂಡೆ ಗಣಿಗಾರ್ಲ ಹಕ್ಕಿ (ಸ್ಮಾಲ್ ಗ್ರೀನ್ ಬೀ ಈಟರ್), ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗ್ ಫಿಷರ್), ನೆಲ ಕಟುಕ (ಹುಪೋ), ಕೆಮ್ಮೀಸೆ ಪಿಕಳಾರ (ರೆಡ್ ವಿಸ್ಕರ್ಡ್ ಬುಲ್ಬುಲ್), ಕೆಂಪು ಬಾಲದ ಪಿಕಳಾರ (ರೆಡ್ ವೆಂಟೆಡ್ ಬುಲ್ಬುಲ್), ಬಿಳಿ ಕುಂಡೆಕುಸ್ಕ (ವೈಟ್ ವ್ಯಾಗ್ಟೇಲ್), ಚುಕ್ಕೆ ಮುನಿಯ (ಸ್ಪಾಟೆಡ್ ಮುನಿಯ), ಕಿರು ಗುಲಗಂಜಿ (ಸ್ಮಾಲ್ ಸ್ಕಾರ್ಲೆಟ್ ಮಿನಿವೆಟ್), ಬಿಳಿ ಹುಬ್ಬಿನ ಬೀಸಣಿಗೆ ಬಾಲ (ವೈಟ್ ಸ್ಪಾಟೆಡ್ ಫ್ಯಾನ್ಟೇಲ್ ಫ್ಲೈ ಕ್ಯಾಚರ್), ಹಳದಿ ಹೂ ಗುಬ್ಬಿ (ಪರ್ಪಲ್ ರಂಪ್ಡ್ ಸನ್ಬರ್ಡ್), ಕಾಜಾಣ (ರ್ಯಾಕೆಟ್ ಟೇಲ್ಡ್ ಡ್ರೋಂಗೋ), ಭರದ್ವಾಜ (ಬ್ಲ್ಯಾಕ್ ಡ್ರೋಂಗೋ), ಮೈನಾ ಹಕ್ಕಿ (ಇಂಡಿಯನ್ ಮೈನಾ), ಗೀಜಗ (ಬಾಯಾ ವೀವರ್), ಕದುಗನ ಹಕ್ಕಿ (ಇಂಡಿಯನ್ ಟ್ರೀ ಪಾಯ್), ಕಾಡು ಕಾಗೆ (ಜಂಗಲ್ ಕ್ರೋ), ನವಿಲು (ಕಾಮನ್ ಪೀ ಫೌಲ್), ಗೌಜಿಗ ಹಕ್ಕಿ (ಗ್ರೇ ಪಾಟ್ರಿಡ್ಜ್), ಹುಂಡು ಕೋಳಿ (ವೈಟ್ ಬ್ರೆಸ್ಟೆಡ್ ವಾಟರ್ ಹೆನ್), ಮಣಿ ಹೊರಸಲು (ರೆಡ್ ಟರ್ಟಲ್ ಡೌ), ಮನಿಯಾಡಲು (ಗ್ರೀನ್ ಪಿಜನ್), ಬೂದು ಮಂಗಡ್ಡೆ ಹಕ್ಕಿ (ಕಾಮನ್ ಗ್ರೇ ಹಾರ್ನ್ಬಿಲ್), ಕೋಗಿಲೆ (ಕೋಯಲ್.. ಕಕ್ಕೂ), ಕೆಂಬೂತ (ಕ್ರೋ ಪೆಸೆಂಟ್, ಕಕೌಲ್), ಗೋಲ್ಡನ್ ಓರಿಯೋಲ್, ಪ್ಯಾರಾಡೈಸ್ ಫ್ಲೈ ಕ್ಯಾಚರ್ ಹೀಗೆ 35ಕ್ಕೂ ಹೆಚ್ಚು ಸ್ಥಳೀಯ ಪಕ್ಷಿಗಳನ್ನು ತಜ್ಞರ ಸಹಾಯದಿಂದ ಬೈನ್ಯಾಕುಲರ್ಗಳ ಮೂಲಕ ಮಕ್ಕಳು ಗುರುತಿಸಿ, ಅವುಗಳ ಬದುಕು-ಬವಣೆ ಅರಿತುಕೊಂಡರು.
ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘದ ಎಸ್.ಎಂ.ಪಾಟೀಲ, ಪವನ್ ಮಿಸ್ಕಿನ್, ಹಾಗೂ ನೇಚರ್ ರಿಸರ್ಚ್ ಸೆಂಟರ್ನ ಹರ್ಷವರ್ಧನ್ ಶೀಲವಂತ, ಪ್ರಕಾಶ ಗೌಡರ 30ಕ್ಕೂ ಹೆಚ್ಚು ಮಕ್ಕಳ ಮೂರು ತಂಡಗಳನ್ನು ಮುನ್ನಡೆಸಿದರು.
ಅರಣ್ಯ, ತನ್ಮೂಲಕ ಕೆರೆಗಳು, ವಲಸೆ ಹಕ್ಕಿಗಳ ಕಾರಿಡಾರ್ಗುಂಟ ಪರಿಸರ ಸಂರಕ್ಷಿಸುವ ತುರ್ತು, ವಲಸೆ ಹಕ್ಕಿಗಳ ಭವಿಷ್ಯದಲ್ಲಿಯೇ ನಮ್ಮ ಭವಿಷ್ಯ ಅಡಗಿರುವ ಮಹತ್ವವನ್ನು ತಜ್ಞರು ಮಕ್ಕಳಿಗೆ ವಿವರಿಸಿದರು. ಬಿರು ಬೇಸಿಗೆಯ ಹಿನ್ನೆಲೆ, ಉತ್ತರದಲ್ಲಿ ಚಳಿಗಾಲ ಮುಗಿಯುತ್ತ ಬಂದ ಕಾರಣ ಹಾಗೂ ಒಣಗಿದ ಕೆರೆಕುಂಟೆಗಳ ದೆಸೆಯಿಂದ ಈ ಬಾರಿ ಬಹುತೇಕ ವಲಸೆ ಹಕ್ಕಿಗಳು ತುಸು ಮುಂಚೆಯೇ ತಮ್ಮ ಮರಳಿ ಪ್ರವಾಸ ಆರಂಭಿಸಿದ್ದರಿಂದ, ಒಂದೇ ಅರಳಿ ಮರದಲ್ಲಿ ಸ್ಥಳೀಯ ಪಕ್ಷಿಗಳ ವೀಕ್ಷಣೆಯ ಮೂಲಕ ಮಹತ್ವದ ದಿನಾಚರಣೆ ಕೈಗೊಳ್ಳಲಾಯಿತು.
ಈ ತಿಂಗಳ 13-14 (ಶನಿವಾರ-ಭಾನುವಾರ) 2017ನೇ ಸಾಲಿನ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ. ಆಚರಣೆಯ ಧ್ಯೇಯ- ‘ಅವುಗಳ ಭವಿಷ್ಯವೇ ನಮ್ಮ ಭವಿಷ್ಯ’. ‘ವನ್ಯಜೀವಿ ಹಾಗೂ ಮನುಷ್ಯರಿಗಾಗಿ ಸುಸ್ಥಿರ ಅಭಿವೃದ್ಧಿ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ದಿನವನ್ನು ಬಳಸಿಕೊಳ್ಳಲಾಗುತ್ತಿದೆ. ಸಂಪನ್ಮೂಲಗಳ ಲಭ್ಯತೆ ಆಧರಿಸಿ ಬಳಕೆಯ ಮಿತಿ, ಮಾನವ ಮತ್ತು ವಲಸೆ ಹಕ್ಕಿಗಳ ಮಧ್ಯದ ಆಂತರಿಕ ಅವಲಂಬನೆ ಅರ್ಥ ಮಾಡಿಕೊಳ್ಳುವ ಪ್ರಯತ್ನ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ªಹಣೆ ಜೊತೆಗೆ ವಲಸೆ ಪಕ್ಷಿಗಳ ಸಂರಕ್ಷಣೆ.. ಹೀಗೆ, ಮುಂದಿನ ಪೀಳಿಗೆಯ ಮನುಷ್ಯರ ರಕ್ಷಣೆಗಾಗಿ ಪೂರ್ವ ನಿರ್ಧಾರಿತ ಹೆಜ್ಜೆ ಈ ಬಾರಿಯ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ವಿಶೇಷ.
ವರದಿ : ಹರ್ಷವರ್ಧನ್ ವಿ.ಶೀಲವಂತ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.