ಮೇ 13- 14, ಅಂತಾರಾಷ್ಟ್ರೀಯ ವಲಸೆ ಹಕ್ಕಿಗಳ ದಿನ / ಆಚರಣೆ ಧ್ಯೇಯ
ಧಾರವಾಡ: ಧಾರವಾಡ ಜಿಲ್ಲೆಯ 5 ತಾಲೂಕುಗಳ ಬಹುತೇಕ ದೊಡ್ಡ ಕೆರೆಗಳು ಸಂಪೂರ್ಣ ಬತ್ತಿವೆ. ಸಣ್ಣ ಕೆರೆಗಳ ಅಂಗಳ ಬಿರಿದು, ಭೂಮಿ ಬಿಸಿಯುಸಿರು ಬಿಡುತ್ತಿರುವಂತೆ ಕಾಣುತ್ತಿದೆ. ಸತತ ಬಿಸಿಲು ಆವರಿಸಿ, ಬೆಂಕಿಗೇ ಜ್ವರ ಬಂದಂತಹ ಸ್ಥತಿ!
ಕಲಘಟಗಿ, ಧಾರವಾಡ, ಕುಂದಗೋಳ ಭಾಗದ ಅಳಿದುಳಿದ ಗುಡ್ಡ-ತಟಾಕುಗಳ ಮಧ್ಯದ ಬೊಗಸೆ ಗುಂಡಿಗಳಲ್ಲಿ ಜೀವ ಹಿಡಿದಿವೆ ವಲಸೆ ಹಕ್ಕಿಗಳಾದ ಬ್ಲ್ಯಾಕ್ ಟೇಲ್ಡ್ ಗಾಡವಿಟ್, ಅಮೂರ್ ಫಾಲ್ಕನ್, ಗಾರ್ಗ್ನೇ, ಎಲ್ಲೋ ಬ್ರೆಸ್ಟೆಡ್ ಬಂಟಿಂಗ್, ರೆಡ್ ನಾಟ್, ಸ್ಪೂನ್ಬಿಲ್ಡ್ ಸ್ಯಾಂಡ್ಪೈಪರ್, ನಾರ್ದ್ರ್ನ್ ಪಿನ್ಟೇಲ್, ಕೋಂಬ್ ಡಕ್, ಸ್ಪಾಟ್ ಬಿಲ್ಡ್ ಡಕ್, ಯುರೇಷಿಯನ್ ಸ್ಯಾಂಡ್ ಪೈಪರ್, ಬಾರ್ನ್ ಸ್ವಾಲ್ಲೋ, ಪೇಂಟೆಡ್ ಸ್ಟಾರ್ಕ್, ಗ್ರೇಟರ್ ಫ್ಲೆಮಿಂಗೋ, ಫ್ಲೆಮಿಂಗೋ, ಪೆಲಿಕನ್, ಓಪನ್ ಬಿಲ್ಡ್ ಸ್ಟಾರ್ಕ್, ಸ್ಪೂನ್ ಬಿಲ್, ಬ್ಲ್ಯಾಕ್-ವೈಟ್ ಐಬಿಸ್ ಕುಟುಂಬ. ಹದಿಮೂರು ವಿವಿಧ ಪ್ರಬೇಧಗಳ ಪಕ್ಷಿಗಳು ವಲಸೆ ಬಂದು, ಸಂತಾನಾಭಿವೃದ್ಧಿಯಲ್ಲಿ ತೊಡಗಿ ನಂತರ ಹಾರಿ ಹೋಗುತ್ತವೆ ಎಂಬ ಮಾಹಿತಿ ಪಕ್ಷಿ ಪ್ರಿಯರ ಸ್ವಯಂ ಗಣತಿ ವೇಳೆ ಲಭ್ಯವಾಗಿದೆ.
ಈ ತಿಂಗಳ 13-14 (ಶನಿವಾರ-ಭಾನುವಾರ) 2017ನೇ ಸಾಲಿನ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ. ಆಚರಣೆಯ ಧ್ಯೇಯ- ‘ಅವುಗಳ ಭವಿಷ್ಯವೇ ನಮ್ಮ ಭವಿಷ್ಯ’.
’ವನ್ಯಜೀವಿ ಹಾಗೂ ಮನುಷ್ಯರಿಗಾಗಿ ಸುಸ್ಥಿರ ಅಭಿವೃದ್ಧಿ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ದಿನವನ್ನು ಬಳಸಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದ ಪಕ್ಷಿ ಪ್ರಿಯರು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ. ನೇಚರ್ ರಿಸರ್ಚ್ ಸೆಂಟರ್ ಹಕ್ಕಿಯ ಮಿತ್ರ ಪ್ರತಿ ಕಾಳಜಿ ದರ್ಶಿಸುವ ಜನಾಂದೋಲನಕ್ಕೆ ಮುಂದಾಳತ್ವ ವಹಿಸಿದೆ.
ಸಂಪನ್ಮೂಲಗಳ ಲಭ್ಯತೆ ಆಧರಿಸಿ ಬಳಕೆಯ ಮಿತಿ, ಮಾನವ ಮತ್ತು ವಲಸೆ ಹಕ್ಕಿಗಳ ಮಧ್ಯದ ಆಂತರಿಕ ಅವಲಂಬನೆ ಅರ್ಥ ಮಾಡಿಕೊಳ್ಳುವ ಪ್ರಯತ್ನ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿಹಣೆ ಜೊತೆಗೆ ವಲಸೆ ಪಕ್ಷಿಗಳ ಸಂರಕ್ಷಣೆ.. ಹೀಗೆ, ಮುಂದಿ ಪೀಳಿಗೆಯ ಮನುಷ್ಯರ ರಕ್ಷಣೆಗಾಗಿ ಪೂರ್ವ ನಿರ್ಧಾರಿತ ಹೆಜ್ಜೆ ಈ ಬಾರಿಯ ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆಯ ವಿಶೇಷ.
ರಂಗನ ತಿಟ್ಟಿಗೆ ಬಂದವರಿಗೆ ಎದ್ದು ಕಾಣುವುದು ವಂಶಾಭಿವೃದ್ಧಿಗೆ ಇಲ್ಲಿಗೆ ಬರುವ ಪಕ್ಷಿಗಳು. ಆದರೆ ನನ್ನಂತಹ ಪರಿಸರದ ವಿದ್ಯಾರ್ಥಿಗೆ ಧಾರವಾಡ ಹಾಗೂ ಜಿಲೆಯಾದ್ಯಂತ ಇರುವ ಕೆರೆಗಳಲ್ಲಿ ಹಾಗೂ ಸುತ್ತಮುತ್ತಲಿನ ಹೊಲಗದ್ದೆಗಳಲ್ಲಿ, ತೋಟಗಳಲ್ಲಿ ಒಂದೇ ದಿನದಲ್ಲಿ 35-40 ವಿವಿಧ ಪ್ರಬೇಧದ ವಲಸೆ ಹಕ್ಕಿಗಳನ್ನು ಗುರುತಿಸುವುದು ಈ ಮೊದಲು ಸಾಧ್ಯವಾಗುತ್ತಿತ್ತು. ಕಾರಣ ಬೇಸಿಗೆಯೂ ಆಗ ಹಿತಕರವಾಗಿರುತ್ತಿತ್ತು. ಮಳೆ ಆಹ್ಲಾದಕರವಾಗಿರುತ್ತಿತ್ತು. ಕೆರೆ-ಕುಂಟೆ, ಸುತ್ತಲಿನ ಅರಣ್ಯ ಸಂತಸ ಇಮ್ಮಡಿಸುವಂತೆ ಜೀವನಪ್ರೀತಿ ತುಂಬುತ್ತಿತ್ತು.
ಉದಾಹರಣೆಗೆ, ರಂಗನತಿಟ್ಟು ಪಕ್ಷಿಧಾಮದಲ್ಲಿ ತಂದೆ-ತಾಯಿ ಹಕ್ಕಿ, ಮೂರು ಮರಿಗಳಿರುವ 2000 ಪಕ್ಷಿಗಳ ಕುಟುಂಬಕ್ಕೆ ದಿನವೊಂದಕ್ಕೆ 40 ರಿಂದ 60 ಕ್ವಿಂಟಲ್ ಗಳಷ್ಟು ಮೀನುಗಳು ಆಹಾರವಾಗಿ ಬೇಕು. ಬಣ್ಣದ ನೀರ್ಕೋಳಿಗಳ ಸಂಖ್ಯೆಯಂತೂ ಇವುಗಳಿಗಿಂತ ಎರಡು-ಮೂರು ಪಟ್ಟು ಹೆಚ್ಚಾಗಿದ್ದು, ನಮ್ಮ ಭಾಗದಲ್ಲಿ ನಿತ್ಯವೂ ಕಾಣಸಿಗುವ ಸಮೂಹ ಅವುಗಳದ್ದು. ಅವುಗಳಿಗೂ ಮೀನೇ ಪ್ರಮುಖ ಆಹಾರ. ಈಗ ನೀವೇ ಊಹಿಸಿ ಅವುಗಳೊಟ್ಟಿಗೆ ಬಕ ಪಕ್ಷಿ, ಹೆಜ್ಜಾರ್ಲೆ, ಬೆಳ್ಳಕ್ಕಿ, ಟಿಟ್ಟಿಭ ಹೀಗೆ ಎಲ್ಲವನ್ನೂ ಸೇರಿಸುವುದಾದರೆ ಪ್ರತಿ ದಿನ ಈ ಹಕ್ಕಿಗಳಿಗೆ ಬೇಕಾದ ಮೀನಿನ ಪ್ರಮಾಣ ೫೦೦ ಕ್ವಿಂಟಲ್ ಗಳಿಗಿಂತಲೂ ಹೆಚ್ಚು! ಅವುಗಳ ದೈನಂದಿನ ಈ ಬೇಡಿಕೆಯನ್ನು ಪೂರೈಸುವಷ್ಟು ನಮ್ಮ ಕೆರೆಗಳು ಸಮೃದ್ಧವಾಗಿದ್ದವು ಎಂದರೆ?
ನದಿಗಳು ಹರಿದ ಇಕ್ಕೆಲಗಳಲ್ಲಿ ಹೇಗೆ ಹಸಿರು ಪಲ್ಲವಿಸಿತ್ತು ಎಂಬುದು ಇಂದಿಗೆ ಅಧ್ಯಯನ ಯೋಗ್ಯ ವಿಷಯ. ಈಗಿನಂತೆ, ಕೇವಲ 1-2 ದಶಕಗಳ ಕೆಳಗೆ ನದಿ, ಮುಖಜ ಭೂಮಿ, ಒಳ ಹರಿವಿನ ಪ್ರದೇಶ ಇನ್ನೂ ಕೊಚ್ಚೆ ಗುಂಡಿಯಂತಾಗಿರಲಿಲ್ಲ. ರಂಗನತಿಟ್ಟು ಪಕ್ಷಿ ಧಾಮದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ರಂಗನತಿಟ್ಟು ದಾಟಿ, ಶ್ರೀರಂಗಪಟ್ಟಣವನ್ನು ಎರಡು ಕವಲಾಗಿ ಒಡೆದು ಮುಂದೆ ಸಾಗುವ ಕಾವೇರಿಯ ಮುಂದಿನ 40 ರಿಂದ 50 ಕಿ.ಮೀ.ಗಳ ಹಾದಿ..ಈ ದಾರಿಯಲ್ಲಿ ತಿ. ನರಸೀಪುರದ ಬಳಿ ಕಬಿನಿ, ಅಲ್ಲಿಂದ ಮುಂದೆ ಸುವರ್ಣಾವತಿ ಹಾಗೂ ಗುಂಡಾಲ್ ನದಿಗಳು ಕಾವೇರಿ ಸೇರುತ್ತವೆ. ಈಶಾನ್ಯ ದಿಕ್ಕಿನಲ್ಲಿ ತಿರುಗುವ ಕಾವೇರಿ ನದಿ ಶಿವನಸಮುದ್ರದ ಬಳಿ ಗಗನಚುಕ್ಕಿ ಭರಚುಕ್ಕಿ ಜಲಪಾತಗಳಾಗಿ ಭೋರ್ಗರೆಯುತ್ತ ನೆಗೆಯುತ್ತವೆ. ಈ ಕೊರಕಲಿನ ಹಾದಿಯಲ್ಲಿ ಭೀಮೇಶ್ವರ, ಮುತ್ತತ್ತಿ ಸಂಗಮಗಳ ನಡುವೆ ವಿಶಿಷ್ಠ ಜಲ ಪರಿಸರ ರೂಪುಗೊಂಡಿದೆ.
ಭೀಮೇಶ್ವರ ಹಾಗೂ ಮುತ್ತತ್ತಿ ಮತ್ತು ಸಂಗಮಗಳಿಗೆ ಅಮೇರಿಕ, ಬ್ರಿಟನ್, ಸ್ವೀಡನ್, ಸಿಂಗಾಪುರ, ಸ್ಕಾಟಲ್ಯಾಂಡ್, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ವರ್ಷವರ್ಷವೂ ತಂಡೋಪತಂಡವಾಗಿ ಬಂದು ಬಿಡಾರ ಹೂಡುತ್ತವೆ. ಈ ಬಾರಿಯೂ ಬಂದಿಳಿದಿವೆ. ಇದಕ್ಕೆ ಕಾರಣವೆಂದರೆ ಕಾವೇರಿಯ ಈ ಭಾಗಗಳಲ್ಲಿ ವಿಶೇಷವಾಗಿ ಮಶೀರ್ ಮೀನುಗಳು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಬದುಕುತ್ತಿರುವುದು. ಆದರೆ, ಈ ಬಾರಿ ವಲಸೆ ಹಕ್ಕಿಗಳ ಸಂಖ್ಯೆ ಮಾತ್ರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎನ್ನುತ್ತಾರೆ ಸ್ಥಳೀಕರು.
ಭೂಮಿಯ ಮೇಲೆ ಬದುಕಿರುವ ಯಾವ ಹಕ್ಕಿಯೂ ಉಪವಾಸ ಸಾಯುವುದಿಲ್ಲ ಎಂದಾದರೆ ನಮ್ಮ ಗಮನ ಸೆಳೆಯದ ಕೆರೆ-ತೊರೆ, ಗಮನದಲ್ಲಿರುವ ನದಿಗಳಲ್ಲಿ ಹಬ್ಬಿಕೊಂಡಿರುವ ತರಿ ಭೂಮಿಯ ಅಗಾಧವಾದ ಉತ್ಪಾದನಾ ಸಾಮರ್ಥ್ಯದ ತಿಳಿವಳಿಕೆ ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದ್ದು.
ನಗರಗಳನ್ನು ವಿಸ್ತರಿಸುವ ಸಂಸ್ಥೆಗಳಿಗೆ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸು; ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ. ಇನ್ನು ಕಾರ್ಖಾನೆ ಆಡಳಿತಗಾರರದ್ದು ತಮ್ಮಿಂದ ಹೊರಬಂದ ವಿಷಯುಕ್ತ ರಾಸಾಯನಿಕಗಳನ್ನು ಸದಿಲ್ಲದೇ ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಹೊಂಚು; ಕೆರೆಯ ಸುತ್ತಲಿನ ದೊಡ್ಡಕುಳಗಳಿಗೆ ಕೆರೆಯಂಗಳದ ಮಣ್ಣನ್ನು ಮೇಲಕ್ಕೆತ್ತಿ ಇಟ್ಟಂಗಿ ರೂಪಿಸುವ ಯೋಚನೆ! ಕೆರೆಯಂಚಿನಲ್ಲಿರುವ ಶ್ರೀಮಂತರಿಗೆ ಕೆರೆಯನ್ನು ಒತ್ತುವರಿ ಮಾಡಿ ಜಮೀನನ್ನು ವಿಸ್ತರಿಸುವ ಆಸೆ!
ಈ ಎಲ್ಲ ‘ಅಭಿವೃದ್ಧಿ’ ಸದೃಷ ಬೆಳವಣಿಗೆಗಳ ಫಲ? ಏಷ್ಯಾ ಖಂಡದಲ್ಲಿ ಪ್ರತಿ ನಿಮಿಷಕ್ಕೆ ಒಂದು ಹೆಕ್ಟೇರ್ ನಷ್ಟು ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಕರ್ನಾಟಕದಲ್ಲಿ ವರ್ಷವೊಂದಕ್ಕೆ 35 ಕೆರೆಗಳು ಕಣ್ಮುಚ್ಚುತ್ತಿವೆ. ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇಕಡಾ 31 ರಲ್ಲಿ ಅಪಾರ ಹೂಳು. ಶೇ. 13 ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. 47 ರಲ್ಲಿ ಇಟ್ಟಿಗೆಯ ಗೂಡುಗಳು; 39 ರಲ್ಲಿ ಕೃಷಿ ಭೂಮಿಯ ಒತ್ತುವರಿ, 36 ರಲ್ಲಿ ಪಕ್ಷಿಗಳ ನಿರಂತರ ಬೇಟೆ. ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಠವಾಗಿ ನೀರ್ಕೋಳಿಗಳು ತೋರಿಸುತ್ತಿವೆ.
ತರಿ ಭೂಮಿ, ನೀರಾವರಿಯಿಂದ ಬೆಳೆ ತೆಗೆಯುವ ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ನೀರು-ನೆಲ ಸಂಧಿಸುವ ಎಲ್ಲ ಜಾಗಗಳನ್ನೂ ಈ ಗುಂಪಿಗೆ ಸೇರಿಸಬಹುದು. ಈ ದೃಷ್ಟಿಯಿಂದ ಕೆರೆ, ಸರೋವರ, ಜಲಾಶಯ, ಅಳಿವೆ, ಹಿನ್ನೀರಿನ ಜೌಗು ನೆಲಗಳೆಲ್ಲವೂ ತರಿಭೂಮಿಗಳೇ. ನೀರು ಮತ್ತು ನೆಲ ಈ ಎರಡೂ ಪ್ರಮುಖ ನೆಲೆಗಳೂ ನೀಡುವ ಅತ್ಯುತ್ತಮ ಪೋಷಣೆಯನ್ನು ಬಳಸಿಕೊಳ್ಳುವ ವೈವಿಧ್ಯಮಯವಾದ ಜೀವಿಪರ ಪ್ರಪಂಚವನ್ನು ನಾವು ತರಿಭೂಮಿಯಲ್ಲಿ ಕಾಣಬಹುದು.
ಯಾವುದೇ ತರಿಭೂಮಿ 20,000 ಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು.
ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೇನು? ಎಂಬುದನ್ನು ನಿರ್ಧರಿಸಲು ಇದು ಸಕಾಲ. ನಮ್ಮ ಉಳಿವಿಗಾಗಿ ಅವುಗಳನ್ನು ಉಳಿಸಿಕೊಳ್ಳುವ ಜಾಣತನ ನಾವು ತೋರಬಹುದಲ್ಲ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.