ಮಂಗಳೂರು : ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಕರ್ನಾಟಕ ಕೋಟಾದಲ್ಲಿ ಸುಮಾರು 1900 ಸೀಟುಗಳು ಲಭ್ಯವಿರುತ್ತದೆ. ಈ ಬಾರಿ ಇದರಲ್ಲಿ 1200 ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ದೊರೆತ್ತಿದ್ದು 700 ಸೀಟುಗಳು ಪರ ರಾಜ್ಯದಿಂದ ಬಂದು ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ದೊರೆತಿರುತ್ತವೆ. ರಾಜ್ಯದ ಕೋಟಾದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕರ್ನಾಟಕದಲ್ಲಿ ಕನಿಷ್ಠ 5 ವರ್ಷಗಳ ಕಾಲ ವಾಸ್ತವ್ಯ ಹೊಂದಿರಬೇಕೆಂಬ ನಿಯಮವಿದ್ದು, ಈ ನಿಯಮದಿಂದಾಗಿ ಪರ ರಾಜ್ಯ ಮತ್ತು ಇತರ ದೇಶಗಳಿಂದ ನಮ್ಮ ರಾಜ್ಯಕ್ಕೆ ಬಂದು 5 ವರ್ಷಗಳ ಕಾಲ ನಮ್ಮ ರಾಜ್ಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಲಾಭವಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳು ಸ್ನಾತಕೋತ್ತರ ಸೀಟು ಹಂಚಿಕೆಯಿಂದ ವಂಚಿತರಾಗುತ್ತಿದ್ದು, ದೊಡ್ಡ ಸಂಖ್ಯೆಯ ಸೀಟುಗಳು ಹೊರರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ರಾಜ್ಯದಲ್ಲಿ ವಾಸವಿರುವ ಬಗ್ಗೆ ವಾಸ್ತವ್ಯ ದೃಢೀಕರಣ ನೀಡುವ ಸಂದರ್ಭದಲ್ಲಿ ಅಭ್ಯರ್ಥಿಯು ಕನಿಷ್ಠ ಪಕ್ಷ ರಾಜ್ಯದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರಬೇಕು ಅಥವಾ ಅಭ್ಯರ್ಥಿಯ ಪಾಲಕರು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು ಅಥವಾ ಈ ಹಿಂದೆ ಸಿಇಟಿ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತಿದ್ದ ವಾಸ್ತವ್ಯ ದೃಢೀಕರಣದ ನಿಯಮವನ್ನೆ ಅನ್ವಯವಾಗುವಂತೆ ಈಗ ಲಭ್ಯವಿರುವ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರವ ಮೂಲಕ ರಾಜ್ಯದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶ ಅಪೇಕ್ಷಿತ ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.