ಭಾರತಮಾತೆಯನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಅಸಂಖ್ಯರು ಹುತಾತ್ಮರಾದರು. ಅದರಲ್ಲಿ ಚಾಪೇಕರ್ ವಂಶದ ಮೂವರು ಸಹೋದರರು ಅನರ್ಘ್ಯರು. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಹರಿ ಚಾಪೇಕರ್, ಬಾಲಕೃಷ್ಣ ಹರಿ ಚಾಪೇಕರ್ ಮತ್ತು ವಾಸುದೇವ್ ಹರಿ ಚಾಪೇಕರ್ ಭಾರತಮಾತೆಗೆ ಅರ್ಪಿತರಾದರೆಂಬುದು ಇತಿಹಾಸದಲ್ಲಿ ಅಪರೂಪದ ಸಂಗತಿ.
ಮನೆಯಲ್ಲಿ ಅವಿಭಕ್ತ ಕುಟುಂಬ, ಆಗಿನಕಾಲಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದ ಸುಭಿಕ್ಷ ಸ್ಥಿತಿ. ಆದರೂ ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಅನೇಕ ಚಟುವಟಿಕೆಯಲ್ಲಿ ಭಾಗಿಯಾದರು. ಚಾಪೇಕರ್ ಸಹೋದರರಲ್ಲಿ ಮೊದಲನೆಯವರಾದ ದಾಮೋದರ್ ಹರಿ ಬ್ರಿಟೀಷ್ ಅಧಿಕಾರಿ “ರುಂಡೆ” ಕೊಲೆಯನ್ನು ಮಾಡಿ ಜೈಲು ಸೇರಿದರು. 1899ರಲ್ಲಿ ವಾಸುದೇವ್ ಹರಿ ಚಾಪೇಕರ್ ಅವರನ್ನು ಮೇ 8 ರಂದು, ಬಾಲಕೃಷ್ಣ ಹರಿ ಚಾಪೇಕರ್ ಅವರನ್ನು ಮೇ 12 ರಂದು ಗಲ್ಲಿಗೇರಿಸಲಾಯಿತು. ನಂತರ 1898ರಲ್ಲಿ ಏಪ್ರಿಲ್ 18 ರಂದು ದಾಮೋದರ್ ಹರಿ ಚಾಪೇಕರ್ ಅವರನ್ನು ಗಲ್ಲಿಗೇರಿಸಲಾಯಿತು.
ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸ ಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸುಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರ ಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ, ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಕ್ರಾಂತಿಕಾರಿ ಕೆಲಸಗಳಿಗಾಗಿ, ಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಲು ಹಿಂಜರಿಯದ 10-20 ಮಂದಿ ಆರಿಸಿದ ಯುವಕರನ್ನು ಸೇರಿಸಿ ‘ಚಾಪೇಕರ್ ಕ್ಲಬ್’ಆರಂಭಿಸಿದರು.
ಅದೇ ಸಂದರ್ಭದಲ್ಲಿ ಚಾಪೇಕರ್ ಸಹೋದರರಿಗೆ ಲೋಕಮಾನ್ಯ ತಿಲಕರ ನಿಕಟ ಪರಿಚಯವಾಯಿತು. ಅವರು ಲೋಕಪ್ರಿಯಗೊಳಿಸಿದ ಶಿವಾಜಿ ಮತ್ತು ಗಣೇಶ ಉತ್ಸವಗಳಲ್ಲಿ ಈ ಸಹೋದರರು ಭಾಗವಹಿಸಿದರು. ಸ್ಫೂರ್ತಿ ಹಾಗೂ ವೀರಾವೇಶದಿಂದ ಕೂಡಿದ ಹಾಡುಗಳನ್ನು ಕಟ್ಟಿ ಹಾಡಿದರು. ಲೋಕಮಾನ್ಯರ ’ಕೇಸರಿ’ ಪತ್ರಿಕೆಯಲ್ಲೂ ಅವರು ಪ್ರಕಟವಾದವು. ಈ ಕವನಗಳಲ್ಲಿ ಸ್ವದೇಶಾಭಿಮಾನ ತುಂಬಿ ತುಳುಕುತ್ತಿತ್ತು. ಪಾರತಂತ್ರ್ಯದ ವಿಷಯದಲ್ಲಿ ಧಿಕ್ಕಾರ ತುಂಬಿರುತ್ತಿತ್ತು. ಅದೇ ಸಮಯದಲ್ಲಿ ಪೂನಾ ನಗರದಲ್ಲಿ ಪ್ಲೇಗ್ ರೋಗವುಹಬ್ಬಿತು. ಜನಗಳನ್ನು ಹಿಂಸಿಸಲು ಮತ್ತು ತುಳಿಯಲು ಈ ಸಂದರ್ಭವನ್ನು ಬ್ರಿಟಿಷ್ ಸರ್ಕಾರ ಉಪಯೋಗಿಸಿಕೊಂಡಿತು ಮತ್ತು ಜನತೆಯನ್ನು ಹತ್ತಿಕ್ಕಲು ರ್ಯಾಂಡ್ ಎಂಬ ಇಂಗ್ಲಿಷ್ ಅಧಿಕಾರಿಯನ್ನು ನೇಮಿಸಿತು. ಈತ ದರ್ಪಕ್ಕೆ, ದಬ್ಬಾಳಿಕೆಗೆ, ಕ್ರೌರ್ಯಕ್ಕೆ ಪ್ರಸಿದ್ಧ, ಭಾರತೀಯರನ್ನು ಕಂಡರೆ ಆತನಿಗೆ ತುಂಬ ರೋಷ. ಪ್ಲೇಗ್ ಬಂದ ಸಂಶಯದ ಮೇಲೆ ದೊಡ್ಡ ದೊಡ್ಡ ಮನೆಗಳನ್ನು ಸುಡುವುದು. ಅಲ್ಲಿ ಪ್ಲೇಗ್ ರೋಗ ಬಂದಿರಲೇಬೇಕೆಂದಿಲ್ಲ. ಇಲಿಗಳು ಸತ್ತು ಬೀಳುತ್ತಿವೆಯೆಂದು ಮನೆಗಳಿಗೆ ನುಗ್ಗುವುದು. ಮನೆಗಳನ್ನು ಒಡೆದು ಬೆಲೆಬಾಳುವ ವಸ್ತುಗಳನ್ನು ಕೊಳ್ಳೆಹೊಡೆಯುವುದು. ದೇವರ ಮನೆಗೆ ಬೂಟುಕಾಲಿನಲ್ಲಿ ನುಗ್ಗುವುದು ವಿಗ್ರಗಹಗಳನ್ನು ಒದೆಯುವುದು. ಹೆಂಗಸರಿರುವ ಕೋಣೆಗಳನ್ನೂ ಬಿಡದೆ ಒಳಹೊಕ್ಕು ಶೋಧಿಸುವುದು. ಕೆಲವು ಬಾರಿ ಹೆಂಗಸರ ಮೇಲೆ ಅತ್ಯಾಚಾರ. ಪ್ಲೇಗಿನಿಂದ ಸತ್ತಿರುವ ಮತ್ತು ಸಾಯುತ್ತಿರುವವರನ್ನು ಸಾಗಿಸುವ ನೆಪದಲ್ಲಿ ಪ್ರತ್ಯೇಕವಾಗಿ ಇಟ್ಟು ಉಪಚಾರ ಮಾಡುವ ಆಸ್ಪತ್ರೆ ಶಿಬಿರಗಳಿಗೆ ಬದುಕಿರುವವರನ್ನು ಬಲವಂತವಾಗಿ ಎಳೆದುಹಾಕುವುದು- ಆ ಕರಾಳ ಶಾಸನದ ನೆಪದಲ್ಲಿ ಇವು ರ್ಯಾಂಡ್ ಮಾಡುತ್ತಿದ್ದ ಪಾಪಕೃತ್ಯಗಳು. ರಕ್ಷಕರಾಗಿ ಬಂದಿದ್ದ ಈ ಬ್ರಿಟಿಷ್ ಅಧಿಕಾರಿಗಳು ಪೂನಾ ನಗರದ ಭಕ್ಷಕರಾಗಿ ಮೆರೆದರು.
ದೇಶಭಕ್ತರಾದ ಚಾಪೇಕರ್ ಸಹೋದರರಿಗೆ ಇದನ್ನು ಸಹಿಸಲಾಗಲಿಲ್ಲ. ದುಷ್ಟ ರ್ಯಾಂಡ್ ನನ್ನ ಮುಗಿಸಿ ಜನರಿಗೆ ನೆಮ್ಮದಿ ತರಬೇಕೆಂದು ನಿಶ್ಚಯಿಸಿದ ಅವರು ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದಿನದಂದೇ ರ್ಯಾಂಡ್ ನನ್ನು ಹತ್ಯೆ ಮಾಡಿದರು. ಈ ಹತ್ಯೆಇಂಗ್ಲೆಂಡ್ ನವರೆಗೆ ಸದ್ದು ಮಾಡಿತು. ಬ್ರಿಟಿಷ್ ಸರ್ಕಾರದ ಜಂಘಾಬಲವನ್ನೇ ಉಡುಗಿಸಿತು. ಆದರೆ ದುರದೃಷ್ಟವಶಾತ್ ಜತೆಗಿದ್ದವರೇ ದುಡ್ಡಿನ ಆಸೆಗೆ ಚಾಪೇಕರ್ ಸಹೋದರರ ಸುಳಿವು ಕೊಟ್ಟಿದ್ದಕ್ಕಾಗಿ ಅವರು ಸಿಕ್ಕಿಬಿದ್ದರು. ವಿಚಾರಣೆಯ ನಾಟಕದ ನಂತರ ಅವರಿಗೆ ಸಿಕ್ಕ ಬಹುಮಾನ ಮರಣದಂಡನೆ.
ಒಂದೇ ಕುಟುಂಬಕ್ಕೆ ಸೇರಿದ ಮೂವರೂ ಸಹೋದರರು ಭಾರತಸ್ವಾತಂತ್ರ್ಯಕ್ಕಾಗಿ ಗಲ್ಲುಗಂಬವೇರಿದ್ದು ಹೋರಾಟದ ಇತಿಹಾಸದಲ್ಲಿ ಒಂದು ಉಜ್ವಲ ಮಾದರಿ. ಅವರು ಬೆಳಗಿದ ಸ್ವಾತಂತ್ರ್ಯ ಜ್ಯೋತಿ ಮುಂದೆ ಅನೇಕ ಕ್ರಾಂತಿಕಾರಿಗಳಿಗೆ ಹೋರಾಟಗಾರರಿಗೆ ಸ್ಪೂರ್ತಿತುಂಬಿತು. ಆ ಧೀರೋದಾತ್ತ ಸಹೋದರರಿಗೆ ಭಾವಪೂರ್ಣ ನಮನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.