ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಸ್ಥಳೀಯ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರ ಸಿದ್ಧತೆಗಾಗಿ ತರಬೇತಿ (ದಳ ರಾತ್ರಿ ತಂಗುವ ಶಿಬಿರ ಮತ್ತು ದಳ ರಾತ್ರಿ ಹೊರ ಸಂಚಾರ ಕಾರ್ಯಕ್ರಮ)
ಮಂಗಳೂರು : ಸಂತ ಜೋಸೆಫ್ ಜೋಯ್ಲ್ಯಾಂಡ್ ಶಾಲೆ, ಕೊಲ್ಯ, ಸೋಮೇಶ್ವರ ಇಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಸ್ಥಳೀಯ ಸಂಸ್ಥೆ ಹಾಗೂ ಜೆಸಿಐ ಮಂಗಳಗಂಗೋತ್ರಿ ಜಂಟಿಯಾಗಿ ಮಂಗಳೂರು ತಾಲೂಕು ಮಟ್ಟದ ಎರಡು ದಿನಗಳ ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರದಲ್ಲಿ ಭಾಗವಹಿಸಲು ಸಿದ್ಧತೆಗಾಗಿ ತರಬೇತಿ (ದಳ ರಾತ್ರಿ ತಂಗುವ ಶಿಬಿರ ಮತ್ತು ದಳ ರಾತ್ರಿ ಹೊರ ಸಂಚಾರ ಕಾರ್ಯಕ್ರಮ) ಶಿಬಿರವನ್ನು ಆಯೋಜಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಾತಾನಾಡಿದರು. ಭಾರತದಲ್ಲಿ 1909 ರಲ್ಲಿ ಪ್ರಾರಂಭವಾದ ಸ್ಕೌಟ್ ಚಳುವಳಿಗೆ ಶತಮಾನದ ಇತಿಹಾಸವಿದೆ. ಯುವ ಜನತೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧಿ ಹೊಂದಲು ಸ್ಕೌಟ್ ಒಂದು ಉತ್ತಮ ವೇದಿಕೆಯಾಗಿದ್ದು, ದೇಶ ಸೇವೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಮಾತ್ರವಲ್ಲ ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಧೈರ್ಯ ಮತ್ತು ಜಾಣ್ಮೆಯಿಂದ ಎದುರಿಸುವ ಕೌಶಲ್ಯವನ್ನೂ ಸ್ಕೌಟ್ ಗೈಡ್ಸ್ ಕಲಿಸಿಕೊಡುತ್ತದೆ. ಜಗತ್ತಿದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಜಗದ್ವಿಖ್ಯಾತರಾದ ಅನೇಕ ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದೆ ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್, ಗೈಡ್ನಿಂದ ಪಡೆದ ತರಬೇತಿ ಮತ್ತು ಸ್ಪೂರ್ತಿಯ ಪ್ರಭಾವ ಎಂದು ಅವರು ತಮ್ಮ ಜೀವನಚರಿತ್ರೆಯಲ್ಲಿ ದಾಖಲಿಸಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಉನ್ನತ ಭವಿಷ್ಯಗಳನ್ನು ರೂಪಿಸಿಕೊಳ್ಳುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಅತ್ಯುತ್ತಮವಾದ ವೇದಿಕೆಯಾಗಿದೆ ಎಂದು ಹೇಳಿದರು. ಒಬ್ಬ ಸ್ಕೌಟ್ಗೆ ಶಿಸ್ತು, ಸಂಯಮ, ನಿಷ್ಠೆ, ಸ್ನೇಹಪರತೆ, ವಿನಯಶೀಲತೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ಅಸ್ತಿ ರಕ್ಷಣೆ, ಧೈರ್ಯಶಾಲಿ, ಪ್ರೌಢಿಮೆ ಹಾಗೂ ಕಾಯ, ವಾಚ, ಮನಸಾ ಶುದ್ಧತೆಯಿಂದ ಬದುಕುವುದನ್ನು ಕಲಿಸಿಕೊಡುತ್ತದೆ. ಈ ನಿಯಮಗಳು ಸ್ಕೌಟ್-ಗೈಡ್ಸ್ಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅನುಕರಣೀಯ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ದಳಕ್ಕೆ ಸೇರಿ ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವೂದರ ಜೊತೆಗೆ, ದೇಶ ಸೇವೆ, ಸಮಾಜ ಸೇವೆ ಮತ್ತು ಪ್ರಕೃತಿ ಸೇವೆಗಳನ್ನು ಮಾಡುತ್ತಾ ಮಾದರಿ ಪ್ರಜೆಯಾಗಿ ಮೂಡಿಬರಬೇಕು.
ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎನ್.ಜಿ. ಮೋಹನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ಗಳಿಗೆ ಉನ್ನತ ಶಿಕ್ಷಣ, ಉದ್ಯೋಗ ಹಾಗೂ ದೇಶ ಸೇವೆಯಲ್ಲಿ ಇರುವ ಅನೇಕ ಅವಕಾಶಗಳ ಬಗ್ಗೆ ಹೇಳುತ್ತಾ, ಶಿಬಿರದಲ್ಲಿ ಆಸಕ್ತಿಯಿಂದ ಭಾಗವಹಿಸಿ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿ ಕೊಣಾಜೆ ಜೇಸಿ ಅಧ್ಯಕ್ಷರಾದ ಜೇಸಿ ಬಾದ್ ಷಾ ಉಪಸ್ಥಿತರಿದ್ದು, ಜಾತಿ, ಮತ, ಪಂಥ, ಹೆಣ್ಣು, ಗಂಡು, ಬಡವ ಶ್ರೀಮಂತ ಎಲ್ಲಾ ಬೇದ ಭಾವವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಸಮಾಜದಲ್ಲಿ ಸುಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ದೇವದಾಸ ಕೊಲ್ಯ, ಜೇಸಿ ರತ್ನಕುಮಾರ್, ಸ್ಕೌಟ್ ಗೈಡ್ಸ್ ಆಯುಕ್ತರಾದ ಶ್ರೀ ರಾಮಶೆಷ ಶೆಟ್ಟಿ, ಲವೀನಾ ಪಿಂಟೊ, ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಶ್ರೀಮತಿ ವೀಣಾ ಭಟ್, ಶ್ರೀ ಕೃಷ್ಣ ಗಟ್ಟಿ, ಗೈಡ್ಸ್ ಕ್ಯಾಪ್ಟನ್ಗಳಾದ ಸುಫಲಾ, ಫ್ಲೇವಿ ಡಿಸೋಜ, ಭಾಸ್ಕರ ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಪ್ರವೀಣ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಶಿಬಿರದ ಸಂಚಾಲಕರಾದ ತ್ಯಾಗಂ ಎಮ್. ಹರೇಕಳ ಇವರು ಶಿಬಿರದ ಮುನ್ನೋಟವನ್ನು ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸುಮಾರು 60 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.