ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕೂಡ ಇದಕ್ಕೆ ದನಿಗೂಡಿಸಿದ್ದರು. ಆಮೇಲಿನ ಸರದಿ ಅರವಿಂದ ಕೇಜ್ರಿವಾಲ್ ಅವರದ್ದು!
ಈ ಮಹನೀಯರ ಆರೋಪಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳು ಸೇರಿದಂತೆ ಕೆಲವು ಮಾಧ್ಯಮಗಳಲ್ಲೂ ಇವಿಎಂಗಳನ್ನು ಹ್ಯಾಕ್ ಮಾಡಬಹುದು, ಅವುಗಳ ತಂತ್ರಾಂಶ ತಿದ್ದಬಹುದು ಎಂಬಂತಹ ಸುದ್ದಿಗಳು ಹರಿದಾಡಿದವು. ಕೆಲವು ದೇಶಗಳಲ್ಲಿನ ಇಂತಹ ಪ್ರಯೋಗಗಳನ್ನು ಉದಾಹರಿಸಿ, ಅಲ್ಲಿನ ಲೋಪಗಳನ್ನು ಉಲ್ಲೇಖಿಸಿ, ಅದೇ ರೀತಿ ನಮ್ಮ ಇವಿಎಂಗಳು ದೋಷಪೂರಿತ ಷರಾ ಬರೆದಿದ್ದವು.
ಆದರೆ ಈ ಅಪನಂಬಿಕೆ ಮತ್ತು ಗೊಂದಲಗಳನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ. 2000 ನೇ ಇಸವಿಯಿಂದ ಇವಿಎಂಗಳನ್ನು ಬಳಸಲಾಗುತ್ತಿದ್ದು, ಈವರೆಗೆ ಒಂದೇ ಒಂದು ಪ್ರಕರಣದಲ್ಲೂ ಅವುಗಳ ಲೋಪ ಅಥವಾ ತಿರುಚುವಿಕೆ ಸಾಬೀತು ಮಾಡಲಾಗಿಲ್ಲ. ಇಂಟರ್ನೆಟ್ ಸಂಪರ್ಕವಾಗಲೀ ಅಥವಾ ಕಂಪ್ಯೂಟರ್ ಸಂಪರ್ಕವಾಗಲೀ ಹೊಂದಿರದೇ ಇರುವ ಇವಿಎಂಗಳಲ್ಲಿ ಬದಲಿಸಲಾಗದ ಮತ್ತು ತಿದ್ದಲಾಗದ ಚಿಪ್ ಅಳವಡಿಸಲಾಗಿದೆ. ಹಾಗಾಗಿ, ಯಾವುದೇ ಬಗೆಯ ತಿರುಚುವಿಕೆ ಅಥವಾ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂಬುದು ಮತ್ತೆ ಮತ್ತೆ ದೃಢಪಟ್ಟಿದೆ. ಸುಪ್ರೀಂಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ಕೂಡ ಇವಿಎಂಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡಿವೆ. ಇವಿಎಂಗಳನ್ನು ಉತ್ಪಾದಿಸುವ ಬಿಇಎಲ್ ಮತ್ತು ಇಸಿಐಎಲ್ಗಳು ಅಳವಡಿಸಿರುವ ಅಬೇಧ್ಯ ತಾಂತ್ರಿಕ ಸುರಕ್ಷಾ ಕ್ರಮಗಳು ಮತ್ತು ಭದ್ರತಾ ನಿರ್ವಹಣಾ ವ್ಯವಸ್ಥೆಯಿಂದಾಗಿ ಅವುಗಳು ಅತ್ಯಂತ ಸುರಕ್ಷಿತ. ಹೀಗಾಗಿ ಇವಿಎಂಗಳನ್ನು ಬಳಸಿ ನಡೆಸಲಾಗಿರುವ ಚುನಾವಣಾ ಪ್ರಕ್ರಿಯೆ ಕುರಿತ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಮೊಟ್ಟಮೊದಲು ಚುನಾವಣೆ ಪ್ರಕ್ರಿಯೆಗೆ ಇವಿಎಂಗಳನ್ನು ಬಳಸಿದ್ದು 1982ರಲ್ಲಿ ನಡೆದ ಕೇರಳದ ಪಾರೂರು ಅಸೆಂಬ್ಲಿ ಉಪಚುನಾವಣೆ ಸಂದರ್ಭದಲ್ಲಿ. ಪ್ರಯೋಗಾತ್ಮಕವಾಗಿ ಆ ವಿಧಾನಸಭೆಯ 50 ಬೂತ್ಗಳಲ್ಲಿ ಇವಿಎಂ ಬಳಸಲಾಗಿತ್ತು. ಇದೊಂದು ಏಕಘಟಕದ ಮತಯಂತ್ರವಾಗಿದ್ದು ಇದಕ್ಕೆ ಯಾವುದೇ ನೆಟ್ವರ್ಕ್ ಸಂಪರ್ಕ ಇರುವುದಿಲ್ಲ. ಬ್ಯಾಟರಿಚಾಲಿತ ಯಂತ್ರವಾಗಿರುವ ಇದರಲ್ಲಿ ಎರಡು ಘಟಕಗಳಿವೆ. ಒಂದು ನಿಯಂತ್ರಣ ಘಟಕ ಹಾಗೂ ಇನ್ನೊಂದು ಮತದಾನಘಟಕ. ಚುನಾವಣಾಕಾರಿ ಮತದಾನ ಘಟಕವನ್ನು ಆಕ್ಟಿವೇಟ್ ಮಾಡಿದ ಬಳಿಕವೇ ಮತದಾರ ತನ್ನ ಮತವನ್ನು ನಿರ್ದಿಷ್ಟ ಅಭ್ಯರ್ಥಿಗೆ ಚಲಾಯಿಸಲು ಗುಂಡಿ ಒತ್ತುತ್ತಾನೆ. ಒಂದು ಮತಯಂತ್ರದಲ್ಲಿ ಒಂದೇ ಬಾರಿಗೆ 64 ಮಂದಿ ಅಭ್ಯರ್ಥಿಗಳ ಮತಗಳನ್ನು ದಾಖಲಿಸಬಹುದು. ಒಂದು ಮತಯಂತ್ರದಲ್ಲಿ ದಾಖಲಿಸಬಹುದಾದ ಅತ್ಯಕ ಸಂಖ್ಯೆಯ ಮತಗಳು 3840.
ಚುನಾವಣಾ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಾಗ ಚುನಾವಣಾಧಿಕಾರಿ ಪ್ರತಿಯೊಬ್ಬ ಚುನಾವಣಾ ಏಜೆಂಟ್ಗಳಿಗೆ ಒಟ್ಟು ಚಲಾವಣೆಯಾದ ಮತಗಳ ಸಂಖ್ಯೆಯನ್ನು ತಿಳಿಸುತ್ತಾರೆ. ಎಣಿಕೆ ಸಂದರ್ಭದಲ್ಲಿ ಏಜೆಂಟರುಗಳು ಈ ಸಂಖ್ಯೆಗೆ ತಾಳೆ ಹಾಕುತ್ತಾರೆ. ಅಲ್ಲದೆ ಎಣಿಕೆ ಸಂದರ್ಭದಲ್ಲಿ ’ರಿಸಲ್ಟ್ಸ್’ ಎನ್ನುವ ಗುಂಡಿ ಒತ್ತಿದಾಗ ಫಲಿತಾಂಶ ಪ್ರದರ್ಶಿಸಲ್ಪಡುತ್ತದೆ. ’ರಿಸಲ್ಟ್ಸ್ ’ ಗುಂಡಿಯನ್ನು ಸೀಲ್ ಮಾಡಲಾಗಿದ್ದು , ಚುನಾವಣಾಧಿಕಾರಿ ’ಕ್ಲೋಸ್ ಬಟನ್’ ಒತ್ತದ ಹೊರತು ಅದು ತೆರೆದುಕೊಳ್ಳುವುದಿಲ್ಲ.
2000 ಇಸವಿಯಲ್ಲಿ ನಡೆದ ಫ್ಲೋರಿಡಾದ ಚುನಾವಣೆಯಲ್ಲಿ ಮತಯಂತ್ರಗಳು ದೋಷಪೂರಿತವಾಗಿದ್ದವು ಎಂದು ವರದಿಯಾಗಿತ್ತು. 2006 ರಲ್ಲಿ ಡಚ್ ಟಿವಿ ವಾಹಿನಿಯೊಂದು ಇವಿಎಂಗಳನ್ನು ಹೇಗೆ ಸುಲಭವಾಗಿ ಹ್ಯಾಕ್ ಮಾಡಬಹುದೆಂದು ಒಂದು ಡಾಕ್ಯುಮೆಂಟರಿಯನ್ನು ಪ್ರಸಾರಮಾಡಿತ್ತು. ಇದೇ ಕಾರಣಕ್ಕಾಗಿ ನೆದರ್ಲ್ಯಾಂಡ್ಸ್ನಲ್ಲಿ ಇವಿಎಂಗಳನ್ನು ಹಿಂಪಡೆದು ಸಾಂಪ್ರಾದಾಯಿಕ ಮತಪತ್ರ ಪದ್ಧತಿಯನ್ನೇ ಅಳವಡಿಸಲಾಗಿತ್ತು. ಜರ್ಮನಿ ಮತ್ತು ಐರ್ಲೆಂಡ್ ದೇಶಗಳೂ ಇವಿಎಂ ಬಳಸದಿರುವ ನಿರ್ಧಾರ ಕೈಗೊಂಡಿದ್ದವು.
2009 ರ ಮಹಾಚುನಾವಣೆಯಲ್ಲಿ ಬಿಜೆಪಿಯೂ ಇವಿಎಂಗಳು ದೋಷಪೂರಿತ ಎಂದು ದೂರು ನೀಡಿತ್ತು. ಸುಬ್ರಹ್ಮಣ್ಯ ಸ್ವಾಮಿ ಆಗ ಪಕ್ಷ ನಿರೀಕ್ಷೆಯಂತೆ ಫಲಿತಾಂಶ ಪಡೆಯದಿದ್ದರೆ ಅದಕ್ಕೆ ಇವಿಎಂಗಳನ್ನು ತಿರುಚಿರುವುದೇ ಕಾರಣವಾಗಿರಬಹುದು ಎಂದು ಕ್ಯಾತೆ ತೆಗೆದಿದ್ದರು. ಸ್ವತಃ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಕೂಡ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. 2009 ರ ಒಡಿಶಾ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜೆ.ಬಿ. ಪಟ್ನಾಯಕ್ ಬಿಜೆಡಿ ಮತಯಂತ್ರಗಳನ್ನು ತಿರುಚಿದೆ ಎಂದು ಆರೋಪಿಸಿದ್ದರು. 2014 ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಇವಿಎಂಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದ್ದರು. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಇವಿಎಂಗಳು ದೋಷಪೂರಿತವಾಗಿದ್ದು ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಇದೀಗ ಮಾಯಾವತಿ, ಕೇಜ್ರಿವಾಲ್ ಕೂಡ ಅಂತಹದೇ ಆರೋಪವೆಸಗಿದ್ದಾರೆ. ಉ.ಪ್ರ.ಚುನಾವಣೆಯಲ್ಲಿ ಈ ಬಾರಿ ಕೇವಲ 19 ಸ್ಥಾನಗಳನ್ನು ಮಾತ್ರ ಗಳಿಸಿರುವ ಮಾಯಾವತಿಗೆ ತನ್ನ ಪಕ್ಷದ ದಯನೀಯ ಸೋಲಿಗೆ ಸಿಗಬಹುದಾದ ಬೇರೆ ನೈಜ ಕಾರಣಗಳೇ ಹೊಳೆಯಲಿಲ್ಲ. ಮುಂದಿನ ಏಪ್ರಿಲ್ ವೇಳೆಗೆ ಮಾಯಾವತಿಯವರ ರಾಜ್ಯಸಭಾ ಅವಧಿ ಕೊನೆಗೊಳ್ಳಲಿದೆ. ಮರು ಆಯ್ಕೆ ಆಗೋಣವೆಂದರೆ ಅಗತ್ಯವಿರುವಷ್ಟು ಶಾಸಕರು ಈಗ ಬಿಎಸ್ಪಿ ಬಳಿ ಇಲ್ಲ. ಕಳೆದ ಚುನಾವಣೆಯಲ್ಲಿ 87 ಶಾಸಕರು ಬಿಎಸ್ಪಿಯಿಂದ ಗೆದ್ದಿದ್ದರಿಂದ ಮಾಯಾವತಿಯವರು ಸುಲಭವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಮಾತ್ರ ಆ ಸಂಖ್ಯೆ ಮಾತ್ರ ಕೇವಲ 19. ರಾಜ್ಯಸಭೆಗೆ ಆಯ್ಕೆಯಾಗಲು ಒಟ್ಟಾರೆ 42 ಸದಸ್ಯರ ಬೆಂಬಲ ಅಗತ್ಯ. ಹಾಗಾಗಿ ಮಾಯಾವತಿ ರಾಜ್ಯಸಭೆಗೆ ಮರು ಆಯ್ಕೆಯಾಗುವುದು ಅಸಾಧ್ಯವೇ ಸರಿ. ಒಟ್ಟಿನಲ್ಲಿ ಇನ್ನೈದು ವರ್ಷ ಯಾವುದೇ ಅಧಿಕಾರವಿಲ್ಲದೆ ’ಮಾಜಿ’ ಯಾಗಿಯೇ ಆಕೆ ಉಳಿಯಬೇಕು. ಇಂತಹ ಪರಿಸ್ಥಿತಿ ಯಾವ ರಾಜಕಾರಣಿಗಾದರೂ ಹತಾಶೆ, ಸಿಟ್ಟು ತರಿಸದೇ ಇದ್ದೀತೆ? ಮಾಯಾವತಿಗೆ ಆಗಿರುವುದು ಅದೇ!
ಮಾಯಾವತಿಯವರ ಹತಾಶೆ ಹಾಗಿರಲಿ, ಆದರೆ ಐಐಟಿ ಪದವೀಧರ ಹಾಗೂ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರಿಗೇನಾಗಿದೆ? ಚುನಾವಣಾ ವ್ಯವಸ್ಥೆ ಹೇಗಿರುತ್ತದೆ, ಅದಕ್ಕೆ ಆಯೋಗ ಎಷ್ಟೊಂದು ತಲೆಕೆಡಿಸಿಕೊಂಡು ಪಾರದರ್ಶಕವಾಗಿ ನಡೆಸಲು ಹೆಣಗುತ್ತದೆ ಇತ್ಯಾದಿ ಮಾಹಿತಿಗಳು ಅವರಿಗೆ ತಿಳಿದಿಲ್ಲವೆ? ಈ ಬಾರಿ ಆಮ್ ಆದ್ಮಿ ಪಕ್ಷ ಪಂಜಾಬ್ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಲು ಇವಿಎಂ ತಿರುಚಿದ್ದೇ ಕಾರಣ ಎಂದು ಆರೋಪಿಸಿದ್ದಾರಲ್ಲ, ಅದಕ್ಕೇನಾದರೂ ಪುರಾವೆಗಳು ಅವರ ಬಳಿ ಇವೆಯೇ? ಶೇ. 20 ರಿಂದ 25 ರಷ್ಟು ಮತಗಳು ಎಸ್ಎಡಿ – ಬಿಜೆಪಿ ಮೈತ್ರಿಕೂಟಕ್ಕೆ ವರ್ಗಾವಣೆಯಾಗಿದೆ ಎಂಬ ಅವರ ಆರೋಪಕ್ಕೆ ಆಧಾರಗಳೇನು? ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ನಡೆಸಿರುವ ಅಂದಾದುಂದಿ ಆಡಳಿತ, ಗೂಂಡಾಗಿರಿ ಮುಂತಾದ ಅಪಸವ್ಯಗಳನ್ನು ಪಂಜಾಬ್ ಜನತೆ ನೋಡಿದ್ದಾರೆ. ಹಾಗಾಗಿಯೇ ಪಂಜಾಬಿಗಳು ಆಪ್ಗೆ ಮನಸೋತಿಲ್ಲ.
ಇನ್ನು ಉ.ಪ್ರ.ದಲ್ಲಿ ಬಿಎಸ್ಪಿಗೇ ಓಟು ಹಾಕುತ್ತಿದ್ದ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರು ಈ ಬಾರಿ ಬಿಜೆಪಿಯತ್ತ ವಾಲಿದ್ದಾರೆಂಬುದು ಪ್ರತಿಯೊಂದು ಅಸೆಂಬ್ಲಿ ಕ್ಷೇತ್ರದ ಫಲಿತಾಂಶದ ಸಮೀಕ್ಷೆ ನಡೆಸಿದರೆ ಮಾಯಾವತಿಗೆ ಗೊತ್ತಾಗಬಹುದು. ಆದರೆ ಅಂತಹ ಯಾವುದೇ ಸಮೀಕ್ಷೆ ನಡೆಸದೆಯೇ, ಫಲಿತಾಂಶ ಪ್ರಕಟವಾದ ತಕ್ಷಣವೇ ಆಕೆ, ಇವಿಎಂಗಳನ್ನು ತಿರುಚಲಾಗಿದೆ ಎಂದಿರುವುದು ಅತ್ಯಂತ ಬಾಲಿಶ ಹೇಳಿಕೆಯಲ್ಲದೆ ಮತ್ತೇನು? ಇವಿಎಂಗಳು ದೋಷಪೂರಿತವೇ ಆಗಿದ್ದರೆ ಪಂಜಾಬ್ನಲ್ಲೇಕೆ ಬಿಜೆಪಿ ಹೀನಾಯವಾಗಿ ಸೋಲಬೇಕಾಗಿತ್ತು? ಗೋವಾ, ಮಣಿಪುರ ರಾಜ್ಯಗಳಲ್ಲಿ ಅಧಿಕಾರಕ್ಕೇರುವಷ್ಟು ಬಹುಮತ ಬಿಜೆಪಿಗೆ ಏಕೆ ಪ್ರಾಪ್ತವಾಗಲಿಲ್ಲ? ಈ ಪ್ರಶ್ನೆಗಳಿಗೆ ಮಾಯಾವತಿ ಬಳಿ ಉತ್ತರವಿದೆಯೆ?
ಇಷ್ಟಕ್ಕೂ ಯಾವ ಇವಿಎಂ ಅನ್ನು ಯಾವ ಯಾವ ಬೂತ್ಗಳಿಗೆ ಚುನಾವಣಾ ಆಯೋಗ ಕಳಿಸಿಕೊಡುತ್ತದೆ ಎಂಬುದು ಯಾವ ರಾಜಕೀಯ ಪಕ್ಷಕ್ಕೂ ಮೊದಲು ಗೊತ್ತಿರುವುದಿಲ್ಲ. ಆಯೋಗ ಅದನ್ನು ತಿಳಿಸಿರುವುದೂ ಇಲ್ಲ. ತಿಳಿಸಬೇಕಾದ ಅಗತ್ಯವೂ ಇಲ್ಲ. ಬೂತ್ಗಳಿಗೆ ಇವಿಎಂ ಸಾಗಿಸಲ್ಪಟ್ಟ ನಂತರವೇ ರಾಜಕೀಯ ಪಕ್ಷಗಳಿಗೆ ಅದರ ಮಾಹಿತಿ ಲಭ್ಯವಾಗುವುದು. ಹೀಗಿರುವಾಗ ಇವಿಎಂ ದೋಷಪೂರಿತ ಎಂಬ ಆರೋಪಕ್ಕೆ ಅರ್ಥವಿದೆಯೆ?
ಮುಂದಿನ ಏಪ್ರಿಲ್ನಲ್ಲಿ ನಡೆಯುವ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಎಂಬುದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಡಿಸಿರುವ ಫರ್ಮಾನು ! ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅವರು ಪತ್ರವನ್ನೂ ಬರೆದಿದ್ದಾರೆ. ಆದರೆ ಏ. 22 ರಂದೇ ಪಾಲಿಕೆ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ವ್ಯವಸ್ಥೆ ಅಸಾಧ್ಯವೆಂದು ಆಯೋಗ ಕೇಜ್ರಿವಾಲರ ಮನವಿಯನ್ನು ತಿರಸ್ಕರಿಸಿದೆ.
ಬ್ಯಾಲೆಟ್ ಪೇಪರ್ ಬದಲು ಇವಿಎಂಗಳನ್ನು ಬಳಕೆಗೆ ತಂದಿರುವುದು ಚುನಾವಣಾ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಯುತವಾಗಿ ನಡೆಯಲೆಂದೇ. ಹಿಂದೆಲ್ಲ ಬ್ಯಾಲೆಟ್ ಪೇಪರ್ಗಳನ್ನು ಬಳಸಿ ಚುನಾವಣೆ ನಡೆಸಿದಾಗ ಅಕ್ರಮ ಮತದಾನ, ಮತಪತ್ರಗಳ ಅಪಹರಣ, ನಕಲಿ ಮತದಾರರ ಹಾವಳಿ ಮುಂತಾದ ಅಪಸವ್ಯಗಳು ನಡೆದಿವೆಯೆಂದೇ ಇವಿಎಂಗಳನ್ನು ಆವಿಷ್ಕರಿಸಿ ಬಳಕೆಗೆ ತಂದಿದ್ದು. ಭಾರತದಂತಹ 125 ಕೋಟಿ ಜನರಿರುವ ದೇಶದಲ್ಲಿ ಚುನಾವಣೆಗೆ ಮತಪತ್ರ ಬಳಸಿದರೆ ಅದೆಷ್ಟು ಟನ್ ಕಾಗದ ವ್ಯರ್ಥವಾಗಬಹುದು, ಈ ಕಾಗದಕ್ಕಾಗಿ ಅದೆಷ್ಟು ಅರಣ್ಯ ನಾಶ ಆಗಬಹುದು ಎಂಬ ಅಂದಾಜು ಇವಿಎಂಗಳ ಕುರಿತು ಆರೋಪಿಸುವವರಿಗೆ ಇದೆಯೇ?
ಚುನಾವಣಾ ಪ್ರಕ್ರಿಯೆಗೆ ಆಧುನಿಕ ತಂತ್ರಜ್ಞಾನ ಬಳಸಿದರೆ ಅದು ಪಾರದರ್ಶಕ, ಸುಲಲಿತವಾಗತ್ತದೆ. ಮತ ಎಣಿಕೆ ದಿನದಂದು ಕೇವಲ ಒಂದೆರಡು ಗಂಟೆಗಳಲ್ಲೇ ಕ್ಷಿಪ್ರ ಫಲಿತಾಂಶ ದೊರಕುತ್ತದೆ. ಹಿಂದಾದರೆ ಪೂರ್ಣ ಫಲಿತಾಂಶಕ್ಕಾಗಿ ಒಂದೆರಡು ದಿನಗಳಷ್ಟು ಕಾಲ ಕಾಯಬೇಕಾಗಿತ್ತು. ಇದನ್ನೆಲ್ಲ ಮಾಯಾವತಿ, ಕೇಜ್ರಿವಾಲ್ ಥರದವರು ಅರ್ಥಮಾಡಿಕೊಳ್ಳಬೇಕು. ಇವಿಎಂ ಶನಿಕಾಟದಿಂದ ಮುಕ್ತರಾಗಿ ಚುನಾವಣೆಯನ್ನು ಎದುರಿಸಬೇಕು. ಇಡೀ ಚುನಾವಣಾ ಪ್ರಕ್ರಿಯೆಗೆ ಕಳಂಕ ಹಚ್ಚುವ ಹೀನ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ. ಇಡೀ ಜಗತ್ತಿನಲ್ಲೇ ಭಾರತದ ಚುನಾವಣಾ ಪ್ರಕ್ರಿಯೆ ಅತ್ಯಂತ ವಿಶ್ವಾಸಾರ್ಹತೆ ಗಳಿಸಿದೆ. ಹಾಗಿರುವಾಗ ಅದಕ್ಕೆ ಮಸಿ ಬಳಿದರೆ, ಅದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಕುವ ಕೊಡಲಿ ಪೆಟ್ಟು ಎಂಬುದನ್ನು ಈ ನಾಯಕರು ಮರೆಯಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.