ಮಂಗಳೂರು: ಆಸ್ಥಾ ಪೊಡಕ್ಷನ್ ಲಾಂಛನದಲ್ಲಿ ತಯಾರಾದ ಚೇತನ್ ಮುಂಡಾಡಿ ನಿರ್ದೇಶನ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ಮದಿಪು ನಂಬೊಲಿಗೆದ ಪುರುಸದ ಟ್ಯಾಗ್ಲೈನ್ ಹೊಂದಿರುವ ತುಳು ಸಿನಿಮಾ ಮಾರ್ಚ್ 10 ರಂದು ನಗರದ ಸುಚಿತ್ರ ಟಾಕೀಸ್ನಲ್ಲಿ ಬಿಡುಗಡೆಗೊಂಡಿತು.
ಸಮಾರಂಭವನ್ನು ಬಾಲನಟಿ ಅಂಚಿತ್ಯಾ ದೀಪಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾನಪದ ವಿದ್ವಾಂಸ ದಯಾನಂದ ಕತ್ತಲ್ಸಾರ್ ಮಾತನಾಡಿ ತುಳುನಾಡಿನ ದೈವರಾದನೆ ಎಂಬ ನಂಬಿಕೆ, ದೈವಾರಾಧನೆಯ ಕೊಡಿಯಡಿಯಲ್ಲಿ ದೈವಾರಾಧಕರ ನೋವು ಮತ್ತು ಸಾಮಾಜಿಕ ಅಸ್ಥಿರತೆ, ಹಿಂದೂ -ಮುಸಲ್ಮಾನ ಬಾವೈಕ್ಯತೆ, ತಾಯಿ ಮತ್ತು ತಾಯಿತನದ ತುಡಿತ ನೈಜ ಘಟನೆಯನ್ನಾಧರಿಸಿ ಎಲ್ಲೂ ಕೂಡಾ ಯಾವುದೇ ಜನಾಂಗದ ಯಾವುದೇ ವ್ಯಕ್ತಿಯ ಭಾವನೆಗಳಿಗೆ ಘಾಸಿಯಾಗದ ರೀತಿಯಲ್ಲಿ ಸಮಾಜಕ್ಕೆ ಮಾಯದ ಮದಿಪನ್ನು ಈ ಸಿಮಾದ ಮೂಲಕ ನಿರ್ದೇಶಕ ಚೇತನ್ ಮುಂಡಾಡಿ ನೀಡಿದ್ದಾರೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಸದಾನಂದ ಪೆರ್ಲ, ಭಾಸ್ಕರ ರೈ ಕುಕ್ಕುವಳ್ಳಿ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಟರಾದ ಹಿತೇಶ್, ಅನೀಶ್, ಚೇತನ್ ರೈ, ಸುಜಾತ ಪೆರಾಜೆ, ನಿರ್ದೇಶಕ ಚೇತನ್ ಮುಂಡಾಡಿ, ನಿರ್ಮಾಪಕ ಸಂದೀಪ್ ಕುಮಾರ್ ನಂದಳಿಕೆ, ಗಣೇಶ್ ಹೆಗಡೆ, ತಮ್ಮ ಲಕ್ಷ್ಮಣ, ಮೊದಲಾದವರು ಉಪಸ್ಥಿತರಿದ್ದರು. ಮಂಗೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಮದಿಪು ಸಿನಿಮಾ ಮಂಗಳೂರಿನಲ್ಲಿ ಸುಚಿತ್ರ, ಬಿಗ್ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಮಣಿಪಾಲದಲ್ಲಿ ಆನಾಕ್ಸ್, ಪುತ್ತೂರಿನಲ್ಲಿ ಅರುಣಾ ಚಿತ್ರಮಂದಿರದಲ್ಲಿ ಚಿತ್ರ ಮಂದಿರದಲ್ಲಿ ಚಿತ್ರ ತೆರೆಕಂಡಿದೆ.
ಮದಿಪು, ಕತೆಯಲ್ಲ, ಜೀವನ ಸಂಗ್ರಾಮ. ಬರೀ ಸಂಗ್ರಾಮ ಅಲ್ಲ, ಜೀವನ ವಿಧಾನ, ಬರೀ ಜೀವನ ವಿಧಾನವಲ್ಲ, ಕಲಾರಾಧನೆ. ಮದಿಪು ಅಂದರೆ ಪ್ರಸಾದ ಎಂದು ಸಿನೆಮಾದ ಬಗ್ಗೆ ನಿದೇಶಕ ಚೇತನ್ ಮುಂಡಾಡಿ ತಿಳಿಸಿದರು.
ಮದಿಪು
ಕಲೆ ಮತ್ತು ನಂಬಿಕೆ, ಕಲೆ ಮತ್ತು ಆರಾಧನೆ, ಕಲೆ ಮತ್ತು ಸಮರ್ಪಣೆ-ಪರಸ್ಪರ ಕೈ ಹಿಡಿದು ನಡೆಯುವಂಥ ನಾಡು ಅವಿಭಜಿತ ದಕ್ಷಿಣ ಕನ್ನಡ. ಅಲ್ಲಿನ ಪ್ರತಿಯೊಂದು ಆಚರಣೆಯೂ ಬದುಕಿಗೆ ಹತ್ತಿರವಾದದ್ದೇ. ನಂಬಿಕೆಯೇ ಕೈ ಹಿಡಿದು ನಡೆಸುವ ಇಂಥ ಆಚರಣೆಗಳನ್ನು, ಧಾರ್ಮಿಕ ವಿಧಿ ವಿಧಾನಗಳನ್ನು ಅಲ್ಲಿಯ ಮಂದಿ ಭಕ್ತಿ, ಶ್ರದ್ಧೆ ಮತ್ತು ಅಕ್ಕರೆಯಿಂದ ನೋಡುತ್ತಾರೆ. ಕಲೆಯೇ ಒಂದು ಧರ್ಮ, ಧರ್ಮದ ಮೂಲಕ ಕಲೆ ಎಂಬ ವಿಶಿಷ್ಟ ಗ್ರಹಿಕೆಯ ಮಂದಿಯ ನಡುವೆ ನಡೆಯುವ ಮನೋಜ್ಞ ಕಥಾನಕ ಮದಿಪು, ಭೂತಾರಾಧನೆಯ ಹಿನ್ನೆಲೆಯನ್ನು ಹೊಂದಿರುವ ಕತೆ ಇದು. ಭೂತಕೋಲ ಕಟ್ಟುವ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ತಳಮಳದ ಕತೆಯೂ ಹೌದು. ಭೂತ ಕಟ್ಟುವುದನ್ನೇ ತನ್ನ ಜೀವನ ವಿಧಾನ ಮತ್ತು ಜೀವನ ಧರ್ಮವನ್ನಾಗಿ ಮಾಡಿಕೊಂಡಿರುವ ಕುರುಬಿಲ, ಇದ್ದಕ್ಕಿದ್ದಂತೆ ಅದರಿಂದ ವಿಮುಖನಾಗಬೇಕಾಗಿ ಬರುವುದು ಆತನನ್ನು ಕಂಗಾಲು ಮಾಡುತ್ತದೆ. ಕುರುಬಿಲನ ವಿಷಣ್ಣತೆಯಲ್ಲಿ ಪರತಿಯ ಒದ್ದಾಟದಲ್ಲಿ ಗುತ್ತಿನ ಮನೆಯ ಅಬ್ಬರದಲ್ಲಿ ನಂಬಿಕೆ, ಸಿರಿವಂತಿಕೆ, ಜಾತೀಯತೆ, ದೈವಿಕತೆಯ ಸಂಗಮದಲ್ಲಿ ಮತ್ತೊಂದು ಆಯಾಮಕ್ಕೆ ಕತೆ ಹೊರಳಿಕೊಳ್ಳುತ್ತದೆ. ಕುರುಬಿಲನ ಮಗನ ನೀಲಯ್ಯ ಭೂತಾರಾಧನೆಗೆ ತನ್ನನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಆತನ ಹುಟ್ಟಿನ ಪ್ರಶ್ನೆ ಎದುರಾಗುತ್ತದೆ. ನೀಲಯ್ಯನ ಮೂಲದ ಬಗ್ಗೆ ಕುರುಬಿಲ ಮತ್ತು ಪರತಿಗಿರುವ ಅನುಮಾನಗಳು, ಇದ್ದಕ್ಕಿದ್ದಂತೆ ಎದುರಾಗುವ ಫಾತಿಮಾ, ಧರ್ಮ, ನಂಬಿಕೆ ಮತ್ತು ಕರುಳುಬಳ್ಳಿ ಸಂಬಂಧ, ಅಂತಿಮವಾಗಿ ಗೆಲ್ಲುವ ಜೀವನಪ್ರೀತಿ. ಇದು ಮದಿಪು ಕತೆಯ ತಿರುಳು.ಮದಿಪು ಕೇವಲ ಮನುಷ್ಯ ಸಂಬಂಧಗಳ ಕತೆಯಲ್ಲ. ಧರ್ಮ, ಜಾತಿ, ನಂಬಿಕೆ ಮತ್ತು ಕಲೆಯ ಅಪೂರ್ವ ಸಂಗಮದಂತೆ ಕಾಣುವ ಭೂತಾರಾಧನೆಯ ಸೂಕ್ಷ್ಮ ವಿವರಗಳನ್ನು ಚಿತ್ರ ತೆರೆದಿಡುತ್ತಾ ಹೋಗುತ್ತದೆ. ಹೀಗಾಗಿ ಇದೊಂದು ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಯ ಚಿತ್ರಣವೂ ಆಗಿಬಿಡುತ್ತದೆ.
ಕಥೆ ಚಿತ್ರಕಥೆ ಕಲಾ ನಿರ್ದೇಶನ ಚೇತನ್ ಮುಂಡಾಡಿ, ಕ್ರಿಯಾತ್ಮಕ ನಿರ್ದೇಶನ ಸುಧೀರ್ ಶಾನ್ಬೋಗ್, ಸಹ ನಿರ್ದೇಶನ ಶರತ್ ಕುಮಾರ್ ಮತ್ತು ವಿಶಾಲ್ ಕುಮಾರ್, ನಿರ್ಮಾಪಕರು ಸಂದೀಪ್ ಕುಮಾರ್ ನಂದಳಿಕೆ, ಸಂಗೀತ ಮನೋಹರ್ ವಿಠ್ಠಲ್, ಸಂಕಲನ ಶ್ರೀಕಾಂತ್, ಛಾಯಾಗ್ರಹಣ ಗಣೇಶ್ ಹೆಗಡೆ, ಸಂಭಾಷಣೆ ಜೋಗಿ, ತುಳು ಸಂಭಾಷಣೆ ಚಂದ್ರನಾಥ್ ಬಜಗೋಳಿ, ಕಲಾವಿದರು ಎಂ.ಕೆ.ಮಠ, ಸರ್ದಾರ್ ಸತ್ಯ, ಸೀತಾಕೋಟೆ, ಸುಜಾತ ಶೆಟ್ಟಿ, ಚೇತನ್ ರೈ ಮಾಣಿ, ಜೆ.ಬಂಗೇರ, ನಾಗರಾಜ್ ರಾವ್, ದಯಾನಂದ್ ಕತ್ತಲ್ಸರ್, ರಮೇಶ್ ರೈ ಕುಕ್ಕುವಳ್ಳಿ, ಯುವರಾಜ್ ಕಿಣಿ, ಡಾ.ಜೀವನ್ಧರ್ ಬಲ್ಲಾಳ್, ಸುಜಾತ ಕೋಟ್ಯಾನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.