ನಾವೂ ಏನಾದರೂ ಸಿದ್ದಿ ಪಡೆಯಬೇಕಾದರೆ ಸಾಧನೆ ಅವಶ್ಯ. ನಮ್ಮ ಬದುಕಿನ ಸಿದ್ಧಿ, ಪರಮಶಾಂತಿ ಅನುಭವಿಸೋದ, ನಮ್ಮ ದಿವ್ಯತೆಯನ್ನ ಸಾಕ್ಷಾತ್ ಕರಿಸಿಕೊಳ್ಳದ. ಅರವಿಂದ ಮಹರ್ಷಿಗಳು ಹೇಳ್ತಾರ ಮನುಷ್ಯ ಸ್ವರೂಪಾತ್ ದೇವತಾ, ಮನುಷ್ಯನಲ್ಲಿ ದೇವರ ಸತ್ವವಿದೆ. ಅದನ್ನ ಅನುಭವಿಸಬೇಕು. ಅದನ್ನು ಅನುಭವಿಸೋದಕ್ಕ ಒಂದ ಸಾಧನೆ ಬೇಕಾಗ್ತಾದ. ಅದ ಸಿದ್ಧಿ, ಬರೀ ಹಾಡೋದು ಒಂದು ಸಾಧನೆ, ಒಕ್ಕಲಿಗ ದುಡಿಯೋದ ಸಾಧನೆ. ಪ್ರಶಾಂತ ಜೀವನ ಸಾಗಿಸೋದ ಸದ್ಭಾವ ಸಾಧನೆ. ನಮ್ಮ ಜೀವನ ನಿಂತಿರೋದ ಭಾವದ ಮೇಲೆ.
ಭಾವ ಅನ್ನೋ ಒಂದ ಅಂಶ ಇರದಿದ್ದರ ಏನ್ ಆಗತಿತ್ತು ಹಂಗ ಸುಮ್ಮನ ವಿಚಾರ ಮಾಡಿರಿ. ನೋಡುತ್ತಿದ್ದ ಆನಂದಿಸಲಿಕ್ಕ ಆಗ್ತಿರಲಿಲ್ಲ, ಕೇಳ್ತಿದ್ದ ರಸ ಇರ್ತಿರಲಿಲ್ಲ. ಹೀಂಗಾಗಿ ಎಲ್ಲದರ ಹಿಂದ ಭಾವ ಬೇಕು. ಭಾವ ಇಲ್ಲ, ಅನುಭವ ಇಲ್ಲ. ಭಾವಯುಕ್ತವಾಗಿರಬೇಕು, ಪ್ರಸನ್ನತಾ ಆದ, ಅಂತಹ ಭಾವ ಗಳಿಸೋದ ಅದ, ಅದನ್ನ ವಿಸ್ತಾರ ಮಾಡಿಕೊಳ್ಳೊದ ಅದ, ಶುಚಿಗೊಳಿಸೋದು, ಹರವೋದು, ಎಷ್ಟ ವಿಸ್ತಾರ ಮಾಡೋದು ಅದ ಅಂದ್ರ ಜಗತ್ತಿನ್ನಷ್ಟು ಮಾಡೋದು, ಜಗತ್ತಿನ ಶಕ್ತಿಗ ಇತಿ-ಮಿತಿಯಿಲ್ಲ. ಆದರ ನಮ್ಮ ಬುದ್ದಿಗೆ ಇತಿ ಮಿತಿ ಅದ, ಕಾರ್ಯಕ್ಕ, ಕ್ರಿಯಕ್ಕೂ ಮಿತಿ ಅದ. ಆದರ ಮನಸ್ಸಿಗೆ ಅದು ಇಲ್ಲ. ಮನಸ್ಸು ಅನಂತ, ವಿಶಾಲ ಅದ. ಅದಕ್ಕ ಯಾವುದೇ ಕಟ್ಟುಪಾಡುಗಳಿಲ್ಲ. ಅವಾಗ ಮಹಾತ್ಮ, ಅಂತದೊಂದ ಮನಸ್ಸು, ಭಾವ ನಮ್ಮೊಳಗಾದ. ಇನ್ನೇನು ಕೊಡಬೇಕು ದೇವರು?
ನಾವು ಬಹಳ ಸಂಕುಚಿತ ಮಾಡಿವಿ, ಸಣ್ಣಪುಟ್ಟ ವಸ್ತುಗಳೇ ನಮ್ಮನ್ನ ಆವರಿಸಿ ಬಿಟ್ಟಾವ, ಬರೀ ಹಗಲು, ರಾತ್ರಿ ಅವೇ, ಹೀಂಗ ಆದ್ರ ಪರಮಸಿದ್ಧಿ ಪಡೆಯೋದ ಹೆಂಗ. ಭಾವ ಶ್ರೀಮಂತ ಆದರ ಸಿರಿವಂತ, ಸಮಾಧಾನಿ, ಯಾರು ಅದನ್ನ ರೂಢಿಸಿಕೊಳ್ಳದ, ರೂಪಿಸಿಕೊಳ್ಳದ, ಬೆಳಸೋದ, ಅದ ಸದ್ಭಾವ ಸಾಧನೆ. ಭಾವ ಸಂಕುಚಿತಗೊಳಿಸದನ್ನ ತೆಗೆದು ಹಾಕೋದು, ಮಾಲಿನ್ಯ, ಕಾಲುಷ್ಯ ತೆಗೆಯಬೇಕು. ದಾರಿಯಲ್ಲಿರುವ ಅಡೆ-ತಡೆಗಳನ್ನು ತೆಗೆದು ಹಾಕೋದು, ಅವುಗಳನ್ನು ತೆಗೆದುಹಾಕದಿದ್ದರೆ ಗುರಿ ತಲುಪಲು ಆಗಲ್ಲ, ಸಾಧನೆ ಮಾಡಲು ಆಗಲ್ಲ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 11 ನೇ ದಿನ 07-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.