ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಪ್ರಾಚೀನ ಕಾಲದಿಂದಲೂ ಪವಿತ್ರ ಗೌರವಯುತ ಸ್ಥಾನಗಳನ್ನು ನೀಡಲಾಗಿದೆ. ಪ್ರಾಚೀನ ಕಾಲದಲ್ಲೇ ಮಾತೃಪ್ರಧಾನ ಕುಟುಂಬಗಳಿದ್ದವು. ಕೇರಳದಲ್ಲಿ ಈಗಲೂ ಮಾತೃಪ್ರಧಾನ ಕುಟುಂಬಗಳಿವೆ. ಅದಕ್ಕಾಗಿ ಅದು ಅತಿ ಹೆಚ್ಚು ಸಾಕ್ಷರರನ್ನು ಹೊಂದಿದ ರಾಜ್ಯವೆನಿಸಿದೆ. ತಾಯಿಯೆ ದೇವರು, ಜನನಿ ತಾನೇ ಮೊದಲು ಗುರುವು, ಮನೆಯೇ ಮೊದಲ ಪಾಠಶಾಲೆ ಎಂದಿದ್ದಾರೆ.
ಪುರಾಣಕಾಲದಿಂದಲೂ ಪವಿತ್ರ ನದಿಗಳಿಗೆ ಸ್ತ್ರೀ ಹೆಸರೇ ಇಟ್ಟಿದ್ದಾರೆ. (ಬ್ರಹ್ಮಪುತ್ರ ನದಿಯೊಂದನ್ನು ಬಿಟ್ಟು ಏಕೆಂದರೆ ಅದು ಗಂಡು ನದಿಯಂತೆ!). ನಿದ್ರೆಗೂ ನಿದ್ರಾದೇವಿಯೆಂದು, ದೇಶದ ನೆಲಕ್ಕೆ ತಾಯ್ನೆಲವೆಂದು(ಮಾತೃಭೂಮಿ), ದೇಶಕ್ಕೆ ತಾಯಿ ಭಾರತಿ ಎಂದು ಸಂಬೋಧಿಸುತ್ತಾರೆ. ಅದೇ ರೀತಿ ಸ್ವಂತಭಾಷೆಗೆ ಮಾತೃಭಾಷೆ ಎನ್ನುತ್ತಾರೆ. ಭೂಮಿಯು ಸಹ ಭೂಮಾತೆ ಆಗಿದ್ದಾಳೆ, ಸೃಷ್ಟಿಯ ಮೂಲ ಸ್ತ್ರೀ ಆಗಿದ್ದಾಳೆ.
ಕ್ಷಮಯಾಧರಿತ್ರಿ ಎಂದು ಕರೆಯಿಸಿಕೊಳ್ಳುವ ಸ್ತ್ರೀ ಭೂಮಿತೂಕದಷ್ಟೇ ಸಹನಾಮಯಿ, ಎಷ್ಟೋ ಕೊಬ್ಬಿದ ಭಯಂಕರ ರಾಕ್ಷಸರನ್ನು ದೇವಿ ಅವತಾರವೆತ್ತಿ ಅವರನ್ನು ಸಂಹರಿಸಿ ಜಗನ್ಮಾತೆ(ಜಗದಂಬೆ) ಎನಿಸಿಕೊಂಡಳು. ದೇವರಿಗಿಂತ ದೇವಿಯ ಆರಾಧನೆಯಿಂದ ಬೇಗ ಫಲಗಳನ್ನು ಪಡೆಯಬಹುದು. ಆದರೆ ದೇವಿಯ ಆರಾಧನೆಯನ್ನು ಸಹ ಬಲು ಎಚ್ಚರಿಕೆಯಿಂದ ತಪ್ಪಾಗದಂತೆ ವೃತ ಮಾಡುವುದು ಸಹ ಅಗತ್ಯ. ಗೆಲುವು ಸಹ ಸ್ತ್ರೀರೂಪದಿಂದ ಕೂಡಿದ್ದು ವಿಜಯಲಕ್ಷ್ಮೀ ಒಲಿದಳು ಎನ್ನುತ್ತಾರೆ. ದೀಪ ಅಥವಾ ಬೆಳಕಿಗೂ ಸ್ತ್ರೀಯೇ ಆಗಿದ್ದಾಳೆ, ಅದೃಷ್ಟಕ್ಕೂ ದುರದೃಷ್ಟಕ್ಕೂ ಮತ್ತು ಸಂಪತ್ತಿಗೂ ಕ್ಷ್ಮೀಯೇ(ಸ್ತ್ರೀ) ಕಾರಣ. ವಿದ್ಯೆಗೆ ಅಧಿದೇವತೆ ಮಾತೆ ಸರಸ್ವತಿಯು ಆಗಿದ್ದಾಳೆ.
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸಿ ಎಂಬ ನಾಣ್ಣುಡಿಯಂತೆ ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲೆಂದು, ಕುಪುತ್ರೋ ಜಾಯೇತ ಕುಮಾತಾ ನ ಭವತಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲಾರಳು ಎಂದು ನಮ್ಮ ಸನಾತನ ಸಂಸ್ಕೃತಿಯ ಮಾತೆಯ ಮಹತ್ವವನ್ನು ಹೊಗಳಿದ ಆದಿ ಶ್ರೀಶಂಕರಾಚಾರ್ಯರು; ಇವರು ಸಂನ್ಯಾಸವನ್ನು ಸ್ವೀಕಾರ ಮಾಡಿದ್ದರೂ ಸಹಿತ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತೃಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ಭವಸಾಗರವನ್ನು ತೊರೆದರೂ ಮಾತೃತ್ವದ ಸಂಬಂಧ ತೊರೆಯಲು ಸಾಧ್ಯವಿಲ್ಲವೆಂದು ತೋರಿಸಿಕೊಟ್ಟರು.
ಭಾರತೀಯ ಸಂಸ್ಕೃತಿಯಲ್ಲಿ ಒಂದು ಮಾತಿದೆ ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಎಂದು ಅದರಂತೆ ಶಿವಾಜಿ ಮಹಾರಾಜನಿಗೆ ಪುರಾಣ ಕಥೆಗಳನ್ನು ಹೇಳಿ ಆತನ ಚರಿತೆಯನ್ನು ಜಗತ್ತು ಇತಿಹಾಸದ ಪುಟಗಳಲ್ಲಿ ನೆನಪಿಡುವಂತೆ ಚಾರಿತ್ರ್ಯಪುರುಷನನ್ನಾಗಿ ಮಾಡಿದಳು. ಪುರುಷನಷ್ಟೇ ಸರಿಸಮಾನವಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಮಹಿಳೆಯರು ಹೋರಾಡಿದ್ದಾರೆ. ಹೋರಾಟಗಾರರಿಗೆ ಕೈಯಿಂದ ರೊಟ್ಟಿಯನ್ನು ತಟ್ಟಿ ಕೊಟ್ಟಿದ್ದಾರೆ ಮತ್ತು ಕೈಯಲ್ಲಿ ಕತ್ತಿ ಹಿಡಿದು ಮರ್ಮಾಘಾತವಾಗುವಂತೆ ಏಟನ್ನು ನೀಡಿದ್ದಾರೆ.
ನಮ್ಮ ಸ್ತ್ರೀ ಬಗ್ಗೆ ಜಗತ್ತಿಗೆ ಮೊಟ್ಟಮೊದಲಿಗೆ ಅರುಹಿದವರೆಂದರೆ ಸ್ವಾಮಿ ವಿವೇಕಾನಂದರು, ಅವರು ಚಿಕ್ಯಾಗೋದ ಧರ್ಮಪ್ರಚಾರದಲ್ಲಿ ಸಹೋದರ ಸಹೋದರಿಯರೇ ಎಂದು ವಸುದೈವ ಕುಟುಂಬಕಂ ಎಂದು ಕರತಾಡನ ಮಾಡುವಂತೆ ವಿಶ್ವಮಾನವತೆಯನ್ನು ಸಾರಿದರು.
ನಮ್ಮ ಈ ನಾಡು ಸ್ತ್ರೀಯಾಗಿ ನೋಡುತ್ತಿರುವುದು ನಮ್ಮ ದೇಶವೊಂದೇ ಎಂದು ಜಗತ್ತಿನಲ್ಲಿ ಹೇಳಬಹುದು. ಏಕೆಂದರೆ ನಾವು ಭಾರತಮಾತಾ ಎಂದಂತೆ ಇಂಗ್ಲೆಂಡನವರು ಇಂಗ್ಲಂಡ್ಮಾತಾ, ಅಮೇರಿಕದವರು ಅಮೇರಿಕಮಾತಾ, ರಷ್ಯಾದವರು ರಷ್ಯಾಮಾತಾ ಎಂದಂತೆ ವಿವಿಧ ದೇಶದವರು ಮಾತೃಸಮಾನವಾಗಿ ದೇಶವನ್ನು ಹೋಲಿಸಿದ್ದನ್ನು ನಾನು ಇದುವರೆಗೂ ಕೇಳಿಲ್ಲ, ಓದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.