’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ” ಎಂಬ ಹೇಳಿಕೆಗೂ ಇಲ್ಲಿ ಅವಕಾಶವಿದೆಯಲ್ಲ, ಗ್ರೇಟ್. ಇದೇ ಮಾತನ್ನು ಪಾಕಿಸ್ಥಾನದ ನೆಲದಲ್ಲಿ ಅಲ್ಲಿನ ಯೋಧನ ಪುತ್ರಿಯೋರ್ವಳು, ’ನನ್ನ ತಂದೆಯನ್ನು ಭಾರತ ಕೊಂದಿಲ್ಲ, ಯುದ್ಧ ಕೊಂದಿದೆ ಎಂದಿದ್ದರೆ ? ಸುಮ್ಮನೆ ಕಲ್ಪಿಸಿಕೊಳ್ಳಿ.
’ನಾನು ಎಬಿವಿಪಿಗೆ ಹೆದರುವುದಿಲ್ಲ, ನಾನು ಒಂಟಿಯಲ್ಲ, ನನ್ನೊಂದಿಗೆ ಭಾರತದ ಪ್ರತಿ ವಿದ್ಯಾರ್ಥಿಯೂ ( ಎಬಿವಿಪಿ ಹೊರತು ಪಡಿಸಿ ಇರಬಹುದು, ಗೊತ್ತಿಲ್ಲ) ಇದ್ದಾರೆ’ ಎಂದು ಹೇಳುವ ಅವಕಾಶವೂ ಇದೆಯಲ್ಲ? ಅಷ್ಟೇ ಏಕೆ ಅದೇ ಆಹ್ವಾನಿತ ರಶೀದ್ ಮಹಾಶಯನಿಗೆ ದೇಶ ವಿರೋಧಿ ಘೋಷಣೆ ಕೂಗುವ ಧಾಷ್ಟ್ಯತೆ ಇತ್ತಲ್ಲ? ವಿಶ್ವವಿದ್ಯಾಲಯದ ಅಂಗಳದಲ್ಲೇ ಉಗ್ರ ಅಫ್ಜಲ್ ಗುರುವನ್ನು ಸ್ಮರಿಸಿದ್ದೂ ಆಯ್ತಲ್ಲ?
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇನ್ನೇನು ಬೇಕು? ಇದಕ್ಕೂ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಪಂಚದ ಅದ್ಯಾವ ರಾಷ್ಟ್ರದಲ್ಲಿ ಸಿಗಲು ಸಾಧ್ಯ ಹೇಳಿ? ಬಹುಶಃ ಭಾರತದ ಅತಿಯಾದ ಔದಾರ್ಯವೇ ದೌರ್ಬಲ್ಯವಾಗಿ ಪರಿಣಮಿಸುತ್ತಿದೆ ಅನಿಸುವುದಿಲ್ಲವೇ?
ಜ್ಞಾನದೇಗುಲಗಳು ಇಂದು ದೇಶವಿರೋಧಿ ಚಟುವಟಿಕೆಗಳ ತಾಣವಾಗುತ್ತಿವೆ. ಓದಿ ದೇಶಕಟ್ಟಬೇಕಾದ ವಿದ್ಯಾರ್ಥಿಗಳ ಯುವ ಮನಸುಗಳು ಉಗ್ರರ ಜಪ ಮಾಡುವುದೆಷ್ಟು ಸರಿ? ಕಾಶ್ಮೀರ ಪ್ರತ್ಯೇಕತೆ, ಪಾಕ್ ಪರ ಘೋಷಣೆಗಳನ್ನು ಕೂಗುತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಅಮಲಿನಲ್ಲಿ ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ?
ಕಾಂಗ್ರೆಸ್ ಮಹಾಶಯರು ಇದೀಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬುದ್ಧಿ ಹೇಳುತ್ತಿದ್ದಾರೆ. ಪಾಪ, ಭಾರತೀಯ ಸೇನಾ ನಾಯಕ ಬಿಪಿನ್ ರಾವತ್ ಅವರ ಹೇಳಿಕೆಯನ್ನು ಖಂಡಿಸಿದ್ದೇಕೆ? ಅವರೇನು ದೇಶ ವಿರೋಧಿ ಹೇಳಿಕೆ ನೀಡಿದ್ದರೆ? ದೇಶವಿರೋಧಿಗಳು, ಉಗ್ರರೊಂದಿಗೆ ಕೈ ಜೋಡಿಸುವವರಿಗೆ ಅವರು ಕಠಿಣ ಸಂದೇಶ ಸಾರಿದ್ದರು.
ದೇಶ ವಿರೋಧಿ ನಿಲುವಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶದ ಹಿತ ಕಾಪಾಡುವ ಸೇನಾ ಮುಖ್ಯಸ್ಥರಿಗೆ ಇಲ್ಲವಾಯಿತಲ್ಲ, ಪ್ರಜಾಪ್ರಭುತ್ವದ, ಅಭಿವ್ಯಕ್ತಿ ಸ್ವಾತಂತ್ರ್ಯದ ದುರಂತ ಅಡಗಿರುವುದೇ ಇಲ್ಲಿ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ರ್ಯಾಲಿಗೆ ಅವಕಾಶವನ್ನೇ ನೀಡಲು ಹಿಂದೇಟು ಹಾಕಿತ್ತಲ್ಲ ಪ.ಬಂಗಾಲ? ಜಮ್ಮ-ಕಾಶ್ಮೀರ ಸiಸ್ಯೆಗೆ ಸಂಬಂಧಿಸಿದಂತೆ ಸತ್ಯಾಂಶಗಳನ್ನು ತಿಳಿಸಲು ಬಂದಿದ್ದ ಜಿ.ಡಿ.ಭಕ್ಷಿ ಹಾಗೂ ಇತರರ ಕಾರ್ಯಕ್ರಮವನ್ನು ಪ.ಬಂಗಾಲ ರದ್ದುಪಡಿಸಿದ್ಯಾಕೆ? ಭಾಷಣದಲ್ಲಿ ಯಾವುದನ್ನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎಂದು ಮೊದಲೇ ಆದೇಶ ರವಾನಿಸಿತ್ತಲ್ಲ ಜಿಲ್ಲಾಡಳಿತ? ಯಾಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬುದು ಆಗ ಯಾರಿಗೂ ನೆನಪಿರಲಿಲ್ಲವೇ ?
ಮೊನ್ನೆ ತಾನೆ ಮಂಗಳೂರಿಗೆ ಬಂದಿದ್ದ ಕೇರಳದ ಸಿಎಂ ಪಿಣರಾಯಿ ವಿಜಯನ್, ಡಾ.ಎಂ.ಎಂ.ಕಲ್ಬುರ್ಗಿ, ಪಾನ್ಸರೆ ಅಷ್ಟೇ ಏಕೆ ಮಹಾತ್ಮ ಗಾಂಧಿಯವರನ್ನು ಕೊಂದದ್ದು ಆರ್ಎಸ್ಎಎಸ್ನವರೇ ಎಂದು ಷರಾ ಬರೆದರು. ಅದ್ಯಾವ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದೆ? ಅದ್ಹೇಗೆ ತೀರ್ಪು ನೀಡಲು ಸಾಧ್ಯ ಹೇಳಿ, ಏಕೆಂದರೆ ತನಿಖೆಗಳೇ ಪೂರ್ಣಗೊಂಡಿಲ್ಲ, ದಶಕಗಳು ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ? ಆದರೂ ಒಂದು ರಾಜ್ಯದ ಮುಖ್ಯಮಂತ್ರಿ ಒಂದು ಬೃಹತ್ ಸಂಘಟನೆಗೆ ಅಪರಾಧಿ ಪಟ್ಟವನ್ನೇ ಕಟ್ಟುವ ಹೇಳಿಕೆ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯವೂ ನಮ್ಮಲ್ಲಿದೆ ಎಂದಾಯಿತಲ್ಲ?
ಧಾರವಾಡದ ಸಾಹಿತ್ಯ ಸಂಭ್ರಮ-2017 ದಲ್ಲಿ ಪಾಪ ಅದೇ ಕಲ್ಬುರ್ಗಿ ಅವರಿಗೆ ಸಂಬಂಧಿಸಿದಂತೆ ಇನ್ನೂ ಆಡದ ಮಾತಿಗಾಗಿ ಚಪ್ಪಲಿ ದರ್ಶನ ಎದುರಿಸಬೇಕಾಯಿತು ಸಾಹಿತಿ ಮಂಜುನಾಥ ಅಜ್ಜಂಪುರ ಅವರು. ಯಾಕೆ ಮಾಧ್ಯಮದ ವರದಿಯೊಂದನ್ನು ಉಲ್ಲೇಖಿಸುವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿಲ್ಲವಾಯಿತಲ್ಲ ಏನು ಮಾಡೋದು?
ವಿದ್ಯಾರ್ಥಿನಿ ಕೌರ್ ಇವೆಲ್ಲವನ್ನು ಅರ್ಥ ಮಾಡಿಕೊಳ್ಳಲು ಇದು ಸುಸಂದರ್ಭ. ಜಾಣ ಮರೆವು, ಜಾಣ ಕಿವುಡುತನ ಮೆರೆಯುವ ಪಟ್ಟಭದ್ರ ಸಂಘಟನೆಗಳು, ರಾಜಕೀಯ ಪಕ್ಷಗಳು ಉರಿಯುವ ದೇಶವಿರೋಧಿ ಬೆಂಕಿಗೆ ಎಣ್ಣೆ ಸುರಿಯುತ್ತಲೇ ಇರುತ್ತಾರೆ. ತುಷ್ಟೀಕರಣ, ಮತಬ್ಯಾಂಕ್ ರಾಜಕಾರಣ ಅವರ ನೆತ್ತರಲ್ಲೇ ಒಂದಾಗಿ ಬಿಟ್ಟಿದೆ ಅನಿಸುತ್ತಿದೆ. ಅವರು ಮಾಡಿದ್ದನ್ನು ಅವರು ಉಣ್ಣುತ್ತಾರೆ ಬಿಡಿ.
ಆಘಾತವೋ, ಅಪಾಯಕಾರಿ ಸನ್ನಿವೇಶವೋ ಏನೋ ಅನ್ನಿ, ಓರ್ವ ವಿದ್ಯಾರ್ಥಿನಿ ಅಲ್ಲ, ಒಂದು ಸಂಘಟನೆ ಅಲ್ಲ, ವಿಶ್ವ ವಿದ್ಯಾಲಯಗಳೇ ದೇಶ ವಿರೋಧಿ ನಿಲುವುಗಳಿಗೆ ಇಂಬು ಕೊಡುತ್ತಿರುವುದು ಗಂಭೀರ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇಕಾದಾಗ ಅಸ್ತ್ರವಾಗಿ ಬಳಸಿ, ಬೇಡವಾದಾಗ ಅದಕ್ಕೆ ಸಮಾಧಿ ಕಟ್ಟಿದಂತೆ ವರ್ತಿಸುವ ಗೋಸುಂಬೆಗಳ ಬಣ್ಣವನ್ನು ಕೌರ್ನಂತಹ ಯುವ ಮನಸು ಅರ್ಥಮಾಡಿಕೊಳ್ಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.