ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ. ಆದರೆ ಇಂದು ಆ ಸಸ್ಯ ಕಾಶಿಗೆ ಆಪತ್ತು ಎದುರಾಗಿದೆ. ಗಣಿ ಕಳ್ಳರು ಕನ್ನ ಹಾಕಲು ಹೊಂಚುಹಾಕಿದ್ದಾರೆ. ಜೊತೆಗೆ ಬೇಟೆಗಾರರಿಂದ ವನ್ಯಜೀವಿಗಳ ಬದುಕಿಗೆ ಕುತ್ತು ಬಂದಿದೆ. ಗುಡ್ಡಕ್ಕೆ ಬೀಳುತ್ತಿರುವ ಬೆಂಕಿಯಿಂದ ಔಷಧಿ ಸಸ್ಯಗಳು ನಶಿಸುತ್ತಿದೆ.
ನವಿಲುಗಳ ನರ್ತನ, ಪ್ರಶಾಂತ ವಾತಾವರಣ, ಅಪಾರ ಖನಿಜ ಸಂಪತ್ತು, ವಿವಿಧ ಬಗೆಯ ಆಯುರ್ವೇದ ಸಸ್ಯಗಳು ಕಪ್ಪತ್ತಗುಡ್ಡದ ಆಸ್ತಿ. ಆದರೆ ಜನರ ಮೌಢ್ಯತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಅದು ಸೊರಗುತ್ತಿದೆ.
ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಗದಗ ತಾಲ್ಲೂಕುಗಳಲ್ಲಿ ಕಪ್ಪತ್ತಗುಡ್ಡ ವ್ಯಾಪಿಸಿದೆ. 36 ಕ್ಕೂ ಹೆಚ್ಚು ಗ್ರಾಮಗಳಲ್ಲಿ 23,301.67 ಹೆಕ್ಟರ್ ಪ್ರದೇಶದ ವಿಸ್ತೀರ್ಣ ಹೊಂದಿದೆ. 70 ಕ್ಕೂ ಕಿ.ಮೀ ಹೆಚ್ಚು ವ್ಯಾಪ್ತಿ ಹೊಂದಿದೆ. ಗದಗ ತಾಲ್ಲೂಕಿನ ಬಿಂಕದಕಟ್ಟಿಯಲ್ಲಿ ಪ್ರಾರಂಭವಾಗಿ ಮುಂಡರಗಿ ತಾಲೂಕಿನ ವೀರಭದ್ರೇಶ್ವರ ದೇವಸ್ಥಾನಕ್ಕೆ ಇದು ಅಂತ್ಯಗೊಳ್ಳುತ್ತದೆ.
ಮೂಢನಂಬಿಕೆ
ಗುಡ್ಡದಲ್ಲಿನ ಕಪ್ಪತ್ತಮಲ್ಲಯ್ಯ ದೇವಸ್ಥಾನ ಬಹಳ ಪ್ರಸಿದ್ಧ. ಕಪ್ಪತ್ತಗುಡ್ಡದ ತುದಿಗೆ ಬೆಂಕಿ ಹಚ್ಚಿದರೆ ಕಪ್ಪತ್ತ ಮಲ್ಲಯ್ಯನ ನೆತ್ತಿಗೆ ಸುಟ್ಟಂತೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಬೆಂಕಿ ಹಚ್ಚಿದರೆ ತಮಗೆ ಬರಗಾಲ ಬರುವುದಿಲ್ಲ. ಮಳೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ ಎಂದು ಜನ ನಂಬಿದ್ದಾರೆ.
ಗುಡ್ಡದಲ್ಲಿರುವ ಒಣಗಿದ ಹುಲ್ಲಿಗೆ ಬೆಂಕಿ ಹಚ್ಚಿದರೆ, ಮಳೆಯ ನಂತರ ಜಾನುವಾರುಗಳಿಗೆ ಹುಲ್ಲು ದೊರೆಯುತ್ತದೆ ಎಂಬ ಭಾವನೆ ಕೆಲವರದ್ದು. ಆದ್ರೆ ಮೌಢ್ಯತೆಗೆ ಬಲಿಯಾಗಿ ಕಪ್ಪತ್ತಗುಡ್ಡ ತನ್ನ ಗತಕಾಲದ ಗತವೈಭವ ಕಳೆದುಕೊಳ್ಳುತ್ತಿದೆ ಎನ್ನುವುದು ಪ್ರಜ್ಞಾವಂತರ ಆರೋಪ.
ವನ್ಯಸಂಕುಲ
ಕಪ್ಪತ್ತಗಿರಿಯಲ್ಲಿ 317-ಕೃಷ್ಣಮೃಗ, 66- ಕಾಡುಕುರಿ, 35-ಚುಕ್ಕೆಜಿಂಕೆ, 165-ಮುಳ್ಳುಹಂದಿ, 285-ಕಾಡುಹಂದಿ, 4-ಚಿರತೆ, 4-ಕರಡಿ, 40-ತೋಳ, 85-ನರಿ, 12-ಕತ್ತೆಕಿರುಬ, 13-ಕಾಡುಬೆಕ್ಕು, 225 – ನವಿಲುಗಳಿವೆ.
ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಕಪ್ಪತ್ತಗುಡ್ಡದಲ್ಲಿ ಶೇ.೭ರಷ್ಟು ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಗದಗ, ಮುಂಡರಗಿ, ಶಿರಹಟ್ಟಿ ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಮೂರು ವಲಯಗಳು ಸೇರಿ ಒಟ್ಟು 333.374 ಚ.ಕಿ.ಮೀ ನಷ್ಟು ಅರಣ್ಯ ಪ್ರದೇಶ ಹೊಂದಿದೆ.
ಗುಡ್ಡದ ವ್ಯಾಪ್ತಿಯಲ್ಲಿ 100- ಬಾವಿ, 127-ಕೆರೆ, 98-ಗವಿ, 60-ಪುರಾತನ ದೇವಸ್ಥಾನಗಳಿವೆ. ಜೊತೆಗೆ ಕರಿಲೆಕ್ಕಿ, ಸರಸ್ವತಿ, ಅಶ್ವಗಂಧ, ಸುವರ್ಣಗಡ್ಡಿ, ಅಮೃತಬಳ್ಳಿ ಸೇರಿದಂತೆ 450ಕ್ಕೂ ಹೆಚ್ಚು ಬಗೆಯ ಆಯುರ್ವೇದೀಯ ಸಸ್ಯಗಳಿವೆ.
ಕಪ್ಪತಗುಡ್ಡ ಅಭಿವೃದ್ಧಿ ಪ್ರಾಧಿಕಾರ
ಕಪ್ಪತ್ತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ವನ್ಯಧಾಮ ನಿರ್ಮಿಸಬೇಕು ಎಂದು ಹಲವು ದಶಕದಿಂದ ಪರಿಸರವಾದಿಗಳು ಹೋರಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಪರಿಣಾಮ ಇಲ್ಲಿನ ಅಪಾರ ಪ್ರಮಾಣದ ಖನಿಜ ಕದಿಯಲು ಕಂಪನಿಗಳು ಮುಂದಾಗುತ್ತಿವೆ. ಕಪ್ಪತ್ತಗುಡ್ಡದ ಮಣ್ಣಲ್ಲಿ ಖನಿಜವಿದೆ. ಚಿನ್ನ ಹಾಗೂ ಅದಿರು ಕಂಪನಿಗಳು ಲಗ್ಗೆ ಇಡಲು ಮುಂದಾಗಿವೆ. ಕಂಪನಿಗಳ ಲಾಬಿಗೆ ಸರ್ಕಾರ ಕೂಡ ಮಣಿದಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕಪ್ಪತ್ತಗುಡ್ಡದಲ್ಲಿ ವನ್ಯಧಾಮ ನಿರ್ಮಾಣ ಮಾಡುವ ಕುರಿತು ಈ ಹಿಂದೆ ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಈ ಬಗ್ಗೆ ವನ್ಯ ಧಾಮ ಸಮಿತಿ ಅಧ್ಯಕ್ಷ ಅನಿಲ ಕುಂಬ್ಳೆ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹ ಕೂಡ ನಡೆದಿತ್ತು. ಆದರೆ ಅದ್ಯಾರ ಕುತಂತ್ರದಿಂದ ಕೈತಪ್ಪಿಹೋಯಿತೋ ಆ ಗುಡ್ಡದ ಮಲ್ಲಯ್ಯನೇ ಬಲ್ಲ.
ಕಳೆದ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಚಿಂಚೊಳ್ಳಿ ಮತ್ತು ಭೀಮಗಡದಲ್ಲಿ ವನ್ಯಧಾಮ ನಿರ್ಮಾಣಕ್ಕೆ ಅನುಮತಿ ದೊರೆಯಿತು. ಈ ವೇಳೆ ಕಪ್ಪತ್ತಗುಡ್ಡದಲ್ಲಿನ ವನ್ಯಧಾಮ ನಿರ್ಮಾಣ ವಿಷಯ ಕೈಬಿಡಲಾಯಿತು. ಇದು ಪರಿಸರವಾದಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದ್ದಂತೂ ನಿಜ.
ತಲೆ ಎತ್ತುತ್ತಿವೆ ಕಂಪೆನಿಗಳು
ಈಗಾಗಲೇ ವನ್ಯಧಾಮ ನಿರ್ಮಾಣ ಜಾಗೆಯಲ್ಲಿ ರಾಗಡ ಮಿನರಲ್ಸ್ ಗೋಲ್ಡ್ ಕಂಪನಿ ತಲೆ ಎತ್ತಿದೆ. ಘೋರ್ಪಡೆ ಮೈನಿಂಗ್ ಕಂಪನಿ ಸೇರಿದಂತೆ ಇತರೆ ಕಂಪನಿಗಳು ಗಣಿಗಾರಿಕೆಗೆ ಹೊಂಚುಹಾಕಿವೆ. ಕಂಪನಿಗಳಿಗೆ ಮುಂದಿನ ಮಾರ್ಗವೀಗ ಸುಲಭವಾಗಿದೆ. ಹಾಗಾಗಿ ಇಲ್ಲಿನ ಸಂಪತ್ತಿಗೆ ಈಗ ಆತಂಕ ಎದುರಾಗಿದೆ ಎಂಬುದು ಪರಿಸರವಾದಿಗಳ ಅನಿಸಿಕೆ.
ಹೆಸರಿಗೆ ಸಂರಕ್ಷಿತ ಅರಣ್ಯ ಪ್ರದೇಶ
ಏಷ್ಯಾದಲ್ಲಿಯೇ ಪ್ರಥಮವಾಗಿ ಪವನ ವಿದ್ಯುತ್ ಉತ್ಪಾದನೆಯನ್ನು ಕಪ್ಪತ್ತಗುಡ್ಡದಲ್ಲಿ ಪ್ರಾರಂಭಿಸಲಾಯಿತು. ನಂತರ ಸುಜಲಾನ್, ಏನಾರ್ಕಾನ್ ಕಂಪನಿಗಳು ಗುಡ್ಡಕ್ಕೆ ಲಗ್ಗೆ ಇಟ್ಟಿವೆ. ಇವುಗಳಿಂದ ಕಪ್ಪತ್ತಗುಡ್ಡ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಆದಾಗ್ಯೂ ಇಲ್ಲಿ ಬೈಕ್ ಮತ್ತು ಕಾರ್ ರೇಸ್ ಮಾಡಲಾಗುತ್ತಿದೆ. ಜೊತೆಗೆ ರಾಮಘಡ ಮಿನಿರಲ್ಸ್ ಕಂಪೆನಿ ಚಿನ್ನ ಗಣಿಗಾರಿಕೆಗೆ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದೆ.
ಪ್ರಬಲ ಬಲ್ದೋಟಾ ಕಂಪೆನಿ
ಗದಗ ಜಿಲ್ಲೆ, ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಬಲ್ದೋಟಾ ಕಂಪೆನಿ ಚಿನ್ನ ಅಗೆಯಲು ಮುಂದಾಗಿದೆ. ಇದರಿಂದ ಸಸ್ಯಕಾಶಿ ಎಂದೇ ಖ್ಯಾತಿ ಹೊಂದಿರುವ ಕಪ್ಪತಗುಡ್ಡಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಇದರ ಸುತ್ತ-ಮುತ್ತ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪವಿದೆ. ಹೀಗಾಗಿ ಬಲ್ದೋಟಾ ಕಂಪನಿ ಚಿನ್ನ ಅಗೆಯಲು ಹೊಂಚು ಹಾಕಿ ಕುಳಿತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಕಂಪೆನಿಯು ಭಾರತ ಸರ್ಕಾರ ಮತ್ತು ಭೂವಿಜ್ಞಾನ ಮಂಡಳಿಯಿಂದ ಅನುಮತಿ ಪಡೆದಿದೆ. ಆದ್ರೆ ಇಲ್ಲಿನ 30 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿಕೊಂಡು ನಿಯಮಗಳನ್ನು ಗಾಳಿಗೆ ತೂರಿದೆ. ಇದಕ್ಕೆ ಇಲ್ಲಿನ ಜನರ ಪ್ರಬಲ ವಿರೋಧವಿದೆ.
ಗೋಲ್ಡ್ ಮೈನಿಂಗ್ ಕಂಪನಿಗೆ ಗುರಿಯಾಗಿರುವ ಪ್ರದೇಶದ ಸುತ್ತ ಮುತ್ತಲೆಲ್ಲಾ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಇಲ್ಲಿ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಬೋರ್ಡ್ ಕೂಡ ಹಾಕಲಾಗಿದೆ. ಆದಾಗ್ಯೂ ಅರಣ್ಯ ಪ್ರದೇಶವನ್ನು ಕೃಷಿಯೇತರ ಭೂಮಿಯನ್ನಾಗಿ ಜಿಲ್ಲಾಡಳಿತ ಪರಿವರ್ತಿಸಿಕೊಟ್ಟಿದೆ ಎಂದು ಆರೋಪಿಸಲಾಗುತ್ತಿದೆ.
ಚಿನ್ನದ ನಿಕ್ಷೇಪಕ್ಕಾಗಿ ಈ ಭಾಗದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಭೂ ಸರ್ವೆ ಮಾಡುವುದರ ಮೂಲಕ ಸುದೀರ್ಘ ತನಿಖೆ ಮಾಡಿದ್ದಾರೆ. ಸರ್ಕಾರ ಗೋಲ್ಡ್ ಮೈನಿಂಗ್ಗಾಗಿ ಈಗಾಗಲೇ ಪರವಾನಿಗೆ ನೀಡಿದೆ. ಇನ್ನೂ ಅರಣ್ಯ ಇಲಾಖೆ ಪರವಾನಿಗೆ ಮಾತ್ರ ಬಾಕಿ ಇದೆ. ಅರಣ್ಯ ಇಲಾಖೆ ಪರವಾನಿಗೆ ದೊರೆತಲ್ಲಿ, ಇಡೀ ಕಪ್ಪತ್ತಗುಡ್ಡಕ್ಕೆ ಕನ್ನ ಬೀಳುತ್ತದೆ ಎಂದು ಸ್ಥಳೀಯರು ಆತಂಕ.
ಒಟ್ಟಿನಲ್ಲಿ ಬಲ್ದೋಟ ಕಂಪೆನಿ ಗದಗ ಜಿಲ್ಲೆಯಿಂದ ಸುಮಾರು 8 ಸಾವಿರ ಕೆ.ಜಿ ಚಿನ್ನವನ್ನು ಉತ್ಪಾದಿಸುವ ಗುರಿ ಹೊಂದಿದೆ. ಖಾಸಗಿ ಕಂಪೆನಿಗೆ ಮಣೆ ಹಾಕಿದ ಸರ್ಕಾರದ ಧೋರಣೆಯಿಂದ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ, ಗದಗ ಜಿಲ್ಲೆಯಲ್ಲಿ ಪೋಸ್ಕೋ ಹೋರಾಟದ ಮಾದರಿಯಲ್ಲಿ, ಮತ್ತೊಂದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
ಬಹುಔಷಧೀಯ ಸಂಜೀವಿನಿ ಕಪ್ಪತ್ತಗುಡ್ಡದ ರಕ್ಷಣೆಯ ದೃಷ್ಟಿಯಿಂದ ಎಲ್ಲರೂ ಕಾಳಜಿ ವಹಿಸಬೇಕಿದೆ. ಬೆಂಕಿ ಅನಾಹುತ ಹಾಗೂ ಖಾಸಗಿ ಕಂಪೆನಿಗಳ ಲಾಭಿಗಳಿಂದ ಎದುರಾಗುತ್ತಿರುವ ಆತಂಕವನ್ನು ತಡೆಯಬೇಕಿದೆ.
ಮುಖ್ಯಾಂಶಗಳು
- ನೂರಾರು ಹೆಕ್ಟೇರ್ ಅರಣ್ಯಭೂಮಿ ಒತ್ತುವರಿ ಆರೋಪ
- ಏಷ್ಯಾದಲ್ಲೇ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶ
- ಸಾವಿರಾರು ಗಿಡಮೂಲಿಕೆಯ ತಾಣ
- ವಿದ್ಯುತ್ ಉತ್ಪಾದನೆ ನೆಪದಲ್ಲಿ ಸಂಪತ್ತು ನಾಶ
- ಠಿಕಾಣಿ ಹೂಡುತ್ತಿವೆ ಖಾಸಗಿ ಕಂಪೆನಿಗಳು
ಸಂರಕ್ಷಣೆ ನಮ್ಮ ಕರ್ತವ್ಯ
ಕಪ್ಪತಗುಡ್ಡ ಬಹುವಿಧ ಔಷಧೀಯ ಸಸ್ಯ ಹೊಂದಿರುವ ಸಂಜೀವಿನಿ. ವನ್ಯಜೀವಿಗಳನ್ನೂ ಒಳಗೊಂಡಿರುವ ಅಪರೂಪದ ಪ್ರಾಕೃತಿಕ ಸೃಷ್ಟಿ ಅದು. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದು ನಾಶವಾಗದಂತೆ ನಾವು ತಡೆಯಬೇಕಿದೆ.
ವಿ.ಎಫ್.ಅಂಗಡಿ, ವಿಶ್ವ ಪರಿಸರ ಸಂಘದ ಅಧ್ಯಕ್ಷಕನ್ನ ಹಾಕುವ ಕಂಪನಿಗಳು
ಚಿನ್ನ ತೆಗೆಯಲು ಕಂಪೆನಿಗಳು ಬಂದಿವೆ. ಆದರೆ ಅವು ತೆಗೆಯುವುದು ಚಿನ್ನವಲ್ಲ ನಮ್ಮ ಅನ್ನವನ್ನು. ನಮ್ಮ ಪರಿಸರ ಸಂಪತ್ತನ್ನು ನಾಶ ಮಾಡಲು ಅವು ಬಂದಿವೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಪ್ರಾಬಲ್ಯ ಮೆರೆಯುವ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡಬಾರದು.
ರಾಮಣ್ಣ, ರೈತ ಮುಖಂಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.