ಧಾರವಾಡ: ಬೆಂಗಳೂರಿನ ಅಥ್ಲೀಟ್ ವಿಶ್ವಾಂಭರ ಕೋಲೆಕಾರ ಅವರು 3 ನೇ ರಾಜ್ಯ ಓಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್ನ ಪುರುಷರ 800 ಮೀ. ಓಟದಲ್ಲಿ ಹೊಸ ದಾಖಲೆ ಬರೆದರು.
ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ವಿಶ್ವಾಂಭರ 31 ವರ್ಷಗಳ ಹಿಂದೆ 800 ಮೀ. ಓಟದಲ್ಲಿ ದಾಮೋದರ ಗೌಡ ಹೆಸರಿಗಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ವಿಶ್ವಾಂಭರ 1:47.5 ನಿಮಿಷಗಳಲ್ಲಿ ದೂರವನ್ನು ಓಡಿ 1986 ರ ರಾಜ್ಯ ಕ್ರೀಡಾಕೂಟದಲ್ಲಿ ಬರೆದಿದ್ದ 1:50.0 ನಿಮಿಷಗಳ ದಾಖಲೆಯನ್ನು ಬದಿಗೊತ್ತಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
ಚಿನ್ನ, ರಜತ ಮತ್ತು ಕಂಚಿನ ಪದಕ ಕೂಡಾ ಬೆಂಗಳೂರು ನಗರದ ಅಥ್ಲೀಟ್ಗಳ ಪಾಲಾಯಿತು. ಕುಮಾರಸ್ವಾಮಿ 1:57.5 ನಿಮಿಷಗಳಿಂದ 2ನೇ ಸ್ಥಾನ ಹಾಗೂ ದೇವಯ್ಯ 1:58.0 ನಿಮಿಷಗಳಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ನಾಗಭೂಷಣಗೆ ಚಿನ್ನ
ದಕ್ಷಿಣ ಕನ್ನಡದ ನಾಗಭೂಷಣ ಅವರು ಪುರುಷರ 400 ಮೀ. ಹರ್ಡಲ್ಸ್ನಲ್ಲಿ 53.2 ಸೆಕೆಂಡುಗಳಲ್ಲಿ ದೂರ ಕ್ರಮಿಸಿ ಚಿನ್ನ ಪಡೆದರಲ್ಲದೆ ಕಳೆದ ಬಾರಿಯ ಕ್ರೀಡಾಕೂಟದ ದಾಖಲೆಯನ್ನು ಸುಧಾರಿಸಿದರು. ಬೆಂಗಳೂರಿನ ಅಕ್ಷಯ 54.3 ಸೆಕೆಂಡುಗಳಿಂದ ರಜತ ಪದಕ ಹಾಗೂ ದಕ್ಷಿಣ ಕನ್ನಡದ ಭಕ್ಷಿತ ಸಾಲಿಯಾನ್ ಅವರು ಕಂಚಿನ ಪದಕಕ್ಕೆ ಸಮಾಧಾನ ಪಟ್ಟುಕೊಂಡರು.
ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಮಾನ್ಯಾ ಅವರು 2:30.4 ನಿಮಿಷಗಳಲ್ಲಿ ದೂರವನ್ನು ಓಡಿ ಚಿನ್ನದ ಪದಕ ಗೆದ್ದರು. ಬೆಂಗಳೂರು ಸಾಯ್ನ ಕಮಲಾಕ್ಷಿ ರಜತ ಹಾಗೂ ಮೈಸೂರಿನ ನವ್ಯಾಶ್ರೀ ಕಂಚಿನ ಪದಕ್ಕೆ ಸಮಾಧಾನ ಪಟ್ಟುಕೊಂಡರು.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಮೂಡಬಿದ್ರಿಯ ಆಳ್ವಾಸ್ನ ಮೂವರು ಅಥ್ಲೀಟ್ಗಳು ಪದಕಗಳನ್ನು ಬಾಚಿಕೊಂಡರು. 1.61 ಮೀ. ಎತ್ತರ ಹಾರಿದ ಅಭಿನಯಾ ಶೆಟ್ಟಿ ಚಿನ್ನದ ಪದಕ ಗಳಿಸಿದರು. ಚಿತ್ರಾ ವೇರ್ಣೆಕರ ರಜತ ಪದಕ ಪಡೆದರೆ ಸುಪ್ರಿಯಾ ಕಂಚು ಗಳಿಸಿದರು.
200 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಎಚ್.ಎಂ.ಜ್ಯೋತಿ 23.3 ಸೆಕೆಂಡುಗಳಲ್ಲಿ ದೂರ ಕ್ರಮಿಸಿ ಚಿನ್ನಕ್ಕೆ ಮುತ್ತಿಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.