ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 4 ನೇ ದಿನವಾದ ಸೋಮವಾರ ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಹುಬ್ಬಳ್ಳಿ-ಧಾರವಾಡ ತಂಡವು ಹಾಸನ ತಂಡವನ್ನು 4-0 ಗೋಲುಗಳನ್ನು ಗಳಿಸುವ ಮೂಲಕ ಇಂದು ನಡೆಯುವ ಮೊದಲನೇ ಸೆಮಿಪೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು. ತೀವ್ರ ಪೈಪೊಟಿಯಿಂದ ಕೂಡಿದ ಪಂದ್ಯದಲ್ಲಿ ಹಾಸನ ತಂಡವನ್ನು ಮಣಿಸಿತು.
ಹುಬ್ಬಳ್ಳಿ-ಧಾರವಾಡ ತಂಡದ ಪರ ವಿನಾಯಕ-1 , ಶ್ರೀಶೈಲ-2 ಅಂತಿಮವಾಗಿ ಆಂಜನೇಯ-1 ಗೋಲು ಗಳಿಸುವ ಮೂಲಕ ಜಯದಲ್ಲಿ ಪ್ರಮುಖರಾದರು. ಹಾಸನ ತಂಡವು ಯಾವುದೇ ಗೋಲು ಗಳಿಸದೇ ಸೋಲೊಪ್ಪಿಕೊಂಡಿತು.
ಭಾನುವಾರ ನಡೆದ ಪಂದ್ಯದಲ್ಲಿ ಅತಿಥೇಯ ತಂಡವು ಗದಗ ತಂಡದ ವಿರುದ್ಧ 2-1 ಅಂತರದಿಂದ ಜಯವನ್ನು ಕಂಡಿತ್ತು. ಇಂದು ನಡೆದ ಪಂದ್ಯದಲ್ಲಿ ಮತ್ತೊಂದು ಜಯವನ್ನು ಕಾಣುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಇದರಿಂದಾಗಿ ಇಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎ ಗುಂಪಿನ ಆರ್.ಡಬ್ಲು.ಎಫ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಮಹಿಳಾ ಹಾಕಿ: ಬಳ್ಳಾರಿ ತಂಡ ಮೇಲುಗೈ
ಸೋಮವಾರ ಬಳ್ಳಾರಿ ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಬಳ್ಳಾರಿ ತಂಡವು ಬೆಳಗಾವಿ ತಂಡವನ್ನು ದಿಟ್ಟವಾಗಿ ಎದುರಿಸಿ 3-0 ಗೋಲುಗಳ ಅಂತರದಿಂದ ಬೆಳಗಾವಿ ತಂಡವನ್ನು ಸುಲಭವಾಗಿ ಮಣಿಸಿತು.
ಬಳ್ಳಾರಿ ತಂಡದ ಪರ ತೇಜಸ್ವಿನಿ ಸಿ-2 ಗೋಲು (5ನೇ ನಿಮಿಷ ಮತ್ತು 27 ನೇ ನಿಮಿಷ) ಹಾಗೂ ಶೃತಿ ಪಿ-1 (28ನೇ ನಿಮಿಷ) ತಂಡದ ಜಯಕ್ಕೆ ಕಾರಣರಾದರು. ನಂತರ ನಡೆದ 2ನೇ ಪಂದ್ಯದಲ್ಲಿ ಹಾಸನ ತಂಡವು ಅತಿಥೇಯ ಹುಬ್ಬಳ್ಳಿ-ಧಾರವಾಡ ತಂಡದ ವಿರುದ್ಧ 7-0 ಗೋಲುಗಳ ಅಂತರದಿಂದ ಭರ್ಜರಿ ಜಯ ಕಂಡಿತು. ಹಾಸನ ತಂಡದ ಪರ ರಂಜಿತಾ-1 (8ನೇ ನಿಮಿಷ), ಸುಷ್ಮಾ-2 (12 ಮತ್ತು 36ನೇ ನಿಮಿಷ), ಚಂದನಾ-2 (23 ಮತ್ತು 42ನೇ ನಿಮಿಷ), ದೇವಿ-1 (53 ನೇ ನಿಮಿಷ), ಅವಿನಶ್ರೀ-1 (46ನೇ ನಿಮಿಷ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.