ಧಾರವಾಡ: ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೂ ಆಳಬಲ್ಲದು ಎಂಬ ಮಾತು ಕೇಳಿದ್ದೆವು. ಇದೀಗ ಅದಕ್ಕೆ ಪೂರಕವಾಗಿ ತೊಟ್ಟಿಲನ್ನು ತೂಗುವ ಕೈ ಹಾಕಿಯನ್ನೂ ಆಡಬಲ್ಲದು ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿರುವ ರಾಜ್ಯ ಓಲಿಂಪಿಕ್ ಸಾಕ್ಷಿಯಾಗಿದೆ.
ಹೌದು. ಬಳ್ಳಾರಿ ಹಾಕಿ ತಂಡದ ಸಯೀದಾ ಅವರ ಸುದ್ದಿ ಇದು. ರಾಷ್ಟ್ರಮಟ್ಟದಲ್ಲಿ ಮಿಂಚಿದ ಹಾಕಿ ಪಟು ಸಯೀದಾ ತಮ್ಮ 10 ತಿಂಗಳ ಮುದ್ದು ಮಗುವಿನೊಂದಿಗೆ ಧಾರವಾಡಕ್ಕೆ ಬಂದಿದ್ದಾರೆ. ಒಂದೆಡೆ ತಮ್ಮ ತಂಡ ಗೆಲುವಿನ ನಗೆ ಬೀರಬೇಕೆಂಬ ತವಕ, ಮತ್ತೊಂದೆಡೆ ಅಳುವ ಕಂದನನ್ನು ಸಮಾಧಾನಪಡಿಸುವ ಸವಾಲು. ಇವೆರಡನ್ನೂ ಆ ತಾಯಿ ನಿರ್ವಹಿಸುವ ಅಪರೂಪದ ದೃಶ್ಯ ಕಂಡುಬಂದದ್ದು ಧಾರವಾಡದಲ್ಲಿ ನಡೆಯುತ್ತಿರುವ ಓಲಂಪಿಕ್ ಕ್ರೀಡಾಕೂಟದಲ್ಲಿ. ಕಳೆದ ಒಂದು ದಶಕದಿಂದ ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಅವರು, ಮಗು ಹಾಗೂ ಹಾಕಿಯನ್ನು ಏಕಕಾಲಕ್ಕೆ ನಿಭಾಯಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಮೂರು ವರ್ಷದಿಂದ ಮೈದಾನಕ್ಕೆ ಇಳಿಯದಿದ್ದರೂ ಅವರಲ್ಲಿನ ಉತ್ಸಾಹ ಮಾತ್ರ ಕುಂದಿದಂತೆ ಕಾಣಿಸುವುದಿಲ್ಲ. ಹಾಸನ ತಂಡದ ವಿರುದ್ಧ ಈಗಾಗಲೇ ಬಳ್ಳಾರಿ ತಂಡ ಗೆಲುವು ಸಾಧಿಸುವಲ್ಲಿ ಸಯೀದಾ ಅವರೇ ಕಾರಣರಾಗಿರುವುದು ಅವರ ತಂಡಕ್ಕೂ ಬಲ ತಂದಿದೆ.
ಆಟದ ಮಧ್ಯದಲ್ಲೇ ಮಗುವಿಗೆ ಹಾಲುಣಿಸಿ ಮತ್ತೆ ಆಟಕ್ಕೆ ಅಣಿಯಾಗುವ ಸಯೀದಾ ಅವರು, ತಂಡದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.