ಹುಬ್ಬಳ್ಳಿ: ನೀಲಮ್ಮನಾಗುವಾಸೆ ಒಬ್ಬಳಿಗೆ, ದೇಶವನ್ನು ಪ್ರತಿನಿಧಿಸುವ ಆಸೆ ಮತ್ತೊಬ್ಬಳಿಗೆ, ಸೈನ್ಯ ಸೇರುವ ಮಹದಾಸೆ ಮಗದೊಬ್ಬಳಿಗೆ. ಅವು ಆಸೆಗಳಲ್ಲ ಬಿಡಿ. ಅಪರೂಪದ ಕನಸುಗಳು. ಭವಿತವ್ಯದ ಕ್ರೀಡಾಲೋಕ ಬೆಳಗುವ ಪುಟ್ಟ ಮನಸುಗಳ ಜೊತೆ ನ್ಯೂಸ್-13 ಮಾತನಾಡಿದಾಗ ಅಲ್ಲೊಂದು ಸಾಧನೆಯ ಟ್ರ್ಯಾಕ್ ಸ್ಪಷ್ಟವಾಗಿ ಗೋಚರಿಸಿತು.
ಹುಬ್ಬಳ್ಳಿಯಲ್ಲಿ ಜ.4 ಶನಿವಾರ ನಡೆದ ರಾಜ್ಯ ಓಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಆರತಿ ಭಾಟಿ, ಸೌಮ್ಯಾ ಅಂತಾಪುರ ಹಾಗೂ ರೇಣುಕಾ ದಂಡಿನ ಅವರು ಚಿನ್ನ, ಬೆಳ್ಳಿ ಹಾಗೂ ಕಂಚುಗಳನ್ನು ಕ್ರಮವಾಗಿ ತಮ್ಮ ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದ್ದರು.
ಆರತಿ ಭಾಟಿ
40ಕಿ,ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿಮಿಷ 76 ಮಿಲಿ ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಆರತಿ ಮೊದಲಿಗರಾದರು. ಆರಂಭದಲ್ಲಿ ತುಸು ಕಷ್ಟವೆನಿಸಿತು. ಆದರೆ ಕ್ರಮೇಣ ಸುಧಾರಿಸಿಕೊಂಡು ಹೊರಟೆ. ಗುರಿ ಸೇರಿದೆ ಎಂದು ಚಿನ್ನದ ಹುಡುಗಿ ಆರತಿ ಸಂತಸ ವ್ಯಕ್ತಪಡಿಸಿದಳು.
ವಿವಿಧ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪದಕಗಳಿಗೆ ಭಾಜನಾಗಿರುವ ಆರತಿ ಭಾಟಿ ಅವರು ವಿಜಯಪುರದ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿನಿ. 4 ವರ್ಷದಿಂದ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಉದಯೋನ್ಮುಖ ಕ್ರೀಡಾ ಪ್ರತಿಭೆ ಆರತಿ. ಸದ್ಯ ಪಿಯುಸಿ ಓದುತ್ತಿದ್ದಾಳೆ.
ಪುಣೆಯಲ್ಲಿ ನಡೆದ ನ್ಯಾಶನಲ್ ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಪದಕಗಿಟ್ಟಿಸಿಕೊಂಡ ಆರತಿಗೆ, ಖ್ಯಾತ ಸೈಕ್ಲಿಸ್ಟ್ ನೀಲಮ್ಮ ಮಲ್ಲಿಗವಾಡರಂತೆ ಆಗಬೇಕೆಂಬ ಕನಸು.
ಸೌಮ್ಯಾ ಅಂತಾಪುರ
ಇದೇ ವಿಭಾಗದಲ್ಲಿ 2 ನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಮುಡಿದ ಸೌಮ್ಯಾ, ಬಾಗಲಕೋಟೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿನಿ. 4 ವರ್ಷದಿಂದ ತರಬೇತಿ ಪಡೆಯುತ್ತಿರುವ ಇವಳು ಇದೀಗ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಇದುವರೆಗೂ ಅನೇಕ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 1 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನೂ ತನ್ನ ಮುಡಿಗೇರಿಸಿಕೊಂಡ ಹಿರಿಮೆ ಇವಳದು. ಕುಟುಂಬದ ಪ್ರೋತ್ಸಾಹ, ತರಬೇತುದಾರರ ಪ್ರೀತಿ, ವಿಶ್ವಾಸ ಹಾಗೂ ಕಲಿಸುವ ಪರಿಯನ್ನು ಮನಸಾರೆ ನೆನೆಯುತ್ತಾಳೆ. ಸೈಕ್ಲಿಂಗ್ನಲ್ಲಿ ಸಾಧನೆಯ ಉತ್ತುಂಗ ತಲುಪಬೇಕೆಂಬ ಆಕಾಂಕ್ಷೆಯ ಸೌಮ್ಯಾಳಿಗೆ ಸೈನ್ಯ ಸೇರುವ ಮಹದಾಸೆ.
ರೇಣುಕಾ ದಂಡಿನ್
ಪ್ರಸ್ತುತ ರಾಜ್ಯ ಓಲಿಂಪಿಕ್ ಕ್ರೀಡಾಕೂಟದ ಸೈಕ್ಲಿಂಗ್ನಲ್ಲಿ ತೃತೀಯ ಸ್ಥಾನಕ್ಕೆ ಸಮಾಧಾನಪಟ್ಟ ರೇಣುಕಾ ದಂಡಿನ್ ಸಾಧನೆ ಕಡಿಮೆ ಏನಿಲ್ಲ. 6 ವರ್ಷದಿಂದ ವಿಜಯಪುರ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ರೇಣುಕಾ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಬರೋಬ್ಬರಿ ೪೦ಕ್ಕೂ ಹೆಚ್ಚು ಪದಕಗಳನ್ನು ಬಾಚಿಕೊಂಡಿದ್ದಾಳೆ.
ರಾಷ್ಟ್ರಮಟ್ಟದಲ್ಲಿ 3 ಚಿನ್ನ, 5 ಬೆಳ್ಳಿ ಮತ್ತು 9 ಕಂಚಿನ ಪದಕ ಪಡೆದಿರುವ ರೇಣುಕಾ ದಂಡಿನ್, ರಾಜ್ಯಮಟ್ಟದಲ್ಲಿ 5 ಕಂಚು, 7 ಬೆಳ್ಳಿ ಹಾಗೂ ಬರೋಬ್ಬರಿ 27 ಬಂಗಾರದ ಪದಕವನ್ನು ಮುತ್ತಿಕ್ಕಿದ ಸಾಧನೆ ಸಾಮಾನ್ಯವೇನಲ್ಲ.
ವಾಹನಗಳು ವಿಷಕಾರಿ ಇಂಧನ ಉಗುಳುವ ಇಂದಿನ ದಿನಮಾನದಲ್ಲಿ ಸೈಕ್ಲಿಂಗ್ ಪರಿಸರ ಸ್ನೇಹಿ ಎನ್ನಬಹುದು. ಒಂದು ಕ್ರೀಡೆಯಾಗಿಯಾದರೂ ಸೈಕ್ಲಿಂಗ್ ಉತ್ತುಂಗಕ್ಕೇರಿದ್ದು ಸ್ವಾಗತಾರ್ಹ. ಇನ್ನೂ ಸರಿಯಾಗಿ ಕಾಲೇಜು ಮೆಟ್ಟಿಲನ್ನೇ ಹತ್ತದ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಸಂಚಲನ ಮೂಡಿಸಿರುವುದು ಹೆಮ್ಮೆಯ ಸಂಗತಿ.
ಉತ್ತಮ ಸಾಧನೆ
ಎರಡು ಪದಕಗಳು ನಮ್ಮ ಕ್ರೀಡಾ ವಸತಿ ಶಾಲೆಯ ಮಕ್ಕಳಿಗೆ ಬಂದಿರುವುದು ತುಂಬಾ ಖುಷಿಯಾಗಿದೆ. ಮೂರೂ ಸ್ಥಾನವನ್ನೂ ನಮ್ಮ ಶಾಲೆಯ ಮಕ್ಕಳೇ ಗಿಟ್ಟಿಸಬೇಕೆಂಬ ಹಂಬಲವಿತ್ತು. ನಮ್ಮ ವಿಜಯಪುರ ಕ್ರೀಡಾ ಶಾಲೆಯೇ ಇಂದು ರಾಷ್ಟ್ರೀಯ ಚಾಂಪಿಯನ್ ಆಗಿದೆ. ನಮ್ಮಲ್ಲಿ ಉತ್ತಮ ತರಬೇತಿ ನೀಡುತ್ತೇವೆ. ಸದ್ಯಕ್ಕೆ ಟ್ರ್ಯಾಕ್ ನಿರ್ಮಾಣ ಹಂತದಲ್ಲಿದೆ. ಅದು ಪೂರ್ಣಗೊಂಡರೆ ಟ್ರ್ಯಾಕ್ನಲ್ಲಿಯೂ ನಾವು ಪದಕ ಗೆಲ್ಲುವುದು ಖಚಿತ. ಆದರೆ ರೋಡ್ ರೇಸ್ನಲ್ಲಿ ಎಂದಿಗೂ ನಾವೇ ಮುಂದು. ಆ ಹೆಮ್ಮೆ ನಮಗಿದೆ. ಓಲಂಪಿಕ್ ಕ್ರೀಡಾಕೂಟವನ್ನು ಚೆನ್ನಾಗಿ ಆಯೋಜಿಸಲಾಗಿದೆ.
ಅಲಕಾ ಪಡತರೆ, ತರಬೇತುದಾರರು
ವಿಜಯಪುರ ಕ್ರೀಡಾ ವಸತಿ ಶಾಲೆಸಂತಸ ಇಮ್ಮಡಿ
16 ವರ್ಷ ವಯಸ್ಸಿನೊಳಗಿನ ಹುಡುಗಿ ಸೀನಿಯರ್ಸ್ ವಿಭಾಗದಲ್ಲಿ ಭಾಗವಹಿಸಿದ್ದೇ ಖುಷಿ. ಅದರಲ್ಲೂ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ಸಂತಸವನ್ನು ಇಮ್ಮಡಿಗೊಳಿಸಿದೆ. ನಿಜಕ್ಕೂ ಸೌಮ್ಯಾ ಅಂತಾಪುರ ಶ್ರಮಜೀವಿ. ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ಹುಡುಗಿ ಅವಳು. ನಮ್ಮ ಶಾಲೆಯಲ್ಲಿಯೂ ಉತ್ತಮ ತರಬೇತಿ ನೀಡುತ್ತೇವೆ. ಕ್ರೀಡಾ ಇಲಾಖೆಯ ಸಹಕಾರವೂ ಇದೆ.
– ಅನಿತಾ ನಿಂಬರಗಿ, ತರಬೇತುದಾರರು
ಬಾಗಲಕೋಟೆ ಕ್ರೀಡಾ ವಸತಿ ಶಾಲೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.