ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಪ್ರತಿಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಇದನ್ನು ಅ.ಭಾ.ವಿ.ಪ ಖಂಡಿಸಿ ಇಂದು (ಫೆ. 1) ನಗರದ ಮಿನಿ ವಿಧಾನ ಸೌಧದ ಹತ್ತಿರ ವಿ.ವಿ ಕುಲಪತಿಗಳ ಕಾರಿಗೆ ಎ.ಬಿ.ವಿ.ಪಿ ಯ 200ಕ್ಕೂ ಹೆಚ್ಚು ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವಂತಹ ದ.ಕ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಸುಮಾರು ದಶಕಗಳ ಇತಿಹಾಸವಿರುವ ಮಂಗಳೂರು ವಿಶ್ವವಿದ್ಯಾನಿಲಯವು ನಾಡಿಗೆ ಬೇಕಾದ ಅನೇಕ ಜ್ಞಾನಿಗಳನ್ನು, ಸಾಹಿತಿಗಳನ್ನು, ಸಂಶೋಧಕರನ್ನು ನಿರ್ಮಾಣ ಮಾಡಿದೆ. ಆದರೆ ಕಳೆದ 2 ವರ್ಷಗಳಿಂದ ವಿ.ವಿ.ಯ ಆಡಳಿತ ವೈಕರಿಯನ್ನು ಗಮನಿಸಿದರೆ ವಿಶ್ವವಿದ್ಯಾನಿಲಯಕ್ಕಿರುವ ಘನತೆಯನ್ನು ನಿರ್ನಾಮ ಮಾಡಲಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ.
ಸರಿಯಾಗಿ ಕಾಲಕಾಲಕ್ಕೆ ಪರೀಕ್ಷೆಯನ್ನು ನಡೆಸಿ ಸಮಯಕ್ಕೆ ಸರಿಯಾಗಿ ಫಲಿತಾಂಶವನ್ನು ನೀಡುವುದು ವಿ.ವಿ ಯ ಕಾರ್ಯಗಳಲ್ಲಿ ಪ್ರಮುಖ ಭಾಗ, ಆದರೆ ಫಲಿತಾಂಶ ಪ್ರಕಟಿಸುವಲ್ಲಿಯೇ ಕಳೆದ 3 ಸೆಮಿಸ್ಟರ್ಗಳಿಂದ ವಿ.ವಿ ಯ ಆಡಳಿತ ಮಂಡಳಿ ಎಡವುತ್ತಿರುವುದು. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿರುವುದು ವಿ.ವಿಯ ಆಡಳಿತ ಮಂಡಳಿಯ ಕಾರ್ಯವೈಕರಿ ಹಾಗೂ ಕುಲಪತಿಗಳು ಹಾಗೂ ಕುಲ ಸಚಿವರುಗಳು ಶೈಕ್ಷಣಿಕ ವಿಷಯಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ. ವಿ.ವಿಯು ಶಿಕ್ಷಣ ಕೇಂದ್ರವಾಗುವ ಬದಲು ಹಣವನ್ನು ಸಂಗ್ರಹಿಸುವ, ಸಮಸ್ಯೆಗಳನ್ನು ಸೃಷ್ಠಿಸುವ ವ್ಯವಹಾರ ಕೇಂದ್ರ ಮತ್ತು ಸಮಸ್ಯೆಗಳ ಮೂಲ ವಿ.ವಿ ಎಂದು ಸ್ಪಷ್ಟವಾಗುತ್ತಿದೆ.
ಕಳೆದ ನವೆಂಬರ್, ಡಿಸೆಂಬರಿನಲ್ಲಿ ನಡೆದ ಪದವಿ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ 18-1-2017 ರಂದು ವಿ.ವಿಯ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಕಟಗೊಂಡು ನಂತರ ಫಲಿತಾಂಶವನ್ನು ಹಿಂತೆಗೆದುಕೊಂಡಿರುವುದು ಹಾಗೂ ಈ ಕುರಿತು ವಿ.ವಿಯ ಕುಲಪತಿಗಳಾಗಲಿ, ಪರೀಕ್ಷಾಂಗ ಕುಲಸಚಿವರಾಗಲಿ ಇಲ್ಲಿಯವರೆಗೆ ಅಧಿಕೃತ ಪ್ರತಿಕ್ರಿಯೆ ನೀಡದಿರುವುದು ಇವರ ಬೇಜವಬ್ದಾರಿತನಕ್ಕೆ ಸಾಕ್ಷಿಯಾಗಿದೆ, ಒಂದು ಪ್ರಮುಖ ವಿಶ್ವವಿದ್ಯಾಲಯದ ಪರೀಕ್ಷೆ ಹಾಗೂ ಫಲಿತಾಂಶದಂತಹ ಗಂಭೀರ ವಿಷಯಗಳ ದಾಖಲೆಗಳು ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರ ಗಮನಕ್ಕೆ ಬಾರದೆ ವಿ.ವಿಯ ಅಧಿಕೃತ ವೆಬ್ಸೈಟ್ಗಳಲ್ಲಿ ಸೋರಿಕೆಯಾಗಿ ಪ್ರಕಟವಾಗಿದೆ ಎನ್ನುವುದಾದರೆ ಇವರುಗಳು ಆ ಸ್ಥಾನದಲ್ಲಿ ಇರಲು ಎಷ್ಟು ಸಮರ್ಥರು ಎಂದು ಯೋಚಿಸಬೇಕಾಗಿದೆ ಹಾಗಾಗಿ ಈ ಮೂಲಕ ಎ.ಬಿ.ವಿ.ಪಿ ಆಗ್ರಹಿಸುವುದೇನೆಂದರೆ,
ಬೇಡಿಕೆಗಳು :
1. ಪರೀಕ್ಷಾಂಗ ವಿಭಾಗ ನಿರ್ವಹಣೆಯಲ್ಲಿ ವಿಫಲರಾದ ಪರೀಕ್ಷಾಂಗ ಕುಲಸಚಿವರು ರಾಜೀನಾಮೆ ನೀಡಬೇಕು.
2. ನವೆಂಬರ್, ಡಿಸೆಂಬರಿನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಹಿಂಪಡೆದು ಗೊಂದಲ ಸೃಷ್ಟಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು.
3. ಕಳೆದ ಎಲ್ಲಾ ಸೆಮಿಸ್ಟರುಗಳ ಅಂಕ ಪಟ್ಟಿ, ಫಲಿತಾಂಶದಲ್ಲಿ ಇರುವ ಸಮಸ್ಯೆ ಮತ್ತು ಗೊಂದಲಗಳ ಪರಿಹಾರಕ್ಕಾಗಿ ವಿ.ವಿ ಮಟ್ಟದ ವಿಶೇಷ ತಂಡ ರಚಿಸಿ ತಕ್ಷಣ ಸಮಸ್ಯೆ ಪರಿಹರಿಸಬೇಕು.
4. ವಿ.ವಿ ಮಟ್ಟದಲ್ಲಿ ಹೆಲ್ಪ್ಲೈನ್ ಪ್ರಾರಂಭಿಸಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು.
ಈ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳನ್ನು ಉಗ್ರ ಹೋರಾಟ ಮಾಡಲಾಗುವುದೆಂದು ನಗರದ ಮಿನಿ ವಿಧಾನ ಸೌಧದ ಹತ್ತಿರ ವಿ.ವಿ ಕುಲಪತಿಗಳ ಕಾರಿಗೆ ಎ.ಬಿ.ವಿ.ಪಿ ಯ 200 ಕ್ಕೂ ಹೆಚ್ಚು ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಿತೇಶ್, ಶೋಭಿತ್, ತಾಲೂಕು ಸಂಚಾಲಕ ಸುಧಿತ್, ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ರಾಜೇಂದ್ರ, ನಗರ ಪ್ರಮುಖ್ ಚೈತನ್ಯ, ವಿ.ವಿ ಕಾಲೇಜು ಅಧ್ಯಕ್ಷ ಮೋಹಿತ್, ನಗರ ವಲಯ ಕಾರ್ಯದರ್ಶಿ ಕೀರ್ತನ್, ಕಾರ್ಯಕರ್ತರಾದ ಸಂಕೇತ್, ಪ್ರಮಿತ್, ಆದ್ಯ, ವಿಶಾಲ್, ಜಾನವಿ, ಶ್ರೇಯಾ, ಗಾಯತ್ರಿ, ಮಯುರೇಶ್, ಶರಣ್, ಅಭಿಷೇಕ್, ಶ್ರೇಯಸ್, ಶರೊಲ್ ಮುಂತಾದವರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.