ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು.
ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ ಜೇಟ್ಲಿ ಅವರು, ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ವಿಶೇಷ ಗಮನಹರಿಸುವುದಾಗಿ ಹೇಳಿದ್ದಾರೆ. ಬೆಳೆ ವಿಮೆ, ರೈತರಿಗೆ ಮಣ್ಣು ಆರೋಗ್ಯ ಕಾರ್ಡ್, ಹಾಲು ಉತ್ಪಾದನೆ ಹೆಚ್ಚಳಕ್ಕೆ ಹಣ ಮೀಸಲು, ಬಡತನ ನಿರ್ಮೂಲನೆಗೆ ವಿಶೇಷ ಕ್ರಮ ಕೈಗೊಳ್ಳುವ ಕುರಿತು ಪ್ರಸ್ತಾಪಿಸಿದ್ದಾರೆ.
ಊರ ಮುಂದಿನ ಹೊಂಡ ಮನೆಯ ಹಂಡೆ ಇದ್ದಂತೆ ಎಂಬ ಮಾತಿದೆ. ಅದಕ್ಕೆ ಪೂರಕವಾಗಿ ಮನ್ರೇಗಾ ಯೋಜನೆಯ ಅಡಿಯಲ್ಲಿ 10 ಲಕ್ಷ ಕೆರೆಗಳ ಅಭಿವೃದ್ಧಿಗೆ ಅನುದಾನ ಮೀಸಲು ಇರಿಸಲಾಗಿದೆ. ನೀರಾವರಿ ಯೋಜನೆಗೆ ವಿಶೇಷ ಅನುದಾನ, ಪ್ರತಿ ಹಳ್ಳಿಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಅವಶ್ಯಕ ಕ್ರಮ, ಕೃಷಿ ಸಾಲದ ಮಿತಿಯಲ್ಲಿ ಹೆಚ್ಚಳ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಬಜೆಟ್ನ ವೈಶಿಷ್ಟ್ಯ.
ಗ್ರಾಮೀಣ ಭಾಗದ ಶಿಕ್ಷಣದಲ್ಲಿಯೂ ತಂತ್ರಜ್ಞಾನ ಅಳವಡಿಕೆಯ ಕುರಿತು ಪ್ರಸ್ತಾಪಿಸಿದ ಸಚಿವ ಅರುಣ್ ಜೇಟ್ಲಿ ಅವರ ಬಜೆಟ್ನಲ್ಲಿ, ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಯೋಜನೆಗೂ ಚಾಲನೆ ನೀಡುವ ಕುರಿತ ಸುಳಿವು ಸಿಕ್ಕಿದೆ.
ನೀರಾವರಿ, ಕೆರೆ ಅಭಿವೃದ್ಧಿ, ಕೃಷಿ ಸಾಲ, ಶಿಕ್ಷಣ, ನೈರ್ಮಲೀಕರಣ, ಬಡತನ ನಿರ್ಮೂಲನೆ ಇತ್ಯಾದಿ ಅಂಶಗಳು ಬಜೆಟ್ನಲ್ಲಿ ಪ್ರಸ್ತಾಪವಾಗಿವೆ. ಗ್ರಾಮ ಭಾರತದ ಅಭ್ಯುದಯಕ್ಕೆ ಅವಶ್ಯಕವಾದ ಕನಸುಗಳನ್ನೇ ಬಿತ್ತಿದ ಕೇಂದ್ರ ಬಜೆಟ್ ಮತ್ತಷ್ಟು ಬಲ ತಂದಂತಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.