ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. “ಬಜೆಟ್” ಎಂಬ ಪದ ಜನಪ್ರಿಯ ಬಳಕೆಯಷ್ಟೆ. ಹಿಂದಿನ ಸಾಲಿನ ವಿತ್ತೀಯ ನಿರ್ವಹಣೆಯ ಆಧಾರದಲ್ಲಿ ಮುಂಬರುವ ವಿತ್ತೀಯ ವರ್ಷದಲ್ಲಿ ಅಂದರೆ 2017-18ರಲ್ಲಿ ಸರಕಾರ ಅದರ ಆದಾಯ, ಖರ್ಚು-ವೆಚ್ಚಗಳನ್ನು ಹೇಗೆ ನಿಭಾಯಿಸಲಿದೆ? ದೇಶದ ಬೆಳವಣಿಗೆ, ಅಭಿವೃದ್ಧಿಗೊಂದು ಸ್ಪಷ್ಟ ದಾರಿ ಒದಗಿಸಲಿದೆಯೇ? ಎಂಬುದರ ಶ್ವೇತ ಪತ್ರವೇ ಕೇಂದ್ರ ಬಜೆಟ್. ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ತಯಾರಿಸಿ ವಿತ್ತಸಚಿವರು ಮಂಡಿಸುವ ಬಜೆಟ್ ಭಾಷಣದಲ್ಲಿ ಸರಕಾರದ ಆದಾಯದ ಅಂದಾಜು, ಖರ್ಚಿನ ವಿವರ ಎಂಬ ಎರಡು ಭಾಗಗಳಲ್ಲಿ ಮುಂದಿನ ಸಾಲಿನ ಆಯವ್ಯವದ ಚಿತ್ರಣವನ್ನು ನೀಡಲಾಗುತ್ತದೆ. ಅದೇ ರೀತಿ ಬಜೆಟ್ ಭಾಷಣದ ಒಂದು ದಿನ ಮುನ್ನ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು (ಅರವಿಂದ್ ಸುಬ್ರಮಣ್ಯಮ್) ಹಿಂದಿನ ಸಾಲಿನ ಆರ್ಥಿಕ ನಿರ್ವಹಣೆಯ ಸವi ಗ್ರ ಚಿತ್ರಣ ನೀಡುವ ಹಾಗೂ ಮುಂದಿನ ವರ್ಷದಲ್ಲಿ ಸಾಗಬೇಕಾದ ಆರ್ಥಿಕ ದಾರಿಯ ಸಮೀಕ್ಷಣೆಯ ‘ಎಕನಾಮಿಕ್ ಸರ್ವೆ 2016-17’ ಮಂಡಿಸುವುದು ವಾಡಿಕೆ. ಇದರ ಹಿನ್ನಲೆಯಲ್ಲಿಯೇ ಸರಕಾರದ ಆರ್ಥಿಕ ನೀತಿಯ ಸ್ವರೂಪ, ಸೋಲು-ಗೆಲುವು ನಿರ್ಧರಿತವಾಗುತ್ತದೆ.
ಸ್ವತಂತ್ರ ಭಾರತದ ಇತಿಹಾದಲ್ಲಿ ಮೂರು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವ ಇಂದಿನ ಬಜೆಟ್ ಅನೇಕ ಕಾರಣಗಳಿಂದ ಮುಖ್ಯವಾಗಿದೆ. ಮೊದಲನೆಯದಾಗಿ ಕೇಂದ್ರ ಬಜೆಟ್ ಫೆಬ್ರವರಿ ಕೊನೆಯ ದಿನದ ಬದಲಾಗಿ ಮೊದಲ ದಿನವೇ ಮಂಡನೆಯಾಗುತ್ತಿರುವುದು. ಬಜೆಟ್ ಮಂಡನೆಯಾಗಿ ಜಾರಿಯಾಗುವುದಕ್ಕೆ 2-3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಮೊದಲು ವಿತ್ತ ಸಚಿವರು ಬಜೆಟ್ ಮಂಡಿಸಿ ಕಲಾಪಕ್ಕೆ ಒಂದು ತಿಂಗಳ ವಿರಾಮವನ್ನು ನೀಡಲಾಗುತ್ತದೆ. ನಂತರ 24 ಡಿಪಾರ್ಟ್ಮೆಂಟಲ್ ಸ್ಟಾಂಡಿಂಗ್ ಕಮಿಟಿಗಳು ಬಜೆಟ್ ಅನ್ನು ವಿಸ್ತøತವಾಗಿ ಅಧ್ಯಯನಿಸುತ್ತಾರೆ. ಈ ಸಮಯದಲ್ಲಿ ಬಜೆಟ್ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುತ್ತದೆ. ಪ್ರತೀ ಇಲಾಖೆಗಳಿಗೆ ಹಂಚಿಕೆಯಾದ ಹಣಕಾಸಿನ ಬಗ್ಗೆ ವಿಸ್ತøತ ಚರ್ಚೆಯಾಗುತ್ತದೆ. ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಸಲ್ಲಿಸಲಾಗುತ್ತದೆ. ನಂತರ ಲೋಕಸಭೆಯಲ್ಲಿ ಮುಂಗಡಪತ್ರವನ್ನು ಮತಕ್ಕೆ ಹಾಕಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯಲ್ಲಿ ಬಹುಮತ ಹೊಂದಿರುವ ಸರಕಾರಕ್ಕೆ ಇದನ್ನು ಜಾರಿಗೊಳಿಸುವುದು ಕಷ್ಟವಲ್ಲ. ಒಂದು ವೇಳೆ ಇದರಲ್ಲಿ ಸರಕಾರ ಸೋತರೆ ಸರಕಾರ ಉರುಳಿದಂತೆಯೇ. ಈ ಪ್ರಕ್ರಿಯೆಯಲ್ಲಿ ಸರಕಾರ, ನೀತಿ ಆಯೋಗ, ವಿವಿಧ ಇಲಾಖೆಗಳು ಮುಂದಿನ ಸಾಲಿಗೆ ಅಗತ್ಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಏಪ್ರಿಲ್ ಒಂದರಿಂದಲೇ ಹೊಸ ಹಣಕಾಸು ವರ್ಷ ಪ್ರಾರಂಭವಾದರೂ ಹಣ ಬಿಡುಗಡೆಯಾಗಿ ಬರುವುದು ಜೂನ್-ಜುಲೈ ಹೊತ್ತಿಗೆ. ಈ ಹಂತದಲ್ಲಿ ಹಣ ಬಿಡುಗಡೆಯಾಗದೆ ಮುಂಗಾರು ಪೂರ್ವದ ಅತ್ಯಂತ ಉತ್ಪಾದಕ ದಿನಗಳು ಅನ್ಯಾಯವಾಗಿ ಪೋಲಾಗುತ್ತವೆ. ಇದರಿಂದ ದೇಶಕ್ಕಾಗುವುದು ಕೇವಲ ನಷ್ಟ. ಇದನ್ನು ಮೊದಲ ಬಾರಿಗೆ ದೂರೀಕರಿಸುವ ಪ್ರಯತ್ನವೊಂದು ಈ ಬಜೆಟ್ ಮೂಲಕ ಸಾಧ್ಯವಾಗುತ್ತದೆ. ಆ ಮೂಲಕ ಬಜೆಟ್ ಮಂಡನೆಯ ಬಳಿಕ ಸಾಕಷ್ಟು ಸಮಯ ದೊರೆಯುವುದಲ್ಲದೇ, ಏಪ್ರಿಲ್ ಮೊದಲ ವಾರದಲ್ಲಿಯೇ ವಿವಿಧ ಇಲಾಖೆಗಳಿಗೆ ಹಣಕಾಸು ಒದಗುವುದರಿಂದ ಅಭಿವೃದ್ಧಿ ಕಾರ್ಯಗಳು ಕ್ಷಿಪ್ರಗೊಂಡು, ಅತ್ಯಮೂಲ್ಯ ಎರಡು ಮೂರು ತಿಂಗಳ ಜಡವಾಗಿ ಕಳೆದುಹೊಗುತ್ತಿದ್ದ ಸಮಯ ದೇಶದ ಬೆಳವಣಿಗೆಗೆ ಉಪಕಾರಿಯಾಗಿರಲಿದೆ. ಈ ಯೋಚನೆಯೇ ಕ್ರಾಂತಿಕಾರಿ.
ಎರಡನೆಯದಾಗಿ ಸ್ವಾತಂತ್ರ್ಯ ಪೂರ್ವ ಬ್ರಿಟೀಷ್ ಆಡಳಿತದ ಭಾರತದಲ್ಲಿ, 1921ರಲ್ಲಿ ಅಕ್ವಾರ್ಥ್ ಸಮಿತಿಯ ಶಿಫಾರಸ್ಸಿನ ಅನ್ವಯ ಅತ್ಯಧಿಕ ಆದಾಯವನ್ನು ತಂದುಕೊಡುತ್ತಿದ್ದ ರೈಲ್ವೆ ಇಲಾಖೆಯ ಬಜೆಟ್ಅನ್ನು ಜನರಲ್ ಬಜೆಟ್ನಿಂದ ಬೇರ್ಪಡಿಸಲಾಯಿತು. ಸ್ವಾತಂತ್ರ್ಯ ನಂತರ ರೈಲ್ವೆ ಇಲಾಖೆಯ ಆದಾಯ ಹಾಗೂ ಲಾಭ ಇಳಿಮುಖವಾಗುತ್ತಾ ಸಾಗಿದ್ದರೂ ಅಂದಿನಿಂದ ಇಂದಿನವರೆಗೂ ಅಂದರೆ ಕಳೆದ 95 ವರ್ಷಗಳಿಂದಲೂ ಇದೇ ಮಾದರಿಯನ್ನು ಕುರುಡಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನವರೆಗೂ ರೈಲ್ವೆ ಬಜೆಟ್ ಎಂಬುದು ಬಹುದೊಡ್ಡ ಮತಬಾಚಿಕೊಳ್ಳುವ ಜನಪ್ರಿಯ ಸಾಧನವಾಗಿತ್ತೇ ಹೊರತು ರೈಲ್ವೆಯಂತಹ ಸಮರ್ಥ, ಶಕ್ತಿಶಾಲಿ ಹಾಗೂ ಲಾಭಪಡೆಯಬಲ್ಲ ಇಲಾಖೆಯಾಗಿ ರೂಪಾಂತರಗೊಂಡಿರಲಿಲ್ಲ. ಬಜೆಟ್ ವಿಲೀನದ ನಿರ್ಧಾರವೊಂದರಿಂದಲೇ ಹಣಕಾಸು ಕೊರತೆಯಿಂದ ಬಳಲುತ್ತಿರುವ ರೈಲ್ವೆಗೆ 10,000 ಕೋಟಿಯ ಆದಾಯ ಬರಲಿದೆ. ಎರಡೂ ಬಜೆಟ್ ಒಂದರಲ್ಲೇ ವಿಲೀನಮಾಡುತ್ತಿರುವ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಕೇವಲ ಬಜೆಟ್ ಭಾಷಣದ ಅವಧಿ ದೀರ್ಘವಾಗುವುದಷ್ಟೇ ಅಲ್ಲ, ಭಾರತೀಯ ರೈಲ್ವೆ ಇಲಾಖೆಯ ಆದಾಯ, ಹೂಡಿಕೆ ಹಾಗೂ ಲಾಭ ಇಮ್ಮಡಿಯಾಗಲಿದೆ. ರೈಲ್ವೆಗೆ ಹೊಸ ಚೈತನ್ಯ ತುಂಬಿ, ಸ್ಪಷ್ಟ ಕಾಯಕಲ್ಪ ಒದಗಿಸಿ, ಸೂಕ್ತ ದಿಕ್ಸೂಚಿಯನ್ನು ನೀಡಿ, ಪ್ರವರ್ತಕ ಮನ್ವಂತರವನ್ನು ತರಲು ಹೊರಟಿರುವ ಕೇಂದ್ರ ಸರಕಾರದ ಆಶಯಕ್ಕೆ ಸೂಕ್ತ ವೇದಿಕೆಯಾಗಲಿದೆ.
ಮೂರನೆಯದಾಗಿ ಸ್ವಾತಂತ್ರ್ಯ ನಂತರ ಸೋವಿಯತ್ ರಷ್ಯಾದ ಪಂಚವಾರ್ಷಿಕ ಯೋಜನೆಗಳನ್ನೇ ಭಾರತದಲ್ಲಿ ಜಾರಿಗೆ ತರಲಾಯಿತು. ರಷ್ಯಾದ ಪತನದ ನಂತರ ಪಂಚವಾರ್ಷಿಕ ಯೋಜನೆಗಳ ಮಿತಿಗಳು, ಸೋಲು ಗೋಚರಿಸತೊಡಗಿತು. ಅನೇಕ ದೇಶಗಳು ಪಂಚವಾರ್ಷಿಕ ಯೋಜನೆಯೆಂಬ ನೀತಿಯನ್ನು ತೆಗೆದುಹಾಕಿದವು. ಆದರೆ ಭಾರತ ಮಾತ್ರ ಈ ವರ್ಷ ಕೊನೆಗೊಳ್ಳಲಿರುವ 2012-2017ರ 12ನೇ ಪಂಚವಾರ್ಷಿಕ ಯೋಜನೆಯವರೆಗೂ ಇದೇ ಮಾದರಿಯಲ್ಲಿ ಸಾಗಿಕೊಂಡು ಬಂದಿತ್ತು. ಕೇವಲ ಬೃಹತ್ ಕೈಗಾರಿಕೆಗಳಿಗೆ ಮನ್ನಣೆಕೊಟ್ಟು ಆರ್ಥಿಕತೆಗೆ ದೊಡ್ಡ ಜಿಗಿತವನ್ನು ಕೊಟ್ಟರೂ ನಂತರದ ದಿನಗಳಲ್ಲಿ ಇತರ ಕ್ಷೇತ್ರಗಳ ದುಸ್ಥಿತಿಗೆ ಕಾರಣವಾಗಿ, ಪಂಚವಾರ್ಷಿಕ ಯೋಜನೆಗಳ ಮಿತಿಗಳನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯ ಮಾಡಿಕೊಟ್ಟ ಎರಡನೇ ಪಂಚವಾರ್ಷಿಕ ಯೋಜನೆ(1956-61). 1991ರ ಭಾರತದ ಆರ್ಥಿಕತೆಯ ಉದಾರೀಕರಣದ ಕಾರಣದಿಂದ ಸರಕಾರಿ ಸ್ವಾಮ್ಯದ ಕೇಂದ್ರೀಕೃತ ಯೋಜನೆಗಳ ಹಿಡಿತ ಕೈತಪ್ಪಿಹೋಗಿತ್ತು. ಕನಿಷ್ಟ ಆಗಲಾದರೂ ಯೋಜನಾ ಕೇಂದ್ರಿತ ಆರ್ಥಿಕತೆಯನ್ನು ನಿಧಾನವಾಗಿ ಬದಲಾಯಿಸಬೇಕಿತ್ತು. ಆ ಮೊದಲು ಜಾರಿಯಲ್ಲಿದ್ದ ಸಮಾಜಿಕ-ಆರ್ಥಿಕ ಯೋಜನೆಗಳ ಸ್ವರೂಪ ಖಾಸಗೀ ವಲಯದ ಪಾಲ್ಗೊಳ್ಳುವಿಕೆಯಿಂದ ಎಂಟನೇ ಪಂಚವಾರ್ಷಿಕ ಯೋಜನೆಯನ್ನು “ಸೂಚಿಸುವ ಯೋಜನೆ”ಯಾಗಿ (ಇಂಡಿಕೇಟಿವ್ ಪ್ಲಾನಿಂಗ್ 1992-97) ಪರಿವರ್ತಿಸಲಾಯಿತು. ಆ ಹೊತ್ತಿಗೆ ದುರ್ಬಲವಾಗತೊಡಗಿದ್ದ ಪಂಚವಾರ್ಷಿಕ ಯೋಜನೆ ಈ ಸರಕಾರದ ದಿಟ್ಟ ಕ್ರಮದಿಂದ ಕೊನೆಗೊಂಡಿದೆ. “ಮೈಕ್ರೋ ಕ್ಯಾಬಿನೆಟ್”ನಂತೆ ಕಾರ್ಯನಿರ್ವಹಿಸುತ್ತಾ “ಯೋಜನೆಯ ರಾಜಕಾರಣ” ಮಾಡುತ್ತಿದ್ದ ಯೋಜನಾ ಆಯೋಗದ ಬರ್ಖಾಸ್ತುಗೊಳಿಸುವಿಕೆ ಪಂಚವಾರ್ಷಿಕ ಯೋಜನೆಗಳಿಗೆ ಇತಿಶ್ರೀ ಹಾಡುವ ಮುನ್ಸೂಚನೆಯಾಗಿತ್ತು. ಪ್ಲಾನ್-ನಾನ್ ಪ್ಲಾನ್ ಎಂಬ ಅವೈಜ್ಞಾನಿಕ ಹಂಚಿಕೆಯ ಕ್ರಮದ ಕುರಿತಾಗಿ ಡಾ.ಸಿ.ರಂಗರಾಜನ್ ಸಮಿತಿಯ ಶಿಫಾರಸ್ಸಿನಂತೆ ಈ ಸಾಲಿನಿಂದ ಆದಾಯ ಮತ್ತು ಬಂಡವಾಳ ಎಂಬ (ರೆವೆನ್ಯೂ ಹಾಗೂ ಕ್ಯಾಪಿಟಲ್) ವರ್ಗೀಕರಣವನ್ನು ಮಾಡಲಾಗುತ್ತದೆ. ಇದು ಸರಕಾರಕ್ಕೆ ಕಾಲಕಾಲಕ್ಕೆ ದೇಶಕ್ಕೆ ಹಾಗೂ ರಾಜ್ಯಗಳಿಗೆ ಸೂಕ್ತ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಈ ನಡೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಸಮರ್ಪಕ ಸಮನ್ವಯತೆ ರೂಪುಗೊಳ್ಳಬೇಕಿದೆ. ಇದರಲ್ಲಿ ನೀತಿ ಆಯೋಗದ ಕಾರ್ಯ ಮಹತ್ವಪೂರ್ಣವಾಗಿರಲಿದೆ.
ಇನ್ನೊಂದು ಮುಖ್ಯ ಮೊದಲಿಗೆ ಈ ಬಾರಿಯ ಬಜೆಟ್ ನಾಂದಿಹಾಡಲಿದೆ. ಅಪಾರವಾಗಿ ಬೆಳೆಯುತ್ತ ಸಾಗಿದ್ದ ದೇಶದ ಆರ್ಥಿಕತೆಗೆ ಮಾರಕವಾಗಿರುವ ಎರಡು ಅವಳಿ ಕೊರತೆಗಳಾದ ವಿತ್ತೀಯ ಕೊರತೆ ಹಾಗೂ ಆದಾಯ ಕೊರತೆಗಳನ್ನು (ಫಿಸ್ಕಲ್ ಹಾಗೂ ರೆವೆನ್ಯೂ ಡೆಫಿಸಿಟ್) ಕಡಿವಾಣಕ್ಕೆ ತರಲು ‘ಫಿಸ್ಕಲ್ ರೆಸ್ಪಾಸ್ಸಿಬಲಿಟಿ ಮತ್ತು ಬಜೆಟ್ ಮ್ಯಾನೆಜ್ಮೆಂಟ್ ಕಾಯ್ದೆ 2003(ಎಫ್.ಆರ್.ಬಿ.ಎಂ.) ಜಾರಿಗೊಳಿಸಲಾಗಿತ್ತು. ಹಣದುಬ್ಬರ, ಬೆಳವಣಿಗೆಯ ಕುಂಠಿತತೆ ಹಾಗೂ ಇನ್ನಿತರ ಕಾರಣಗಳಿಂದ ಆ ಕೊರತೆಗಳನ್ನು ಸಂಪೂರ್ಣವಾಗಿ ಕಡಿವಾಣಕ್ಕೆ ತರಲು ಸಾಧ್ಯವಾಗಿಲ್ಲ. ಆದಾಯ ಕೊರತೆಯನ್ನು ಅಗತ್ಯವಾಗಿ ಸೊನ್ನೆಗೆ ಇಳಿಸಬೇಕು ಆದರೆ ವಿತ್ತೀಯ ಕೊರತೆ ಹೂಡಿಕೆಗೆ ಪೂರಕವಾಗಿರುತ್ತದೆ. ಯಾಕೆಂದರೆ ದೇಶದೊಳಗೆ ಬಂಡವಾಳ ಹರಿದು ಬರದ ಸಂದರ್ಭದಲ್ಲಿ ಸರಕಾರ ಸಾಲಮಾಡಿ ಹೂಡಿಕೆಗೆ ಪೂರಕವಾದ ಸೌಕರ್ಯಗಳನ್ನು ನಿರ್ಮಿಸಬೇಕಾಗುತ್ತದೆ. ಆದ್ದರಿಂದ ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ಈ ಬಾರಿಯಿಂದ ವಿತ್ತೀಯ ಹಾಗೂ ಆದಾಯ ಕೊರತೆಯ ಗುರಿಯನ್ನು ತಲುಪಲು ನಿರ್ದಿಷ್ಟ ಸಂಖ್ಯೆಯ ಬದಲು ವಾರ್ಷಿಕವಾಗಿ ಅಥವಾ ಕಿರು ಅವಧಿಯಲ್ಲಿ ಸಾಧಿಸಬಹುದಾದ ಶ್ರೇಣಿಯನ್ನು ರೂಪಿಸಲಾಗುವುದು. ದೇಶದ ಬೆಳವಣಿಗೆಯ ಅನಿವಾರ್ಯತೆಗೆ ತಕ್ಕಂತೆ ಈ ಗುರಿಯನ್ನು ತಲುಪುವುದು ಇದರ ಉದ್ದೇಶ. ಇದು ಅತ್ಯಂತ ಸಮರ್ಪಕ ಕೂಡ ಯಾಕೆಂದರೆ ಎಫ್.ಆರ್.ಬಿ.ಎಂ ಕಾಯ್ದೆ ಜಾರಿಯಾದ ನಾಲ್ಕು ವರ್ಷಗಳಲ್ಲಿ ಅಂದರೆ 2007ರ ಹೊತ್ತಿಗೆ ವಿತ್ತೀಯ ಹಾಗೂ ಆದಾಯ ಕೊರತೆಯನ್ನು ಸರಕಾರ ನೀಗಬೇಕಿತ್ತ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ಶ್ರೇಣಿಕೃತ ಗುರಿಯಿದ್ದಾಗ ಸರಕಾರಕ್ಕೂ ಗುರಿಮುಟ್ಟುವುದಕ್ಕೆ ನಮ್ಯತೆಯಿರುತ್ತದೆ. ಹಾಗೆಯೇ ಅನಿವಾರ್ಯ ಸಂದರ್ಭಗಳಲ್ಲಿ ಶ್ರೇಣಿಯ ಮಿತಿಯೊಳಗೆ ಸಮರ್ಪಕ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದರ ಮುಂದುವರೆದ ಭಾಗವಾಗಿ ಜರ್ಮನಿ ಹಾಗೂ ಚಿಲಿ ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿರುವಂತೆ ಆ ಕಾಯ್ದೆಯ ತಿದ್ದುಪಡಿಯ ಮೂಲಕ ಸರಕಾರಗಳು ಮಾಡಬಹುದಾದ ಅಪರಿಮಿತ ಸಾಲದ ಪ್ರಮಾಣಕ್ಕೆ ಕಡಿವಾಣಬೀಳಲಿದೆ. ಭವಿಷ್ಯದ ದೃಷ್ಟಿಯಿಂದ ಇದೊಂದು ಅತ್ಯಂತ ದಿಟ್ಟ ಕ್ರಮವಾಗಿರಲಿದೆ.
ಆಂತರಿಕ ಹಾಗೂ ಬಾಹ್ಯ ಸವಾಲುಗಳು:
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಇದು ನಾಲ್ಕನೇ ಬಜೆಟ್. ನರೇಂದ್ರ ಮೋದಿಯವರ ಉತ್ತಮ ಆಡಳಿತಾವಧಿಯ ಮಧ್ಯಾವಸ್ಥೆಯಲ್ಲಿ ಬಜೆಟ್ ಮಂಡಿಸುವ ಕಾರ್ಯ ಕತ್ತಿಯಂಚಿನ ನಡಿಗೆ. ಒಂದೆಡೆ ಮುಂದುವರೆಯುತ್ತಿರುವ ವಿಶ್ವ ಮಾರುಕಟ್ಟೆಯ ಪ್ರಕ್ಷುಬ್ದತೆ, ದೇಶಿಯ ಮಾರುಕಟ್ಟೆಯ ಮಂದ ನಡಿಗೆ, ಇಳಿಯುತ್ತಿರುವ ಬೇಡಿಕೆ, ಕುಂಠಿತಗೊಳ್ಳುತ್ತಿರುವ ಬೆಳವಣಿಗೆ, ಬೆಳವಣಿಗೆಯ ಪುನರುಜ್ಜೀವನದತ್ತ ಮುಖ ಮಾಡಿದರೆ ಏರಬಹುದಾದ ಹಣದುಬ್ಬರ, ದಿನದಿಂದ ದಿನಕ್ಕೆ ಏರುತ್ತಿರುವ ‘ನಾನ್ ಫರ್ಫಾಂಮಿಂಗ್ ಅಸೆಟ್(ಕ್ರಿಯಾಶೀಲವಲ್ಲದ ಆಸ್ತಿ)’, ಮೇಲೇಳದ ಕೃಷಿ ವಲಯ, ವಿಮುದ್ರಿಕರಣದ ತ್ವರಿತ ಪರಿಣಾಮದಿಂದ ಚೇತರಿಸಿಕೊಳ್ಳದ ಕೈಗಾರಿಕಾ ವಲಯ ಹೀಗೆ ಹತ್ತು ಹಲವು ಸವಾಲುಗಳಿಗೆ ಇಂದಿನ ಬಜೆಟ್ ಉತ್ತರವಾಗಬೇಕಿದೆ. ಇವೇ ಮೊದಲಾದ ಕಾರಣಗಳಿಂದ ಹಿಂದಿನ ಮೂರು ಬಜೆಟ್ಗಳಲ್ಲಿದ್ದ ಆರ್ಥಿಕ ಸ್ವಾತಂತ್ರ್ಯ, ಸುಭದ್ರತೆ ಹಾಗೂ ಸ್ಥಿರತೆ ಈ ಬಾರಿ ವಿತ್ತ ಸಚಿವರಿಗಿಲ್ಲ. ಬಜೆಟ್ನಲ್ಲಿ ಪ್ರಧಾನವಾಗಿ ಶಿಕ್ಷಣ, ಕೌಶಲ, ಉದ್ಯೋಗ, ಹೂಡಿಕೆ ಹಾಗೂ ಕೃಷಿ, ಉತ್ಪಾದನಾ ಹಾಗೂ ಸೇವಾವಲಯವನ್ನು ಪುನಶ್ಚೇತನಗೊಳಿಸುವ ಹೊಣೆಗಾರಿಕೆಯಿದೆ.
ದೇಶಬಾಂಧವರ ಅಪಾರ ನಿರೀಕ್ಷೆಗಳು, ಮೋದಿ ಸರಕಾರದ ಮಹತ್ವಾಕಾಂಕ್ಷೆ, ಪ್ರಸ್ತುತ ಮಂದಗತಿಯಲ್ಲಿ ಸಾಗುತ್ತಿರುವ ಬೆಳವಣಿಗೆ, ಭಾರತಕ್ಕೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕಾದ ದೂರದೃಷ್ಟಿ, ಹಿಂದಿನ ಸಾಲಿನಲ್ಲಿ ವಿಶೇಷ ಪ್ರಾಧಾನ್ಯ ನೀಡಿದ ಅರ್ಥ ವ್ಯವಸ್ಥೆಯ ಒಂಭತ್ತು ಆಧಾರ ಸ್ತಂಭಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಬೇಕಾದ ಸಮಚಿತ್ತತೆ. ಕಳೆದ ಮೂರು ವರ್ಷಗಳಲ್ಲಿ ಸಮಾಜ ಕಲ್ಯಾಣ ಯೋಜನೆಗಳಿಗೆ ಕುಂಠಿತಗೊಳ್ಳುತ್ತಿರುವ ಹಣಕಾಸನ್ನು ಮತ್ತೆ ಇಮ್ಮಡಿಗೊಳಿಸುವ ಅನಿವಾರ್ಯತೆ. ವಿಮುದ್ರಿಕರಣ ಯೋಜನೆ ಹಾಗೂ ಆದಾಯ ಘೋಷಣೆ ಯೋಜನೆಯ ಮುಖೇನ ಸರಕಾರದ ಬೊಕ್ಕಸಕ್ಕೆ ಸೇರಿರುವ ಹೆಚ್ಚುವರಿ ಆದಾಯವನ್ನು ಸಮರ್ಥವಾಗಿ ಬಳಸಬೇಕಾದ ಒತ್ತಡ. ದೇಶದ ‘ಪರೋಕ್ಷ ತೆರಿಗೆ’ ಪದ್ಧತಿಗೆ ಹೊಸ ಸ್ವರೂಪ ನೀಡಬಲ್ಲ ಕ್ರಾಂತಿಕಾರಿ ಜಿ.ಎಸ್.ಟಿ.(ಗೂಡ್ಸ್ ಮತ್ತು ಸರ್ವಿಸಸ್ ತೆರಿಗೆ)ಯ ಜಾರಿ ಜುಲೈ ತಿಂಗಳವರೆಗೆ ಸಾಧ್ಯವಿಲ್ಲ. ಅಂದರೆ ಅದು ಸರಕಾರದ ಬೊಕ್ಕಸಕ್ಕೆ ಹಾಗೂ ತೆರಿಗೆ ಸುಧಾರಣೆಗೆ ದೊಡ್ಡ ಹಿಂದೇಟು. ಇದನ್ನು ಏರಿಕೆಯಾಗುತ್ತಿರುವ ಸೇವಾ ತೆರಿಗೆಯನ್ನು ಮುಟ್ಟದೆ(?) ‘ಪರೋಕ್ಷ ತೆರಿಗೆ’ಯನ್ನು ಹೆಚ್ಚಿಸಬೇಕಾದ ಹಾಗೂ ವಿಸ್ತರಿಸಬೇಕಾದ ಸಂದರ್ಭವಿದು.
2016ರ ಎಕಾನಾಮಿಕ್ ಸರ್ವೆ ಗುರುತಿಸಿರುವಂತೆ ದೇಶದ ಆದಾಯ ತೆರಿಗೆಯನ್ನು ಕಟ್ಟುವವರು ಕೇವಲ 2% ಜನರು ಮಾತ್ರ. 2015-16ನೇ ಸಾಲಿನಲ್ಲಿ ಕೇವಲ 2 ಕೋಟಿ ಜನರು ಮಾತ್ರ ತೆರಿಗೆ ಕಟ್ಟಿದ್ದಾರೆ. ಭಾರತದ ತೆರಿಗೆ-ಜಿ.ಡಿ.ಪಿ.ಯ ಸರಾಸರಿ 16.6%. ಇದು ಇತರ ಅಭಿವೃದ್ಧಿಹೊಂದುತ್ತಿರುವ ದೇಶಗಳಿಗೆ(21%) ಹೋಲಿಸಿದರೆ ಅತ್ಯಂತ ಕಡಿಮೆ. ಆದ್ದರಿಂದ ಈ ಬಾರಿ ಶ್ರೀಮಂತರು ಹಾಗೂ ಅತೀ ಶ್ರೀಮಂತರಿಗಾಗಿ ಒಂದೆರಡು ಹೊಸ ತೆರಿಗೆಯನ್ನು ಜಾರಿಗೆ ತಂದರೆ ಯಾವುದೇ ಅಚ್ಚರಿಯಿಲ್ಲ. ಕಾರ್ಪೊರೆಟ್ ತೆರಿಗೆಯ ನಂತರ ಅತೀ ಹೆಚ್ಚು ಆದಾಯ ಬರುವುದು ಆದಾಯ ತೆರಿಗೆಯಿಂದ ಹಾಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹಣೆ ಈ ಬಜೆಟ್ನ ಗುರಿಯೂ ಹೌದು. ಇದೇ ಸಂದರ್ಭದಲ್ಲಿ ಸರಕಾರ ಆದಾಯ ತೆರಿಗೆಯ ತಳವನ್ನು ಎರಡೂವರೆ ಲಕ್ಷದಿಂದ ಮೂರು ಲಕ್ಷಕ್ಕೆ ಏರಿಸಬಹುದಾದ ಸಾಂಭವ್ಯತೆ ಎದುರಾಗಿದೆ. ಕಾರ್ಪೊರೇಟ್ ತೆರಿಗೆಯನ್ನು ಈಗಾಗಲೇ ಘೋಷಿಸಿರುವಂತೆ ಮುಂದಿನ ಎರಡು ವರ್ಷಗಳಲ್ಲಿ 25%ಗೆ ಇಳಿಸಬೇಕಾಗಿದೆ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮುಂದೆ ಸ್ಪರ್ಧಾತ್ಮಕವಾದ ತೆರಿಗೆಯನ್ನು ರೂಪಿಸಿ ಸ್ಥಿರ ತೆರಿಗೆಯ ಅಡಿಪಾಯದ ಮೂಲಕ “ತೆರಿಗೆ ಭಯೋತ್ಪಾದನೆ” ಎಂಬ ಹಣೆಪಟ್ಟಿಯಿಂದ ಕಳಚಿಕೊಂಡು, ಕಾರ್ಪೊರೆಟ್ ನಂಬಿಕೆಯನ್ನು ವೃದ್ಧಿಸಿಕೊಳ್ಳಬೇಕಾದ ಆ ಮೂಲಕ ಹೂಡಿಕೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲೇಬೇಕಾಗಿದೆ.
ಹೈವೇಯಿಂದ “ಐ”ವೇ ವರೆಗೆ, ಭಾರತ್ ಮಾಲಾದಿಂದ ಸಾಗರ್ಮಾಲಾ ವರೆಗೆ, ಬಂದರಿನಿಂದ ವಿಮಾನ ನಿಲ್ದಾಣಗಳವರೆಗೆ, ಭೂವಿಜ್ಞಾನದಿಂದ ಬಾಹ್ಯಾಕಾಶದವರೆಗೆ, ಶ್ರಮೇವ ಜಯತೆಯಿಂದ ಕೌಶಲಭಿವೃದ್ಧಿಯವರೆಗೆ.. ಹೀಗೆ ಮೂಲಭೂತ ಸೌಕಾರ್ಯಾಭಿವೃದ್ಧಿಗೆ ಕಳೆದ ಮೂರು ವರ್ಷಗಳಿಂದ ತನ್ನ ಮಿತಿಯಲ್ಲಿಯೇ ಅಗತ್ಯ ಹೂಡಿಕೆಯನ್ನು ಮಾಡುತ್ತಿರುವ ಸರಕಾರಕ್ಕೆ ವಿದೇಶಿ ಬಂಡವಾಳ ಹೂಡಿಕೆ ಮತ್ತು ಖಾಸಗಿ ವಲಯದ ನೀರಸ ಹೂಡಿಕೆಯ ಪುನಚ್ಛೇತನಕ್ಕಾಗಿ ಸಾಕಷ್ಟು ಸಾಲ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಈ ಬಾರಿ ಸಾಲ ಮಾಡಿ ತುಪ್ಪ ತಿನ್ನು ಎನ್ನುವುದಕ್ಕೆ ತದ್ವಿರುದ್ಧವಾಗಿ ಸಾಲವನ್ನು ಸೇವನೆಗೆ ಬಳಸದೆ ಹೂಡಿಕೆಗೆ ಬಳಸುವುದು ಬಹುತೇಕ ಅಗತ್ಯ. ಅದು ಜಾಣ್ಮೆಯ ನಡೆಯೂ ಹೌದು. ಅದನ್ನೇ ಕಳೆದೆರಡು ಎಕನಾಮಿಕ್ ಸರ್ವೆಗಳು ಪುನರುಚ್ಛರಿಸಿವೆ. ಹೂಡಿಕೆಯ ಪ್ರಗತಿ ಕಾಣದ ಈ ಹೊತ್ತಿನಲ್ಲಿ ಆರೋಗ್ಯ, ಶಿಕ್ಷಣ ಇಂತಹ ಅನಿವಾರ್ಯ ಸಾಮಾಜಿಕ ಸುಧಾರಣೆಯ ಯೋಜನೆಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವಕ್ಕೆ ಮೊರೆ ಹೋಗಬೇಕಾದ್ದು ಅನಿವಾರ್ಯವಾಗಬಹುದು. ಮುಂದಿನನ ದಿನಗಳಲ್ಲಿ ಸರಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬಹುದು.
ಸರಕಾರ ಹೂಡಿಕೆಗಾಗಿ ಏನೇ ಕಸರತ್ತು ಮಾಡುವ ಪ್ರಯತ್ನದಲ್ಲಿದ್ದರೂ ಅಗತ್ಯ ಹೂಡಿಕೆಗೆ ಸಾಲವನ್ನು ಒದಗಿಸಲಾಗದೆ ಅಸಹಾಯಕವಾಗಿ ಕುಳಿತಿರುವ ಬ್ಯಾಂಕ್ಗಳು, ಇದರಿಂದ ಮುಕ್ತಿ ಪಡೆಯುವುದಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯಿಂದ ಮಾತ್ರ ಸಾಧ್ಯ. ಅದನ್ನು ಆದಷ್ಟು ಬೇಗ ಜಾರಿಗೆ ತರದಿದ್ದಲ್ಲಿ ಈ ನಿಸ್ಸಾಹಯಕ ಬ್ಯಾಂಕ್ಗಳಿಂದ ಆರ್ಥಿಕ ಹಿಂಜರಿತಕ್ಕೆ ಪೂರಕ ಕಾರಣವಾಗಬಹುದು. ಇದು ಹೀಗೇ ಮುಂದುವರೆದರೆ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಏರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕುತ್ತದೆ, ಆಗ ಕಿರು ಅವಧಿಯಲ್ಲಿ ಹೂಡಿಕೆ ಮತ್ತು ಜನಸಾಮಾನ್ಯರ ಅನಿವಾರ್ಯತೆಗಳು ಮರೀಚಿಕೆಯಾಗಬಹುದು.
ಅಮೆರಿಕದ ಹೊಸ ಸರಕಾರದ ನೀತಿಗನುಗುಣವಾಗಿ ಅಲ್ಲಿನ ಕಾಂಗ್ರೆಸ್ ಮಂಡಿಸಿರುವ ಹೆಚ್1ಬಿ ವೀಸಾ ನಿಯಮ ಜಾರಿಯಾದರೆ ಅಮೆರಿಕಕ್ಕೆ ಉದ್ಯೋಗ ಅರಸಿ ತೆರಳಿರುವ ಐಟಿ ಉದ್ಯೋಗಿಗಳು ಅತಂತ್ರರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಮರಳಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಭಾರತದೊಳಗೆ ಅವರಿಗೆಲ್ಲ ನೀಡಲು ಉದ್ಯೋಗದ ಸೃಷ್ಟಿಯಾಗಬೇಕಾಗುತ್ತದೆ. ಈಗಾಗಲೇ ದೇಶದೊಳಗೆ ಇರುವ ನಿರುದ್ಯೋಗದ ಸಮಸ್ಯೆ ಮತ್ತೊಂದೆಡೆ. ಈ ಬೃಹತ್ ಸವಾಲವನ್ನು ಅವಕಾಶವನ್ನಾಗಿ ಬದಲಾಯಿಸಬೇಕಾದ ಅನಿವಾರ್ಯತೆ ಈ ಬಾರಿಯ ಬಜೆಟ್ಗಿದೆ. ಭಾರತವನ್ನು ಐಟಿ, ಬಿಟಿ. ತಂತ್ರಜ್ಞಾನ, ಹೀಗೆ ಒಟ್ಟಂದದಲ್ಲಿ ಸೇವಾವಲಯದ ಕೇಂದ್ರವಾಗಿ ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಬಜೆಟ್ ಮುಂದಿದೆ. ಕೃಷಿಯ ಆಮೆಗತಿ, ಮೇಕ್ ಇನ್ ಇಂಡಿಯಾ ಇನ್ನೂ ಮೇಕಿಂಗ್ ಹಂತದಲ್ಲಿದೆ. ಅದೇ ಹೊತ್ತಿಗೆ ದೇಶದ ಶೇಕಡ 15% ಜನರು ಉದ್ಯೋಗ ಮಾಡುವ ಆದರೆ ಜಿ.ಡಿ.ಪಿ.ಗೆ ಶೇಕಡ 50% ಆದಾಯವನ್ನು ಒದಗಿಸುತ್ತಿರುವ ಸೇವಾವಲಯವೂ ಕಳೆದ ಕೆಲವು ತಿಂಗಳುಗಳಿಂದ ಅತಂತ್ರವಾಗಿ ತೋರುತ್ತಿದೆ.
ಈಗೀಗ ಪ್ರಗತಿ ಕಾಣದೇ ಮುಳುಗುತ್ತಿರುವ ಜಡ ವಿಶ್ವದಲ್ಲಿ ಉಜ್ವಲಮಯ ಕಿಡಿಯಂತೆ ಗೋಚರಿಸುತ್ತಿದ್ದ ಭಾರತದ ಆರ್ಥಿಕತೆಯಲ್ಲಿ ಸಣ್ಣ ಅತಂತ್ರತೆ, ಸ್ವಲ್ಪ ಎಚ್ಚರ ತಪ್ಪಿದರೂ ದೇಶವನ್ನು ಹಿನ್ನಡೆಗೆ ಕೊಂಡೊಯ್ದು ಬೆಳವಣೆಗೆಯನ್ನು ಮುಳುಗಿಸಬಲ್ಲ ಅಲೆಗಳು ಗೋಚರಿಸತೊಡಗಿವೆ. ಐ.ಎಂ.ಎಫ್.(ಇಂಟರ್ ನ್ಯಾಷನಲ್ ಮಾನೆಟರಿ ಫಂಡ್)ನ ಅಂದಾಜಿನ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ದೇಶದ ಜಿ.ಡಿ.ಪಿ.ಯ 6.6%ಕ್ಕೆ ಇಳಿಯಲಿದೆ. ಸರಕಾರದ ಅಂಕಿ ಅಂಶಗಳ ಪ್ರಕಾರ 2017-18ರಲ್ಲಿ ಹಿಂದೆ ಊಹಿಸಿದ್ದಕ್ಕಿಂತ ಕಡಿಮೆ ಅಂದರೆ ಆರ್ಥಿಕ ಬೆಳವಣಿಗೆ ಜಿಡಿಪಿಯ 7.1% ಇಳಿಯಲಿದೆ. ಸೆಂಟ್ರಲ್ ಸ್ಟಾಟಸ್ಟಿಕಲ್ ಆಫಿಸ್(ಸಿ.ಎಸ್.ಒ.)ನ ಈ ಅಧ್ಯಯನದ ದಾಖಲೆಯಲ್ಲಿ ದೇಶದ ಶೆಕಡ 86% ನಗದಿನ ವಿಮುದ್ರಿಕರಣದಿಂದುಟಾದ ಪರಿಣಾಮಗಳು ಸೇರಿಲ್ಲ. ಈ ಭೀತಿ ಒಂದೆಡೆಯಾದರೆ ಜಿ.ಡಿ.ಪಿ. ಲೆಕ್ಕಾಚಾರ ವಾಸ್ತವದಿಂದ ದೂರವಿರುವ ಅತಿಯಾದ ಸಂಖ್ಯಾಪ್ರಮಾಣ. ಹಾಗಾಗಿ ವಾಸ್ತವದಲ್ಲಿ ಬೆಳವಣಿಗೆಯ ನೈಜಸ್ಥಿತಿ ಇದಕ್ಕಿಂತ ಇಳಿಮುಖವಾಗಿರಲಿದೆ. ಇದು ಭಾರತ ಹೆಚ್ಚು ಆತಂಕಗೊಳ್ಳಬೇಕಾದ ಮತ್ತು ಎಚ್ಚೆತ್ತುಕೊಳ್ಳಬೇಕಾದ ಸಂಗತಿ ಹಾಗೂ ಸಮಯ. ಆಂತರಿಕ ಹಾಗೂ ಬಾಹ್ಯವಾಗಿ ಆರ್ಥಿಕ ಪರಿಸ್ಥಿತಿ ಈ ಬಾರಿಯ ಬಜೆಟ್ನ ಸಮಯಕ್ಕೂ ಯು.ಪಿ.ಎ. ಸರಕಾರದ ಕೊನೆಯ ದಿನಗಳ ಪರಿಸ್ಥಿತಿಗೂ ಸಾಕಷ್ಟು ಸಾಮ್ಯತೆಯಿದೆ.
ಜಾಗತಿಕ ತೈಲ ಬೆಲೆ ಬ್ಯಾರಲ್ಗೆ 70 ಡಾಲರ್ಗೆ ಏರಿದೆ. ಇದು ಕಳೆದ ಎರಡು ವರ್ಷಗಳ ಪರಿಸ್ಥಿತಿಗೆ ಹೋಲಿಸಿದರೆ ತುಸು ಹೆಚ್ಚೆಂದೇ ಹೇಳಬೇಕು. ಜಾಗತಿಕವಾಗಿ ಆಹಾರ ಪದಾರ್ಥಗಳು, ಸರಕು, ಉಪಭೋಗ್ಯ ವಸ್ತುಗಳ ಬೆಲೆ ಇಳಿಮುಖವಾಗಿಯೇ ಸಾಗಿದೆ. ಹಾಗಿದ್ದೂ ಭಾರತ ಹಾಗೂ ಜಾಗತಿಕ ಬೇಡಿಕೆ ದುರ್ಬಲವಾಗಿದೆ. ಹಾಗಾಗಿ ಇವ್ಯಾವುವೂ ಭಾರತದ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿಲ್ಲ. ಶುದ್ಧ ಹಾಗೂ ಮರುಬಳಸಬಹುದಾದ ಸೌರಶಕ್ತಿ, ಗಾಳಿ, ಶೇಲ್ ಗ್ಯಾಸ್, ಮಿಥೇನ್ ಮೊದಲಾದ ಸಂಪನ್ಮೂಲಗಳ ಮೇಲಿನ ಹೂಡಿಕೆಯನ್ನು ಸರಕಾರ ಯಾವುದೇ ಕಾರಣಕ್ಕೂ ಕಡಿತಗೊಳಿಸುವಂತಿಲ್ಲ. ಯಾಕೆಂದರೆ ಭಾರತ ಮಾತ್ರವಲ್ಲ ಮನುಷ್ಯಕುಲಕ್ಕೆ ಈ ಮೂಲಗಳೇ ಭವಿಷ್ಯ. ಇನ್ನು ಭಾರತ ಉನ್ನತ ಶಿಕ್ಷಣ, ಅನ್ವೇಷಣೆ, ಮೂಲ ವಿಜ್ಞಾನ, ತಂತ್ರಜ್ಞಾನ ಹಾಗೂ ಬಹ್ಯಾಕಾಶ ಕ್ಷೇತ್ರದಲ್ಲೂ ನಿಗದಿತ ಪ್ರಮಾಣದ ಪಾಲನ್ನು ಈ ಬಾರಿ ನೀಡಲಿದೆ. ಮುಂದಿನ ದಿನಗಳಲ್ಲಿ ವಿಶ್ವವನ್ನು ಮುನ್ನಡೆಸಲಿರುವುದು ಈ ಜ್ಞಾನಶಕ್ತಿಗಳು. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನವಲ್ಲದಿದ್ದರೂ ಹಿಂದಿನ ಬಜೆಟ್ಗಳಿಗಿಂತ ಹೆಚ್ಚಿನ ಅನುದಾನದ ಅಗತ್ಯವಿದೆ. ಹಾಗಾಗಿ ಈ ಕ್ಷೇತ್ರಗಳೂ ಜೇಟ್ಲಿಯವರಿಗೆ ಮುಖ್ಯವಾಗಿರಲಿವೆ.
ನರೇಂದ್ರ ಮೋದಿ ಸರಕಾರದ ಬೆಳವಣೆಗೆಯ ಮಾರ್ಗಸೂಚಿ ಎರಡು ನಂಬಿಕೆಗಳಲ್ಲಿ ದೃಢವಾಗಿ ನೆಲೆಯೂರಿದೆ. ಮೊದಲನೆಯದು ವಿಶ್ವದ ಅತಂತ್ರತೆಯ ಎದುರು ಬಂಡವಾಳ ಹೂಡಿಕೆಗೆ ಭಾರತ ಸರ್ವಸಮರ್ಥ ದೇಶ. ಸರಕಾರ ಕೇವಲ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಿದರೆ ಸಾಕು ಬಂಡವಾಳ ತಾನೇ ತಾನಾಗಿ ಹರಿದುಬರುತ್ತದೆ. ಎರಡನೆಯದಾಗಿ, ಮೂಲಭೂತ ಸೌಕರ್ಯಗಳಲ್ಲಿ ಅಪಾರವಾಗಿ ಹೂಡಿಕೆಮಾಡುವುದರಿಂದ ಖಾಸಗಿ ಹೂಡಿಕೆದಾರರು ಭಾರತವನ್ನು ಬಿಟ್ಟು ಮತ್ತೆಲ್ಲಿಗೂ ಹೋಗುವುದಿಲ್ಲ. ಕಳೆದ ಮೂರು ಬಜೆಟ್ನ ಸಿಂಹಾವಲೋಕನ ಮಾಡಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಆದರೆ ಅಂದುಕೊಂಡದ್ದರಲ್ಲಿ 25% ಕೂಡ ಹೂಡಿಕೆಯಾಗುತ್ತಿಲ್ಲ ಎಂಬ ಸತ್ಯ ಜೇಟ್ಲಿಯವರಿಗೆ ಮನವರಿಕೆಯಾಗಿದೆ. ಆದರೆ ಹಿಡಿದ ಈ ಹಾದಿಯನ್ನು ಬಿಡುವಂತಿಲ್ಲ. ಅದೇ ಹೊತ್ತಿಗೆ ವಿಮುದ್ರಿಕರಣದಿಂದ ಜನರಿಗಾದ ತೊಂದರೆಯನ್ನು ಸರಿದೂಗಿಸಲು ಹಾಗೂ ಬಂದ ಹೆಚ್ಚುವರಿ ಆದಾಯವನ್ನು ಸರಿಯಾಗಿ ಬಳಸಿಕೊಳ್ಳಲು ಬಜೆಟ್ನಲ್ಲಿ ಹಣವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವುದಕ್ಕಾಗಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಬೇಕೆಂಬುದೂ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ. ಹೂಡಿಕೆ ಅಥವಾ ಹಂಚುವಿಕೆಯ ದ್ವಂದ್ವ ಈ ಬಜೆಟ್ನಲ್ಲಿ ಅನುರಣಿಸಲಿದೆ.
ಕಳೆದ ಮೂರು ವರ್ಷಗಳಲ್ಲಿ ಅರುಣ್ ಜೇಟ್ಲಿ ಭಾರತಕ್ಕೊಂದು ಸ್ಪಷ್ಟ ಹಾಗೂ ಭದ್ರ ಆರ್ಥಿಕ ದಿಕ್ಸೂಚಿಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಪೆಟ್ರೋಲಿಯಂನಂತಹ ಕಡು ಬಡವರಿಗೆ ಉಪಯೋಗವಾಗದ ವಸ್ತುಗಳ ಮೇಲಿನ ಜಡ ಸಬ್ಸಿಡಿಗಳನ್ನು ಕಡಿತಗೊಳಿಸಿದ್ದು. ಜನ್ಧನ್-ಆಧಾರ್-ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಂಡು ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆಯಂತಹ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆತರುತ್ತಿರುವುದು. ಉದ್ಯೋಗ ಖಾತ್ರಿ, ರಸಗೊಬ್ಬರ ಇತ್ಯಾದಿ ಯೋಜನೆಗಳಲ್ಲಿ ನೇರ ಹಣ ವರ್ಗಾವಣೆಯ ಕಾರಣದಿಂದ ಸಬ್ಸಿಡಿ ಹಣದ ಪೋಲಾಗುವಿಕೆ, ಭ್ರಷ್ಟಾಚಾರಕ್ಕೆ ಕಡಿವಾಣಹಾಕುವಲ್ಲಿ ಮಹತ್ವದ ಪಾತ್ರವಹಿಸಿವೆ. ಯುಪಿಐನಂತಹ ಸಾಧನಗಳ ಜೊತೆಗೆ “ಜಾಮ್ ತ್ರಿವಳಿ”ಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ಗೆ ಇಂಬು ದೊರೆಯುತ್ತಿರುವುದು ಹಾಗೂ ಕಡಿಮೆ ನಗದು ವ್ಯವಹಾರಕ್ಕೆ ಪ್ರೇರಣೆ ದೊರೆಯುತ್ತಿರುವುದು. ಭವಿಷ್ಯದ ಡಿಜಿಟಲ್ ಕ್ರಾಂತಿಗೆ ಹಾಕಿದ ತಳಪಾಯವಿದು.
“Wants are unlimited while resources are scare.” ಎಂಬಂತೆ ಬಜೆಟ್ ಎದುರು ಸಾಕಷ್ಟು ಸವಾಲು, ನಿರೀಕ್ಷೆಗಳು ಗರಿಗೆದರಿ ನಿಂತಿವೆ. ಆದರೆ ವಿಶ್ವದ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಇರುವ ಕನಿಷ್ಟ ಸಂಪನ್ಮೂಲಗಳಲ್ಲೇ ಗರಿಷ್ಟ ಸಾಧನೆ ಮಾಡಬೇಕಾದ ಅನಿವಾರ್ಯತೆ ಜೇಟ್ಲಿಯವರ ಮುಂದಿದೆ. ಈ ಹಂತದಲ್ಲಿ ಅವರು ಎಡವುದಕ್ಕೆ ಕಾರಣವಿಲ್ಲ, ಸಮರ್ಥ ನಾಯಕತ್ವವನ್ನೇ ಪ್ರದರ್ಶಿಸಬೇಕಿದೆ. ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ದಿಟ್ಟ ನಿರ್ಧಾರಗಳನ್ನೇ ತೆಗೆದುಕೊಳ್ಳುವ ಅಭ್ಯಾಸವಿರುವ ನರೇಂದ್ರ ಮೋದಿ ಸರಕಾರದ ಸಮತೋಲನಕ್ಕೆ ಹಾಗೂ ಭವಿಷ್ಯಕ್ಕೆ ಈ ಬಜೆಟ್ ಲಿಟ್ಮಸ್ ಟೆಸ್ಟ್ ಆಗಲಿದೆ. ಈ ಬಾರಿ ಎಡವಿದರೆ ಅವಕಾಶ ಮತ್ತೆ ಒದಗುವುದಿಲ್ಲ. ಈ ಸಂಕೀರ್ಣ ಸಮಯವನ್ನು ಜಾಗರೂಕತೆಯಿಂದ ಈಜಿದರೆ ಯುಗಪ್ರವರ್ತಕ ಬದಲಾವಣೆಯಾಗಲಿದೆ. ಅಂಧ ವಿಶ್ವದಲ್ಲಿ ಭಾರತವೆಂಬ ಉಜ್ವಲ ಕಿಡಿಯನ್ನು ಜ್ವಾಲೆಯಾಗಿ ಮುಂದುವರೆಸಿದರೆ 21ನೇ ಶತಮಾನ ಭಾರತದ್ದಾಗಲು ರಹದಾರಿ ತೆರೆದಂತಾಗುತ್ತದೆ. ಹಾಗಾಗಿ ಅಗತ್ಯವಾಗಿ ಇದು “Make or Break Budget”.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.