ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ ಜನುಮದಿನವನ್ನಷ್ಟೇ ಆಚರಿಸಿಕೊಳ್ಳುವ ಭಾರತದ ಏಕಮೇವ ಸ್ವಾತಂತ್ರ್ಯ ಹೋರಾಟಗಾರ ನಮ್ಮ ಹೆಮ್ಮೆಯ ನೇತಾಜಿ ಸುಭಾಷ್ಚಂದ್ರಬೋಸ್ ಎನ್ನಬಹುದು.
ಜ.23 ಸುಭಾಷರ ಜನುಮದಿನ. ಅವರನ್ನು ನೆನೆಯದ ಯುವ ಮನವಿಲ್ಲ, ಅವರಿಲ್ಲದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅಪೂರ್ಣ. ದೇಶದ ಹೊರಗಿದ್ದುಕೊಂಡೇ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಧೀರ ಯೋಧ. ದೇಶದ ಮೊದಲ ಮಿಲಿಟರಿ ಪಡೆ ಐ.ಎನ್.ಎ. ಕಟ್ಟಿ ಜೈ ಹಿಂದ್ ಮೊಳಗಿಸಿದ ಅಪರೂಪದ ರಾಷ್ಟ್ರಪ್ರೇಮಿ ಸುಭಾಷ್ಚಂದ್ರ ಬೋಸ್.
ಸುಭಾಷರು ಜಪಾನಿನ ಶಾಲಾ ಮಕ್ಕಳನ್ನು ಒಮ್ಮೆ ಸಂದರ್ಶಿಸಿ ಅವರ ದೇಶಪ್ರೇಮವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದರು. ಆ ರೀತಿಯ ಹೆಮ್ಮೆ ನಮ್ಮ ದೇಶದ ಮಕ್ಕಳ ಪಾಲಾಗಲಿಲ್ಲ ಏಕೆ? ಇಚ್ಚಾಶಕ್ತಿಯ ಕೊರತೆ, ಸಂಘಟಿತ ಮನಸುಗಳ ಕೊರತೆ ಎಂಬ ಸಿದ್ಧ ಉತ್ತರವಿರುತ್ತೆ. ಒಮ್ಮೆ ಸುಭಾಷರ ಜೀವನ ಚರಿತ್ರೆ ಓದಿ. ಇಚ್ಛಾಶಕ್ತಿ ಹಾಗೂ ಸಂಘಟನೆಯ ಮನಸ್ಸು ತಾನೇ ಹದಗೊಳ್ಳುತ್ತದೆ.
ವಿವೇಕಾನಂದರ ಭಾಷಣ ಕೇಳಿ ಸುಭಾಷರು ಅಗಾಧ ದೇಶಭಕ್ತಿ, ಸಂಘಟನಾ ಚತುರತೆ, ವಿದೇಶಿಗಳ ಮನವೊಲಿಕೆ, ಸ್ವತಂತ್ರದ ಹಂಬಲ, ಬಗ್ಗದ -ಜಗ್ಗದ ತಲೆ ಮತ್ತು ಮನಸು, ವೀರತ್ವಕ್ಕೆ ಹಸ್ತಲಾಘಿಸುವ ನೇತಾರ ಎನಿಸಿದರು.
ರಾಷ್ಟ್ರಸೇವೆ ಎಲ್ಲರಲ್ಲಿಯೂ ಜ್ವಾಲಾಮುಖಿಯಂತೆ ಭುಗಿಲೇಳಲು ರಾಷ್ಟ್ರದ ಅಧ್ಯಯನ ಬಹು ಮುಖ್ಯ. ಸಾಧಕ-ಬಾಧಕಗಳ ಅರಿವಿದ್ದವ ಎಂದಿಗೂ ತನ್ನ ದೇಶದ ಹಿತಾಸಕ್ತಿ ಬಲಿಕೊಡಲಾರ. ಈ ಬಗ್ಗೆ ನಾವು ಯೋಚಿಸೋಣ ದಿಟ್ಟವಾಗಿ ನೇತಾಜಿಯ ದಾರಿಯಲ್ಲಿ ಮುನ್ನಡೆಯೋಣ. ನೇತಾಜಿ ದಾರಿ ಎಂದರೆ ಬೆಚ್ಚಬೇಡಿ. ಅವರು ತಮ್ಮ ರಕ್ತ ಹರಿಸಿ ಸ್ವಾತಂತ್ರ್ಯ ತಂದು ಕೊಟ್ಟವರು. ಆ ಸ್ವಾತಂತ್ರ್ಯ ಸ್ವೇಚ್ಛೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರೆಂದು ಹೇಳಲಾಗುತ್ತಿದೆ. ಮೂರ್ನಾಲ್ಕು ಆಯೋಗ ರಚಿಸಿ ಸಾವಿನ ತನಿಖೆ ನಡೆಸಿದರೂ, ರಹಸ್ಯ ಇಂದಿಗೂ ರಟ್ಟಾಗಿಲ್ಲ. ಈ ಕುರಿತು ಕೆಲ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಿದರೂ ನಿರೀಕ್ಷೆ ಹುಸಿಯಾಗಿದೆ. ಕೆಲವೆಡೆ ಬಾಬಾ ರೂಪದಲ್ಲಿ ನೇತಾಜಿ ಬದುಕಿದ್ದಾರೆ ಎಂಬ ಗುಮಾನಿ, ಮಾಹಿತಿ ಇತ್ತು. ಆದರೂ ಪ್ರತಿ ಸುಭಾಷರ ಜನುಮದಿನ ಬಂದಾಗ ನಮ್ಮ ಮನಸು ಅವರ ಸಾವಿನ ರಹಸ್ಯದತ್ತಲೇ ಮನಸು ಗಿರಕಿ ಹೊಡೆಯುತ್ತೆ. ಅಷ್ಟು ಮಾತ್ರ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.