ಹಳ್ಳಿಗಳನ್ನು ನಾಚಿಸುವಂತೆ ಬಿದ್ದಿರುವ ತಗ್ಗು ದಿನ್ನೆಗಳು, ರೋಗಕ್ಕೆ ರಹದಾರಿಯಾಗಬಲ್ಲ ಮೈಮುತ್ತುವ ಧೂಳು, ಮಳೆ ಬಂದರೆ ಸಾಕು ಗಟಾರಗಳಾಗಿ ಬದಲಾಗುವ ರಸ್ತೆಗಳು, ನಗರ ಪ್ರದೇಶಗಳಿಗೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯವಿಲೇವಾರಿ ಹೀಗೆ ಅಸಂಖ್ಯ ಅಪಸವ್ಯಗಳನ್ನು ಹೊತ್ತು ನರಳುತ್ತಿರುವ ನಗರಗಳಿಗೆ ಸಿಂಧು ಕಣಿವೆಯ (ಹರಪ್ಪ) ನಗರ ಯೋಜನೆ ’ಗುರು’ವಾಗಬಲ್ಲದು.
ಹೌದು, ಸಿಂಧು ಕಣಿವೆ ನಾಗರಿಕತೆಯು ನಗರ ಕೇಂದ್ರಿತವಾಗಿದ್ದು, ಒಳಚರಂಡಿ ಹಾಗೂ ನಿರ್ಮಲೀಕರಣ ವ್ಯವಸ್ಥೆಗಳು ನಮ್ಮ ಇಂದಿನ ಪ್ರಧಾನಿ ಮೋದಿ ಅವರ ಕನಸಿನ ಸ್ವಚ್ಛ ಭಾರತ ಹಾಗೂ ಸ್ಮಾರ್ಟ್ ಸಿಟಿಗಳಾದಿಯಾಗಿ ಎಲ್ಲ ನಗರಗಳಿಗೂ ಮಾದರಿ.
ನಗರ ಪ್ರದೇಶಗಳು
ಸಿಂಧೂ ಕಣಿವೆ ನಾಗರಿಕತೆಯು ತನ್ನ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿತು. ಅಲ್ಲಿನ ಅವಶೇಷಗಳು ಇಂದಿಗೂ ನಗರ ಯೋಜನೆಯ ವೈಶಿಷ್ಟ್ಯತೆಯ ಕುರುಹುಗಳಾಗಿವೆ. ಅಚ್ಚುಕಟ್ಟಾಗಿರುವ ಒಳಚರಂಡಿ ಮತ್ತು ನಿರ್ಮಲೀಕರಣ ವ್ಯವಸ್ಥೆ ಅಭಿವೃದ್ಧಿಯ ನೈಜ ಶ್ರದ್ಧೆಯ ಪ್ರತೀಕ. ಸಿಂಧೂ ನಗರಗಳಲ್ಲಿನ ಜೀವನವು ಪ್ರಾಚೀನ ಕ್ರೀಟ್ನಂತೆ ’ಪ್ರಜಾಪ್ರಭುತ್ವದ ಮಧ್ಯಮವರ್ಗದ ಆರ್ಥಿಕತೆ’ಯನ್ನು ಪ್ರಭಾವಿಸುತ್ತದೆ.
(Crete: a Greek island in the eastern Mediterranean Sea; population 630,000 (est. 2005); capital, Heraklion. It is noted for the remains of the Minoan civilization that flourished here in the 2nd millennium bc . Crete played an important role in the Greek struggle for independence from the Turks in the late 19th and early 20th centuries that resulted in it becoming administratively part of an independent Greece in 1913 )
ನಗರಗಳ ವಿಂಗಡಣೆ
ನಗರಗಳ ಪ್ರಾದೇಶಿಕ ವ್ಯಾಪ್ತಿ ತೀರಾ ವಿಸ್ತಾರವಾದರೆ ಅವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಹರಪ್ಪ ಮತ್ತು ಮೊಹೆಂಜೋದಾರೊ ಹಾಗೂ ಕಲಿಬಂಗನ್ ನಗರಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ನಗರಗಳ ಹೆಚ್ಚಿನ ಹಾಗೂ ಎತ್ತರದ ಭಾಗವನ್ನು ಕೋಟೆಯಂತೆ ನಿರ್ಮಿಸಿ ರಕ್ಷಿಸಲಾಗುತ್ತಿತ್ತು. ನಗರಾಡಳಿತ ನಡೆಸುವ ವರ್ಗವು ರಕ್ಷಿತ ಪ್ರದೇಶದಲ್ಲಿ ಜೀವನ ನಡೆಸುತ್ತಿದ್ದರು. ಇನ್ನುಳಿದ ಪ್ರದೇಶದಲ್ಲಿ ರೈತರು ಹಾಗೂ ಸಾಮಾನ್ಯ ಜನ ವಾಸಿಸುತ್ತಿದ್ದರು.
ರಸ್ತೆ ನಿರ್ಮಾಣ
ಸಿಂಧೂ ಕಣಿವೆಯಲ್ಲಿನ ಪ್ರಮುಖ ರಸ್ತೆಗಳು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಪರಸ್ಪರ ಸಂಧಿಸುವ ಹಾಗೆ ಬಲಕೋನದಲ್ಲಿ ನಿರ್ಮಿತವಾದವು. ರಸ್ತೆಗಳು 9 ಅಡಿಯಿಂದ 34 ಅಡಿಯವರೆಗೂ ವಿಶಾಲವಾಗಿದ್ದವು. ಏನಿಲ್ಲವೆಂದರೂ ಒಂದು ಮೈಲಿಯಾದರೂ ರಸ್ತೆಗಳು ನೇರವಾಗಿದ್ದವು.
ಶಿಸ್ತುಬದ್ಧ ಕಟ್ಟಡ
ಹರಪ್ಪ ಮತ್ತು ಮೊಹೆಂಜೊದಾರೊಗಳಲ್ಲಿದ್ದ ಕಟ್ಟಡಗಳೇ ಅಲ್ಲಿನ ವಿವಿಧ ಸಾಮಾಜಿಕ ವರ್ಗಗಳ ಸಂಕೇತವಾಗಿದ್ದವು. ಶ್ರೀಮಂತ ಹಾಗೂ ಆಡಳಿತ ವರ್ಗದ ಜನರು ಬಹುಕೋಣೆ ಇರುವ ವಿಶಾಲವಾದ ಮನೆಯಲ್ಲಿದ್ದರೆ, ಮಧ್ಯಮ ಹಾಗೂ ಬಡವರ್ಗದವರು ಪುಟ್ಟ ವಠಾರಗಳಲ್ಲಿ ವಾಸಿಸುತ್ತಿದ್ದರು. ಸಾರ್ವಜನಿಕ ಹಾಗೂ ದೊಡ್ಡ ಕಟ್ಟಡಗಳು ಪ್ರಧಾನ ರಸ್ತೆಬದಿ ಇದ್ದರೆ, ಆಧುನಿಕ ಮನೆಗಳು ಉಪ ರಸ್ತೆಗಳಲ್ಲಿ ನಿರ್ಮಾಣಗೊಂಡಿದ್ದವು. ಸಾರ್ವಜನಿಕ ರಸ್ತೆ ಅತಿಕ್ರಮಣ ಅಲ್ಲಿರಲಿಲ್ಲ. ಕಟ್ಟಡಗಳಿಗೆ ಶಿಲ್ಪಕಲೆಯ ಸ್ಪರ್ಷ ಇರುತ್ತಿತ್ತು.
ಕಟ್ಟಡ ಸಾಮಗ್ರಿಗಳು
ಸಿಂಧು ನಗರದಲ್ಲಿ ಕಲ್ಲಿನಿಂದ ಕಟ್ಟಿದ ಮನೆಗಳಿಲ್ಲ. ಸುಟ್ಟ ಅಥವಾ ಬಿಸಿಲಿಗೆ ಒಣಗಿದ ಇಟ್ಟಿಗೆಗಳನ್ನು ಮನೆ ಕಟ್ಟಲು ಬಳಸಲಾಗುತ್ತಿತ್ತು. ಕಟ್ಟಡದ ಯಾವ ಭಾಗದಲ್ಲಿ ನೀರು ಮಲಿನಗೊಳ್ಳುವ ಸಾಧ್ಯತೆ ಇದೆಯೋ ಅಲ್ಲಿ ಸುಟ್ಟ ಇಟ್ಟಿಗೆ ಬಳಸಲಾಗುತ್ತಿತ್ತು. ಮನೆಗಳ ಮೇಲ್ಭಾಗವು ಸಮತಟ್ಟಾಗಿದ್ದು, ಅವನ್ನು ಕಟ್ಟಿಗೆಯಿಂದ ಮಾಡಲಾಗುತ್ತಿತ್ತು.
ಭಾರತೀಯ ಗಣಿತಜ್ಞ, ಸಂಖ್ಯಾಶಾಸ್ತ್ರಜ್ಞ, ಇತಿಹಾಸಜ್ಞ ಡಿ.ಡಿ.ಕೋಸಂಬಿ ಅವರ ಪ್ರಕಾರ, ವಿಸ್ತಾರವಾದ ಒಳಚರಂಡಿ ವ್ಯವಸ್ಥೆಯೇ ಸಿಂಧು ನಾಗರಿಕತೆಯ ಗಮನಾರ್ಹ ಲಕ್ಷಣ. ಸಿಂಧು ನಾಗರಿಕತೆಯನ್ನು ಹೊರತು ಪಡಿಸಿದರೆ, ರೋಮನ್ ನಾಗರಿಕತೆಗೂ ಮೊದಲು ಇಂಥ ಆಧುನಿಕ (ಆಗಿನ ಕಾಲಕ್ಕೆ) ಒಳಚರಂಡಿ ಮತ್ತು ನಿರ್ಮಲೀಕರಣ ವ್ಯವಸ್ಥೆ ಇರಲಿಲ್ಲವಂತೆ.
ಉಪಸಂಹಾರ
ಪ್ರಸ್ತುತ ಕೇಂದ್ರ ಸರ್ಕಾರದ ದಿಟ್ಟ, ವಿಭಿನ್ನ ನಿಲುವುಗಳು ಒಂದಿಷ್ಟು ಕನಸುಗಳನ್ನು ಬಿತ್ತಿವೆ. ಸ್ವಚ್ಛಭಾರತ, ಸ್ಮಾರ್ಟ್ ಸಿಟಿ ಎಂಬಿತ್ಯಾದಿ ಕಲ್ಪನೆಗಳು ಜನ್ಮತಾಳಿವೆ. ಅದಕ್ಕೆ ಪೂರಕವಾಗಿ ನಗರ ಕಟ್ಟಲು ಹರಪ್ಪ ನಾಗರಿಕತೆಯ ತುಲನೆ ಪ್ರಸ್ತುತ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ತಜ್ಞರು ಈ ನಿಟ್ಟಿನಲ್ಲಿ ರಚನಾತ್ಮಕವಾಗಿ ಚಿಂತಿಸಲಿ ಎಂಬುದೇ ನಮ್ಮ ಆಶಯ.
’ಹರಪ್ಪ ತಂತ್ರ ಅನುಸರಿಸಿ’
ಸಾಕಷ್ಟು ನೀರಿನ ಸೌಲಭ್ಯ ಹಾಗೂ ಸೂಕ್ತ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ನಗರ ಪ್ರದೇಶಗಳ ಬಹುತೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಸಿಂಧು ನಾಗರಿಕತೆಯ ತಜ್ಞ ಜೋನಾಥನ್ ಮಾರ್ಕ್ ಕೆನೊಯರ್ ಅಭಿಪ್ರಾಯಪಟ್ಟಿದ್ದಾರೆ.ಅವರು ಇತ್ತೀಚೆಗೆ ಕೋಲ್ಕತ್ತಾದ ಇಂಡಿಯನ್ ಮ್ಯೂಜಿಯಂನಲ್ಲಿ ಏರ್ಪಡಿಸಿದ್ದ ಸಿಂಧೂ ನಾಗರಿಕತೆ ಮೇಲಿನ ಇತ್ತೀಚಿನ ಸಂಶೋಧನೆಗಳ ಕುರಿತು ಉಪನ್ಯಾಸ ನೀಡುತ್ತ, ವಿಶಿಷ್ಟವಾದ ತಂತ್ರವೇ ಪಾಠ ಎಂದು ಯಾರು ಅರಿತಿದ್ದಾರೋ, ಅವರು ಹರಪ್ಪ ನಾಗರಿಕತೆಯಿಂದ ತಿಳಿದುಕೊಳ್ಳುವುದು ಸಾಕಷ್ಟಿದೆ ಎಂದರು.
ಹರಪ್ಪಾದಲ್ಲಿನ ನೀರಿನ ತೊಟ್ಟಿಗಳು ಮತ್ತು ಶೌಚಗೃಹಗಳ ಕಟ್ಟಡಗಳ ಛಾಯಾಚಿತ್ರಗಳನ್ನು ತೋರಿಸಿದ ಅವರು, ಪ್ರಾಚೀನ ನಗರ ಯೋಜನೆಗಳ ಮಹತ್ವವನ್ನು ವಿವರಿಸಿದರು. ಸ್ವಚ್ಛತೆ ಮತ್ತು ಬಾವಿ ಒಳಚರಂಡಿಗಳ ಅಸ್ತಿತ್ವ ಇವು ಎಲ್ಲ ಸಮಸ್ಯೆಗೂ ಪರಿಹಾರವಲ್ಲದಿದ್ದರೂ, ಸಂಘರ್ಷ ತಪ್ಪಿಸಲು ಸಹಕಾರಿ. ಆದ್ದರಿಂದ ಪರಸ್ಪರ ಇಂಥ ವಿಷಯಗಳಿಗಾಗಿ ಸಮಸ್ಯೆ ಎದುರಿಸುವ ಬದಲು, ಹರಪ್ಪ ನಾಗರಿಕತೆಯ ತಂತ್ರ ಅನುಸರಿಸುವುದು ಅವಶ್ಯ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.