ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪ್ರಾರಂಭಿಸಲಾಗುವ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ. ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ಒಂದು ವಿನೀತ ಪ್ರಯತ್ನವಾಗಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಇಂದು ಲೋಕಾರ್ಪಣೆಗೊಂಡಿತು.
ವಾಣಿಜ್ಯ ಮತ್ತು ಕೈಗಾರಿಕ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಲೋಕಾರ್ಪಣೆಗೊಳಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಕೆ. ರಾಮ ಭಟ್ ಮತ್ತಿನ್ನಿತರ ಗಣ್ಯರು ಉಪಸ್ಥಿತರಿದ್ದರು.
ಲೋಕಾರ್ಪಣೆ ಕಾರ್ಯಕ್ರಮದ ನಂತರ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ್ ಆದ ಪ್ರದೀಪ್ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಸೇರಿದಂತೆ ಅಸಂಖ್ಯಾತ ಜನರು ಪಾಲ್ಗೊಂಡಿದ್ದರು.
ವಿವೇಕಾನಂದ ಜಯಂತಿ ಕಾರ್ಯಕ್ರಮದ ನೇರಪ್ರಸಾರವನ್ನು ರೇಡಿಯೋ ಪಾಂಚಜನ್ಯ 90.8 ಎಫ್.ಎಂ.ನಲ್ಲಿ ಬಿತ್ತರಿಸಲಾಯಿತು.
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
ಧ್ವನಿಯೊಂದರ ಮೂಲಕ ಸಮಾಜದಲ್ಲಿ ಎಲ್ಲರ ಧ್ವನಿಯಾಗುವುದು ಈ ಹೆಜ್ಜೆಯ ಉದ್ದೇಶ. ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ಒಂದು ವಿನೀತ ಪ್ರಯತ್ನ.
ನಮ್ಮ ಸಮಾಜದಲ್ಲಿ ಅಕ್ಷರ ಮಾಧ್ಯಮದಲ್ಲಿ ಎಷ್ಟು ಜ್ಞಾನ ಸಂಗ್ರಹಣೆಯಾಗಿದೆಯೋ ಅಷ್ಟೇ ಆಳವಾದ ವ್ಯಾಪಕವಾದ, ಸಾಂಪ್ರದಾಯಿಕ ವಿದ್ವತ್ತು ಜನರ ಮಾತುಗಳಲ್ಲಿದ್ದು, ಅದನ್ನು ಕಾಲದಿಂದ ಕಾಲಕ್ಕೆ, ಜನರಿಂದ ಜನರಿಗೆ,ಸಮುದಾಯದಿಂದ ಸಮುದಾಯಕ್ಕೆ ಕರೆದೊಯ್ಯುವ ಉದ್ದೇಶ ರೇಡಿಯೋ ಪಾಂಚಜನ್ಯ 90.8 ಎಫ್ ಎಂ. ನದು
ರಾಷ್ಟ್ರೀಯತೆ ಭಾವದಿಂದ ಸಂಸ್ಕಾರ-ಸಂಸ್ಕೃತಿಗಳ ತಳಹದಿಯಲ್ಲಿ ರೂಪುಗೊಳ್ಳುತ್ತಿರುವ ಪಾಂಚಜನ್ಯದ ಇಂಚರಕ್ಕೆ ಎಲ್ಲರೂ ಧ್ವನಿಯಾಗಬಹುದು. ರೇಡಿಯೋ ಪಾಂಚಜನ್ಯ90.8 ಎಫ್ ಎಂ ನಲ್ಲಿ ಪ್ರತಿಭಾವಂತರು ಪ್ರತಿಭಾವಂತರಲ್ಲದವರೂ ಪಾಲ್ಗೊಳ್ಳಲು ಅವಕಾಶವಿದೆ.
ಇಲ್ಲಿ ಶಿಕ್ಷಣ, ಕ್ರೀಡೆ, ವಿಜ್ಞಾನ, ಸಂಗೀತ, ತಂತ್ರಜ್ಞಾನ, ಸಾಹಿತ್ಯ, ಕೃಷಿ,ಅಡುಗೆ, ಯಕ್ಷಗಾನ, ಹೈನುಗಾರಿಕೆ, ಭಜನೆ, ಹರಿಕಥೆ, ತಾಳಮದ್ದಳೆ, ಇ-ವ್ಯವಹಾರ, ಸ್ವೋದ್ಯೋಗ, ಸಮುದಾಯ ಹಬ್ಬ, ವ್ಯಕ್ತಿ ಅಭ್ಯುದಯ, ಸಮಾಜ ಕಲ್ಯಾಣ, ಸಾಂಸ್ಕೃತಿಕ ಬೆಳವಣಿಗೆ, ಸ್ಥಳೀಯ ಸಮಾರಂಭಗಳು, ಉತ್ಸವಗಳು, ಮೇಳಗಳು, ಕಥೆ ಕವನಗಳು, ನಾಟಕಗಳು, ಮಕ್ಕಳ ಕಲರವ, ಹಿರಿಯರ ಗೌಜಿ, ಯುವವರ್ಗದ ಲಹರಿ, ಪ್ರಕಟಣೆಗಳು ಹೀಗೆ ಏನಿವೆ ಏನಿಲ್ಲ ಎಂಬಷ್ಟು ವಿಪುಲ ಅವಕಾಶಗಳು ಲಭ್ಯ.
ಎಲ್ಲವೂ ಸಮುದಾಯದಿಂದ ಬರಬೇಕು ಸಮುದಾಯಕ್ಕೆ ತಲುಪಬೇಕು ಎಂಬುದಷ್ಟೇ ರೇಡಿಯೋ ಪಾಂಚಜನ್ಯ 90.8 ಎಫ್ ಎಂ. ಆಶಯ.
ರೇಡಿಯೋ ಪಾಂಚಜನ್ಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗಗಳನ್ನು ಬಹಳಷ್ಟು ತಲುಪುತ್ತದೆ. ಅಲ್ಲದೇ ಕಾಸರಗೋಡು ಜಿಲ್ಲೆಯನ್ನೂ ಮುಟ್ಟುತ್ತದೆ.ತಲಕಾವೇರಿಯಲ್ಲೂ ನಮ್ಮ ತರಂಗಾಂತರಂಗ ಅನುರಣಿಸುತ್ತದೆ. ರೇಡಿಯೋ ಪಾಂಚಜನ್ಯ ಇಂಟರ್ನೆಟ್ನಲ್ಲೂ ಲಭ್ಯ. ಸಮುದಾಯ ಬಾನುಲಿ ಕೇಂದ್ರವೊಂದು ವೆಬ್ ರೇಡಿಯೋ ಆಗಿ ಲಭ್ಯವಿರುವುದು ರೇಡಿಯೋ ಪಾಂಚಜನ್ಯ 90.8 ಎಫ್ ಎಂ.ನ ವೈಶಿಷ್ಟ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.