ಆಪರೇಷನ್ ರಾಹತ್
ಅದೊಂದು ಅತೀ ಕ್ಲಿಷ್ಟಕರ ಸವಾಲಾಗಿತ್ತು. ಯುದ್ಧಪೀಡಿತ ಯೆಮೆನ್ ದೇಶದಿಂದ ಸಾವಿರಾರು ಜನ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಬೇಕಾಗಿತ್ತು. ಯೆಮೆನ್ನಲ್ಲಾದರೋ ಹಿಂಸಾಚಾರದ ರುದ್ರನರ್ತನ. ಇರಾನ್ ಬೆಂಬಲಿತ ಶಿಯಾ ಬಂಡುಕೋರರು ಹಾಗೂ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳ ನಡುವಣ ಭಾರೀ ಯುದ್ಧ ಶಾಂತಿ, ನೆಮ್ಮದಿಯನ್ನು ಹೊಸಕಿಹಾಕಿತ್ತು. ಅಂತಹ ಸಂದರ್ಭದಲ್ಲಿ ಅಲ್ಲಿರುವ ಭಾರತೀಯರ ರಕ್ಷಣೆಗೆ ಕಟಿಬದ್ಧವಾಗಿತ್ತು ಭಾರತ ಸರ್ಕಾರ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಒಂದು ಮೀಟಿಂಗ್ ಕರೆದು ಯುದ್ಧಪೀಡಿತ ಯೆಮೆನ್ನಿಂದ ಭಾರತೀಯರ ರಕ್ಷಣೆಯ ಕುರಿತು ಪ್ರಸ್ತಾಪಿಸಿದರು. ಕಾರ್ಯಾಚರಣೆ ಹೇಗೆ ನಡೆಸಬೇಕೆಂಬ ಬಗ್ಗೆ ಚರ್ಚೆಯೂ ನಡೆಯಿತು. ಕೊನೆಗೆ ಆಕೆ ಈ ಕಾರ್ಯಾಚರಣೆಯ ಸಾರಥ್ಯವಹಿಸಲು ನೇಮಿಸಿದ್ದು ವಿದೇಶಾಂಗ ಖಾತೆಯ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಅವರನ್ನು.
ಮಾ. 27 ರಂದು ವಿ.ಕೆ. ಸಿಂಗ್ ಯೆಮೆನ್ಗೆ ತೆರಳಿದರು. ಮೊದಲು ಅವರು ಹೋಗಿದ್ದು ಯುದ್ಧಪೀಡಿತ ಡಿಜಿಬೌಟಿಯೆಂಬ ಪ್ರದೇಶಕ್ಕೆ. ಸಾನಾದಿಂದ ಭಾರತೀಯರನ್ನು ತೆರವುಗೊಳಿಸಿ ಮಸ್ಕತ್ಗೆ ಕರೆತಂದು ಅಲ್ಲಿಂದ ಅವರೆಲ್ಲರನ್ನು ಭಾರತಕ್ಕೆ ಕಳುಹಿಸಬೇಕಾಗಿತ್ತು. ಪ್ರಧಾನಿ ಮೋದಿ ಸೌದಿ ದೊರೆ ಸಲ್ಮಾನ್ ಬಳಿ ಆಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಯುದ್ಧ ಪ್ರಕೋಪಕ್ಕೆ ಹೋಗಿದ್ದರಿಂದ ಯೆಮೆನ್ನಲ್ಲಿನ ಭಾರತೀಯರನ್ನು ಕರೆತರಲು ತಕ್ಷಣ ಅನುಮತಿ ಸಿಗಲಿಲ್ಲ. ಸಾನಾ ವಿಮಾನ ನಿಲ್ದಾಣದಲ್ಲಿ ಭಾರತೀಯರನ್ನು ತಮ್ಮ ವಿಮಾನಕ್ಕೆ ಹತ್ತಿಸಲು ಕೇವಲ ಎರಡು ಗಂಟೆಗಳ ಅನುಮತಿ ಮಾತ್ರ ದೊರೆತಿತ್ತು. ಆದರೆ ಆ ಎರಡು ಗಂಟೆಗಳಲ್ಲಿ 4500 ಕ್ಕೂ ಹೆಚ್ಚು ಜನ ಭಾರತೀಯರನ್ನು ಒಗ್ಗೂಡಿಸಿ ಅವರನ್ನು ಸ್ವದೇಶಕ್ಕೆ ಮರಳಿಸುವುದು ಹೇಗೆ? ಈ ಪ್ರಶ್ನೆ ವಿ.ಕೆ. ಸಿಂಗ್ ಅವರನ್ನು ಕಾಡಿದ್ದು ನಿಜ. ಆಗ ಶುರುವಾಗಿದ್ದೇ `ಆಪರೇಷನ್ ರಾಹತ್’!
ಭಾರತದ ಏರ್ಬಸ್ಗಳು ಸಿದ್ಧಗೊಂಡವು. ಸ್ವತಃ ವಿ.ಕೆ. ಸಿಂಗ್ ಸಾನಾಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಯೆಮೆನ್ನಲ್ಲಿದ್ದ ಅನೇಕ ಭಾರತೀಯರ ಪಾಸ್ಫೋರ್ಟ್ಗಳು ಅವರು ಉದ್ಯೋಗ ನಿರ್ವಹಿಸುವ ಕಂಪೆನಿಗಳ ಮಾಲೀಕರ ಬಳಿಯಿತ್ತು. ಹಾಗಾಗಿ ದೇಶ ತೊರೆಯಲು ಅವರಿಗೆ ವೀಸಾ ಸಿಗುತ್ತಿರಲಿಲ್ಲ. ಇನ್ನು ಕೆಲವರು ಪ್ರವಾಸಿ ವೀಸಾದಡಿ ಅಲ್ಲಿಗೆ ತೆರಳಿ ಆರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನೆಲಸಿದ್ದರು. ಪ್ರವಾಸಿ ವೀಸಾದಡಿ ಅಷ್ಟು ವರ್ಷಗಳ ಕಾಲ ಅಲ್ಲಿರಲು ಅನುಮತಿಯಿಲ್ಲ. ಯೆಮೆನ್ ಅಧಿಕಾರಿಗಳು ಇಂಥವರ ಪತ್ತೆಯಾದರೆ ಖಂಡಿತ ಭಾರೀ ದಂಡ ವಿಧಿಸುವುದು ಖಚಿತವಾಗಿತ್ತು. ಇನ್ನು ಕೆಲವರ ಬಳಿ ಈ ದಂಡ ತೆರಲು ಹಣವೇ ಇರಲಿಲ್ಲ.
ಹೀಗೆ ನಾನಾ ಬಗೆಯ ಅಡಿ ಆತಂಕಗಳು. ಆದರೂ ಅವೆಲ್ಲವನ್ನು ಮೆಟ್ಟಿ ನಿಂತು ಮುಕಲ್ಲ, ಅದಾನ್, ಹೊಡೈದಾಹ್ ಮೊದಲಾದ ಕಡೆಗಳಿಂದ ಭಾರತೀಯರನ್ನು ರಕ್ಷಿಸುವಲ್ಲಿ `ಆಪರೇಷನ್ ರಾಹತ್’ ಅತ್ಯಂತ ಯಶಸ್ವಿಯಾಯ್ತು. ಯುದ್ಧಪೀಡಿತ ಯೆಮೆನ್ ನೆಲದಿಂದ 4640 ಭಾರತೀಯರು ಹಾಗೂ 960 ವಿದೇಶಿ ಪ್ರಜೆಗಳನ್ನು ಆಶ್ಚರ್ಯಕರ ರೀತಿಯಲ್ಲಿ ಸುರಕ್ಷಿತವಾಗಿ ಪಾರು ಮಾಡಲಾಗಿತ್ತು. ಈ 960 ವಿದೇಶಿ ಪ್ರಜೆಗಳು 41 ದೇಶಗಳಿಗೆ ಸೇರಿದವರಾಗಿದ್ದರು. ಈ ಪೈಕಿ ಪಾಕಿಸ್ಥಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಪಶ್ಚಿಮ ಏಷ್ಯಾ ಹಾಗೂ ಯುರೋಪಿನ ಅನೇಕ ದೇಶಗಳ ಪ್ರಜೆಗಳಿದ್ದರು. ಒಂದರ್ಥದಲ್ಲಿ ಭಾರತ ರಕ್ಷಿಸಿದ್ದು ಇಡೀ ವಿಶ್ವದ ಪ್ರಜೆಗಳನ್ನು. ಭಾರತದ ಈ ಪ್ರಯತ್ನವನ್ನು ಇಡೀ ವಿಶ್ವವೇ ಈಗ ಕೊಂಡಾಡಿದೆ.
`ಆಪರೇಷನ್ ರಾಹತ್’ ಮೂಲಕ 4640 ಭಾರತೀಯರನ್ನು ಯೆಮೆನ್ನಿಂದ ಪಾರು ಮಾಡಲು ಭಾರತ ಸರ್ಕಾರಕ್ಕೆ ಖರ್ಚಾಗಿದ್ದು ಪ್ರತಿಯೊಬ್ಬರಿಗೂ ತಲಾ ಒಂದೂವರೆ ಲಕ್ಷ ರೂ. ಈ ಕಾರ್ಯಾಚರಣೆಯ ವೇಳೆ ವಿದೇಶಾಂಗ ವ್ಯವಹಾರ ಖಾತೆಯ ಅಧಿಕಾರಿಗಳಿಗೆ ಹಲವು ಬಾರಿ ಸಕಾಲಕ್ಕೆ ಊಟ – ತಿಂಡಿಗಳೇ ಇರುತ್ತಿರಲಿಲ್ಲ.
ಆಪರೇಷನ್ ಮೈತ್ರಿ
ನೆರೆಯ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಕಹಿ ನೆನಪುಗಳು ಇನ್ನೂ ಮಾಸಿಲ್ಲ. ಆ ದುರಂತದ ಮನಕಲಕುವ ವಿದ್ಯಮಾನಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಆದರೆ ಈ ಭೂಕಂಪದ ಸುದ್ದಿಯನ್ನು ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಅವರಿಗೆ ಮೊದಲು ತಿಳಿಸಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ. ಕೊಯಿರಾಲ ಆಗ ಥೈಲ್ಯಾಂಡ್ನಲ್ಲಿದ್ದರು. 7.9 ರೆಕ್ಟರ್ ಮಾಪಕದ ತೀವ್ರತೆಯ ಭೂಕಂಪ ನೇಪಾಳದಲ್ಲಿ ಸಂಭವಿಸಿದ ಬಗ್ಗೆ ಮೋದಿ ಟ್ವೀಟ್ ಮಾಡಿದ್ದರು. ಕೊಯಿರಾಲ ಬ್ಯಾಂಕಾಕ್ನಲ್ಲಿ ಮೋದಿ ಮಾಡಿದ ಈ ಟ್ವೀಟ್ ನೋಡಿದ ಬಳಿಕವೇ ತನ್ನ ದೇಶದ ದುರಂತದ ಬಗ್ಗೆ ಅವರಿಗೆ ಅರಿವಾಗಿದ್ದು. ಅದಾದ ಬಳಿಕವೇ ಕೊಯಿರಾಲ ಭೂಕಂಪದ ವಿವರಗಳನ್ನು ಸಂಗ್ರಹಿಸಿದ್ದು.
ಭೂಕಂಪ ಪೀಡಿತ ನೇಪಾಳಕ್ಕೆ ಪರಿಹಾರ ಸಾಮಗ್ರಿಗಳನ್ನು ಹಾಗೂ ಇನ್ನಿತರ ನೆರವನ್ನು ಮೊದಲು ಒದಗಿಸಿದ ದೇಶ ಭಾರತ. ಭಾರತೀಯ ಸೈನಿಕರು, ವಾಯುಪಡೆ ಹಾಗೂ ಇನ್ನಿತರ ಪರಿಹಾರ ತಂಡಗಳು ಹಿಮಾಲಯದ ಆ ಪುಟ್ಟ ರಾಷ್ಟ್ರಕ್ಕೆ ಧಾವಿಸಿ ಪರಿಹಾರ ಕಾರ್ಯದಲ್ಲಿ ನಿರತವಾದವು. `ಭಾರತದ ಈ ಸಕಾಲಿಕ ನೆರವಿಗೆ ನೇಪಾಳ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದೆ’ ಎಂದು ನೇಪಾಳದ ರಾಯಭಾರಿ ದೀಪ್ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ. ನೇಪಾಳ ಸರ್ಕಾರದ ಹಲವು ಬೇಡಿಕೆಗಳನ್ನು ಭಾರತ ತಕ್ಷಣವೇ ಈಡೇರಿಸಿದೆ.
ಕಳೆದ ಆಗಸ್ಟ್ನಲ್ಲಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿನ ಸಭೆಯೊಂದರಲ್ಲಿ ಉದ್ಗರಿಸಿದ್ದರು: `ನೇಪಾಳ ಮತ್ತು ಭಾರತದ ಸಂಬಂಧ ಹಿಮಾಲಯ ಮತ್ತು ಗಂಗೆಯಷ್ಟು ಹಳೆಯದು. ನಮ್ಮ ನಡುವಿನ ಸಂಬಂಧಕ್ಕೆ ಯಾವುದೇ ಲಿಖಿತ ದಾಖಲೆಗಳು ಇಲ್ಲದಿರಬಹುದು. ಆದರೆ ಈ ಬಾಂಧವ್ಯ ಹೃದಯದಲ್ಲಿ ಭದ್ರವಾಗಿದೆ… ನಾವೆಂದಿಗೂ ನಿಮ್ಮ ಆಂತರಿಕ ವಿಷಯದಲ್ಲಿ ತಲೆ ಹಾಕುವುದಿಲ್ಲ. ಆದರೆ ನಿಮ್ಮ ಅಭಿವೃದ್ಧಿಗಾಗಿ ಎಂದೆಂದಿಗೂ ಕೈಜೋಡಿಸುತ್ತೇವೆ…’
ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡಿದ್ದಾರೆ. ನೇಪಾಳದ ಅತೀವ ಸಂಕಷ್ಟದ ಕ್ಷಣಗಳಲ್ಲಿ ಹೆಗಲು ಕೊಟ್ಟಿದ್ದು ಭಾರತ ಎಂಬ ಭಾವನೆ ನೇಪಾಳಿಗರ ಹೃದಯದಲ್ಲಿ ಈಗ ಭದ್ರವಾಗಿ ನೆಲಸುವಂತೆ ಮಾಡಿದೆ. ಹಾಗೆ ನೋಡಿದರೆ, ನೇಪಾಳಕ್ಕೆ ಭಾರತಕ್ಕಿಂತ ಹತ್ತಿರವಿರುವ ದೇಶ ಚೀನಾ. ಚೀನಾದಿಂದ ರಸ್ತೆ ಮಾರ್ಗವಾಗಿ ಸುಲಭವಾಗಿ ನೇಪಾಳಕ್ಕೆ ತಲುಪಬಹುದು. ಆದರೆ ಚೀನಾ ಮಾತ್ರ ಭೂಕಂಪ ಪೀಡಿತ ನೇಪಾಳದ ನೆರವಿಗೆ ತಕ್ಷಣ ಧಾವಿಸಲೇ ಇಲ್ಲ. ಭಾರತ ಭಾರೀ ಪ್ರಮಾಣದಲ್ಲಿ ಆಹಾರ ಸಾಮಗ್ರಿ, ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿರುವ ಸುದ್ದಿಯಿಂದ ಕಂಗೆಟ್ಟ ಚೀನಾ ಮುಖ ಉಳಿಸಿಕೊಳ್ಳಲು ನೇಪಾಳಕ್ಕೆ ನೆರವಿನ ಪ್ರವಾಹ ಹರಿಸಲು ತೊಡಗಿತು. ಆದರೆ ಇದು ಮಾನವೀಯ ಕಾಳಜಿಯಿಂದ ಕೂಡಿದ ಕೃತ್ಯವಂತೂ ಆಗಿರಲಿಲ್ಲ.
ನೇಪಾಳಕ್ಕೆ ಹತ್ತಿರವಿರುವ ಇನ್ನೊಂದು ದೇಶವೆಂದರೆ ಪಾಕಿಸ್ಥಾನ. ಆದರೆ ಆ ದೇಶ ನೇಪಾಳಕ್ಕೆ ಯಾವ ಬಗೆಯ ನೆರವು ನೀಡಿ, ಎಲ್ಲರಿಂದಲೂ ಹೇಗೆ ಕಪಾಳಮೋಕ್ಷಕ್ಕೆ ಗುರಿಯಾಗಿದೆ ಎಂಬುದು ಈಗ ಹಳೆಯ ಸುದ್ದಿ. ನೇಪಾಳದಿಂದ ಯಾವುದೇ ಬೇಡಿಕೆ ಇಲ್ಲದಿದ್ದರೂ ಪಾಕಿಸ್ಥಾನ ಸಂತ್ರಸ್ತರಿಗೆ ಕಳುಹಿಸಿದ್ದು ಬೀಫ್ಮಸಾಲಾ ಪ್ಯಾಕೇಟ್ಗಳನ್ನು. ಗೋಮಾಂಸ ಮಿಶ್ರಿತ ಆಹಾರವನ್ನು ಸೇವಿಸಿ ನೇಪಾಳದ ಸಂತ್ರಸ್ತ ಹಿಂದುಗಳು ಜಾತಿ ಕೆಡಿಸಿಕೊಳ್ಳಲಿ ಎಂಬ ದುರುzಶ ಪಾಕಿಸ್ಥಾನ ಸರ್ಕಾರದ್ದು. ನೇಪಾಳ ಹಿಂದು ರಾಷ್ಟ್ರ ಎಂಬುದು ಗೊತ್ತಿದ್ದೇ ಪಾಕಿಸ್ಥಾನ ಇಂತಹ ನೀಚ ಕೆಲಸಕ್ಕೆ ಕೈ ಇಕ್ಕಿದೆ. `ನಮಗೆ ಇಂತಹ ಬೀಫ್ ಮಸಾಲಾ ಖಂಡಿತ ಕಳುಹಿಸಬೇಡಿ’ ಎಂದು ನೇಪಾಳ ಸರ್ಕಾರ ಖಂಡತುಂಡವಾಗಿ ಎಚ್ಚರಿಕೆ ನೀಡಿದ್ದೂ ಆಗಿದೆ. ಪಾಕಿಸ್ಥಾನ ನೇಪಾಳಕ್ಕೆ ಗೋಮಾಂಸ ಕಳುಹಿಸುವ ಬದಲು ಬಾಂಬ್ ಹಾಕಿದ್ದರೂ ಅದೊಂದು ಸಭ್ಯ ದೇಶ ಎನ್ನಿಸಿಕೊಳ್ಳುತ್ತಿತ್ತು. ಆದರೆ ಈಗ ಅದರ ಬಣ್ಣ ಸಂಪೂರ್ಣ ಬಯಲಾಗಿದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಭಾರತ ನೇಪಾಳಕ್ಕೆ 700 ವಿಪತ್ತು ಪರಿಹಾರ ತಜ್ಞರ ತಂಡವನ್ನು ಕಳುಹಿಸಿದೆ. ಆ ತಂಡ `ಆಪರೇಷನ್ ಮೈತ್ರಿ’ ಅಂಗವಾಗಿ ಭಾರೀ ಪ್ರಮಾಣದ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. 8200 ಕಿ.ಗ್ರಾ. ತೂಕದ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ ಮೂಲಕ ಸಾಗಿಸಿ ಈಗಾಗಲೇ ವಿತರಿಸಲಾಗಿದೆ. ಅಷ್ಟೇ ಅಲ್ಲದೆ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಪರಿಹಾರ ಕಾರ್ಯಾಚರಣೆಯಲ್ಲಿ ಭಾರತ ತೊಡಗಿಸಿದೆ. ಈಗಾಗಲೇ ನೇಪಾಳದಿಂದ 5400 ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ. ಜೊತೆಗೆ 15 ದೇಶಗಳ 170 ಪ್ರಜೆಗಳನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಲಾಗಿದೆ. ಇವರೆಲ್ಲ ಸ್ಪೈನ್, ಪೋಲ್ಯಾಂಡ್, ಝಕಸ್ಲೋವೇಕಿಯ, ಅಮೆರಿಕ, ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ಗೆ ಸೇರಿದವರು. ಭಾರತದಿಂದ ಈಗಲೂ ತಜ್ಞ ವೈದ್ಯರು, ವೈದ್ಯಕೀಯ ನೆರವು, ಪರಿಹಾರ ಸಾಮಗ್ರಿಗಳು ಮಿಲಿಟರಿ ವಿಮಾನದಲ್ಲಿ ನೇಪಾಳಕ್ಕೆ ರವಾನೆಯಾಗುತ್ತಲೇ ಇವೆ.
ಭಾರತದ ಈ ಪರಿಯ ಮಾನವೀಯ ಕಾರ್ಯವನ್ನು ಗಮನಿಸಿ ಅಮೆರಿಕದ ರಾಯಭಾರಿ ರಿಚರ್ಡ್ ರಾಹುಲ್ ವರ್ಮಾ ಟ್ವೀಟ್ ಮಾಡಿದ್ದು ಹೀಗೆ: ‘India has demonstrated its global leadership in recent weeks, 1st in Yemen and now in Nepal. We’re grateful; we’re impressed; we’re inspired’.
ಯುದ್ಧಪೀಡಿತ ಯೆಮೆನ್ನಿಂದ 4640 ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದಿದ್ದು ಹಾಗೂ ಈಗ ಭೂಕಂಪ ಪೀಡಿತ ನೇಪಾಳಕ್ಕೆ ಅಗತ್ಯವಿರುವ ಎಲ್ಲ ಬಗೆಯ ತುರ್ತು ನೆರವು ನೀಡಿರುವುದು ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಿದೆ. ಯೆಮೆನ್ನಲ್ಲಿ ಸಿಲುಕಿಕೊಂಡಿದ್ದ ಅನೇಕ ವಿದೇಶಿ ಪ್ರಜೆಗಳಿಗೆ ಅಲ್ಲಿಂದ ಸುರಕ್ಷಿತವಾಗಿ ತಮ್ಮ ದೇಶಕ್ಕೆ ವಾಪಸಾಗುವುದು ಹೇಗೆಂಬುದೇ ತಿಳಿದಿರಲಿಲ್ಲ. ಆಯಾ ದೇಶಗಳ ಪ್ರಮುಖರಿಗೂ ತಮ್ಮ ಪ್ರಜೆಗಳನ್ನು ಯೆಮೆನ್ನಿಂದ ಪಾರು ಮಾಡುವ ಬಗೆ ಗೊತ್ತಿರಲಿಲ್ಲ. ಅವರಿಗೆಲ್ಲ ಆಗ ನೆರವಾಗಿದ್ದು ಭಾರತ. ಭಾರತದ ಈ ಸಕಾಲಿಕ ನೆರವನ್ನು ಆ ಎಲ್ಲ ದೇಶಗಳು ಕೃತಜ್ಞತೆಯಿಂದ ಸ್ಮರಿಸಿವೆ. ಮೋದಿ ನೇತೃತ್ವ ಭಾರತ ಸರ್ಕಾರ ಯೆಮೆನ್ನಲ್ಲಾಗಲಿ, ನೇಪಾಳದಲ್ಲಾಗಲಿ `ಜೈ ಶ್ರೀರಾಮ್’ ಘೋಷಣೆ ಹಾಕಲಿಲ್ಲ. ಯೆಮೆನ್ನಿಂದ ಹಿಂದುಗಳನ್ನಷ್ಟೇ ಅಲ್ಲದೆ ಮುಸ್ಲಿಮರು, ಕ್ರೈಸ್ತರನ್ನೂ ಪಾರು ಮಾಡಿ ಕರೆತಂದಿದೆ. ಹೀಗೆ ಅಲ್ಲಿಂದ ಪಾರಾಗಿ ಬಂದವರಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚಿರಬಹುದು! ಮೋದಿ ಸರ್ಕಾರಕ್ಕೆ ಇದ್ಯಾವುದೂ ಮುಖ್ಯವಾಗಿರಲಿಲ್ಲ. ಅದಕ್ಕೆ ಮುಖ್ಯವಾಗಿದ್ದದ್ದು ಯೆಮೆನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವುದು ಮಾತ್ರ. ಆ ಕೆಲಸವನ್ನು ಅದು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಇಡೀ ಜಗತ್ತೇ ನಿಬೆರಗಾಗುವಂತೆ ಮಾಡಿದೆ. ನೇಪಾಳದಲ್ಲಿ ಭೂಕಂಪ ಪೀಡಿತರಿಗೆ ತುರ್ತು ನೆರವು ಒದಗಿಸುವ ಸಂದರ್ಭದಲ್ಲೂ ಪ್ರಧಾನಿ ಮೋದಿ ಹೇಳಿದ್ದು: `ಸೇವೆಯೇ ನಮ್ಮ ಧರ್ಮ’. ಪಾಕಿಸ್ಥಾನ, ಚೀನಾಗಳಂತೆ ಭಾರತ ಯಾವುದೇ ಸ್ವಾರ್ಥದ ಬುದ್ಧಿ ತೋರಲಿಲ್ಲ. ಬದಲಿಗೆ ಮಾನವೀಯತೆ ಮೆರೆಯಿತು.
ಭಾರತ ವಿಶ್ವಗುರುವಾಗುವ ಪರಿಯೆಂದರೆ ಹೀಗೆಯೇ. `ವಸುಧೈವ ಕುಟುಂಬಕಂ’ ಎಂದು ನಮ್ಮ ಹಿರಿಯರು ಸಾರಿದ ಸಂದೇಶ ಕೃತಿಗಿಳಿಯುವ ಪರಿಯೂ ಇದೇ ಆಗಿದೆ. `ಆಪರೇಷನ್ ರಾಹತ್’ ಮತ್ತು `ಆಪರೇಷನ್ ಮೈತ್ರಿ’ – ಇವೆರಡೂ ವಿದ್ಯಮಾನಗಳು ಭಾರತದ ಘನತೆಯನ್ನು ಹೆಚ್ಚಿಸಿವೆ ಎಂಬುದನ್ನು ಪ್ರಜ್ಞಾವಂತರೆಲ್ಲರೂ ಒಪ್ಪುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.