ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ಬರುವ ಫೆ. 3 ರಿಂದ 10 ರವರೆಗೆ ನಡೆಯುವ ರಾಜ್ಯ ಮಟ್ಟದ ಓಲಂಪಿಕ್ ಕ್ರೀಡಾಕೂಟಗಳಲ್ಲಿ ಸುಮಾರು 4500 ಕ್ರೀಡಾಪಟುಗಳು ಹಾಗೂ ಕ್ರೀಡಾ ತಂತ್ರಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಲಭ್ಯ ಇರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾರ್ಥಿ ನಿಲಯಗಳ ಸಹಕಾರದೊಂದಿಗೆ ಉತ್ತಮ ವಸತಿ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಪ್ರಯತ್ನಿಸಲಿದೆ.
ಜ. 4 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯ ಓಲಂಪಿಕ್ ಕ್ರೀಡಾಕೂಟಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಒಟ್ಟು 23 ಕ್ರೀಡಾಂಗಣ ಆಟದ ಮೈದಾನಗಳನ್ನು ಗುರುತಿಸಲಾಗಿದೆ ಎಂದರು.
ರೈಫಲ್ ಶೂಟಿಂಗ್ ಮತ್ತು ಟ್ರಯಥಾನ್ ಕ್ರೀಡೆಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ. ಕ್ರೀಡಾಪಟುಗಳು, ತಂತ್ರಜ್ಞರು, ಸಾಂಸ್ಕೃತಿಕ ಚಟುವಟಿಕೆಗಳ ಕಲಾವಿದರು ಹಾಗೂ ಇತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಲಿದೆ. ಇದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾ ಆಡಳಿತದ ಎಲ್ಲ ಇಲಾಖೆಗಳು ಶ್ರಮಿಸಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಆರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ, ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.