ಪುತ್ತೂರು: ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸರಿಯಾಗಿ ಜನತೆಗೆ ಸಿಗುವುದು ಕಷ್ಟ. ಇದಕ್ಕೆ ಉದಾಹರಣೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ನ್ನು ನೋಡಿದಾಗ ತಿಳಿಯುತ್ತದೆ.
ಈ ಭಾಗದ ಜನತೆಯ ನೀರಿನ ಭವಣೆಯನ್ನು ಮನಗಂಡು ಜ.27, 2013ರಂದು ಅಂದಿನ ಜಿ.ಪಂ.ಸದಸ್ಯರಾದ ದಿ.ಸಾವಿತ್ರಿ ಶಿವರಾಂ ಜಿ.ಪಂ.ನಿಂದ 8 ಲಕ್ಷ ರೂ. ಮಂಜೂರು ಮಾಡಿದ್ದರು. ಇದರ ಕಾಮಗಾರಿಗೆ ಶಿಲಾನ್ಯಾಸ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಅಂತೂ ಟ್ಯಾಂಕ್ ರಚನೆಯೂ ಆಯ್ತು. ಇನ್ನು ನೀರಿನ ಸಮಸ್ಯೆಯಿಲ್ಲ ಎಂದು ಜನರು ನಿಟ್ಟುಸಿರು ಬಿಟ್ಟರು.
ಟ್ಯಾಂಕ್ ಸೋರುತ್ತಿದೆ: ಕೇವಲ ಹತ್ತು ತಿಂಗಳ ಹಿಂದೆ ಟ್ಯಾಂಕ್ನ ಕಾಮಗಾರಿ ಪೂರ್ಣಗೊಂಡು ಅದಕ್ಕೆ ನೀರು ತುಂಬಿಸಿದಾಗ ಟ್ಯಾಂಕ್ನ ಕಾಮಗಾರಿಯ ಸಾಚಾತನ ಬಯಲಾಯಿತು. ರಾತ್ರಿ ಟ್ಯಾಂಕ್ಗೆ ನೀರು ತುಂಬಿಸಿದರೆ ಬೆಳಿಗ್ಗೆ ನೋಡುವಾಗ ಟ್ಯಾಂಕ್ನಲ್ಲಿ ಕೇವಲ ಅರ್ಧದಷ್ಟು ಮಾತ್ರವೇ ನೀರು ಉಳಿಯುತ್ತಿತ್ತು. ಕಾರಣ ಹುಡುಕುವಾಗ ಕಂಡಿದ್ದು ಟ್ಯಾಂಕ್ನ ಕೆಳಗಿನಿಂದ ನೀರು ಸೋರುತ್ತಿರುವುದು. ಈ ಮೂಲಕ ಸರಕಾರದ ಯೋಜನೆಯು ಜನತೆಗೆ ಪೂರ್ಣ ಪ್ರಮಾಣದಲ್ಲಿ ದಕ್ಕದೆ ಹೋಯಿತು. ಈ ಟ್ಯಾಂಕ್ನಿಂದ ಸುಮಾರು 79 ಮನೆಗಳಿಗೆ ನೀರಿನ ಸಂಪರ್ಕವಿದೆ.
ಟ್ಯಾಂಕ್ನ ಕಾಮಗಾರಿ ಕಳಪೆಯಾಗಿ ನೀರು ಸೋರುತ್ತಿದೆ. ಇನ್ನು ಅದಕ್ಕೆ ಅಳವಡಿಸಿರುವ ಪೈಪ್ ಜೋಡಣೆಯೂ ಸರಿಯಾಗಿಲ್ಲ. ಟ್ಯಾಂಕ್ನ ಕೆಳಗಡೆ ನಿಂತರೆ ಕಾರಂಜಿಯಂತೆ ನೀರು ಚಿಮ್ಮುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗಿ ವ್ಯರ್ಥವಾಗುತ್ತಿದೆ. ಆದರೆ ಜನಪ್ರತಿನಿಧಿಗಳಿಗೆ ಜನತೆಯ ಸಮಸ್ಯೆ ಅರಿಯುವುದಾದರೂ ಹೇಗೆ? ಕಾಮಗಾರಿ ಮುಗಿದ ಬಳಿಕ ಇದನ್ನು ಪಂಚಾಯತ್ಗೆ ಹಸ್ತಾಂತರಿಸಲು ಯಾರು ಗಮನಹರಿಸುತ್ತಿಲ್ಲ ಎಂಬುದು ನೀರಿನ ಬಳಕೆದಾರರ ಅಳಲು.
ಈ ಟ್ಯಾಂಕ್ ನಿರ್ಮಾಣವನ್ನು ಗಮನಿಸುವಾಗ ಇದು ತೀರಾ ಕಳಪೆಯಾಗಿ ಕಾಣುತ್ತಿದೆ. ಟ್ಯಾಂಕ್ನ ಕೆಳಭಾಗವನ್ನು ನೋಡುವಾಗ ಇದರ ಅಸಲಿಯತ್ತು ಗೋಚರವಾಗುತ್ತದೆ. ಈಗಲೇ ಬಿರುಕು ಬಿಟ್ಟಿದ್ದು ಇನ್ನು ಏನಿದ್ದರೂ ಇದರ ಬಾಳಿಕೆ ಕೆಲವರ್ಷಗಳವರೆಗೆ ಮಾತ್ರ ಎಂಬುದಂತು ಸ್ಪಷ್ಟವಾಗಿದೆ. ಅಲ್ಲದೆ ಈ ಟ್ಯಾಂಕ್ಗೆ ಅಳವಡಿಸಿರುವ ಏಣಿಯನ್ನು ಏರಬೇಕಾದರೆ ಕೆಳಗೆ ಅಂಬ್ಯುಲೆನ್ಸ್ ತರಿಸಿ ಮುಂದುವರಿಯಬೇಕಾಗಿದೆ. ಅಷ್ಟೂ ಕಳಪೆ ಮಟ್ಟದ ಏಣಿಯನ್ನು ಅಳವಡಿಸಲಾಗಿದೆ. ಗಟ್ಟಿ ಏಣಿ ಅಳವಡಿಸಿದರೆ ಯಾರಾದರೂ ಹತ್ತಿ ಪರಿಶೀಲಿಸಬಹುದೆಂಬ ಭಯದಿಂದ ಈ ರೀತಿಯ ಏಣಿ ಅಳವಡಿಸಲಾಗಿದೆ ಎಂಬ ಕುಹಕದ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಸಮಸ್ಯೆಗಳು ಏನೇ ಇದ್ದರು ಸಾರ್ವಜನಿಕ ಬಳಕೆಯ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಯೋಜನೆಚಿi ಸದುಪಯೋಗವಾಗುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸುವುದು ಅಗತ್ಯ.
ವಿದ್ಯುತ್ ಕೈ ಕೊಟ್ಟರೆ ನೀರಿಲ್ಲ: ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆ ದಿನ ಈ ಭಾಗದ ಜನತೆಯ ಪಾಡು ಹೇಳತೀರದು. ವಿದ್ಯುತ್ ಬರುವ ತನಕ ಚಾತಕ ಪಕ್ಷಿಯಂತೆ ಕಾಯಬೇಕಾಗುತ್ತದೆ. ಟ್ಯಾಂಕ್ನೊಳಗಿರುವ ನೀರು, ಇದರ ದುರವಸ್ಥೆಯಿಂದ ಪೋಲಾಗುತ್ತಿರುವುದರಿಂದ ದೂರದ ಕಡೆಗಳಿಗೆ ನೀರು ತಲುಪುತ್ತಿಲ್ಲ. ಟ್ಯಾಂಕ್ ಸಮರ್ಪಕವಾಗಿದ್ದರೆ ವಿದ್ಯುತ್ ಇಲ್ಲದಿದ್ದರೂ ಈ ಭಾಗದ ಜನತೆಗೆ ಎರಡು ದಿನಗಳ ಮಟ್ಟಿಗಾದರೂ ನೀರಿನ ಸಮಸ್ಯೆಯಾಗುತ್ತಿರಲಿಲ್ಲ.
ಈ ಟ್ಯಾಂಕ್ನ ಕಾಮಗಾರಿ ಸಮರ್ಪಕವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಸಮರ್ಪಕವಾಗಿ ಮಾಡಿ ಜನರಿಗೆ ಉಪಯೋಗವಾಗುವಂತಾಗಬೇಕು. ಪಂಚಾಯತ್ಗೆ ಶೀಘ್ರವಾಗಿ ಹಸ್ತಾಂತರ ಮಾಡುವಂತೆ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಎಂದು ಅಂಕತ್ತಡ್ಕ ಕುಡಿಯುವ ನೀರಿನ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.