ಗಾಝಿಪುರ : ನೋಟುಗಳ ರದ್ದತಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ ತೊಂದರೆಗೆ ಕ್ಷಮೆ ಇರಲಿ. ಕಪ್ಪು ಹಣ ತಡೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಇಂದು ಬಡ ಜನರು ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ. ಆದರೆ ಶ್ರೀಮಂತರು ನಿದ್ದೆ ಮಾತ್ರೆಗಾಗಿ ಅಲೆದಾಡುತ್ತಿದ್ದಾರೆ. ನೋಟು ನಿಷೇಧದಿಂದ ಹಲವಷ್ಟು ಅಕ್ರಮಗಳು ಹೊರಬರಲಿವೆ ಎಂದು ಇಂದು ಗಾಜಿಪುರದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ದೇಶ ಕಾಯುವ ಸೈನಿಕರು, ಎಷ್ಟೋ ಅಮಾಯಕ ಯುವಕರು ಭಯೋತ್ಪಾದನೆ, ಉಗ್ರವಾದಕ್ಕೆ ಬಲಿಯಾಗುತ್ತಿದ್ದಾರೆ. ನಕ್ಸಲರಿಗೆ, ಉಗ್ರವಾದಿಗಳಿಗೆ ಹಣ ಎಲ್ಲಿಂದ ಬರುತ್ತಿದೆ ? ಗಡಿಯಿಂದಾಚೆಗೆ ನಮ್ಮ ಶತ್ರುಗಳು ನಕಲಿ ನೋಟುಗಳನ್ನು ಮುದ್ರಿಸಿ ನಮ್ಮ ದೇಶಕ್ಕೆ ರವಾನಿಸುತ್ತಿದ್ದಾರೆ. ಇಂಥಹ ಶತ್ರುಗಳನ್ನು ನೀವು ರಕ್ಷಿಸಬಯಸುತ್ತೀರಾ ? ನಕ್ಸಲ್ವಾದ, ಉಗ್ರವಾದದ ವಿರುದ್ಧ ಹೋರಾಟ ನಡೆಸಬೇಕೇ ಬೇಡವೇ ?
ಇದೀಗ ರೂ. 500, ರೂ. 1000 ಗಳನ್ನು ನಿಷೇಧಿಸಿದ್ದಕ್ಕಾಗಿ ನನ್ನನ್ನು ಕೆಲವರು ಜರೆಯುತ್ತಿದ್ದಾರೆ. ಯಾವ ಕಾನೂನಿನ ಪ್ರಕಾರ ನೀವು ರೂ. 500 ಮತ್ತು ರೂ. 1000 ನೋಟುಗಳನ್ನು ನಿಷೇಧಿಸಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ಸಿನವರೇ, ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಕೇವಲ 25 ಪೈಸೆಯನ್ನು ನೀವು ನಿಷೇಧಿಸಿದ್ದಿರಿ. ಆಗ ಯಾವ ಕಾನೂನನ್ನು ಪಾಲಿಸಿ ನೀವು ನಿಷೇಧವನ್ನು ಜಾರಿಗೆ ತಂದಿರಿ ? ನಿಮ್ಮ ಯೋಗ್ಯತೆ ಅಂದು ಅಷ್ಟೇ ಇತ್ತು, ಅದರಿಂದ ಮೇಲಕ್ಕೇರಲಿಲ್ಲ.
ಎಷ್ಟೋ ಜನ ಬಡವರು, ಮಧ್ಯಮ ವರ್ಗದವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುತ್ತಾ ಬಂದಿದ್ದಾರೆ. ಆದರೆ ಕೆಲವರು ಇಂತಹವರಿಗೆ ಅಯ್ಯೋ, ನೀವು ಇಷ್ಟು ವರ್ಷಗಳಿಂದ ಹಣವನ್ನು ಕೂಡಿಡುತ್ತಾ ಬಂದಿರಿ. ಇದೀಗ ಮೋದಿ ನಿಮ್ಮ ದುಡ್ಡನ್ನೆಲ್ಲಾ ತೆಗೆದುಕೊಳ್ಳುತ್ತಾನೆ ಎಂದು ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ.
ಎಲ್ಲಾ ಮಾತೆಯರೇ, ಎಲ್ಲಿಯವರೆಗೆ ನಿಮ್ಮ ಈ ತಮ್ಮ, ಲಾಡ್ಲಾ ಬದುಕಿದ್ದಾನೋ ಅಲ್ಲಿಯವರೆಗೆ ನನ್ನ ಮೇಲೆ ವಿಶ್ವಾಸವಿಡಿ. ನಿಮ್ಮ ಪ್ರತಿಯೊಂದು ಉಳಿತಾಯದ ಹಣಕ್ಕೂ ನಾನು ಜವಾಬ್ದಾರಿ. ನಿಮ್ಮ ಹಣದ ಮೇಲೆ ಸರ್ಕಾರದ ಯಾವುದೇ ಕೆಟ್ಟ ದೃಷ್ಟಿ ಬೀಳದು.
ರಾತ್ರಿ ವೇಳೆಯಲ್ಲಿ ಕೆಲ ಗಾಡಿಗಳು ಹೊರಡುತ್ತಿವೆ. ಸಿಸಿಟಿವಿ ಎಲ್ಲಾದರೂ ಇದೆಯೇ ಎಂದು ನೋಡಿಕೊಂಡು ನಿಧಾನವಾಗಿ ಬಂದು ಕಸ ಎಸೆಯುವ ಜಾಗದಲ್ಲಿ ದುಡ್ಡಿನ ಗಂಟನ್ನು ಎಸೆದು ಹೋಗುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ, ಸಿಸಿಟಿವಿಯಲ್ಲಿ ಈ ರೀತಿಯ ದೃಶ್ಯಗಳು ಕಂಡುಬಂದಲ್ಲಿ ಅವರಿಂದ ಎಲ್ಲದರ ವಿವರಣೆ ಕೇಳಲಾಗುತ್ತದೆ. ನಾನೆಂದೂ ಅಂಥವರನ್ನು ಬಿಡುವುದಿಲ್ಲ.
ಡಿ. 30 ರ ವರೆಗೆ ಎಲ್ಲಾ ಪ್ರಕ್ರಿಯೆಗಳು ಸುವ್ಯವಸ್ಥಿತವಾಗಿ ನಡೆಯಲು ಹೆಚ್ಚು ಹೆಚ್ಚು ಗಂಟೆಗಳ ಕಾಲ ಬ್ಯಾಂಕ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಯೂ ನಲ್ಲಿ ನಿಂತ ಹಿರಿಯ ನಾಗರಿಕರಿಗೆ ಹಲವಾರು ಯುವಕರು, ಸಂಘಟನೆಗಳು ಸಹಾಯ ಮಾಡುತ್ತಿವೆ. ಪ್ರತಿಯೊಬ್ಬರು ತಮ್ಮ ಯೋಗದಾನವನ್ನು ದೇಶದ ಅಭಿವೃದ್ಧಿಗಾಗಿ, ಈ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗಂಗಾ ನದಿಯಲ್ಲಿ 1 ರೂ., 5 ರೂ. ನಾಣ್ಯ ಹಾಕಲು ಯೋಚಿಸುತ್ತಿದ್ದ ಜನರು ಇಂದು ನೋಟು ನೋಟುಗಳ ಕಂತನ್ನು ಹಾಕುತ್ತಿದ್ದಾರೆ. ಪಾಪಿಗಳೇ ನೀವು ಎಷ್ಟೇ ನೋಟುಗಳನ್ನು ಗಂಗಾ ನದಿಯಲ್ಲಿ ಹಾಕಿದರೂ ಗಂಗಾ ನದಿ ನಿಮ್ಮ ಪಾಪವನ್ನು ಕಳೆಯುವುದಿಲ್ಲ.
ದೇಶದ ಅಭಿವೃದ್ಧಿಗಾಗಿ, ಬಡವರ ಹಿತದೃಷ್ಟಿಯಿಂದ ಪ್ರಾಮಾಣಿಕತೆಯ ದಾರಿಯಲ್ಲಿ ನಡೆಯುವವರು ನಾವು, ಬೇರೆಯವರ ಬೆದರಿಕೆಗೆ ನಾವು ಹೆದರಬೇಕೇ ? ಪ್ರಾಮಾಣಿಕತೆಯ ದಾರಿಯನ್ನು ನಾವು ಬಿಡಬೇಕೇ ಎಂದು ನೀವೇ ಹೇಳಿ.
ಈ ಗಾಝಿಪುರದ ಜನತೆ ಸೇರಿದಂತೆ ದೇಶದ ಪ್ರತಿಯೊಬ್ಬರಲ್ಲೂ ನನ್ನ ಪ್ರಾರ್ಥನೆಯೆಂದರೆ, ನಿಮ್ಮೆಲ್ಲರ, ಪ್ರಾಮಾಣಿಕರ ಒಳ್ಳೆಯ ದಿನಗಳಿಗಾಗಿ 50 ದಿನಗಳ ಕಾಲ ಕಷ್ಟಪಡಿ. ಪ್ರತಿಯೊಬ್ಬರಿಗೂ ಅವರವರ ಹಕ್ಕು ಸಿಗಬೇಕೆಂಬುದೇ ನಮ್ಮ ಅಭಿಲಾಷೆ. ಇದಕ್ಕಾಗಿ ಸಮಯ ತಗಲುತ್ತದೆ. ನನ್ನ ಪ್ರಾರ್ಥನೆಯೆಂದರೆ ನೀವು ಸಕ್ರಿಯವಾಗಿ ಹಳ್ಳಿ ಹಳ್ಳಿಯಲ್ಲಿರುವ ಜನರಿಗೆ ವಿಶ್ವಾಸವನ್ನು ತುಂಬಬೇಕು. ಈ ಪವಿತ್ರ ಕಾರ್ಯದಲ್ಲಿ ಮುಂದುವರೆಯಲು ನನಗೆ ಆಶೀರ್ವಾದ ನೀಡಿ ಎಂದು ಮೋದಿ ಹೇಳಿದರು.
ಗಾಝಿಪುರದಲ್ಲಿ ಪ್ರಧಾನಿ ಮೋದಿ ಇಂದು ವಿವಿಧ ರೈಲು ಯೋಜನೆಗಳಿಗೆ ಚಾಲನೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.