ನವದೆಹಲಿ : ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಭಾರತ ಕಬಡ್ಡಿ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ವತಿಯಿಂದ ನೀಡುವುದಾಗಿ ಕೇಂದ್ರ ಕೀಡಾ ಸಚಿವ ವಿಜಯ್ ಗೋಯೆಲ್ ತಿಳಿಸಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದಿರುವ ಭಾರತ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ಪರವಾಗಿ ನೀಡಲಾಗುವುದು, ಕೋಚ್ ಕೂಡಾ ಬಹುಮಾನ ಪಡೆಯಲಿದ್ದಾರೆ ಎಂದು ಕೇಂದ್ರ ಕ್ರೀಡಾ ಸಚಿವರು ಹೇಳಿದ್ದಾರೆ.
ಅನೂಪ್ ಕುಮಾರ್ ನೇತೃತ್ವದ ಭಾರತ ಕಬಡ್ಡಿ ತಂಡ ಇರಾನ್ ಎದುರು 38-29 ಅಂಕಗಳಿಂದ ಗೆಲುವು ಸಾಧಿಸಿ ಸತತ 3 ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಹೀಗಿದ್ದರೂ ಕಬಡ್ಡಿ ಆಟಗಾರರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅನೂಪ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.
ಕ್ರೀಡಾ ಸಚಿವರ ನಿವಾಸದಲ್ಲಿ ಕಬಡ್ಡಿ ತಂಡದವರಿಗೆ ಸನ್ಮಾನವನ್ನು ಏರ್ಪಡಿಸಿದ್ದ ಸಂದರ್ಭ ಮಾತನಾಡಿದ ಸಚಿವ ಗೋಯಲ್ ಅವರು, ದೇಶೀಯ ಕ್ರೀಡೆಯಾದ ಕಬಡ್ಡಿಯನ್ನು ಒಲಿಂಪಿಕ್ಸ್ ಕೂಟದಲ್ಲಿ ಸೇರಿಸಲು ಪ್ರಯತ್ನಗಳನ್ನು ನಡೆಸಲಾಗುವುದು. ಬರೀ ಕ್ರಿಕೆಟ್ ಮಾತ್ರವಲ್ಲ, ಫುಟ್ಬಾಲ್, ಹಾಕಿ, ಇನ್ನಿತರ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
2020, 2024 ಮತ್ತು 2028 ರ ಒಲಿಂಪಿಕ್ಸ್ ಕೂಟಗಳಿಗೆ ನಾವು ಈಗಿನಿಂದಲೇ ತಯಾರಾಗಬೇಕಾಗಿದೆ. 8 ವರ್ಷದ ಮಕ್ಕಳಿಂದಲೇ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತಮ ಕೋಚಿಂಗ್, ಕ್ರೀಡಾ ಸೌಲಭ್ಯಗಳನ್ನು ನೀಡುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಗುರುತಿಸಬೇಕಾಗಿದೆ. ಹೀಗಾಗಿ ಸ್ಫೋರ್ಟ್ಸ್ ಪೋರ್ಟಲ್ನಲ್ಲಿ ಈಗಾಗಲೇ ಪ್ರತಿಭಾವಂತ ಮಕ್ಕಳ ಮಾಹಿತಿ, ವೀಡಿಯೋಗಳನ್ನು ಅಪ್ಲೋಡ್ ಮಾಡಲು ಹೇಳಲಾಗಿದೆ. ಲೋಕಲ್ ಎಸ್ಐಎ ಸೆಂಟರ್ಗಳು ಸ್ಫೋರ್ಟ್ಸ್ ಪೋರ್ಟಲ್ನಲ್ಲಿ ಅಪ್ಲೋಡ್ ಆಗಿರುವ ಮಕ್ಕಳನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಅಂಥಹ ಮಕ್ಕಳಿಗೆ ವಿಶ್ವ ದರ್ಜೆಯ ತರಬೇತಿಯನ್ನು ನೀಡುವ ಸಹಕಾರವನ್ನು ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.