ಎಂದಿನಂತೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಸಂಭ್ರಮವಿಂದು. ಯಥಾಪ್ರಕಾರ ರಾಜ್ಯೋತ್ಸವಕ್ಕಾಗಂತೂ ಸಕಲ ಸಿದ್ಧತೆಗಳೂ ಕೆಲವು ತಿಂಗಳ ಮೊದಲಿನಿಂದಲೇ ಆರಂಭವಾಗಿಬಿಟ್ಟಿವೆ. ಪ್ರಶಸ್ತಿಗಳ ಪಟ್ಟಿ ತಯಾರಿಕೆ, ಅಂಗಡಿ, ಕಛೇರಿಗಳ ಮುಂದೆ ಕನ್ನಡದ ಫಲಕಗಳ ಅಲಂಕಾರ, ಆರ್ಕೆಸ್ಟ್ರಾದ ಅಬ್ಬರದ ಕಾರ್ಯಕ್ರಮಕ್ಕೆ ತಯಾರಿ- ಇತ್ಯಾದಿ. ಆದರೆ ಹಿಂದಣ ಹೆಜ್ಜೆಯನರಿತಲ್ಲದೆ ಮುಂದಿನ ಹೆಜ್ಜೆಯನಿಡಲಾಗದು ಎಂದಿದ್ದಾನೆ, ಒಬ್ಬ ಮಹಾಕವಿ. ನಾವೀಗ ಆ ಕೆಲಸವನ್ನು ಮಾಡಬೇಕಿದೆ.
ಇದು ಇಡೀ ಕರ್ನಾಟಕದ ಹಬ್ಬ, ರಾಜ್ಯ ಭಾಷೆ ಕನ್ನಡಮ್ಮನ ಹಬ್ಬ, ನಾಡದೇವಿ ಭುವನೇಶ್ವರಿಯ ಹಬ್ಬ. ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣವಾದ ಶುಭಸಂಗತಿಯನ್ನು ಸ್ಮರಿಸುತ್ತ ಪ್ರತಿವರ್ಷ ನವೆಂಬರ್ 1 ರಂದು ಸಡಗರ ಪಡುತ್ತೇವೆ ನಿಜ. ನಾಡಿನ ಸುತ್ತಮುತ್ತ ಈ ಸಾಧನೆಗಾಗಿ ಹಲವು ರೀತಿಯಲ್ಲಿ ಬಲಿದಾನ ಮಾಡಿದವರಿಗೆ ಲೆಕ್ಕವಿಲ್ಲ. ಹೀಗೆ, ನಾಡು-ನುಡಿಯ ಸೇವೆಗೆ ಕಂಕಣಬದ್ಧರಾಗಿ ಶ್ರಮಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸುವುದು ಆ ಶ್ರಮವನ್ನು ಆದರ್ಶವಾಗಿಟ್ಟು, ನಮ್ಮ ಪಾಲಿನ ಕಾರ್ಯವನ್ನು ಮುಂದುವರಿಸುವುದು ಇದೀಗ ನಮ್ಮ ಹೊಣೆಯಾಗಿದೆ. ಹೀಗೆ ಸೇವೆ ಸಲ್ಲಿಸಿದವರನ್ನು ಸ್ಮರಿಸುವಾಗ ಕರ್ನಾಟಕ ವಿದ್ಯಾವರ್ಧಕ ಸಂಘದ ಸೇವೆ ಅನನ್ಯವಾದದ್ದೆಂಬುದನ್ನು ನಾವು ತಿಳಿದಿರಬೇಕು.
ಕ್ರಿ.ಶ. 18 ನೆಯ ಶತಮಾನದಲ್ಲಿ ನಮ್ಮ ಕರ್ನಾಟಕ ದೇಶ ಬೇರೆ ಬೇರೆ ಕಾಲಗಳಲ್ಲಿ ತುಂಡುತುಂಡುಗಳಾಗಿ, ಬ್ರಿಟಿಷರ ಆಡಳಿತದ ಕೆಳಗೆ ಬಂದಿತು. ಆಗ ಅವರು ಅದರ ಒಂದು ಭಾಗವನ್ನು ತಮ್ಮ ನೇರ ಆಡಳಿತದಲ್ಲಿಟ್ಟುಕೊಂಡು, ಉಳಿದವನ್ನು ಬೇರೆ ಬೇರೆ ದೇಶೀಯ ರಾಜರ ವಶದಲ್ಲಿರಲು ಬಿಟ್ಟು, ಮೇಲ್ವಿಚಾರವನ್ನು ಮಾತ್ರ ತಾವು ಇಟ್ಟುಕೊಂಡರು. ಹಾಗಾಗಿ ಕನ್ನಡದ ಜನರು ಮುಂಬಯಿ, ಚೆನ್ನೈ, ಹೈದರಾಬಾದ್, ಕಾಸರಗೋಡು ಪ್ರದೇಶಗಳಲ್ಲಿ ಉಳಿದುಹೋಗುವಂತಾಯಿತು. ನಾಡು ಒಮ್ಮುಖವಾಗಿ, ಒಂದು ಕುಲವಾಗಿ ಉಳಿದು ಸಮಸ್ತ ಕನ್ನಡಿಗರು ಇರುವ ಪ್ರದೇಶಗಳೆಲ್ಲ ಒಂದಾಗಿ ಏಕೀಕರಣವಾಗಬೇಕೆಂಬ ಹೋರಾಟ ಪ್ರಾರಂಭವಾಗಿ, ಅದರಲ್ಲಿ ನಾಡಿನಾದ್ಯಂತ ಕನ್ನಡಿಗರು ಪಾಲ್ಗೊಂಡು ಸಫಲರಾಗಲು ಸಾಧ್ಯವಾಯಿತು. ಆ ಸಾಫಲ್ಯದ ಫಲವೇ ರಾಜ್ಯೋತ್ಸವದ ಸಂಭ್ರಮ.
ಕ್ರಿ.ಶ 1890 ರಲ್ಲಿ ಎಂದರೆ ಇಂದಿಗೆ ಸುಮಾರು 126 ವರ್ಷಗಳ ಹಿಂದೆ ಉತ್ತರಕರ್ನಾಟಕದ ಕೇಂದ್ರ ಸ್ಥಾನವಾದ ಧಾರವಾಡದಲ್ಲಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’ವೆಂಬ ಒಂದು ಸಂಸ್ಥೆಯನ್ನು ಹೊರಡಿಸಿ, ಕನ್ನಡದ ಬಾವುಟವನ್ನು ನೆಟ್ಟು ಹಾರಿಸಿದರು. ಅದು ಕನ್ನಡಿಗರು ಸುಸಂಘಟಿತರಾಗಿ ಕರ್ನಾಟಕ ಏಕೀಕರಣಕ್ಕಾಗಿ ಇಟ್ಟ ಮೊದಲನೇ ಹೆಜ್ಜೆಯಾಗಿತ್ತು. ಹೀಗೆ ಪ್ರಾರಂಭವಾದ ಕರ್ನಾಟಕ ಸಂಘದ ಸ್ಥಾಪನೆ, ಬೆಳವಣಿಗೆಗಾಗಿ ಶ್ರಮಿಸಿದ ಆ ಭಾಗದ ಹಲವು ಹಿರಿಯರ ಸೇವೆಯನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ. ಕಾಲಕ್ರಮೇಣ ಸಂಘವು ಬೆಳೆಯುತ್ತಾ ತನ್ನ ಕನ್ನಡಪರ ಚಟುವಟಿಕೆಗಳನ್ನು ಹತ್ತಾರು ರೀತಿಗಳಲ್ಲಿ ವಿಸ್ತರಿಸಿಕೊಳ್ಳುತ್ತ ಇಂದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಭಾಷಾಸೇವೆಯ ಕಾರ್ಯಗಳನ್ನೆಲ್ಲ ನಡೆಸತೊಡಗಿತು. ನಂತರದಲ್ಲಿ ಇದೇ ರೀತಿಯ ಕರ್ನಾಟಕ ಸಂಘ ರಾಜ್ಯದ ಇತರ ನಗರದಲ್ಲಿ ಕೂಡ ತಲೆಯೆತ್ತಿ ಅಲ್ಲಿಯೂ ಕನ್ನಡ ಭಾಷಾ ಸೇವೆ ನಡೆಯಲಾರಂಭವಾಯಿತು. ಎಲ್ಲ ಚಟುವಟಿಕೆಗಳ ಫಲವಾಗಿ 1956 ರಲ್ಲಿ ಕರ್ನಾಟಕ ಏಕೀಕರಣದ ಅಧಿಕೃತ ನಿರ್ಣಯವಾಗಿ ಪ್ರತಿ ವರ್ಷ ನವೆಂಬರ್ 1 ರಂದು ಈ ಸಂಭ್ರಮವನ್ನು ಆಚರಿಸುವುದು ಪ್ರಾರಂಭವಾಯಿತು. ಇದಕ್ಕಾಗಿ ಕರ್ನಾಟಕ ಸಂಘವಲ್ಲದೆ ಇತರ ಹಲವು ಸಂಘ, ಸಂಸ್ಥೆಗಳು, ವ್ಯಕ್ತಿಗಳು, ಜನಸಾಮಾನ್ಯರು ಎಲ್ಲರ ಹೋರಾಟ ಜೊತೆಗೂಡಿತ್ತೆಂಬುದು ಮುಖ್ಯವಾದ ವಿಷಯ.
ಇದೆಲ್ಲ ನಡೆದು ಈಗ 60 ವರ್ಷಗಳೇ ಕಳೆದುಹೋಗಿದೆ. ಇಂತಹ ಒಂದು ಮಹತ್ಕಾರ್ಯದ ಉದ್ದೇಶ ಕನ್ನಡ, ನಾಡುನುಡಿ ತನ್ನ ಹಿರಿಯಮೆಯನ್ನು ವೈಶಿಷ್ಟವನ್ನು, ಪರಂಪರೆಯ ಶ್ರೀಮಂತಿಕೆಯನ್ನು ಉಳಿಸಿ, ಬೆಳೆಸುವುದೇ ಆಗಿತ್ತು. ಆದರೆ, ಇಂದು ನಮ್ಮ ಕನ್ನಡಿಗರಿಗೆ ನಾಡು- ನುಡಿಯ ಬಗೆಗಿನ ಅಭಿಮಾನ, ಗೌರವ, ಕಾಳಜಿ ಯಾವ ಹಂತದಲ್ಲಿದೆಯೆಂದು ಆಲೋಚಿಸಿದಾಗ ನಿರಾಸೆಯೇ ಉಂಟಾಗುತ್ತದೆ. ಸಾಹಿತಿಗಳು ಸಾಹಿತ್ಯಾಸಕ್ತರು ಬಿಡಿ, ಸಾಮಾನ್ಯಜನರಲ್ಲಿ ಭಾಷೆ ಜೀವಂತವಾಗಿ, ಆರೋಗ್ಯಕರವಾಗಿ ಉಳಿದರೆ ತಾನೆ ಅದು ಮತ್ತೆ ಮತ್ತೆ ಹೊಸ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ? ಇಂದು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಶೋಚನೀಯ ಸ್ಥಿತಿಯನ್ನು ಕಂಡಾಗ ವಿಷಾದವಾಗುತ್ತದೆ. ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಎಂಬ ಕವಿವಾಣಿ ಮತ್ತೆ ಮತ್ತೆ ನೆನಪಾಗುತ್ತದೆ. ನಾಡು-ನುಡಿಯ ಬಗೆಗೆ ಅಭಿಮಾನ, ಕಾಳಜಿ ಇರಬೇಕೆಂದು ಅದೆಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುತ್ತಿದ್ದಾರೆ? ಅಷ್ಟೇ ಏಕೆ? ಎಷ್ಟು ಮನೆಗಳಲ್ಲಿ ಭಾಷಾಕಲಿಕೆ ಸುಸಂಸ್ಕೃತ ವ್ಯಕ್ತಿಯಾಗುವಲ್ಲಿ ಒಂದು ಅತ್ಯವಶ್ಯಕವಾದ ಅಂಶವೆಂಬ ಬಗ್ಗೆ ಅರಿವು ನೀಡುತ್ತಿದ್ದಾರೆ? ಅಂಕಗಳು, ಉದ್ಯೋಗ, ಕೈತುಂಬ ಹಣ ಎಂದು ಸಂಪೂರ್ಣವಾಗಿ ಒಂದು ಮೆಟೀರಿಯಲಿಸ್ಟಿಕ್ ಪ್ರಪಂಚದಲ್ಲಿಯೇ ಬದುಕಬಯಸುತ್ತದಲ್ಲದೆ ನಾಡು- ನುಡಿಗೆ ಸಲ್ಲಿಸುವ ಸೇವೆಯನ್ನು ನೆನಪಿಸುವ ಕಾರ್ಯವನ್ನು ಎಷ್ಟು ಮಂದಿ ಪಾಲಕರು ಮಾಡುತ್ತಿದ್ದಾರೆ? ಕಲಿಸುವ, ಕಲಿಯುವ ಯಾರಲ್ಲೂ ಮೇಲೆ ಹೇಳಿದ ಕಾಳಜಿಯೇ ಇಲ್ಲ. 10 ವರ್ಷ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಶುದ್ಧವಾಗಿ ನಮ್ಮ ಕನ್ನಡವನ್ನು (ಕೆಲವರಿಗೆ ಮಾತೃಭಾಷೆಯೂ ಆಗಿರುತ್ತದೆ) ಓದಿ, ಬರೆದು ಮಾತನಾಡಲು ಬರುತ್ತದೆ? ಇಲ್ಲಿ ತಪ್ಪು ಯಾರದು?
ಬೇರೆ ಯಾವ ರಾಜ್ಯದಲ್ಲಿಯೂ ಇಂತಹ ಅನಾದರದ ಧೋರಣೆ ಇಲ್ಲ. ಹಾಗೆ ನೋಡಿದರೆ ನಮ್ಮ ಕನ್ನಡ ಭಾಷೆಯಲ್ಲಿ ಪ್ರತಿಭಾವಂತರಿಗೆ, ವಿದ್ವಾಂಸರಿಗೆ ಕೊರತೆಯಿಲ್ಲ. ಧಂಡಿಯಾಗಿಯೇ ಇದ್ದಾರೆ. ನಾಡಿನ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಪರಂಪರೆಯ ಹಿರಿಮೆ ಸಮೃದ್ಧವಾಗಿದೆ. ಇವೆಲ್ಲದರ ಕನಿಷ್ಠ ಪ್ರಮಾಣದ ಮಾಹಿತಿಯಾದರೂ ಯುವಜನಾಂಗಕ್ಕೆ, ಮಕ್ಕಳಿಗೆ ನೀಡಬೇಕಲ್ಲವೆ? ಕುವೆಂಪು, ಬೇಂದ್ರೆ ಇದ್ದಾರೋ, ಇಲ್ಲವೋ ತಿಳಿಯದಷ್ಟು ಅಮಾಯಕತೆ ಅಥವಾ ಅಜ್ಞಾನ ಅವರಲ್ಲಿರಲು ಕಾರಣ ಯಾರು?
ಪ್ರಭುತ್ವ ಮತ್ತು ಸಮಾಜ ಎರಡೂ ಕಡೆಯಿಂದ ಕಾರ್ಯೋನ್ಮುಖವಾದಾಗಲೇ ಈ ನಾಡು-ನುಡಿಯ ಅಭಿಮಾನವೆಂಬುದು ತಲೆಮಾರಿನಿಂದ ತಲೆಮಾರಿಗೆ ಪ್ರಸಾರವಾಗುತ್ತ ಹೋಗುತ್ತದೆ. ಈಗಂತೂ ರಾಜ್ಯೋತ್ಸವದ ಆಚರಣೆ ಒಂದು ಪ್ರತಿಷ್ಠೆಯ, ಆಡಂಬರದ ಕಾರ್ಯಕ್ರಮವಾಗಷ್ಟೇ ಬಹುತೇಕ ಕಡೆಗಳಲ್ಲಿ ನಡೆದಿದೆ. ಅದು ನವೆಂಬರ್ ಒಂದರಿಂದ ಡಿಸೆಂಬರ್ ಕಡೆಯವರೆಗೂ ನಡೆಯುತ್ತ ತನ್ನ ಸಾಂಕೇತಿಕತೆಯನ್ನಾಗಲೀ, ಮಹತ್ವವನ್ನಾಗಲೀ ಯುವಜನರಲ್ಲಿ ಮೂಡಿಸುವಲ್ಲಿ ಪರಿಣಾಮಕಾರಿಯಾಗುತ್ತಿಲ್ಲ. ಪೈಪೋಟಿಯಿಂದ ಹಣ ಖರ್ಚುಮಾಡುವುದಷ್ಟೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.