ಉಡುಪಿ : ಮಾಹೆಗೆ ಸಂಬಂಧಿಸಿದ ಎಲ್ಲಾ ಕಟ್ಟಡವನ್ನು ಮರು ತಪಾಸಣೆ ಮಾಡುವಂತೆ ನಗರಸಭೆ ನಿರ್ಣಯ ಕೈಗೊಂಡ ಮಹತ್ವದ ಘಟನೆ ಉಡುಪಿ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಮೂಡುಪೆರಂಪಳ್ಳಿ ವಾರ್ಡ್ ನಗರಸಭಾ ಸದಸ್ಯ ಪ್ರಶಾಂತ್ ಭಟ್ ಮಾತನಾಡಿ, ಮಾಹೆ ಟ್ರಸ್ಟ್ 350ಎಕ್ರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗುತ್ತಿದೆ. ಈ ಬಗ್ಗೆ ನಕ್ಷೆ ಇದೆ. ಮಣಿಪಾಲದಲ್ಲಿ ನಿರ್ಮಾಣವಾಗುತ್ತಿರುವ ಮಾಹೆ ಕಟ್ಟಡಗಳಿಗೆ ಸಿಂಗಲ್ ಲೇಔಟ್ ಅನುಮತಿ ಸಿಕ್ಕಿದೆಯೇ ಕನ್ ವರ್ಶನ್ ಆಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ ಚಂದ್ರ ಪೂಜಾರಿ, 1,117 ಖಾತೆಗಳಿದ್ದು 2014-15ಸಾಲಿನಲ್ಲಿ 23ಲಕ್ಷದ 17ಸಾವಿರದ 856ರೂ ತೆರಿಗೆ ಪಾವತಿಯಾಗಿದೆ, ಕಟ್ಟಡ ಪೈಕಿ ಶಿಕ್ಷಣ ಸಂಸ್ಥೆ ಕಟ್ಟಡಕ್ಕೆ ಸುಪ್ರೀಂ ಕೋರ್ಟ್ ಆದೇಶದಂತೆ ತೆರಿಗೆ ವಿನಾಯಿತಿ ಇದೆ ಎಂದರು.
ನಗರಸಭಾಧ್ಯಕ್ಷ ಯುವರಾಜ್ ಈ ಸಂಧರ್ಭದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಇತರ ಎಲ್ಲಾ ಕಟ್ಟಡವನ್ನು ಮರು ತಪಾಸಣೆ ಮಾಡಬೇಕು ಎಂದು ಆದೇಶಿಸಿದರು.ಪ್ರಭಾರ ಪೌರಾಯುಕ್ತ ಮಂಜುನಾಥ ಮಾತನಾಡಿ, ಮಾಹೆಗೆ ಸಂಬಂದಿಸಿ ವಿಶ್ವವಿದ್ಯಾನಿಲಯ ಆಸ್ಪತ್ರೆ ಮತ್ತು ಇತರ ಕಟ್ಟಡದ ಸಂಪೂರ್ಣ ಮಾಹಿತಿ ಹಾಗೂ ದಾಖಲೆ ನಗರಸಭೆಗೆ ನೀಡುವಂತೆ ಮಣಿಪಾಲ ರಿಜಿಸ್ಟ್ರಾರ್ ಗೆ ಪತ್ರ ಬರೆಯಲಾಗಿದೆ ಎಂದರು.
ಕಳೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆಡಳಿತ ಪಕ್ಷದ ನಗರಭಾ ಸದಸ್ಯ ರಮೇಶ್ ಕಾಂಚನ್ ವಿಪಕ್ಷ ನಗರಸಭಾ ಸದಸ್ಯರ ಮೇಲೆ ಆರೋಪ ಮಾಡಿದ್ದರು ಈ ಬಗ್ಗೆ ಪರಿಶೀಲಿಸಬೇಕು, ಪರಿಶೀಲನೆಯಲ್ಲಿ ಒಳ ಒಪ್ಪಂದ ನಡೆಯದಿದ್ದರೆ ರಮೇಶ್ ಕಾಂಚನ್ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಆಡಳಿತ ಹಾಗೂ ವಿಪಕ್ಷ ನಗರಸಭಾ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಒಟ್ಟಿನಲ್ಲಿ ಈ ಸಾಮಾನ್ಯ ಸಭೆಯಲ್ಲಿ ಮಣಿಪಾಲದಲ್ಲಿ ವಿಶ್ವವಿದ್ಯಾನಿಲಯ, ಆಸ್ಪತ್ರೆ ಹಾಗೂ ಇನ್ನಿತರ ಮಾಹೆಗೆ ಸೇರಿದ ಕಟ್ಟಡಗಳ ಬಗ್ಗೆ ಮರು ತಪಾಸಣೆ ನಿರ್ಣಯ ಕೈಗೊಂಡಿರುವುದು ಮಹತ್ವ ಪಡೆದಿದ್ದು ಈ ನಿರ್ಣಯ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುವುದು ಮುಂದಿನ ಸಾಮಾನ್ಯ ಸಭೆಯಲ್ಲಿ ತಿಳಿಯಲಿದೆ. ಸಭೆಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಉಪಾಧ್ಯಕ್ಷೆ ಅಮೃತಾ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.