ರಾಜಕೀಯ ಹಿಂಸಾಚಾರಕ್ಕೆ ಯಥೇಚ್ಛ ಉದಾಹರಣೆಗಳನ್ನು ನೀಡಿರುವ ರಾಜ್ಯವೆಂದರೆ ನೆರೆಯ ಕೇರಳ. ದೇವರ ಸ್ವಂತ ನಾಡು (God’s Own Country) ಎಂಬ ಹೆಗ್ಗಳಿಕೆಯಿದ್ದರೂ ಅತಿಕ್ಷುಲ್ಲಕ ವಿಚಾರಗಳಿಗೂ ನೆತ್ತರು ಹರಿಸುವಷ್ಟು ಸಲೀಸಾಗಿ ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿರುವುದು ಕೇರಳ ಜನತೆಯ ವಿಪರ್ಯಾಸ. ಕಳೆದ 50 ವರ್ಷಗಳಲ್ಲಿ 300ಕ್ಕೂ ಹೆಚ್ಚು ಯುವಕರು ಈ ರಾಜಕೀಯ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಅಧಿಕಮಂದಿ ಬೆರಳು-ಕೈ-ಕಾಲು ಕಳೆದುಕೊಂಡು ಜೀವನಪರ್ಯಂತ ಯಾತನೆ ಅನುಭವಿಸುತ್ತಿದ್ದಾರೆ. ಅಪಾರಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮನೆ-ಮಠ ಕಳೆದುಕೊಂಡವರ ಪಾಡು ಹೇಳತೀರದು.
ಮೊನ್ನೆ ಅಕ್ಟೋಬರ್ 12ರಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ ಆರೆಸ್ಸೆಸ್ ಸ್ವಯಂಸೇವಕ ರಮಿತ್ ಎಂಬ ಯುವಕನನ್ನು ಕಮ್ಯುನಿಸ್ಟ್ ಕಾರ್ಯಕರ್ತರು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದರು. ಕೇರಳ ಮುಖ್ಯಮಂತ್ರಿಯ ಸ್ವಗ್ರಾಮದಲ್ಲಿ ನಡೆದ ಈ ಭೀಕರ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಯಿತು. ಇದಕ್ಕೂ ಮುನ್ನ 2002 ರ ಮೇ 22ರಂದು ರಮಿತ್ ನ ತಂದೆ ಹಾಗೂ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಉತ್ತಮನ್ ರನ್ನು ಕೊಲೆಗೈಯಲಾಗಿತ್ತು. ಇತ್ತೀಚಿಗೆ ಮೇ ತಿಂಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ರಮಿತ್ ನ ಮನೆಗೆ ದಾಳಿ ನಡೆಸಿದ್ದರು. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಕಿ ಖುಷಿ ಆಚರಿಸಿದ್ದರು. ತಡೆಯಲು ಬಂದ ತಾಯಿ ನಾರಾಯಣಿ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಆಕೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದೀಗ ರಮಿತ್ ನ ತಾಯಿ ನಾರಾಯಣಿ ಗಂಡನನ್ನೂ, ಮಗನನ್ನೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕಳೆದುಕೊಂಡಿದ್ದಾರೆ.
ಇಷ್ಟಕ್ಕೂ, ಈ ಎಲ್ಲ ಹಿಂಸಾಚಾರದ ಕೃತ್ಯಗಳಲ್ಲಿ ಹತ್ಯೆಗೊಳಗಾದದ್ದು, ಹಲ್ಲೆಗೊಳಗಾಗುತ್ತಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಕೊಲೆ ಹಿಂಸೆ ಮಾಡಿದವರಲ್ಲಿ ಬಹುಪಾಲು ಕಮ್ಯೂನಿಸ್ಟ್ ಅಥವಾ ಮಾರ್ಕಿಸ್ಟರದ್ದೇ. ಕೆಲವು ಇಸ್ಲಾಮಿಕ್ ಸಂಘಟನೆಗಳು, ಮಿಷ’ನರಿ’ಗಳೂ ಕೆಲವು ಬಾರಿ ಹಿಂಸೆಗಿಳಿದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ 230ಕ್ಕೂ ಅಧಿಕ ಮಂದಿ ಆರೆಸ್ಸೆಸ್ ಸ್ವಯಂಸೇವಕರು ಹತ್ಯೆಯಾಗಿದ್ದಾರೆ ಎನ್ನುತ್ತದೆ ಒಂದು ಲೆಕ್ಕಾಚಾರ! ರಾಷ್ಟ್ರೀಯವಾದಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗೆ ವಿರೋಧಿಗಳೆಲ್ಲ ಒಟ್ಟಾದ ಉದಾಹರಣೆಗಳು ಹೇರಳವಾಗಿವೆ. ಇಷ್ಟೊಂದು ಅಗಾಧ ಪ್ರಮಾಣದ ರಾಜಕೀಯಹತ್ಯೆಗಳು ಭಾರತದ ಯಾವ ರಾಜ್ಯದಲ್ಲೂ ವರದಿಯಾಗಿಲ್ಲ. ಕೇರಳದಲ್ಲಿನ ಈ ಕಮ್ಯೂನಿಸ್ಟ್ ರಕ್ತಪಾತದ ಕತ್ತಲೆಯ ಪುಟಗಳು ಇದೀಗ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ. ಮುಖವಾಡ ಬಯಲಾಗುತ್ತಿದೆ.
ಕಳಚಿದ ಮುಖವಾಡ
1920ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಕಮ್ಯೂನಿಸ್ಟ್ ವಿಚಾರಧಾರೆ ಕೇರಳಿಗರನ್ನು ಅತಿಯಾಗಿ ಆಕರ್ಷಿಸಿತು. ದಶಕಗಳ ಹಿಂದೆಯೇ ಕೇರಳವನ್ನು ಚೆನ್ನಾಗಿ ಅರಿತಿದ್ದ ಸ್ವಾಮಿ ವಿವೇಕಾನಂದರು ಆ ರಾಜ್ಯವನ್ನು ಹುಚ್ಚಾಸ್ಪತ್ರೆ (Lunatic Asylum) ಎಂದಿದ್ದರು. ಅದು ಅಲ್ಲಿನ ಮತಿಭ್ರಾಂತ ಸಾಮಾಜಿಕ ವ್ಯವಸ್ಥೆಯನ್ನು ಮನಗಂಡು ನೇರವಾಗಿ ಹೇಳಿದ ಮಾತಾಗಿತ್ತು. ಕಮ್ಯೂನಿಸ್ಟ್ ವಿಚಾರಧಾರೆಯನ್ನು ಅಪ್ಪಿಕೊಳ್ಳುವ ಭರದಲ್ಲಿ ಈ ನೆಲದ ಮೂಲಗುಣವಾದ ಸಹನೆ-ತಾಳ್ಮೆ-ಕ್ಷಮೆ-ದಯೆ-ಕರುಣೆ ಇವು ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ‘ಕ್ರಾಂತಿ’ ಮಾಡುತ್ತೇವೆ ಎಂಬ ಭ್ರಾಂತಿಯಲ್ಲಿ, ಸಮಾಜ ಪರಿವರ್ತನೆಯೆಂಬ ನೆಪವೊಡ್ಡಿ ಕೇರಳದ ಸಾಮಾಜಿಕ ಜನಜೀವನವನ್ನೇ ಬುಡಮೇಲುಗೊಳಿಸಿದ್ದು ಕಮ್ಯೂನಿಸ್ಟ್ ವಿಚಾರವಾದ. ಶೋಷಿತರಿಗೆ ನೆರವು ನೀಡುವ ಸುಳ್ಳು ಘೋಷಣೆಗಳು, ಸಮಾನತೆ ಸಾಧಿಸುತ್ತೇವೆ ಎಂಬ ಪೊಳ್ಳು ಮಾತುಗಳು, ಮಾನವತೆಯನ್ನು ಎತ್ತಿ ಹಿಡಿಯುವ ಮಾರ್ಗ ಎಂಬ ಡೋಂಗಿ ತನವೇ ಕಮ್ಯೂನಿಸ್ಟ್ ನಾಯಕರ ವರಸೆಯಾಗಿತ್ತು. ಜಾತೀಯತೆಯ ವ್ಯಸನದಿಂದ ಕಂಗೆಟ್ಟಿದ್ದ ಕೇರಳರ ಜನತೆ ಸ್ವಾತಂತ್ರ್ಯಾನಂತರ ಕಮ್ಯೂನಿಸ್ಟ್ ಆಡಳಿತವನ್ನೇ ಆಯ್ಕೆ ಮಾಡಿದರು.
1957ರಲ್ಲಿ ಇ.ಎಂ.ಎಸ್. ನಂಬೂದರಿಪಾಡ್ ನೇತೃತ್ವದಲ್ಲಿ ವಿಶ್ವದ ಮೊತ್ತಮೊದಲ ಚುನಾಯಿತ ಸರ್ಕಾರ ಕೇರಳದಲ್ಲಿ ಅಸ್ತಿತ್ವಕ್ಕೆ ಬಂತು! ಇವತ್ತು ಕೇರಳವನ್ನು ಕಮ್ಯೂನಿಸ್ಟ್ ಸರ್ಕಾರ ಆಳುತ್ತಿದೆ. ಪ್ರಸ್ತುತ ವರ್ಷಗಳಲ್ಲಿ ಕೇರಳದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೇಳಿಕೊಳ್ಳುವ ಶೈಕ್ಷಣಿಕ-ವೈದ್ಯಕೀಯ-ಕ್ರೀಡಾ- ಉದ್ದಿಮೆಗಳಾಗಲೀ ಯಾವುದೂ ಇಲ್ಲ. ‘ಪ್ರಗತಿ’ ತರುವವರು ಅಭಿವೃದ್ಧಿಗೇ ಮಾರಕವಾದರು. ‘ಹಸಿದ ಹೊಟ್ಟೆಗೆ ಅನ್ನ ಬೇಕು, ಕಂಪ್ಯೂಟರ್ ಬೇಡ’ ಎಂದು ವಿರೋಧಿಸಿದ ಕಮ್ಯುನಿಸ್ಟ್ ನಾಯಕರ ಮಕ್ಕಳು ಇಂದು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ! ಪೊಳ್ಳುತನದ ಪರಾಕಾಷ್ಠೆ !
1925ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳೂ ಕೇರಳ ತಲುಪಿದ್ದು; ಕಮ್ಯೂನಿಸ್ಟ್ ವಿಚಾರಧಾರೆ ತಲಪಿದ ವೇಳೆಯಲ್ಲೇ. ಅದರೆ ಸದ್ದಿಲ್ಲದೆ, ಸಾರ್ವಜನಿಕವಾಗಿ ಮೌನಿಯಾಗಿಯೇ ಸಂಘದ ಚಟುವಟಿಕೆಗಳು ಕೇರಳದುದ್ದಕ್ಕೂ ವ್ಯಾಪಿಸಿತು. ಸಾವಿರಾರು ಯುವಕರು ಸಂಘ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯ ವಿಚಾರಗಳತ್ತ ಆಕರ್ಷಿತರಾದರು. ನಿಸ್ವಾರ್ಥ ಸಮಾಜಸೇವೆಗೆ ಮುಂದಾದರು. ಪರಿಣಾಮವಾಗಿ ಇಡೀ ಭಾರತದಲ್ಲೇ ಅತಿ ಹೆಚ್ಚು ಆರೆಸ್ಸೆಸ್ ಶಾಖೆ-ಚಟುವಟಿಕೆಗಳುಳ್ಳ ರಾಜ್ಯ ಎಂಬ ಮನ್ನಣೆಗೂ ಕೇರಳ ಪಾತ್ರವಾಯಿತು. ಆರೆಸ್ಸೆಸ್ ವಿಚಾರಧಾರೆ ಅಥವಾ ರಾಷ್ಟ್ರೀಯ ವಿಚಾರದ ದೃಷ್ಟಿಕೋನಗಳು ಕೇರಳದ ಶಿಕ್ಷಣ-ಸಾಮಾಜಿಕ- ಸಾಹಿತ್ಯ ಹಾಗೂ ಸಿನಿಮಾರಂಗದ ಮೇಲೂ ಪ್ರಭಾವ ಬೀರಿತು.
ಅಷ್ಟೇ ಅಲ್ಲ, ಅದಾಗಲೇ ಯುವಜನತೆಯನ್ನು ಆಕರ್ಷಿಸುವಲ್ಲಿ ಕಮ್ಯೂನಿಸ್ಟ್ ವಿಚಾರಧಾರೆ ವಿಫಲವಾಗುತ್ತಾ ಸಾಗಿತು. ಯೌವನದಲ್ಲಿ ಕಮ್ಯೂನಿಸ್ಟ್ ಆಗಿದ್ದ ಅನೇಕರು ಮದುವೆಯಾಗಿ ಮಕ್ಕಳಾದ ಮೇಲೆ, ಮಕ್ಕಳನ್ನು ಆರೆಸ್ಸೆಸ್ ಶಾಖೆಗಳಿಗೆ ಕಳುಹಿಸಿದ ಉದಾಹರಣೆಗಳೂ ನೂರಾರು.
ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರವಿರೋಧಿ ನೀತಿಗಳಿಂದ ಬೇಸತ್ತು ಕಮ್ಯೂನಿಸ್ಟ್ ಪಕ್ಷ ತೊರೆಯುವವರ ಸಂಖ್ಯೆ ಜಾಸ್ತಿಯಾಗುತ್ತಾ ಸಾಗಿತು. ಕೆಲವರು ಕಮ್ಯೂನಿಸ್ಟ್ ಪಕ್ಷದಿಂದ ಹೊರಬಂದು ಸುಮ್ಮನಿದ್ದರೆ, ಇನ್ನೂ ಅನೇಕರು ಆರೆಸ್ಸೆಸ್ನಲ್ಲಿ ಸಕ್ರಿಯರಾದರು. 1960ರ ದಶಕದಲ್ಲಿ ಕೇರಳದ ಅನೇಕ ಜಿಲ್ಲೆಗಳಲ್ಲಿ ಈ ರೀತಿ ಪ್ರವಾಹದ ಅಲೆ (craze) ಎದ್ದು ಕಾಣುತ್ತಿತ್ತು. ಈ ಬೆಳವಣಿಗೆ ಕಮ್ಯೂನಿಸ್ಟ್ ನಾಯಕರಿಗೆ ಮೈನಡುಕ ಹುಟ್ಟಿಸಿತು. ಕಮ್ಯೂನಿಸ್ಟ್ ನೇತಾಗಣ ಚಿಂತಿತವಾಯಿತು.
ರಕ್ತದೋಕುಳಿಗೆ ಮುನ್ನುಡಿ:
ತಮ್ಮ ಜೊತೆಯಿದ್ದ ಯುವಕರು ರಾಷ್ಟ್ರೀಯ ವಿಚಾರಧಾರೆಯತ್ತ ಒಲವು ತೋರಿಸಿ, ವಲಸೆ ಹೋಗುವುದನ್ನು ತಡೆಯಲು ಅವರು ಬಳಸಿದ್ದು ರಕ್ತಕ್ರೌರ್ಯದ ಮಾರ್ಗವನ್ನು. 1965ರ ಮಾರ್ಚ್ 18ರಂದು ಕೇರಳದ ಈ ರಕ್ತದೋಕುಳಿಗೆ ಮುನ್ನುಡಿ ಬರೆಯಲಾಯಿತು. ಮಲಪ್ಪುರಂ ಜಿಲ್ಲೆಯ ತಾಣೂರ್ ಎಂಬಲ್ಲಿ ಸುಬ್ರಮಣಿಯಮ್ ಎಂಬ 18 ವರ್ಷದ ತರುಣನ ಹತ್ಯೆಯೊಂದಿಗೆ ಕೇರಳದ ರಾಜಕೀಯ ಹಿಂಸಾಚಾರ ಪ್ರಾರಂಭವಾಯಿತು. ಮೊನ್ನೆ ಸೆಪ್ಟೆಂಬರ್ 3, 2016ರಂದು ಕಣ್ಣ್ಣೂರಿನ ಇರಿಟ್ಟಿ ಬಳಿಯ ಬಿನೀಶ್ ಎಂಬ ಯುವಕನ ಹತ್ಯೆಯ ತನಕ, ಈವರೆಗೆ ಇನ್ನೂರಕ್ಕೂ ಹೆಚ್ಚು ಆರೆಸ್ಸೆಸ್ ಸ್ವಯಂಸೇವಕರು ರಕ್ತಪಾತಕ್ಕೆ ಬಲಿಯಾಗಿದ್ದಾರೆ. ಹಿಂಸಾಚಾರ ನಡೆದಾಗಲೆಲ್ಲ ಅದನ್ನು ಖಂಡಿಸದೆ ಅದನ್ನು ‘ಅತ್ಯಂತ ಶ್ರೇಷ್ಠತಮ ಕಾರ್ಯ’ ಎಂಬಂತೆ ಬಿಂಬಿಸುವುದೂ ಕಮ್ಯೂನಿಸ್ಟರ ತಂತ್ರ. ಅನೇಕ ಕಮ್ಯೂನಿಸ್ಟ್ ನಾಯಕರು ಸಾರ್ವಜನಿಕವಾಗಿಯೇ ಕಮ್ಯೂನಿಸ್ಟ್ ಹಿಂಸಾಚಾರವನ್ನು ಒಪ್ಪಿಕೊಂಡಿದ್ದಾರೆ. ಅನೇಕ ಕೋರ್ಟ್ ಕೇಸುಗಳಲ್ಲಿ ನಾಯಕರುಗಳ ಅಪರಾಧಗಳು ಸಾಬೀತಾಗಿವೆ. ನೂರಾರು ಕಮ್ಯೂನಿಸ್ಟ್ ಕಾರ್ಯಕರ್ತರು ತಾವು ಮಾಡಿದ ಕೊಲೆ ಹಲ್ಲೆ ಕೃತ್ಯಗಳಿಗಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೆಲ್ಲವೂ ಸಾರ್ವಜನಿಕವಾಗಿ ತಿಳಿದಿರುವ ವಿಚಾರ. ಇದರಲ್ಲಿ ಯಾವ ಗುಟ್ಟೂ ಅಡಗಿಲ್ಲ. ಕೇರಳದ ಜನತೆಗೆ ಕಮ್ಯೂನಿಸ್ಟ್ ಹಿಂಸಾಚಾರ ಹೊಸತೇನೂ ಅಲ್ಲ ಎಂಬಂತಾಗಿದೆ. ಆದರೂ ಕಮ್ಯೂನಿಸ್ಟ್ ನಾಯಕರು ಈ ಕುರಿತು ಎಳ್ಳಷ್ಟೂ ಚಿಂತಿತರಾಗಿಲ್ಲ. ‘ಹಿಂಸೆ’ _ ಒಂದು ಸ್ವಾಭಾವಿಕ ಪ್ರಕ್ರಿಯೆ, ಎಂಬಂತೆ ಅವರ ಕಾರ್ಯವೈಖರಿ ಇದೆ. ಆದರೆ ಬಾಯಲ್ಲಿ ಮಾತ್ರ ಮಾನವತೆಯ ಮಾತು!
ವಿಶಾಲ್ ಕುಮಾರ್: ಎಬಿವಿಪಿಯ ಯುವ ಮುಂದಾಳು ವಿಶಾಲ್ ಕುಮಾರ್ ಎಂಬ ಯುವಕನನ್ನು 2012 ಜುಲೈ 17ರಂದು ಭೀಕರವಾಗಿ ಹತ್ಯೆ ಮಾಡಲಾಯಿತು. ಬಿ.ಎಸ್ಸಿ. ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದ ಈ ಪ್ರತಿಭಾವಂತ ಯುವಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಚೆಂಗನ್ನೂರು ತಾಲೂಕು ಅಧ್ಯಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಶಾರೀರಿಕ ಪ್ರಮುಖನಾಗಿ ಜವಾಬ್ದಾರಿ ಹೊಂದಿದ್ದ. ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದಂದು ಕಾಲೇಜಿನ ಪ್ರವೇಶ ದ್ವಾರದಲ್ಲಿ ಸರಸ್ವತಿಯ ಚಿತ್ರದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಎಂಬ ಕಾರಣಕ್ಕೆ ಆತನ ಹತ್ಯೆ ಮಾಡಲಾಯಿತು.
ಕೆ.ಟಿ. ಜಯಕೃಷ್ಣನ್ ಮಾಸ್ತರ್ : ಕೇರಳದ ಇತಿಹಾಸದಲ್ಲೇ ಅತಿ ಭಯಾನಕ ಹತ್ಯೆ ಎಂದರೆ ಕೆ.ಟಿ. ಜಯಕೃಷ್ಣನ್ ಮಾಸ್ತರ್ ಅವರದ್ದು. 1999ರ ಡಿಸೆಂಬರ್ 1 ರಂದು ಕಣ್ಣೂರಿನ ಪನೂರ್ ಬಳಿಯ ಕೂತುಪರಂಬು ಎಂಬಲ್ಲಿನ ಮೊಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು, ಎಂದಿನಂತೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ, ವಿದ್ಯಾರ್ಥಿಗಳ ಎದುರೇ ದಾರುಣವಾಗಿ ಹತ್ಯೆಗೀಡಾದವರು. ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಕೆ.ಟಿ.ಜಯಕೃಷ್ಣನ್ ಮಾಸ್ತರ್ ಭಾರತೀಯ ಜನತಾ ಯುವ ಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿ ಜವಾಬ್ದಾರಿ ಹೊಂದಿದ್ದರು.
ಎಳಂತೋಟತ್ತಿಲ್ ಮನೋಜ್ : ಎಳಂತೋಟತ್ತಿಲ್ ಮನೋಜ್ ಎಂಬ ಯುವನಾಯಕ ಕಣ್ಣೂರಿನ ಆರೆಸ್ಸೆಸ್ ಹುಡುಗರ ಅಚ್ಚುಮೆಚ್ಚಿನ ಯುವಕ. ಕಮ್ಯೂನಿಸ್ಟರ ನೆಲೆಬೀಡಾದ ಕಣ್ಣೂರಿನಲ್ಲಿ ಅನೇಕ ಕಮ್ಯೂನಿಸ್ಟ್ ಯುವಕರು ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸಂದರ್ಭ. ಇದಕ್ಕೆ ಕಾರಣ ಮನೋಜ್ರ ಅಪ್ರತಿಮ ಸ್ನೇಹಶೀಲ ವ್ಯಕ್ತಿತ್ವ. ಆದರೆ ಕಮ್ಯೂನಿಸ್ಟರ ರಕ್ತಕ್ರೌರ್ಯಕ್ಕೆ ಬಲಿಯಾದ ಮನೋಜ್ 2014ರ ಸೆಪ್ಟೆಂಬರ್ 1 ರಂದು ಕಣ್ಣೂರಿನ ಕದಿರೂರು ಎಂಬಲ್ಲಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಯಿತು.
ಸದಾನಂದನ್ ಮಾಸ್ತರ್ ರ ಹೋರಾಟಗಾಥೆ: ಸದಾನಂದನ್ ಮಾಸ್ತರ್ ಎಂಬವರ ಹೋರಾಟಗಾಥೆ ನಿಜಕ್ಕೂ ಮೈನವಿರೇಳಿಸುವಂತದ್ದು. ಒಂದೊಮ್ಮೆ ಕಣ್ಣೂರಿನ ಕಮ್ಯೂನಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದ ಸದಾನಂದನ್ ಮಾಸ್ತರ್ರಿಗೆ ಕ್ರಮೇಣ ಕಮ್ಯೂನಿಸ್ಟ್ ವಿಚಾರದ ಭಂಡತನದ ಅರಿವಾಯಿತು. ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸದಾನಂದನ್ ಮಾಸ್ತರ್ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಆರೆಸ್ಸೆಸ್ನ ಕಣ್ಣೂರು ಜಿಲ್ಲಾ ಸಹ ಕಾರ್ಯವಾಹ ಜವಾಬ್ದಾರಿ ವಹಿಸಿದರು. ‘ಭಾರತ್ ಮಾತಾ ಕೀ ಜೈ’ ಎಂಬ ಘೋ?ಣೆಗಳೊಂದಿಗೆ ಸಾವಿರಾರು ಯುವಕರಿಗೆ ಪ್ರೇರಣೆಯಾಗಿದ್ದರು. ಇದನ್ನು ಸಹಿಸದ ಕಮ್ಯೂನಿಸ್ಟ್ ನಾಯಕರು ಸದಾನಂದನ್ ಮಾಸ್ತರ್ರ ಹತ್ಯೆಗೆ ಸಂಚು ರೂಪಿಸಿದರು. ಭೀಕರ ಆಕ್ರಮಣದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡರು. ಎರಡೂ ಕಾಲುಗಳು ಕತ್ತರಿಸಲ್ಪಟ್ಟಿದ್ದರೂ, ಈಗ 60ರ ಹರೆಯದ ಸದಾನಂದನ್ ಮಾಸ್ತರ್ ಕಮ್ಯೂನಿಸ್ಟರ ವಿರುದ್ಧ ಹೋರಾಡುತ್ತಿದ್ದಾರೆ.
ಕಮ್ಯೂನಿಸ್ಟ್ ಹತ್ಯಾಕಾಂಡದ ಕುರಿತು ದಿವ್ಯಮೌನ:
ಕಮ್ಯೂನಿಸ್ಟ್ ವಿಚಾರಧಾರೆಯನ್ನು ಬೆಂಬಲಿಸುವ ಅನೇಕ ಎಡಪಂಥೀಯ ವಿಚಾರವಾದಿಗಳು, ಬುದ್ಧಿಜೀವಿಗಳು ಕೇರಳದಲ್ಲಿ ನಡೆಯುತ್ತಿರುವ ಈ ಘೋರ ಹತ್ಯಾಕಾಂಡದ ಕುರಿತು ದಿವ್ಯಮೌನ ವಹಿಸುತ್ತಾರೆ. ಗಿರೀಶ್ ಕಾರ್ನಾಡ್, ಅಗ್ನಿ ಶ್ರೀಧರ್, ಜಿ.ಟಿ. ಗೋವಿಂದರಾವ್ ಸೇರಿದಂತೆ ಕರ್ನಾಟಕ ಅನೇಕ ಎಡಪಂಥೀಯ ವಿಚಾರಧಾರೆಯ ಐಕಾನ್ಗಳು ’ಜಾಣಕುರುಡು’ ನಟಿಸುತ್ತಿದ್ದಾರೆ. ಮಾತೆತ್ತಿದರೆ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಮಾತನಾಡುವ, ಈ ಬುದ್ಧಿಜೀವಿಗಳು ನಮ್ಮ ಪಕ್ಕದ ಕೇರಳದಲ್ಲಿನ ಕಮ್ಯೂನಿಸ್ಟ್ ರಕ್ತಪಾತದ ಕೃತ್ಯಗಳ ಕುರಿತು ಎಳ್ಳಷ್ಟೂ ಮಾತನಾಡಲಾರರು. ಹಿಂಸೆಯನ್ನು ನಿಲ್ಲಿಸುವುದಕ್ಕಾಗಿ ಜಲ್ಲಿಕಟ್ಟು ಇತ್ಯಾದಿ ರೈತರ ಪಾರಂಪರಿಕ ಆಚರಣೆಗಳನ್ನು ನಿಷೇಧಿಸಿ ಎಂದು ಬೊಬ್ಬೆಹಾಕುವ ಈ ಬುದ್ಧಿಜೀವಿಗಳು ಕೇರಳದ ಅಮಾಯಕ ರಾಷ್ಟ್ರೀಯವಾದಿ ಕಾರ್ಯಕರ್ತರ ಭೀಕರ ಹತ್ಯಾಕಾಂಡದ ಕುರಿತು ಬಾಯಿ ತೆರೆಯುವುದೇ ಇಲ್ಲ. ’ಕ್ರೌರ್ಯವೇ ನಮ್ಮ ದಾರಿ’ ಎಂದು ಒಪ್ಪಲೂ ಸಿದ್ಧರಿಲ್ಲ; ಕ್ರೌರ್ಯವನ್ನು ನಿಲ್ಲಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಹೇಳಲೂ ತಯಾರಿಲ್ಲ. ಕ್ರೌರ್ಯವನ್ನು ಖಂಡಿಸಲೂ ಮನಸ್ಸು ಒಪ್ಪದು; ಆದರೂ ಸದಾ ’ಮಾನವತೆ’ಯ ಮಹಾಸಂದೇಶದ ಮಂತ್ರ ಬಾಯಲ್ಲಿ! ಇದು ಕಮ್ಯೂನಿಸ್ಟ್ ಎಡಬಿಡಂಗಿತನಕ್ಕೆ ಉದಾಹರಣೆ.
ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರಮೋದಿಯವರು ಈ ಕಮ್ಯೂನಿಸ್ಟ್ ಕ್ರೌರ್ಯಕ್ಕೆ ಬಲಿಯಾದ ಬಲಿದಾನಿಗಳ ಚಿತ್ರ ಸಹಿತ ವಿವರಗಳುಳ್ಳ ‘ಆಹುತಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಕಮ್ಯೂನಿಸ್ಟ್ ಪಕ್ಷ ನಡೆಸಿರುವ ಹಿಂಸಾಚಟುವಟಿಕೆಗಳ ಕುರಿತು ಸತ್ಯವನ್ನು ಹೊರತಂದು ಕಮ್ಯೂನಿಸ್ಟ್ರ ಅಸಲಿ ಮುಖವಾಡವನ್ನು ಸಮಾಜಕ್ಕೆ ತೋರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.