ಪಾಕಿಸ್ಥಾನ ಕುರಿತು ಚರ್ಚೆಯಾದಾಗಲೆಲ್ಲ ಸಾಧಾರಣವಾಗಿ ಉಗ್ರಗಾಮಿಗಳು, ಭಾರತದಲ್ಲಿ ಅವರ ಷಡ್ಯಂತ್ರ ಇತ್ಯಾದಿ ಕುರಿತೇ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಪಾಕ್ ಕುರಿತು ಚರ್ಚೆ ಶುರುವಿಟ್ಟುಕೊಂಡಾಗ ಅಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವುದು ಬಲೂಚಿಸ್ಥಾನದ ಕುರಿತು. ಬಲೂಚಿಸ್ತಾನ ಈಗ ಪಾಕಿಸ್ತಾನದ ಪಾಲಿಗೆ ಮಗ್ಗುಲಮುಳ್ಳಾಗಿದೆ ಎಂದರೆ ಅತಿಶಯೋಕ್ತಿಯಲ್ಲ. 1947 ರಲ್ಲಿ ಪಾಕಿಸ್ತಾನ ದೇಶದ ರಚನೆಯಾದಾಗ ಬಲೂಚಿಸ್ಥಾನವನ್ನು ಅದರೊಳಗೆ ಬಲವಂತವಾಗಿ ಸೇರ್ಪಡೆಗೊಳಿಸಲಾಗಿತ್ತು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಬಲೂಚಿ ಜನರು ಅಂದಿನಿಂದಲೇ ತಮ್ಮ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಬಲೂಚಿಸ್ಥಾನವೆಂದರೆ ಪಾಕಿಸ್ಥಾನವಲ್ಲ (Balochistan is not Pakistan) ಎಂಬ ಘೋಷಣೆ ಸ್ವತಂತ್ರ ಬಲೂಚಿಸ್ತಾನ ಆಂದೋಳನದ ಕಾರ್ಯಕರ್ತರ ಬಾಯಿಂದ ಹೊರಹೊಮ್ಮಿದೆ. ಪಾಕಿಸ್ಥಾನಕ್ಕೆ ತಲೆನೋವಾಗಿರುವ ಸಂಗತಿ ಕೂಡ ಇದೇ. ಇದು ಸಾಲದೆಂಬಂತೆ ಈಚೆಗೆ ಪ್ರಧಾನಿ ಮೋದಿ ’ಬಲೂಚಿಸ್ಥಾನದಲ್ಲಿ ನಿಮ್ಮ ಶೋಷಣೆಯನ್ನು ಮೊದಲು ನಿಲ್ಲಿಸಿ, ಅನಂತರ ಭಾರತದ ಉಸಾಬರಿಗೆ ಬನ್ನಿ ’ ಎಂಬರ್ಥದ ಎಚ್ಚರಿಕೆಯನ್ನು ಪಾಕ್ ಪ್ರಧಾನಿಗೆ ರವಾನಿಸಿದಾಗ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಬಲೂಚಿಸ್ಥಾನದ ಪ್ರಜೆಗಳಂತೂ ಮೋದಿಯ ಈ ಹೇಳಿಕೆಯನ್ನು ಬಲು ಹರ್ಷದಿಂದ ಸ್ವಾಗತಿಸಿದ್ದಾರೆ. ಅವರೆಲ್ಲ ಈಗ ಮೋದಿಯನ್ನು ಒಬ್ಬ ಆಪತ್ಬಾಂಧವನಂತೆ ಕಾಣುತ್ತಿದ್ದಾರೆ.
ಪಾಕಿಸ್ತಾನದ ಪಾಲಿಗೆ ಬಲೂಚಿಸ್ತಾನ ಪ್ರದೇಶ ಆರ್ಥಿಕ, ರಾಜಕೀಯ, ಭೌಗೋಳಿಕ ಹಾಗೂ ವ್ಯೂಹಾತ್ಮಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಅತ್ಯಂತ ವಿಶಾಲ ಪ್ರದೇಶ ಒಳಗೊಂಡಿರುವ ಬಲೂಚಿಸ್ತಾನ ಇರಾನ್ನ ಸಿಸ್ಟಾನ್, ದಕ್ಷಿಣ ಆಫ್ಘಾನಿಸ್ಥಾನದ ಕಾಂದಹಾರ್ ಹೆಲ್ಮಂಡ್ ಮತ್ತು ನಿಮೃಜ್ ಪ್ರದೇಶಗಳನ್ನು ಗಡಿಯಾಗಿ ಹೊಂದಿದೆ. ಪ್ರಸ್ತುತ ಪಾಕ್ ಆಕ್ರಮಿತ ಬಲೂಚಿಸ್ತಾನವು ಪಾಕಿಸ್ತಾನದ ಒಟ್ಟು ಪ್ರದೇಶದ ಶೇ.44 ಭಾಗವಾಗಿದೆ. ಬಲೂಚಿಸ್ತಾನದ ಜನಸಂಖ್ಯೆ 13.1 ದಶಲಕ್ಷ. ಇದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ.5ರಷ್ಟು.
ಬಲೂಚಿಸ್ತಾನದಲ್ಲಿ ದೊರಕುವ ಪ್ರಾಕೃತಿಕ ಸಂಪನ್ಮೂಲಗಳು ಅತ್ಯಂತ ವಿಪುಲ. ಆದರೆ ಇಷ್ಟೊಂದು ವಿಪುಲ ಸಂಪತ್ತಿದ್ದರೂ ಬಲೂಚಿಸ್ತಾನ ಬಡತನದ ರೇಖೆಯಿಂದ ಮೇಲೆದ್ದು ನಿಂತಿಲ್ಲದಿರುವುದಕ್ಕೆ ಪಾಕಿಸ್ತಾನದ ಮಲತಾಯಿ ಧೋರಣೆಯೇ ಕಾರಣ. ಆರ್ಥಿಕವಾಗಿ ಬಲೂಚಿಸ್ತಾನ ಬಹಳಷ್ಟು ಹಿಂದುಳಿದಿರುವುದಕ್ಕೆ ಪಾಕ್ ಸರ್ಕಾರದ ತಾರತಮ್ಯ ನೀತಿಯೇ ಕಾರಣ ಎಂಬುದು ಹಗಲಿನಷ್ಟು ಸ್ಪಷ್ಟ. ಮುಖ್ಯವಾಗಿ ಬಲೂಚಿಸ್ತಾನ ಸಾಕಷ್ಟು ತೈಲ ಸಂಪನ್ಮೂಲ ಹೊಂದಿದೆ. ನೈಸರ್ಗಿಕ ಅನಿಲ ಪಾಕಿಸ್ತಾನದ ಎರಡನೇ ಅತಿದೊಡ್ಡ ಇಂಧನ ಮೂಲವಾಗಿರುವುದಕ್ಕೆ ಬಲೂಚಿಸ್ತಾನ ಕೊಡುಗೆ ಅಪಾರ. 1952ರಲ್ಲಿ ಬಲೂಚಿಸ್ತಾನದ ಸುಯಿ ನಗರದಲ್ಲಿ ಮೊದಲ ಬಾರಿಗೆ ನೈಸರ್ಗಿಕ ಅನಿಲವನ್ನು ಸಂಶೋಧಿಸಲಾಯಿತು. ಇದೀಗ ಪಾಕಿಸ್ತಾನದ ಅತಿದೊಡ್ಡ ಅನಿಲ ಉತ್ಪಾದನಾ ಕೇಂದ್ರ ಅದಾಗಿದೆ. ಅಲ್ಲಿ ದೊರಕುವ ಅನಿಲದ ಪ್ರಮಾಣ ಅಂದಾಜು 2 ಟ್ರಿಲಿಯನ್ ಘನ ಅಡಿಯಷ್ಟು. ಬಲೂಚಿಸ್ತಾನದ ಇನ್ನೂ ಹಲವೆಡೆ ನೈಸರ್ಗಿಕ ಅನಿಲದ ಮೂಲಗಳಿದ್ದು , ಅಲ್ಲೆಲ್ಲ ಅವ್ಯಾಹತವಾಗಿ ನೈಸರ್ಗಿಕ ಅನಿಲವನ್ನು ಹೊರತೆಗೆಯಲಾಗುತ್ತಿದೆ. ಆದರೆ ಬಲೂಚಿ ನಿವಾಸಿಗಳಿಗೆ ಈ ನೈಸರ್ಗಿಕ ಅನಿಲದ ಬಳಕೆಯ ಭಾಗ್ಯ ಬಹಳ ಕಡಿಮೆ.
ಕೇವಲ ನೈಸರ್ಗಿಕ ಅನಿಲ ಮಾತ್ರವಲ್ಲ, ಬಲೂಚಿಸ್ತಾನದಲ್ಲೂ ಸುಮಾರು 39 ಖನಿಜಗಳು ದೊರಕುತ್ತವೆ. ಹಾಗೆಂದು ವಿಶ್ವ ಬ್ಯಾಂಕ್ 2008ರಲ್ಲಿ ಪ್ರಕಟಿಸಿದ ವರದಿ ಹೇಳುತ್ತದೆ. 2012ರ ಪಾಕಿಸ್ತಾನದ ಭೌಗೋಳಿಕ ಸಮೀಕ್ಷೆಯ ಪ್ರಕಾರ ಕಲ್ಲಿದ್ದಲು, ನೈಸರ್ಗಿಕ ಅನಿಲ, ಚಿನ್ನ, ತಾಮ್ರ, ಯುರೇನಿಯಂ, ಕಬ್ಬಿಣ, ಸೀಸ, ಕ್ರೋಮೈಟ್ಸ್, ಸುಣ್ಣದ ಕಲ್ಲು ಇತ್ಯಾದಿ ಖನಿಜಗಳು ಹೇರಳವಾಗಿ ಅಲ್ಲಿ ದೊರಕುತ್ತವೆ ಎಂದು ಹೇಳಲಾಗಿದೆ.
ಬಲೂಚಿಸ್ತಾನದ ಕರಾವಳಿ ಪ್ರದೇಶ ಕೂಡ ಪಾಕಿಸ್ತಾನದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಾಕಿಸ್ತಾನದ ಒಟ್ಟು 1045 ಕಿ.ಮೀ. ಕರಾವಳಿ ಪ್ರದೇಶದಲ್ಲಿ ಶೇ. 75 ರಷ್ಟು ಭಾಗ ಬಲೂಚಿಸ್ತಾನದಲ್ಲೇ ಇದೆ. ಸುಮಾರು 200 ನಾಟಿಕಲ್ ಮೈಲಿಯಷ್ಟು ಪ್ರದೇಶದಲ್ಲಿ ನೈಸರ್ಗಿಕ ಅನಿಲದ ಸಂಪನ್ಮೂಲಗಳಿವೆ. ಬಲೂಚಿಸ್ತಾನದ ಮುಖ್ಯ ಬಂದರು ಗ್ವದಾರ್. ಅದು ಚೈನಾ – ಪಾಕಿಸ್ತಾನ ಆರ್ಥಿಕ ವಲಯದ ಬಹುಮುಖ್ಯ ಪ್ರದೇಶವಾಗಿದೆ. ಇರಾನಿನ ಹರ್ಮಜ್ ಪ್ರದೇಶದಿಂದ ಇದು ಕೇವಲ 400 ಕಿ.ಮೀ. ಅಂತರದಲ್ಲಿದ್ದು ತೈಲ ವ್ಯವಹಾರದ ಬಹುಮುಖ್ಯ ಕೇಂದ್ರ ಇದಾಗಿದೆ.
ಬಲೂಚಿಸ್ತಾನ ಇಷ್ಟೆಲ್ಲ ಸಂಪದ್ಭರಿತ ಪ್ರದೇಶವಾಗಿದ್ದರೂ ಅಲ್ಲಿನ ಆರ್ಥಿಕ ಬೆಳವಣಿಗೆ ತೀರಾ ಕುಂಠಿತ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ , 1972 ರಿಂದ 2009 ರವರೆಗಿನ ಬಲೂಚಿಸ್ತಾನದ ಆರ್ಥಿಕ ಪ್ರಗತಿ ಕೇವಲ ಶೇ. 2.7 ರಷ್ಟು. ಇದಕ್ಕೆ ಕಾರಣ ಪಾಕಿಸ್ತಾನ ಸರ್ಕಾರದ ತಾರತಮ್ಯ ನೀತಿ. ಬಲೂಚಿಸ್ತಾನದಿಂದ ಹೇರಳವಾಗಿ ಸಿಗುವ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡು, ಬಲೂಚಿಸ್ತಾನವನ್ನು ಬಡತನದಲ್ಲೇ ಬೇಯುವಂತೆ ಮಾಡಲಾಗಿದೆ. ಸಿಂಧ್ ಹೊರತು ಪಡಿಸಿದರೆ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಅನಿಲ ಉತ್ಪಾದನೆಯಾಗುವ ಪ್ರದೇಶ ಬಲೂಚಿಸ್ತಾನ. ಬಲೂಚಿಸ್ತಾನದ ಪ್ರಮುಖ ನಗರಗಳಾದ ಕ್ವೆಟ್ಟಾ ಮತ್ತು ಗ್ವದಾರ್ಗಳಲ್ಲಿ ಪ್ರತಿನಿತ್ಯ 15 ರಿಂದ 20 ಗಂಟೆಗಳ ಕಾಲ ವಿದ್ಯುತ್ ನಿಲುಗಡೆ ಸಾಮಾನ್ಯ ದೃಶ್ಯವಾಗಿದೆ. ಇದಲ್ಲದೆ, ಬಲೂಚಿಸ್ತಾನದಲ್ಲಿ ಅನಿಲದ ಬೆಲೆ ತೀರಾ ದುಬಾರಿ, ಆದರೆ ಪಾಕಿಸ್ತಾನದ ಉಳಿದೆಡೆ ಅನಿಲದ ಬೆಲೆ ಅಗ್ಗವಾಗಿದೆ. ಬಲೂಚಿಸ್ತಾನವನ್ನು ಪಾಕ್ ಸರ್ಕಾರ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಇವೆಲ್ಲ ಕೆಲವು ನಿದರ್ಶನಗಳು.
ಪಾಕಿಸ್ತಾನದ ಈ ತಾರತಮ್ಯ ನೀತಿಯ ವಿರುದ್ಧ 1947 ರಿಂದಲೂ ಬಲೂಚಿ ಪ್ರಜೆಗಳು ಹೋರಾಡುತ್ತಲೇ ಬಂದಿದ್ದಾರೆ. ಪಾಕ್ ಪ್ರಜೆಗಳೆಂದು ಹೇಳಿಕೊಳ್ಳಲು ಅವರಿಗೆ ಸುತರಾಂ ಇಷ್ಟವಿಲ್ಲ. ಹಾಗೆಂದೇ ಬಲೂಚಿಸ್ತಾನವೆಂದರೆ ಪಾಕಿಸ್ತಾನವಲ್ಲ ಎಂದು ಅಲ್ಲಿನ ಪ್ರಜೆಗಳು ಆಗಾಗ ನಡೆಯುವ ಆಂದೋಳನದ ಸಂದರ್ಭದಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳುತ್ತಲೇ ಬಂದಿದ್ದಾರೆ.
ಬಲೂಚಿಸ್ತಾನದ ಪ್ರಜೆಗಳ ತಾಳ್ಮೆಯ ಕಟ್ಟೆ ಈಗ ಒಡೆದು ಹೋಗುವ ಸ್ಥಿತಿಗೆ ತಲುಪಿದೆ. ಒಂದು ವೇಳೆ ಬಲೂಚಿಸ್ತಾನ ಸ್ವತಂತ್ರಗೊಂಡರೆ ಪಾಕಿಸ್ತಾನ ಆರ್ಥಿಕವಾಗಿ ಹಾಗೂ ವ್ಯೂಹಾತ್ಮಕವಾಗಿ ತಳಕಚ್ಚುವುದು ಖಚಿತ. ಪಾಕಿಸ್ತಾನಕ್ಕೆ ಈಗಾಗಲೇ ಇಂಧನ ಕೊರತೆಯ ಸಮಸ್ಯೆ ಕಾಡುತ್ತಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಅದರ ಬಳಿಯಲ್ಲಿಲ್ಲ. ಗ್ವದಾರ್ನಂತಹ ಪ್ರಮುಖ ಬಂದರು ಪ್ರದೇಶ ಕೈಬಿಟ್ಟು ಹೋದರೆ, ಚೀನಾ ಕೂಡ ಪಾಕಿಸ್ತಾನವನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ. ಈಗ ಚೀನಾ ಪಾಕ್ಪರ ಒಲವು ತೋರುತ್ತಿರುವುದು ಗ್ವದಾರ್ ಪಾಕಿಸ್ತಾನದ ವಶದಲ್ಲಿದೆ ಎಂಬ ಕಾರಣಕ್ಕಾಗಿ. ಬಲೂಚಿಸ್ತಾನ ಪಾಕ್ನಿಂದ ಪ್ರತ್ಯೇಕಗೊಂಡರೆ ಇರಾನ್ ಮತ್ತು ಅಫ್ಘಾನಿಸ್ತಾನದ ಜೊತೆಗಿನ ಅದರ ಸಂಬಂಧಗಳು ಹಳಸಿಹೋಗುವುದು ನಿಶ್ಚಿತ. ಪರಿಣಾಮವಾಗಿ ದಕ್ಷಿಣ ಏಷ್ಯಾ ವಲಯದಲ್ಲಿ ಪಾಕಿಸ್ತಾನದ ಪ್ರಾಮುಖ್ಯತೆಗೇ ಧಕ್ಕೆ ಒದಗುತ್ತದೆ.
ಬಲೂಚಿಸ್ತಾನದ ಸಮಸ್ಯೆಯ ಜೊತೆಗೆ ಪಾಕಿಸ್ತಾನಕ್ಕೆ ಸಿಂಧ್ ಸಮಸ್ಯೆ ಕೂಡ ದೊಡ್ಡ ತಲೆನೋವಾಗಿದೆ. ಸಿಂಧ್ ಪ್ರಾಂತ ಈಗ ಪಾಕಿಸ್ತಾನದಿಂದ ಪ್ರತ್ಯೇಕಗೊಳ್ಳಲು ಹವಣಿಸುತ್ತಿದೆ. ಇದರ ಅಂಗವಾಗಿ ಸಾಕಷ್ಟು ಪ್ರತಿಭಟನಾ ಮೆರವಣಿಗೆಗಳು ಸಿಂಧ್ ಪ್ರಾಂತದಲ್ಲಿ ನಡೆದಿವೆ. ಒಂದೆಡೆ ಬಲೂಚಿ ಪ್ರಜೆಗಳ ಚಳವಳಿ, ಇನ್ನೊಂದೆಡೆ ಸಿಂಧ್ ಪ್ರಜೆಗಳ ಆಕ್ರೋಶ – ಈ ಪ್ರತಿಭಟನೆಗಳ ಬೆಂಕಿಯಲ್ಲಿ ಪಾಕ್ ಸರ್ಕಾರ ಬೆಂದುಹೋಗಿ, ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಇದಕ್ಕೂ ಮೊದಲು ಬಂಗ್ಲಾದೇಶ ಕೈಬಿಟ್ಟು ಹೋಗಿದ್ದನ್ನು ಈಗಲೂ ಜೀರ್ಣಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಇನ್ನು ಬಲೂಚಿಸ್ತಾನ, ಸಿಂಧ್ ಸಿಡಿದೆದ್ದರೆ ಆಗ ಪಾಕಿಸ್ತಾನದ ಬೆನ್ನುಮೂಳೆಯೇ ಮುರಿದುಹೋಗಿ ಅದರ ಅಸ್ತಿತ್ವವೇ ಇಲ್ಲದಂತಾಗಿ ಪಾಕಿಸ್ತಾನವೆಂಬ ದೇಶ ಜಗತ್ತಿನ ಭೂಪಟದಿಂದ ಶಾಶ್ವತವಾಗಿ ಕಾಣೆಯಾಗಿ ಬಿಡಬಹುದು !
ಇಷ್ಟೆಲ್ಲ ಘನಘೋರ ಸಮಸ್ಯೆಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿದ್ದರೂ ಅವುಗಳನ್ನು ಪರಿಹರಿಸುವ ಗೋಜಿಗೆ ಹೋಗದ ಪಾಕಿಸ್ತಾನ ನೆರೆಯ ಭಾರತದ ವಿರುದ್ಧ ಪದೇಪದೇ ಕಾಲುಕೆರೆದು ಜಗಳ ತೆಗೆಯುತ್ತಿರುವುದು, ಉಗ್ರರನ್ನು ಭಾರತದ ಗಡಿಯೊಳಗೆ ನುಗ್ಗಿಸುತ್ತಿರುವುದು, ಶಾಂತಿಯ ಮಾತುಕತೆಯ ನಾಟಕವಾಡುತ್ತಲೇ ಯುದ್ಧದ ಸನ್ನಿವೇಶ ಸೃಷ್ಟಿಸುತ್ತಿರುವುದು ಅತ್ಯಂತ ವಿಪರ್ಯಾಸ ಹಾಗೂ ಅವಿವೇಕದ ಪರಮಾವ. ಪಾಕಿಸ್ತಾನಕ್ಕೆ ಖಂಡಿತ ವಿವೇಕ ಇಲ್ಲ ಎನ್ನುವುದಕ್ಕೆ ಈ ನಿದರ್ಶನಗಳು ಸಾಲದೆ ? ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನಕ್ಕೆ ಭಾರತ ಬಹಿಷ್ಕಾರ ಹಾಕುತ್ತಿದ್ದಂತೆಯೇ ಅಫ್ಘಾನಿಸ್ತಾನ, ಬಂಗ್ಲಾದೇಶ, ಶ್ರೀಲಂಕಾ, ನೇಪಾಳ, ಚೀನಾ ದೇಶಗಳು ಭಾರತದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ ನಡೆ ಪಾಕಿಸ್ತಾನದ ಪಾಲಿಗೆ ಬಹುದೊಡ್ಡ ಸಿಡಿಲಾಘಾತವಾಗಬೇಕಿತ್ತು. ಆದರೆ ಅದು ತನಗೇನೂ ಆಗಿಯೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಶೋಚನೀಯ. ಪಾಕಿಸ್ತಾನ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಲಿದೆ. ಪಾಕಿಸ್ತಾನ ನೀರೆರೆದು ಪಾಲಿಸಿ, ಪೋಷಿಸುತ್ತಿರುವ ಉಗ್ರರೇ ಆ ಗೋರಿಯನ್ನು ನಿರ್ಮಿಸಲಿದ್ದಾರೆ !
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.