ಎಲ್ಲಿಂದ ಶಸ್ತ್ರ ತೂರಿ ಬಂತೋ ಅಲ್ಲೇ ನುಗ್ಗಿ ಬಗ್ಗುಬಡಿಯುವುದು!
ಈ ಹೇಳಿಕೆ ಮಾತನಾಡಲೇನೋ ಸುಲಭ. ಆದರೆ ಆಚರಣೆ ಬಹಳ ಕಷ್ಟ.
ಆದರೆ ಭಾರತ ಇದನ್ನು ಮಾಡಿ ತೋರಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಕೇವಲ ಹದಿನೆಂಟು ದಿನಗಳಲ್ಲೇ ತಿರುಗೇಟು ನೀಡಿದ್ದಾರೆ. ಭಾರತೀಯರನ್ನು ಕೊಂದು ಪರಮಸ್ವರ್ಗವೇರುವ ಕನಸಲ್ಲಿ ವಿಹರಿಸುತ್ತಿದ್ದ ಪಾಕಿಸ್ಥಾನ ಉಗ್ರಗಾಮಿಗಳ ನೆಲೆಯನ್ನು ಬುಧವಾರ ನಸುಕಿನ ವೇಳೆಗೆ ಭಾರತೀಯ ಸೇನೆ ಪಾಕ್ ನೆಲಕ್ಕೆ ನುಗ್ಗಿ ಹೊಸಕಿ ಹಾಕಿದೆ. ಮೇಲ್ನೋಟಕ್ಕೆ ಯುದ್ಧೋನ್ಮಾದಲ್ಲಿ ಭಾರತ ಇದೆ ಎಂದು ಭಾವಿಸಬಹುದು. ಆದರೆ ಅದು ಹಾಗಲ್ಲ, ಹಿಂದಿನಿಂದ ತಿವಿಯುವ ಪಾಕಿಸ್ಥಾನದ ರಣಹೇಡಿ ಪಾಕಿಸ್ಥಾನದ ಕುಟಿಲ ನೀತಿಗೆ ಮುನ್ನುಗ್ಗಿಯೇ ಭಾರತ ಪಾಠ ಕಲಿಸಿದೆ ಎನ್ನಬಹುದು.
ಇದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆಗೆ ಭಾರತಕ್ಕೆ ಭಾರತವೇ ಹ್ಯಾಟ್ಸಾಫ್ ಎನ್ನುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಮೋದಿ ನಡೆ ಕುರಿತು ಪ್ರಶಂಸೆಯ ಸುರಿಮಳೆಯೇ ಬರುತ್ತಿದೆ. ಭಾರತೀಯ ಸೈನಿಕರ ಬೆಂಬಲಿಸಿ ಸಾವಿರಾರು ಪೋಸ್ಟ್ಗಳು ಫೇಸ್ಬುಕ್ನಲ್ಲಿ ಲಗತ್ತಿಸಿಯಾಗಿದೆ.
ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿಯಲ್ಲಿದ್ದ ಸೇನಾನೆಲೆಯ ಮೇಲೆ ಉಗ್ರರು ದಾಳಿ ನಡೆಸಿ ನಿರ್ದಯವಾಗಿ ಹದಿನೆಂಟು ಸೈನಿಕರ ಹತ್ಯೆ ನಡೆಸಿದಾಗ ಇಡೀ ದೇಶವೇ ಆಕ್ರೋಶಗೊಂಡಿತ್ತು. ಈ ಸಂದರ್ಭ ದೇಶದ ಜನತೆಯಷ್ಟೇ ಅಲ್ಲ, ಜಗತ್ತೇ ಮೋದಿಯವರ ಮುಂದಿನ ನಡೆ ಏನು ಎಂಬುದನ್ನು ಕುತೂಹಲದಿಂದ ಕಾಯುತ್ತಿತ್ತು.
ಅದಾದ ಬಳಿಕ ಒಂದೊಂದಾಗಿ ಪ್ರತಿಕ್ಷಣವೂ ಎರಡೂ ದೇಶಗಳ ರಾಜತಾಂತ್ರಿಕ ನಡೆ ಚುರುಕುಗೊಳ್ಳಲಾರಂಭಿದವು.
ಪ್ರತಿ ದಿನವೂ ಭಾರತ ಚಾಣಾಕ್ಷ ಹೆಜ್ಜೆಯನ್ನೇ ಹಾಕಲು ಆರಂಭಿಸಿತು. ಪ್ರತಿಯೊಂದು ಹೆಜ್ಜೆಯಲ್ಲೂ ಪಾಕಿಸ್ಥಾನವನ್ನು ಹಣಿಯಲು ಬಲೆ ಹೆಣೆಯಿತು. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಕಾಶ್ಮೀರ ಪ್ರಶ್ನೆ ಎತ್ತಿದಾಗ ತಕ್ಕ ಉತ್ತರವನ್ನೇ ಕೊಟ್ಟು ಬಾಯ್ಮುಚ್ಚುವಂತೆ ಮಾಡಿದ್ದು ಪ್ರಥಮ ರಾಜತಾಂತ್ರಿಕ ಗೆಲುವಾಗಿತ್ತು.
ಪಾಕಿಸ್ಥಾನ ಮತ್ತೆ ಮತ್ತೆ ಕಾಶ್ಮೀರ ಪ್ರಶ್ನೆ ಎತ್ತದಂತೆ ಬಲೂಚಿಸ್ಥಾನದ ಜನರ ಮೇಲೆ ಸಹಾನುಭೂತಿ ತೋರಿಸುವ ಮೂಲಕ ಭಾರತ ಜಾಣ್ಮೆಯ ನಡೆಯನ್ನು ಪ್ರದರ್ಶಿಸಿತು. ಕೇರಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲೂ ನರೇಂದ್ರ ಮೋದಿ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ, ಆದರೆ ಪಾಕಿಸ್ಥಾನದ ಜನರೇ ಒಮ್ಮೆ ಯೋಚಿಸಿ, ಬಡತನ ನಿರ್ಮೂಲನ ಮಾಡುವ ಯುದ್ಧ ಮಾಡೋಣ ಎಂದು ಭಾವನಾತ್ಮಕವಾಗಿ ಹಾಗೂ ಅಷ್ಟೇ ಕಠಿಣವಾದ ಸಂದೇಶವನ್ನು ನೀಡಿದಾಗ ಭಾರತದ ನಡೆ ಏನೆಂಬುದು ಪಾಕಿಸ್ಥಾನಕ್ಕೆ ಸ್ಪಲ್ಪವಾದರೂ ಅರ್ಥವಾಗಬೇಕಿತ್ತು.
ಆದರೆ ಹಾಗಾಗಲಿಲ್ಲ. ಪಾಕಿಸ್ಥಾನ ಮತ್ತದೇ ರಣಹೇಡಿಗಳು ಮಾಡುವ ಕೆಲಸ ಮಾಡತೊಡಗಿತು. ಮತ್ತೆ ಮತ್ತೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂತು. ಭಾರತವು ಉರಿ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡ ಇರುವುದನ್ನು ಸಾಬೀತುಪಡಿಸಿದಾಗ ಪಾಕಿಸ್ಥಾನ ತನ್ನ ಗಡಿ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಗೊಳಿಸುತ್ತಿತ್ತು!
ಭಾರತವೇನಾದರೂ ಪಾಕಿಸ್ಥಾನದ ಮೇಲೆ ಯುದ್ಧ ಸಾರಿದರೆ, ನಮ್ಮಲ್ಲಿರುವ ಅಣ್ವಸ್ತ್ರಗಳನ್ನು ಬಳಸಿ ಆ ದೇಶವನ್ನು ನಿರ್ನಾಮ ಮಾಡಿಬಿಡುತ್ತೇವೆ ಎಂದು ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದಾಗ ಇಡೀ ದೇಶವನ್ನೇ ಸುಟ್ಟು ಬೂದಿ ಮಾಡುವಂಥ ಸಿಟ್ಟು ಭಾರತದ ಪ್ರಜೆಗಳಿಗೆ ಮೂಡಿದ್ದು ಸುಳ್ಳಲ್ಲ.
ಶೋಕೇಸ್ನಲ್ಲಿ ಇಡುವ ಸಲುವಾಗಿ ನಾವು ಅಣ್ವಸ್ತ್ರ ತಯಾರಿಸಿಲ್ಲ. ಭಾರತವೇನಾದರೂ ನಮ್ಮ ಮೇಲೆ ಯುದ್ಧಕ್ಕೆ ಇಳಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ನಮ್ಮ ಸೇನೆ ಸನ್ನದ್ಧವಾಗಿದೆ ಎಂದೆಲ್ಲ ಹೇಳಿ ಗಾಯದ ಮೇಲೆ ಉಪ್ಪು ಸವರುವ ಯತ್ನವನ್ನು ಪಾಕ್ ಪದೇ ಪದೇ ಮಾಡತೊಡಗಿತು.
ಇಷ್ಟೆಲ್ಲ ನಡೆದರೂ ಇಸ್ಲಾಮಾಬಾದ್ನಲ್ಲಿ ಸಾರ್ಕ್ ಸಮ್ಮೇಳನಕ್ಕೆ ತಯಾರಿ ನಡೆಸುವತ್ತ ಪಾಕ್ ಸನ್ನದ್ಧವಾಗುತ್ತಿತ್ತು. ಯಾವಾಗ ಭಾರತ ಪ್ರಧಾನಿ ನರೇಂದ್ರ ಮೋದಿ ಇಸ್ಲಾಮಾಬಾದ್ನಲ್ಲಿ ನಡೆಯುವ ಸಮ್ಮೇಳನಕ್ಕೆ ತೆರಳುವುದಿಲ್ಲ ಎಂದು ಘೋಷಿಸಿದರೂ ಉಳಿದ ಸಾರ್ಕ್ ದೇಶಗಳೂ ಅವರನ್ನು ಹಿಂಬಾಲಿಸಿದವು.
ಉರಿ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಉಗ್ರರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ನಡೆಸಿದಾಗ ಒಮ್ಮೆಗೇ ಪಾಕಿಸ್ಥಾನದ ಉತ್ತರಕುಮಾರರು ಮೌನಕ್ಕೆ ಶರಣಾದರು.
ಮೋದಿ ನಡೆದಂತೆ ಮಾಡಿ ತೋರಿಸುವವರು ಎಂದು ಕೊನೆಗೂ ಅದಕ್ಕೆ ಅರ್ಥವಾದರೆ ಸರಿ, ಇಲ್ಲವಾದರೆ ಮತ್ತೆ ಏಟು ತಿನ್ನಲು ಸಜ್ಜಾಗಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.