ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಜುಲೈ 8 ರಂದು ಭದ್ರತಾಪಡೆಗಳು ಎನ್ಕೌಂಟರ್ನಲ್ಲಿ ಹತ್ಯೆಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಖಂಡ ಬುರ್ಹಾನ್ ವಾನಿಯ ಕಥೆ ಒಂದೆಡೆಯಾದರೆ, ಬಿಎಸ್ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಇನ್ನೊಬ್ಬ ವಾನಿಯ ಸಾಧನೆ ಇದೀಗ ಎಲ್ಲರ ಪ್ರಶಂಸೆಗೆ ಅರ್ಹವಾಗಿದೆ.
ಕಾಶ್ಮೀರದಲ್ಲಿ ಬಿಎಸ್ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಟಾಪರ್ ಆಗುವ ಮೂಲಕ ಜಮ್ಮು ಕಾಶ್ಮೀರಕ್ಕೆ ಹೆಮ್ಮೆ ತಂದುಕೊಟ್ಟಿರುವ 26 ವರ್ಷದ ನಬೀಲ್ ಅಹ್ಮದ್ ವಾನಿ ಅನೇಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾನೆ.
ಪರೀಕ್ಷೆಯಲ್ಲಿ ಟಾಪರ್ ಆಗಿ ಹೆಮ್ಮೆಯ ಸಾಧನೆ ಮಾಡಿರುವ ವಾನಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಭೇಟಿ ಮಾಡಿ ಆತನನ್ನು ಪ್ರಶಂಸಿಸಿದರು. ವಾನಿಯ ಸಾಧನೆ ಕಣಿವೆ ರಾಜ್ಯದಲ್ಲಿನ ಯುವಜನತೆಗೆ ಮಾದರಿ ಹಾಗೂ ಸ್ಪೂರ್ತಿದಾಯಕವಾಗಲಿವೆ ಎಂದರು. ವಾನಿಗೆ ಉಜ್ವಲ ಭವಿಷ್ಯ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸಿದರು.
ತದನಂತರ ಕೇಂದ್ರ ಗೃಹ ಸಚಿವರು ವಾನಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮಹರ್ಷಿ ಮತ್ತು ಇತರರಿಗೆ ಪರಿಚಯಿಸಿದರು. ಈ ಸಂದರ್ಭ ಬಿಎಸ್ಎಫ್ನ ಮಹಾ ನಿರ್ದೇಶಕ ಕೆ. ಕೆ. ಶರ್ಮಾರವರೂ ವಾನಿಗೆ ಶುಭ ಹಾರೈಸಿದರು.
ಪ್ರಸ್ತುತ ಉಧಮ್ಪುರದಲ್ಲಿ ಬಿಎಸ್ಎಫ್ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಾನಿ, ಜಮ್ಮು ಕಾಶ್ಮೀಋದಲ್ಲಿನ ಯುವಜನರಿಗೆ ನಿರುದ್ಯೋಗ ಎಂಬುದು ಬಹಳ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಉತ್ತಮ ಶಿಕ್ಷಣದ ಮೂಲಕ ಮಾತ್ರ ಪರಿಹರಿಸಬಹುದಾಗಿದೆ. ಭದ್ರತಾ ಪಡೆಯನ್ನು ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದೇ ನನ್ನ ಕನಸಾಗಿತ್ತು. ಇದೀಗ ನನ್ನ ಕನಸು ನನಸಾಗಿದೆ, ಇದು ನನಗೆ ಬಹಳ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾನೆ.
ಮಗನ ಕನಸು ನನಸಾಗಿದ್ದಕ್ಕೆ ಸಂತಸ ಪಟ್ಟು ಪ್ರತಿಕ್ರಿಯಿಸಿರುವ ವಾನಿಯ ತಾಯಿ ಹನೀಫಾ ಬೇಗಂ, ನನ್ನ ಮಗನ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ. ಅವನು ನಿಷ್ಠೆಯಿಂದ ದೇಶೆ ಸೇವೆ ಹೆಮ್ಮೆ ಪಡುವಂತೆ ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಪ್ರತಿಯೊಬ್ಬರೂ ತಮ್ಮ ಕನಸಿನ ಸಾಕಾರಕ್ಕಾಗಿ ಪ್ರಯತ್ನಪಡಬೇಕು. ಒಂದಲ್ಲಾ ಒಂದು ದಿನ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ. ಪ್ರತಿಯೊಬ್ಬರೂ ದೇಶಕ್ಕೆ ಹೆಮ್ಮೆ ತರುವಂತಹ ಕೆಲಸ ಮಾಡಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.