ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆಂದು ತನಗೆ ತಾನೇ ಬಡಾಯಿ ಕೊಚ್ಚಿಕೊಳ್ಳುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಆಂತರ್ಯವಾದರೂ ಏನು? ಇದು ಈಗ ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ. ಇತ್ತೀಚೆಗೆ ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕಾಶ್ಮೀರ ವಿವಾದ ಕುರಿತು ನಡೆದ ಕಾರ್ಯಕ್ರಮದಲ್ಲಿ ಅಮ್ನೆಸ್ಟಿ ಸಂಸ್ಥೆಯ ಬೆಂಬಲಿಗರು ಭಾರತೀಯ ಸೈನಿಕರ ವಿರುದ್ಧ ಅವಮಾನಕಾರಿ ಘೋಷಣೆ ಕೂಗಿದರು. ಇದನ್ನು ಪ್ರತಿಭಟಿಸಿ ಎಬಿವಿಪಿ ಕಾರ್ಯಕರ್ತರು ತೀವ್ರ ಹೋರಾಟ ಕೈಗೊಂಡಾಗ, ರಾಜ್ಯದ ಪೊಲೀಸರು ದೇಶದ್ರೋಹದ ಘೋಷಣೆ ಕೂಗಿದವರನ್ನು ಬಂಸುವ ಬದಲು, ಎಬಿವಿಪಿ ಕಾರ್ಯಕರ್ತರಿಗೆ ಹಿಗ್ಗಾಮುಗ್ಗಾ ಥಳಿಸಿ, ವಿದ್ಯಾರ್ಥಿನಿಯರ ಕೈಹಿಡಿದೆಳೆದು, ಅನಂತರ ಬಂಸಿ ಬಿಡುಗಡೆ ಮಾಡಿದ್ದು ಸಾರ್ವತ್ರಿಕ ಖಂಡನೆಗೆ ಒಳಗಾಗಿದೆ.
ಈ ನಡುವೆ ಕಾರ್ಯಕ್ರಮ ಆಯೋಜಿಸಿದ್ದ ಅಮ್ನೆಸ್ಟಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರು ಆ ದೇಶವಿರೋ ಸಂಸ್ಥೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ಇನ್ನಷ್ಟು ಆಶ್ಚರ್ಯಕರ. ದೇಶವಿರೋ ಘೋಷಣೆ ಕೂಗಿದ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಎಲ್ಲ ಸಾಕ್ಷ್ಯ ಹೊಂದಿದ್ದರೂ ಈವರೆಗೆ ಒಬ್ಬನೇ ಒಬ್ಬ ಆರೋಪಿಯನ್ನು ಬಂಸದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಗೊಟ್ಟಿದೆ. ಮೊದಲು, ದೇಶದ್ರೋಹದ ಘೋಷಣೆ ಕೂಗುವವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ಧರಾಮಯ್ಯ, ಗೃಹಸಚಿವ ಡಾ. ಪರಮೇಶ್ವರ್ ಹೇಳುತ್ತಿದ್ದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಮ್ನೆಸ್ಟಿ ವಿರುದ್ಧ ಮೃದು ಧೋರಣೆ ತಳೆಯಲಾಗಿದೆ.
ಇಷ್ಟಕ್ಕೂ ಮಾನವ ಹಕ್ಕುಗಳನ್ನು ರಕ್ಷಿಸುವ ಅಜೆಂಡಾ ಹೊಂದಿರುವ ಎನ್ಜಿಒ ಅಮ್ನೆಸ್ಟಿ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದೆಯೆ? ಅಮ್ನೆಸ್ಟಿಯ ಇದುವರೆಗಿನ ಕುಖ್ಯಾತ ಇತಿಹಾಸ ಗಮನಿಸಿದರೆ ಈ ಪ್ರಶ್ನೆಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಅಮೆರಿಕದಲ್ಲಿ ಗ್ವಾಂಟಾನಾಮೋದಲ್ಲಿನ ಹಿಂಸಾಚಾರದ ಬಗ್ಗೆ ಅಮ್ನೆಸ್ಟಿ ತುಟಿಪಿಟಕ್ ಎಂದಿಲ್ಲ. ಗ್ವಾಂಟಾನಾಮೋದಲ್ಲಿ ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುವ ಮೋವಜಂ ಬೇಗ್ ಪರ ನಿಲುವು ಹೊಂದಿರುವ ಆರೋಪ ಕೇಳಿಬಂದಿದೆ. ಬೇಗ್ ಗ್ವಾಂಟಾನಾಮೋ ಜೈಲಿನಿಂದ ತಪ್ಪಿಸಿಕೊಂಡು ಕೇಜ್ಪ್ರಿಸನರ್ಸ್ ಎಂಬ ಮಾನವ ಹಕ್ಕು ಹೋರಾಟ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾನೆ. ಈತ ರಚಿಸಿದ ಕೃತಿಯನ್ನು ಅಮ್ನೆಸ್ಟಿ ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳ ಪರವಾಗಿರುವ ದೇಶಗಳಿಗೆ ಪೂರಕವಾಗಿ ಮಾನವ ಹಕ್ಕು ಉಲ್ಲಂಘನೆ ವರದಿಮಾಡುವ ಕೆಟ್ಟ ಚಾಳಿಯೂ ಅಮ್ನೆಸ್ಟಿಗಿದೆ. ೨೦೦೭ರಲ್ಲಿ ಕ್ರಿಕೆಟ್ ವಿಶ್ವಕಪ್ ನಡೆಯುವ ವೇಳೆಯಲ್ಲಿ ಶ್ರೀಲಂಕಾದಲ್ಲಿನ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ವರದಿ ಪ್ರಕಟಿಸಲು ಅಮ್ನೆಸ್ಟಿ ಯೋಚಿಸಿತ್ತು. ಈ ಮೂಲಕ ಶ್ರೀಲಂಕಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸದಂತೆ ತಡೆಯುವುದು ಅದರ ಉದ್ದೇಶವಾಗಿತ್ತು. ಅಮ್ನೆಸ್ಟಿಯ ಈ ಹುನ್ನಾರವನ್ನು ಶ್ರೀಲಂಕಾ ಸೇರಿದಂತೆ ಹಲವು ದೇಶಗಳು ವಿರೋಸಿದವು. ಐಸಿಸಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇನ್ನೊಂದೆಡೆ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದ ಹಮಾಸ್ ಉಗ್ರರನ್ನು ವೈಭವೀಕರಿಸಿ ವರದಿ ಮಾಡಿದ್ದು ಅಮ್ನೆಸ್ಟಿ ಸಂಸ್ಥೆಯನ್ನು ವಿವಾದದ ಸುಳಿಗೆ ಸಿಲುಕಿಸಿತ್ತು.
ಅಮ್ನೆಸ್ಟಿ ಸಂಸ್ಥೆ ಹಲವು ದೇಶಗಳಲ್ಲಿ ಆಡಳಿತದ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಆರೋಪವಿದೆ. ಇದೇ ಕಾರಣಕ್ಕೆ ನೇಪಾಳದ ಮಾನವ ಹಕ್ಕು ಹೋರಾಟಗಾರ ಕೃಷ್ಣ ಪಹಾಡಿ ಕಳೆದ ವರ್ಷ ಸಂಸ್ಥೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಪಹಾಡಿ ಅವರು ಮಾನವ ಹಕ್ಕು ಹೋರಾಟದ ವಿಷಯದಲ್ಲಿ ಮಹತ್ವದ ವ್ಯಕ್ತಿ. ನೆರೆಯ ಮ್ಯಾನ್ಮಾರ್ ಮತ್ತು ಅಜರ್ಬೈಜಾನ್ ದೇಶಗಳಲ್ಲಿ ಅಮ್ನೆಸ್ಟಿ ವಿರುದ್ಧ ಈಗಾಗಲೇ ನಿಷೇಧ ಹೇರಲಾಗಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಕೆಲವು ನೀತಿಗಳು ಇಂದಿಗೂ ವಿವಾದಾತ್ಮಕ. ಅತ್ಯಾಚಾರ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ಗರ್ಭಪಾತಕ್ಕೆ ಅವಕಾಶ ನೀಡಬೇಕು ಮತ್ತು ಎಲ್ಲ ರೀತಿಯ ಗರ್ಭಪಾತವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬಾರದು ಎಂಬ ನಿಲುವು ಆ ಸಂಸ್ಥೆಯದು. ೨೦೧೪ರಲ್ಲಿ ಅದು ಪ್ರಕಟಿಸಿದ ವರದಿಯಲ್ಲಿ ವೇಶ್ಯಾವಾಟಿಕೆ ಕೂಡ ಹಕ್ಕು ಎಂದು ಹೇಳಿಕೊಂಡಿದೆ. ಇದಕ್ಕೆ ವಿಶ್ವದಾದ್ಯಂತ ಮಹಿಳಾ ಹೋರಾಟಗಾರರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಮ್ನೆಸ್ಟಿ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ಗೀತಾ ಸೆಹೆಗಲ್ ಸ್ವತಃ ಸಂಸ್ಥೆಯ ಮೇಲೆ ಮಾಡಿರುವ ಆರೋಪ ಕೇಳಿದರೆ ನೀವು ದಂಗಾಗಬಹುದು. ಅಮ್ನೆಸ್ಟಿ ಕಾಶ್ಮೀರದ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎನ್ನುವುದು ಸೆಹೆಗಲ್ಅವರ ಆರೋಪ. ಇದೇ ಕಾರಣಕ್ಕಾಗಿ ಗೀತಾ ಸೆಹೆಗಲ್ 2010 ರಲ್ಲಿ ಸಂಸ್ಥೆಯನ್ನು ತೊರೆದಿದ್ದರು. ಭಾರತದ ಗಡಿಯೊಳಗೆ ಅಕ್ರಮವಾಗಿ ಒಳನುಸುಳುವ ಬಾಂಗ್ಲಾ ಪ್ರಜೆಗಳ ಬಗ್ಗೆ ಕಮಕ್ ಕಿಮಕ್ ಎನ್ನದ ಅಮ್ನೆಸ್ಟಿ ಇಂಗ್ಲೆಂಡ್ನಲ್ಲಿ ಕಾಶ್ಮೀರದ ಉಗ್ರರಿಗೆ ಬೆಂಬಲ ನೀಡುತ್ತಿದೆ. ಹಿಂದಿನಿಂದಲೂ ಜಿಹಾದಿಗಳನ್ನು ಬೆಂಬಲಿಸಿ, ಅವರನ್ನು ತನ್ನ ಸಂಶೋಧನೆಯಲ್ಲಿ ಸೇರಿಸಿಕೊಳ್ಳುತ್ತಿದೆ ಎಂದೂ ಸೆಹೆಗಲ್ ಆರೋಪಿಸಿದ್ದಾರೆ.
ಕಾಶ್ಮೀರದ ಉಗ್ರರಿಗೆ ಬೆಂಬಲ ನೀಡುವ ಅಮ್ನೆಸ್ಟಿಯ ಹೋರಾಟಗಾರರಿಗೆ ಬಲೂಚಿಸ್ಥಾನದಲ್ಲಿ ಪಾಕಿಸ್ಥಾನ ಇದುವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಬಲೂಚಿಗಳನ್ನು ಕೊಂದುಹಾಕಿದ್ದು ಮಾನವ ಹಕ್ಕು ಉಲ್ಲಂಘನೆ ಎಂದು ಏಕೆ ಅನಿಸುತ್ತಿಲ್ಲ ? ವಾಸ್ತವವಾಗಿ 1947 ರಲ್ಲಿ ಪಾಕಿಸ್ಥಾನ ಸ್ವತಂತ್ರರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಾಗ ಅದರೊಂದಿಗೆ ಸೇರಲು ಇಚ್ಛಿಸದ ಬಲೂಚಿಸ್ಥಾನದ ರಾಜವಂಶಸ್ಥರು ಸ್ವತಂತ್ರವಾಗೇ ಉಳಿಯಲು ಬಯಸಿದ್ದರು. ಆದರೆ, ಪಾಕಿಸ್ಥಾನ ಸೇನೆಯನ್ನು ನುಗ್ಗಿಸಿ ಬಲಾತ್ಕಾರದಿಂದ ಆ ದೇಶವನ್ನು ಆಕ್ರಮಿಸಿತು. ಬಲೂಚಿ ರಾಜ ಯಾರ್ಕಾನ್ ಅನಿವಾರ್ಯವಾಗಿ ಒಪ್ಪಂದಕ್ಕೆ ಸಹಿ ಹಾಕಿದರೂ ರಾಜನ ಮೂವರು ಸೋದರರು ಪಾಕ್ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿದರು. ಇದುವರೆಗೂ ಆ ಹಿಂಸಾತ್ಮಕ ಹೋರಾಟ ಮುಂದುವರಿಯುತ್ತಲೇ ಇದೆ. ಪಾಕಿಸ್ಥಾನದ ನಾಲ್ಕು ಪ್ರಾಂತಗಳಲ್ಲಿ ಬಲೂಚಿಸ್ಥಾನವೂ ಒಂದು. ಆದರೆ ತನ್ನ ದೇಶದ್ದೇ ಭಾಗವಾಗಿರುವ ಬಲೂಚಿಸ್ಥಾನದ ಪ್ರಜೆಗಳ ಮೇಲೆ ಯುದ್ಧ ವಿಮಾನಗಳ ಮೂಲಕ ಪಾಕಿಸ್ಥಾನ ಬಾಂಬಿನ ಸುರಿಮಳೆಯನ್ನೇ ಸುರಿಸಿ ಸಾವಿರಾರು ನಾಗರಿಕರನ್ನು ನಿರ್ದಯವಾಗಿ ಕೊಂದುಹಾಕಿದೆ. ಮಾನವ ಹಕ್ಕುಗಳಿಗಾಗಿ ಹೋರಾಡುವ ಅಮ್ನೆಸ್ಟಿಗೆ ಮಾತ್ರ ಈ ವಿದ್ಯಮಾನ ಭಯಾನಕವೆಂದು ಅನಿಸುತ್ತಲೇ ಇಲ್ಲ. ಎಂತಹ ವಿಪರ್ಯಾಸ !
ಅದು ಹೋಗಲಿ, ಈಚೆಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕುಸಿತದ ಪರಿಣಾಮವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದ ಹತ್ತು ಸಾವಿರಕ್ಕೂ ಹೆಚ್ಚು ಭಾರತೀಯರು ಕೆಲಸ ಕಳೆದುಕೊಂಡು ಬೀದಿಗೆ ಬೀಳಬೇಕಾಯಿತು. ಸೌದಿ ಅರೇಬಿಯಾ, ಬಹರೇನ್, ಕುವೈತ್, ಒಮನ್, ಕತಾರ್, ಯುಎಇ ಸೇರಿದಂತೆ ಕೊಲ್ಲಿ ದೇಶಗಳಲ್ಲಿದ್ದ ಪೆಟ್ರೋಲ್ ಕಂಪೆನಿಗಳ ಬಾಗಿಲು ಮುಚ್ಚಿದ್ದರಿಂದ ಭಾರತೀಯ ಕಾರ್ಮಿಕರು ಅಕ್ಷರಶಃ ಬೀದಿ ಪಾಲಾದರು. ಅನೇಕ ಕೈಗಾರಿಕೆಗಳು, ನಿರ್ಮಾಣ ಸಂಸ್ಥೆಗಳು, ಉದ್ಯಮ-ವಹಿವಾಟು ಕಂಪೆನಿಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಅವುಗಳ ಮಾಲೀಕರು 8-10 ತಿಂಗಳಿಂದ ಕಾರ್ಮಿಕರಿಗೆ ನಯಾಪೈಸೆ ಸಂಬಳ ನೀಡಿಲ್ಲ. ಕೆಲಸ ಕಳೆದುಕೊಂಡ 10 ಸಾವಿರಕ್ಕೂ ಹೆಚ್ಚು ಭಾರತೀಯರು ಕಳೆದೊಂದು ವಾರದಿಂದ ತುತ್ತು ಅನ್ನಕ್ಕೂ ಗತಿಯಿಲ್ಲದೆ ಜೆಡ್ಡಾದ ಬೀದಿಗಳಲ್ಲಿ ಉಪವಾಸ ಬಿದ್ದಿದ್ದಾರೆ. ಇದೀಗ ನಮ್ಮ ಭಾರತ ಸರ್ಕಾರ ಅವರನ್ನು ಸ್ವದೇಶಕ್ಕೆ ಕರೆತರಲು ’ಮಿಷನ್ ಅಕಂಪ್ಲಿಷ್ಡ್’ ಕಾರ್ಯಾಚರಣೆ ಕೈಗೊಂಡಿದೆ. ಅವರೆಲ್ಲರ ಕತ್ತಲ ಬಾಳಿಗೆ ಬೆಳಕು ನೀಡಲು ಮುಂದಾಗಿದೆ. ಆದರೆ ಮಾನವ ಹಕ್ಕು ಹೋರಾಟಗಾರ ಸಂಸ್ಥೆಯೆಂದು ಬಡಾಯಿ ಕೊಚ್ಚಿಕೊಳ್ಳುವ ಅಮ್ನೆಸ್ಟಿಗೆ ಹೊಟ್ಟೆಗೆ ಹಿಟ್ಟಿಲ್ಲದೆ, ಬದುಕಲು ನೆಲೆಯಿಲ್ಲದೆ ಕಂಗಾಲಾಗಿರುವ ಈ ಹತ್ತು ಸಾವಿರ ಭಾರತೀಯರ ದುಃಖದುಮ್ಮಾನ ಏಕೆ ತಟ್ಟುತ್ತಿಲ್ಲ? ಹಾಗಿದ್ದರೆ ಮಾನವ ಹಕ್ಕು ಉಲ್ಲಂಘನೆ ಎಂಬುದಕ್ಕೆ ಅಮ್ನೆಸ್ಟಿ ಸಂಸ್ಥೆಯ ವ್ಯಾಖ್ಯಾನವಾದರೂ ಏನು?
ಅಸಲಿಗೆ, ಅಮ್ನೆಸ್ಟಿಯ ಹಿಡನ್ ಅಜೆಂಡಾ ಬೇರೆಯೇ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ , ಅಮ್ನೆಸ್ಟಿಗೆ ಬೇಕಾದಷ್ಟು ಕೋಟಿ ಕೋಟಿ ಹಣ ಹರಿದುಬರಲು ಯುಪಿಎ ನೆರವು ನೀಡುತ್ತಿದ್ದುದು ಗುಟ್ಟೇನೂ ಅಲ್ಲ. ಆದರೆ ಮೋದಿ ಸರ್ಕಾರ ಅಕಾರಕ್ಕೆ ಬಂದ ಬಳಿಕ ಅಮ್ನೆಸ್ಟಿಗೆ ಸಂದಾಯವಾಗಬೇಕಿದ್ದ ಮೂರು ಕೋಟಿ ರೂಪಾಯಿಗಳಲ್ಲಿ ಒಂದು ಕೋಟಿ ರೂ. ಗೆ ಕೇಂದ್ರ ಸರ್ಕಾರ ಕತ್ತರಿ ಇಟ್ಟಿದೆ. ಯಾಕೆಂದರೆ ಅದನ್ನು ಅಮ್ನೆಸ್ಟಿಗೆ ದಾನ ಮಾಡಿರುವುದು ಕುಸುಮ ಟ್ರಸ್ಟ್ ಎಂಬ ಸಂಸ್ಥೆ. ಅದನ್ನು ನಡೆಸುತ್ತಿರುವವನು ಅನುರಾಗ್ ದೀಕ್ಷಿತ್. ಈತ ಅಂತಾರಾಷ್ಟ್ರೀಯ ಕ್ರೈಮ್ ಬ್ರಾಂಚ್ಗಳಿಗೆ ಬೇಕಾಗಿರುವ ’ಮೋಸ್ಟ್ ವಾಂಟೆಡ್’ ವ್ಯಕ್ತಿ. ಈತನಿಗೆ ಅಮೆರಿಕ ಸರ್ಕಾರವೇ 400 ಮಿಲಿಯನ್ ಡಾಲರ್ ದಂಡ ವಿಸಿದೆ. ಅನುರಾಗ್ ದೀಕ್ಷಿತ್ ಹೊರ ದೇಶಗಳಲ್ಲಿ ಕ್ಯಾಸಿನೋ ದಂಧೆ ನಡೆಸುತ್ತಿದ್ದು ಕಪ್ಪು ಹಣವನ್ನು ಬಿಳಿಯಾಗಿ ಮಾಡಲು ಸಮಾಜ ಸೇವೆಯ ಸೋಗು ಹಾಕಿದ್ದಾನೆ. ಕುಸುಮ ಟ್ರಸ್ಟ್ ಅಂಥ ಅಜೆಂಡಾ ಹೊಂದಿರುವ ಒಂದು ಸಂಘಟನೆ.
ಒಟ್ಟಾರೆ ಅಮ್ನೆಸ್ಟಿಗೆ ಹರಿದು ಬರುತ್ತಿರುವುದು ಮೂಲತಃ ಕಪ್ಪುಹಣ. ಯಾರ್ ಯಾರದೋ ತಲೆ ಒಡೆದು ಲಪಟಾಯಿಸಿರುವ ಬಿಟ್ಟಿ ಹಣ ಅದು. ಜೂಜು ಅಡ್ಡೆಗಳಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದವರಿಂದ ದೋಚಿದ ದುಡ್ಡಲ್ಲಿ ಅಮ್ನೆಸ್ಟಿ ’ಮಾನವ ಹಕ್ಕುಗಳ ಹೋರಾಟ’ ಮಾಡುತ್ತಿದೆ. ಕೇಂದ್ರ ಸರ್ಕಾರ ಇಂತಹ ದಂಧೆಗೆ ಕಡಿವಾಣ ಹಾಕಿದ್ದೇ ತಡ, ಅಮ್ನೆಸ್ಟಿ ವಾಮ ಮಾರ್ಗಗಳನ್ನು ಹುಡುಕಿದೆ. ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಲು ಷಡ್ಯಂತ್ರ ನಡೆಸಿದೆ. ಪಾಕಿಸ್ಥಾನವನ್ನು ಭಾರತದ ವಿರುದ್ಧ ಎತ್ತಿಕಟ್ಟಿ , ತನ್ಮೂಲಕ ಕೇಂದ್ರ ಸರ್ಕಾರವನ್ನೇ ತನಗೆ ಬೇಕಾದಂತೆ ಬಗ್ಗಿಸಿಕೊಳ್ಳುವುದು ಅದರ ಮುಖ್ಯ ಹುನ್ನಾರ. ಅದರ ಒಂದು ಭಾಗವೇ ಕಾಶ್ಮೀರ ಅಜಾದಿಯ ನಾಟಕ. ಬ್ರೋಕನ್ ಫ್ಯಾಮಿಲೀಸ್ ಎಂಬ ಕಪಟ ಕಾರ್ಯಕ್ರಮ.
ಈಗ ನೀವೇ ಹೇಳಿ, ನಿಜವಾಗಿ ಇದು ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಯೆ? ಖಂಡಿತಕ್ಕೂ ಇದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಅಲ್ಲ, ಆದರೆ ಅಮ್ನೆಸ್ಟಿ ಆ್ಯಂಟಿನ್ಯಾಷನಲ್!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.