ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಸ್ಥಿರತೆಗೆ ಪಾಕಿಸ್ಥಾನವೇ ಕಾರಣ ಎಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಯುದ್ಧವನ್ನು ಗೆಲ್ಲಲಾರೆವು ಎಂದು ತಿಳಿದ ಬಳಿಕ ಪಾಕಿಸ್ಥಾನ ಉಗ್ರರನ್ನು ಗಡಿಯೊಳಗೆ ಒಳನುಸುಳಿಸಲು ಆರಂಭಿಸಿತು ಎಂದು ದೂರಿದ್ದಾರೆ.
ಬಿಜೆಪಿಯ ತಿರಂಗಾ ಯಾತ್ರೆಯ ಅಂಗವಾಗಿ ಭಾನುವಾರ ಜಮ್ಮುವಿಗೆ ಭೇಟಿ ನೀಡಿದ ಜೇಟ್ಲಿ ಉಗ್ರವಾದ ಮತ್ತು ಒಳನುಸುಳುವಿಕೆಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ನೆರೆಯ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪಾಕಿಸ್ಥಾನ ಪರಿಗಣಿಸುತ್ತಿಲ್ಲ. 1990 ರಲ್ಲಿ ನಮಗೆ ಯುದ್ಧವನ್ನು ಗೆಲ್ಲುವ ತಾಕತ್ತಿಲ್ಲ ಎಂದು ಮನವರಿಕೆ ಮಾಡಿಕೊಂಡಿರುವ ಪಾಕಿಸ್ಥಾನ ಬಳಿಕ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲು ಪ್ರಾರಂಭಿಸಿತು ಎಂದಿದ್ದಾರೆ.
ಸದ್ಯ ಕಣಿವೆ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿಯ ನಿರ್ಮಾಣವಾಗಿದೆ. ಇದಕ್ಕೆ ಪಾಕಿಸ್ಥಾನ ಮತ್ತು ಇತರ ಶಕ್ತಿಗಳೇ ಕಾರಣ. ದೇಶದ ಏಕತೆಗೆ ಮತ್ತೊಮ್ಮೆ ಸವಾಲು ಎದುರಾಗಿದೆ. ಈ ಆಕ್ರಮಣದ ವಿರುದ್ಧ ಜಮ್ಮು ಕಾಶ್ಮೀರದ ಜನತೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.
ಮೋದಿ ಆಡಳಿತದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲನೆಯದು ಭದ್ರತೆ ಮತ್ತು ಹಿಂಸಾಚಾರದ ಬಗ್ಗೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದು. ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಿಂದ ಸಂಪನ್ಮೂಲದ ಸಂಗ್ರಹ ಮಾಡುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.